ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ:‌ ಕಂದಾಯ ಇಲಾಖೆಯಲ್ಲಿ 21,767 ಪ್ರಕರಣಗಳು ಬಾಕಿ

Update: 2024-08-09 05:40 GMT

ಬೆಂಗಳೂರು : ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಪ್ರಕ್ರಿಯೆಗಳಿಗೆ ರಾಜ್ಯದಲ್ಲಿ ಇನ್ನೂ ಬಿರುಸಿನ ಚಾಲನೆ ದೊರೆತಿಲ್ಲ. ಕಂದಾಯ ಇಲಾಖೆಯೊಂದರಲ್ಲೇ 21,767 ವಕ್ಫ್ ಆಸ್ತಿಗಳ ಖಾತೆ ಬದಲಾವಣೆಯಾಗಿಲ್ಲ. ವಕ್ಫ್‌ಗೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರ ಸರಕಾರ ಹೊರಟಿರುವ ಬೆನ್ನಲ್ಲೇ ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಪ್ರಕ್ರಿಯೆಗಳು ಆಮೆಗತಿಯಲ್ಲಿರುವುದು ಮುನ್ನೆಲೆಗೆ ಬಂದಿದೆ.

ರಾಜ್ಯಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯು ಸಾಧಿಸಿರುವ ಪ್ರಗತಿ ಪರಿಶೀಲನೆ ಕುರಿತು 2024ರ ಎಪ್ರಿಲ್ 15ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಕಂದಾಯ ಇಲಾಖೆಯೊಂದರಲ್ಲೇ 21,767 ವಕ್ಫ್ ಆಸ್ತಿಗಳ ಖಾತೆ ಬದಲಾವಣೆಯಾಗಿಲ್ಲ ಎಂಬ ಸಂಗತಿಯ ಕುರಿತು ಚರ್ಚೆಯಾಗಿದೆ. ಈ ಕುರಿತು ಅಭಿವೃದ್ಧಿ ಆಯುಕ್ತರಾಗಿದ್ದ ಡಾ. ಶಾಲಿನಿ ರಜನೀಶ್ ಅವರು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರಿಗೆ 2024ರ ಎಪ್ರಿಲ್ 16ರಂದು ಪತ್ರವೊಂದನ್ನು ಬರೆದಿದ್ದರು. ಈ ಪತ್ರದ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ಕಂದಾಯ ಇಲಾಖೆಯಲ್ಲಿ ಒಟ್ಟು 21,767 ವಕ್ಫ್ ಆಸ್ತಿಗಳ ಖಾತೆ ಬದಲಾವಣೆಯಾಗಬೇಕಿದ್ದು ಈ ವಕ್ಫ್ ಆಸ್ತಿಗಳ ಮಾಹಿತಿಯನ್ನು ಭೂಮಿ ತಂತ್ರಾಂಶದಡಿಯಲ್ಲಿ ನೋಂದಾಯಿಸಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದರು ಎಂಬುದು ಗೊತ್ತಾಗಿದೆ. ಅಲ್ಲದೆ ನೋಂದಾಯಿಸಲ್ಪಡದ ಆಸ್ತಿಗಳ ವಿವರಗಳನ್ನು ಆಡಳಿತಾತ್ಮಕವಾಗಿ ಅಧಿನಿಯಮದಡಿ ತರಬೇಕು. ಕಂದಾಯ ಇಲಾಖೆಗೆ ಸಲ್ಲಿಸಿರುವ 328 ಪ್ರಸ್ತಾವಗಳ ಬಗ್ಗೆ ಪರಿಶೀಲಿಸಿ, ಲಭ್ಯವಿರುವ ಸರಕಾರಿ ಜಮೀನಿನಲ್ಲಿ ಖಬರಸ್ತಾನ್ ಜಮೀನುಗಳಿಗೆ ಮಂಜೂರಾತಿ ನೀಡಬೇಕು ಹಾಗೂ ಲಭ್ಯವಿಲ್ಲದ ಸಂದರ್ಭದಲ್ಲಿ ನಿಯಮಾನುಸಾರ ಖಾಸಗಿ ಜಮೀನು ಖರೀದಿಸಿ ವಿತರಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ. ಅದೇ ರೀತಿ ಕರ್ನಾಟಕ ಭೂ ಕಬಳಿಕೆ ನಿಯಂತ್ರಣಾ ಕಾಯ್ದೆ ಹಾಗೂ ವಕ್ಫ್ ಕಾಯ್ದೆ ಕಲಂ 52(ಎ) ಪ್ರಕಾರ ವಕ್ಫ್ ಆಸ್ತಿಗಳ ಭೂಮಿ ಅತಿಕ್ರಮಣವಾಗಿರುವ ವಿಷಯವನ್ನು ಇಲಾಖೆಯ ಮಾಸಿಕ ಸಭೆ ಮತ್ತು ಸಚಿವರ ಅಧ್ಯಕ್ಷತೆಯ ತ್ರೈಮಾಸಿಕ ಸಭೆಗಳಲ್ಲಿ ಕಾರ್ಯಸೂಚಿಯನ್ನಾಗಿ ಇಡಬೇಕು ಎಂದೂ ನಿರ್ದೇಶಿಸಿರುವುದು ಗೊತ್ತಾಗಿದೆ.

ರಾಜ್ಯದಲ್ಲಿ ಅನಧಿಕೃತ ಒತ್ತುವರಿ ವಿಚಾರವಾಗಿ ಈವರೆಗೆ ಒಟ್ಟು 3,720 ಪ್ರಕರಣಗಳು ದಾಖಲಾಗಿವೆ. ಒತ್ತುವರಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ವಕ್ಫ್ ಕಾಯ್ದೆ ಕಲಂ - 54 ರ ಪ್ರಕಾರ ಈಗಾಗಲೇ ಪ್ರಕರಣ ದಾಖಲು ಮಾಡಿದೆ. ಕರ್ನಾಟಕ ವಕ್ಫ್ ನ್ಯಾಯಾಧಿಕರಣಕ್ಕೆ ಒತ್ತುವರಿ ತೆರವು ಆದೇಶಕ್ಕಾಗಿ ಒಟ್ಟು 1,458 ಅರ್ಜಿಗಳು ಸಲ್ಲಿಕೆಯಾಗಿವೆ. ಈವರೆಗೆ ಒಟ್ಟು 319 ಎಕರೆ ಹಾಗೂ 9 ಗುಂಟೆ ಹಾಗೂ 1,28,453.9 ಚದರ ಅಡಿ ವಕ್ಫ್ ಅಸ್ತಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸಂಬಂಧಪಟ್ಟ ವಕ್ಫ್ ಸಂಸ್ಥೆಯ ಸ್ವಾಧೀನಕ್ಕೆ ಪಡೆದಿದೆ.

ರಾಯಚೂರು ಜಿಲ್ಲೆಯೊಂದರಲ್ಲೇ 423 ಎಕರೆ 17 ಗುಂಟೆ ಮತ್ತು 89,649 ಚದರ ಅಡಿ ವಕ್ಫ್ ಬೋರ್ಡ್ ಆಸ್ತಿ ಅತಿಕ್ರಮಣವಾಗಿದೆ. ವಕ್ಫ್ ಆಸ್ತಿ ವಿಚಾರವಾಗಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ದನಿ ಎತ್ತಿದ್ದರು. ಅಲ್ಲದೆ ವಕ್ಫ್ ಆಸ್ತಿ ಅತಿಕ್ರಮಣದಲ್ಲಿ 2 ರಿಂದ 3 ಲಕ್ಷ ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಪೌರಾಡಳಿತ ನಿರ್ದೇಶನದ ಸುತ್ತೋಲೆ ಮೇರೆಗೆ 2023ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸ್ಥಳೀಯ ಸಂಸ್ಥೆ ಮತ್ತು ವಕ್ಫ್ ಬೋರ್ಡ್ ಆಸ್ತಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಹಕ್ಕು ವರ್ಗಾವಣೆಗೆ ಕೋರಿಕೆ ಸಲ್ಲಿಸಿದಲ್ಲಿ ಮಾತ್ರ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಹಕ್ಕು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News