ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ನಾಯಕತ್ವಕ್ಕೆ ಸಂಚಕಾರ ?

Update: 2023-12-13 07:18 GMT
Editor : Thouheed | Byline : ಆರ್. ಜೀವಿ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದ ಮುಂದಿನ ದಾರಿ ಏನು ಎಂಬ ಪ್ರಶ್ನೆಯೆದ್ದಿದೆ. ಈ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನ ಸ್ಥಾನ ಕುಸಿದಂತಾಗಿದೆಯೆ ಎಂಬ ಅನುಮಾನ ಕೂಡ ಕಾಡುವಂತಾಗಿದೆ. ಯಾಕೆಂದರೆ ವಿಧಾನಸಭೆ ಚುನಾವಣೆಗೆ ಹೋಗುವಾಗ ಮೈತ್ರಿಕೂಟದ ಪಕ್ಷಗಳನ್ನು ಕಡೆಗಣಿಸಿದ್ದ ಕಾಂಗ್ರೆಸ್ ಈಗ ಒಂದರ್ಥದಲ್ಲಿ ತನ್ನ ಸೋಲನ್ನು ಏಕಾಂಗಿಯಾಗಿ ಎದುರಿಸಬೇಕಾಗಿದೆ ಮತ್ತು ಅರಗಿಸಿಕೊಳ್ಳಬೇಕಾಗಿದೆ.

 

ಹೀಗಿರುವಾಗ ಬಿಜೆಪಿ ನೇತೃತ್ವದ ಎನ್ ಡಿ ಎ ಯನ್ನು ಸೋಲಿಸಲು ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಮೈತ್ರಿಕೂಟದ ಮುಂದಿರುವ ಸವಾಲುಗಳೇನು ಎಂಬುದರ ಜೊತೆಗೇ ಕಾಂಗ್ರೆಸ್ ಎದುರಿನ ಸವಾಲುಗಳೇನು ಎಂಬ ಪ್ರಶ್ನೆಯೂ ಇದೆ. ಕಾಂಗ್ರೆಸ್ ಸಂಸದೀಯ ಸಮಿತಿ ಸಭೆಯಲ್ಲಿ ಕೂಡ ಸೋಲಿನ ಬಗ್ಗೆ ಚರ್ಚೆಯಾಗಿದೆಯಾದರೂ, ಕಾಂಗ್ರೆಸ್ ನಿರಾಶಾದಾಯಕ ಭಾವನೆ ತಳೆದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಡಿಸೆಂಬರ್ 6ರಂದು ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಆದರೆ, ತನ್ನ ಹೀನಾಯ ಸೋಲಿನ ಬಗ್ಗೆ ಅದು ಆತ್ಮಾವಲೋಕನ ಮಾಡಿಕೊಂಡಿರುವುದರ ನಡುವೆಯೇ ಬಂದಿರುವ ಬೇರೆ ಬೇರೆ ವಿಶ್ಲೇಷಣೆಗಳ ಪ್ರಕಾರ, ಹಿರಿಯ ನಾಯಕರನ್ನು ನಿಯಂತ್ರಿಸಲಾಗದ ಇಕ್ಕಟ್ಟು ಮತ್ತು ಇಬ್ಬಂದಿತನವೇ ಅದರ ಸೋಲಿನ ಪ್ರಮುಖ ಕಾರಣವಾಗಿದೆ.

 

ಮುಖ್ಯವಾಗಿ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ವಿಚಾರದಲ್ಲಿ ಬಹಳ ವಿಶ್ವಾಸ ತಳೆದಿತ್ತು ಮಾತ್ರವಲ್ಲ, ಕರ್ನಾಟಕದಲ್ಲಿ ಅದರ ಕಾರಣದಿಂದ ದೊರೆತ ಭಾರೀ ಗೆಲುವಿನ ಹುಮ್ಮಸ್ಸಿನಲ್ಲೂ ಇತ್ತು. ಅದು ತೆಲಂಗಾಣದಲ್ಲೇನೋ ಕೈಹಿಡಿಯಿತಾದರೂ, ಹಿಂದಿ ಭಾಷಿಕ ಮೂರೂ ರಾಜ್ಯಗಳಲ್ಲಿ ಅದರ ಲೆಕ್ಕಾಚಾರಗಳು ಪೂರ್ತಿ ತಲೆಕೆಳಗಾದವು.

ಕಮಲನಾಥ್ ಅಂಥ ನಾಯಕರು ನಿಯಂತ್ರಣಕ್ಕೆ ಸಿಗದೇ ಇದ್ದುದು ಮತ್ತು ಅವರು ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಗೆ ಲಾಭ ತರುತ್ತದೆ ಎಂದು ನಂಬಿಕೊಂಡು ಹೆಚ್ಚು ಶ್ರಮಿಸದೇ ಕೂತಿದ್ದು ಪಕ್ಷಕ್ಕೆ ಮುಳುವಾಯಿತು. ಅಧಿಕಾರದಲ್ಲಿರುವ ಎರಡೂ ರಾಜ್ಯಗಳನ್ನಂತೂ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್, ಅದಕ್ಕಾಗಿ ನಿಜವಾಗಿಯೂ ಮಾಡಬೇಕಾದ ಹೋರಾಟವನ್ನು ಮಾಡುವಲ್ಲಿ ಹಿಂದುಳಿಯಿತು ಎಂದೇ ಹೇಳಲಾಗುತ್ತದೆ.

ಈ ನಡುವೆ ತೆಲಂಗಾಣವನ್ನು ಗೆದ್ದಿದ್ದರಿಂದ ಮಾತ್ರವೇ ಅದು ಮುಖ ಉಳಿಸಿಕೊಳ್ಳಲು ಸಾಧ್ಯವಾಗಿದೆ.   ಆದರೆ ಇಂಡಿಯಾ ಮೈತ್ರಿಕೂಟದ ದೃಷ್ಟಿಯಿಂದ ತೆಲಂಗಾಣದ ಗೆಲುವು ಮುಖ್ಯವಲ್ಲ ಎಂದೇ ಹೇಳಲಾಗುತ್ತಿದೆ. ಒಂದು ವಿಚಾರವನ್ನು ಗಮನಿಸಬೇಕು. ಇಂಡಿಯಾ ಮೈತ್ರಿಕೂಟದ 3ನೇ ಸಭೆ ಮುಂಬೈನಲ್ಲಿ ನಡೆದದ್ದು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು.

ಅದಾಗಿ ಮೂರು ತಿಂಗಳ ನಂತರ ಈಗ ಡಿಸೆಂಬರ್ 6ರಂದು ಮೈತ್ರಿಕೂಟದ ಮುಂದಿನ ಸಭೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ನಡೆಯಲಿದೆ. ಈ ನಡುವೆ ಮೈತ್ರಿಕೂಟವನ್ನು ಕಾಂಗ್ರೆಸ್ ಪೂರ್ತಿ ಮರೆತೇಬಿಟ್ಟಿತ್ತು ಎಂಬ ಟೀಕೆಗಳು ವ್ಯಕ್ತವಾಗಿವೆ. ಮೂರೂ ರಾಜ್ಯಗಳಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಟೀಕೆಗಳನ್ನೆಲ್ಲ ನುಂಗಿಕೊಳ್ಳುವ ಸ್ಥಿತಿ ಬಂದಿದೆ.

ಡಿಸೆಂಬರ್ 6ರ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಗಳಿವೆ. ಅವರು ಈಗಾಗಲೇ ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣ ನೀಡಿದ್ದಾರೆ. ಆದರೆ, ಇದು ಕಾಂಗ್ರೆಸ್ ಅನ್ನು ಮಣಿಸುವ ತಂತ್ರದ ಒಂದು ಭಾಗವಾಗಿದೆ ಎಂಬುದಂತೂ ಸ್ಪಷ್ಟ.

ಯಾಕೆಂದರೆ ಮಮತಾ ಮಾತ್ರವಲ್ಲ, ಅವರ ಪಕ್ಷವೇ ಈ ಸಭೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು ಎಂಬ ವರದಿಗಳಿವೆ.

ಮೈತ್ರಿಪಕ್ಷಗಳ ಜೊತೆ ಹೆಚ್ಚು ಹೊಂದಾಣಿಕೆಗೆ ಕಾಂಗ್ರೆಸ್ ಅನ್ನು ಒಗ್ಗಿಸುವ ಮತ್ತು ಬಗ್ಗಿಸುವ ತಂತ್ರವೂ ಇದಾಗಿರಬಹುದು.

ಮೈತ್ರಿಕೂಟದ ಈ ಸಭೆಯ ಬಗ್ಗೆ ಮತ ಎಣಿಕೆಯ ದಿನದಂದೇ ಘೋಷಿಸಲಾಯಿತು. ಹಾಗಾಗಿ ಸಮಯ ತೀರಾ ಕಡಿಮೆಯಿರುವ ಹಿನ್ನೆಲೆಯನ್ನೂ ಮೈತ್ರಿಕೂಟದ ವಿವಿಧ ಪಕ್ಷಗಳು ಗೈರಾಗುವುದಕ್ಕೆ ನೆಪ ಮಾಡಲೂಬಹುದು. ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಏಕಾಂಗಿಯಾಗಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಾಗಿನಿಂದಲೂ ಮೈತ್ರಿಕೂಟದ ಪಕ್ಷಗಳ ಅಸಮಾಧಾನವನ್ನು ಅದು ಎದುರಿಸಬೇಕಾಗಿ ಬಂದಿತ್ತು.

ಅಂಥ ಅಸಮಾಧಾನಗಳನ್ನೆಲ್ಲ ತನ್ನ ಗೆಲುವಿನ ಮೂಲಕ ಎದುರಿಸುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಈಗ ಸೋಲಿನ ಬಳಿಕ ಗತ್ತು ಕಳೆದುಕೊಂಡ ಸ್ಥಿತಿಯಲ್ಲಿದೆ. ಮತ್ತು ಕಾಂಗ್ರೆಸ್ ಸೋಲನ್ನು ಮೈತ್ರಿಕೂಟದ ಇತರ ಪಕ್ಷಗಳು ಮೈತ್ರಿಕೂಟದ ಸೋಲೆಂದು ಪರಿಗಣಿಸಲಾರವು ಮತ್ತು ಅದರ ಹೊರೆಯನ್ನು ಕಾಂಗ್ರೆಸ್ ಮಾತ್ರವೇ ಹೊರಬೇಕಾಗಿದೆ.

ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆಗೆ ನಿರಾಕರಿಸಿ ಅಖಿಲೇಶ್ ಯಾದವ್ ಅವರ ಅಸಮಾಧಾನಕ್ಕೆ ತುತ್ತಾಗಿದ್ದ ಕಾಂಗ್ರೆಸ್, ತೆಲಂಗಾಣದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ಸೀಟು ಕೊಟ್ಟದ್ದು ಹೊರತುಪಡಿಸಿ, ಉಳಿದ ಮೂರೂ ಜಿಲ್ಲೆಗಳಲ್ಲಿ ಮೈತ್ರಿಕೂಟದ ಯಾವ ಪಕ್ಷಗಳಿಗೂ ಅವಕಾಶ ಕೊಡಲು ನಿರಾಕರಿಸಿತ್ತು.

ಇಂಥ ಸನ್ನಿವೇಶದ ಬಳಿಕ ಈಗ ಮೈತ್ರಿಕೂಟದ ಸಭೆ ಕರೆದಿರುವ ವಿಚಾರ ಮೈತ್ರಿಕೂಟದ ಇತರ ಪಕ್ಷಗಳಿಂದಲೇ ಲೇವಡಿಗೂ ಒಳಗಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು, ಇಂಡಿಯಾ ಮೈತ್ರಿಕೂಟದ ಬಗ್ಗೆ ಕಾಂಗ್ರೆಸ್ಗೆ ಬಹಳ ತಡವಾಗಿ ನೆನಪಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ, ಇಂಡಿಯಾ ಮೈತ್ರಿಕೂಟ 2024ರ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಬಹಳ ದೃಢತೆಯಿಂದ ಸಜ್ಜಾಗಲು ಸೀಟು ಹಂಚಿಕೆ ವಿಚಾರ ಅಕ್ಟೋಬರ್ 31ರೊಳಗೇ ಇತ್ಯರ್ಥವಾಗಬೇಕು ಎಂದು ಟಿಎಂಸಿ ಬಯಸಿತ್ತು ಎಂಬುದರ ಬಗ್ಗೆ ಆ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಅನ್ನು ತಿವಿಯುವುದರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಹಿಂದೆ ಬಿದ್ದಿಲ್ಲ. ಇಂಡಿಯಾ ಮೈತ್ರಿಕೂಟ ಈ ಚುನಾವಣೆಯಲ್ಲಿ ಕಣದಲ್ಲಿರಲಿಲ್ಲ. ಕಾಂಗ್ರೆಸ್ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಹಾಗಾಗಿ ಈ ಸೋಲು ಕಾಂಗ್ರೆಸ್ ಸೋಲು ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿರುವುದು ವರದಿಯಾಗಿದೆ.

ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್, ಯಾವುದೇ ಮಿತ್ರಪಕ್ಷಗಳನ್ನು ಸಂಪರ್ಕಿಸದೆ ಭೋಪಾಲ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಮೊದಲ ಯೋಜಿತ ರ್ಯಾಲಿಯನ್ನು ರದ್ದುಗೊಳಿಸಿತು. ಆ ರ್ಯಾಲಿ ಕಾಂಗ್ರೆಸ್ಗೆ ಮೈತ್ರಿಕೂಟದ ಬೆಂಬಲವನ್ನು ಪ್ರಕಟಿಸುವ ಉದ್ದೇಶದ್ದಾಗಿತ್ತು ಎಂದು ಅವರು ನೆನಪಿಸಿದ್ದಾರೆ.

ಇನ್ನು, ಈಗಿನ ಸೋಲು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ತಮ್ಮ ಪ್ರಯತ್ನವನ್ನು ದ್ವಿಗುಣಗೊಳಿಸುವ ಅಗತ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ಅವರಿಗೂ ಅಸಮಾಧಾನ ಇದೆ. ತೆಲಂಗಾಣದಲ್ಲಿ ಸಿಪಿಐ(ಎಂ) ಕೇವಲ ಎರಡು ಸ್ಥಾನಗಳನ್ನು ಮಾತ್ರ ಕೇಳಿತ್ತು. ಆದರೆ ರಾಜ್ಯ ಕಾಂಗ್ರೆಸ್ ಕೊನೇ ಗಳಿಗೆಯಲ್ಲಿ ನಿರಾಕರಿಸಿತು ಮತ್ತು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸಿತು.

ಇನ್ನು ಸಿಪಿಐಗೆ ಒಂದು ಸ್ಥಾನವನ್ನು ಮಾತ್ರ ಬಿಟ್ಟುಕೊಟ್ಟಿದ್ದು ಕೂಡ ಕೊನೆಯ ಕ್ಷಣದಲ್ಲಿ. ಈಗಿನ ಚುನಾವಣಾ ಫಲಿತಾಂಶ ಜಾತ್ಯತೀತ-ಪ್ರಜಾಪ್ರಭುತ್ವ ಪಕ್ಷಗಳಿಗೆ ಪಾಠ. ಏಕತೆ ಮತ್ತು ಪರ್ಯಾಯ ದೃಷ್ಟಿಯ ಮೂಲಕ ಮಾತ್ರ ಆರ್‌ಎಸ್‌ಎಸ್-ಬಿಜೆಪಿಯನ್ನು ಸೋಲಿಸಲು ಸಾಧ್ಯ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯತೀತ-ಪ್ರಜಾಸತ್ತಾತ್ಮಕ ಪಕ್ಷಗಳು ಪರಸ್ಪರ ಹೊಂದಾಣಿಕೆಯೊಂದಿಗೆ ಹೋಗಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದ್ದಾರೆ.

ಈಗ ಕಾಂಗ್ರೆಸ್ ಮುಂದಿರುವ ಮತ್ತು ಇಂಡಿಯಾ ಮೈತ್ರಿಕೂಟದ ಎದುರು ಇರುವ ಆತಂಕಗಳೇನು?

1.ಇಂಡಿಯಾ ಮೈತ್ರಿಕೂಟದ ಬಗ್ಗೆ ಕಾಂಗ್ರೆಸ್ ಗಮನ ಕಡಿಮೆಯಾಗುತ್ತಿದೆ ಎಂದು ನಿತೀಶ್ ಕುಮಾರ್ ಹೇಳಿದ್ದರು. ಆದರೆ, ಬಿಜೆಪಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮೈತ್ರಿಕೂಟವನ್ನು ಮುನ್ನಡೆಸಿಕೊಂಡು ಹೋಗಲು ಕಾಂಗ್ರೆಸ್ ಬದ್ಧವಾಗಿರುವುದಾಗಿ ನಿತೀಶ್ ಅವರಿಗೆ ಖರ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

2.ಎದುರು ಇರುವ ದೊಡ್ಡ ಗುರಿಯಿಂದ ವಿಮುಖವಾಗದಿರುವಂತೆ ಕಾಂಗ್ರೆಸ್ಗೆ ನಿತೀಶ್ ಕಿವಿಮಾತು ಹೇಳಿರುವುದಾಗಿ ತಿಳಿದುಬಂದಿದೆ.

3. ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು ಕಾಂಗ್ರೆಸ್ ಬಗ್ಗೆ ಹೊಂದಿರುವ ಅಸಮಾಧಾನದ ಬಗ್ಗೆಯೂ ನಿತೀಶ್ ಮನವರಿಕೆ ಮಾಡಿದ್ದು. ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಇಂಡಿಯಾ ಮೈತ್ರಿಕೂಟದ ವೇಗ ತಗ್ಗಲು ಕಾರಣವಾಗಿರುವುದಾಗಿ ಹೇಳಿರುವ ಬಗ್ಗೆ ವರದಿಗಳಿವೆ.

ಈ ನಡುವೆ, ಮೈತ್ರಿಕೂಟದ ಪಕ್ಷಗಳ ನಡುವೆ ಯಾವುದೇ ಭಿನ್ನಮತವಿಲ್ಲ, ಒಡಕಿಲ್ಲ ಎಂಬ ಸ್ಪಷ್ಟನೆಯನ್ನು ಖರ್ಗೆಯವರು ಕೊಟ್ಟಿದ್ದಾರೆ.

ಏನಾದರೂ ಅಸಮಾಧಾನವಿದ್ದರೆ ಅದನ್ನು ಹೇಳುವ ಅಧಿಕಾರ ಎಲ್ಲರಿಗೂ ಇದೆ. ಗಂಭೀರ ದೂರುಗಳಿದ್ದಲ್ಲಿ ತಪ್ಪು ಸರಿಪಡಿಸಲಾಗುವುದು ಎಂದಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಇನ್ನೊಂದೆಡೆ, ಇಂಡಿಯಾ ಮೈತ್ರಿಕೂಟದ ನೇತೃತ್ವ ವಹಿಸಲು ಸಿದ್ಧವಿರುವುದಾಗಿ ಟಿಎಂಸಿ ಹೇಳಿರುವುದೂ ವರದಿಯಾಗಿದೆ. ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಅದು ಹೀಗೆ ಹೇಳಿರುವುದು ಯೋಚಿಸಬೇಕಾದ ಸಂಗತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News