ತಾತ್ವಿಕ ನೆಲೆಯಿಲ್ಲದ ನೋಟು ರದ್ದತಿ

ಕಳ್ಳ ಅಥವಾ ಖೋಟಾ ನೋಟುಗಳ ಹಾವಳಿಯನ್ನು ತಡೆಯಲು ನೋಟು ರದ್ದತಿ ಅತ್ಯಂತ ಪ್ರಭಾವಶಾಲಿ ದಾರಿ ಎಂದು ಸರಕಾರ ಹೇಳಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡು ವಿಷಯಗಳು ಚರ್ಚಾರ್ಹ. ಒಂದು, ನೋಟು ರದ್ದತಿಯ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ ಕಳ್ಳ ನೋಟುಗಳ ಪ್ರಮಾಣ ಎಷ್ಟು? ಎರಡು, ಅಂದಿನ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ರದ್ದಾಗಿ ಹೊಸ 500 ಮತ್ತು 2,000 ರೂ. ಮುಖಬೆಲೆಯ ನೋಟುಗಳನ್ನು ಹೊರತಂದ ಮೇಲೆ ಕಳ್ಳ ನೋಟುಗಳು ಚಲಾವಣೆಯಲ್ಲಿ ಇಲ್ಲವೆ?

Update: 2023-11-19 05:21 GMT
Editor : Thouheed | Byline : ಟಿ.ಆರ್. ಭಟ್

Photo: PTI

ಭಾಗ - 1

ಭಾರತದಲ್ಲಿ ನೋಟು ರದ್ದತಿಗೆ ಈ ನವೆಂಬರ್ 8ನೇ ತಾರೀಕಿಗೆ ಏಳು ವರ್ಷಗಳಾದವು. ಅದರ ಉದ್ದೇಶಗಳು, ಅದನ್ನು ಜಾರಿಗೊಳಿಸಿದ ವೈಖರಿ ಹಾಗೂ ಜನಸಾಮಾನ್ಯರ ಮತ್ತು ದೇಶದ ಅರ್ಥವ್ಯವಸ್ಥೆಯ ಮೇಲೆ ಅದು ಬೀರಿದ ಪ್ರಭಾವಗಳು ಅಧ್ಯಯನ ಯೋಗ್ಯವಾದ ವಿಷಯಗಳು. ಹಾಗಾಗಿ ಇಷ್ಟು ವರ್ಷಗಳಾದ ಬಳಿಕವೂ ಅದರ ಬಗ್ಗೆ ಮಂಥನವು ಇಂದಿಗೂ ನಡೆಯುತ್ತಲೇ ಇದೆ.

ಪ್ರಜಾತಂತ್ರಕ್ಕೆ ಒಳಪಟ್ಟ ಸಮಾಜದ ಜನಜೀವನಕ್ಕೆ ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಯಾವುದೇ ರೀತಿಯ ಅಡ್ಡಿ ಆತಂಕಗಳು ಉಂಟಾಗದಂತೆ ಕಾಯುವ ಬಾಧ್ಯತೆ ಅಧಿಕಾರದ ಕಡಿವಾಣ ಹಿಡಿದ ಸರಕಾರಕ್ಕೆ ಇದೆ. ಮಾತ್ರವಲ್ಲ ದೂರಗಾಮಿ ಪರಿಣಾಮಬೀರಬಲ್ಲ ನಿರ್ಧಾರಗಳ ಹಿಂದೆ ತಾರ್ಕಿಕವಾದ ಸಿದ್ಧಾಂತಗಳು ಅಡಕವಾಗಿರಬೇಕು ಮತ್ತು ನಿರ್ಧಾರಗಳನ್ನು ಅನುಷ್ಠಾನಗೊಳಿಸುವಾಗ ಪಾಲಿಸಬೇಕಾದ ನಿಯಮಗಳು ಪ್ರಜೆಗಳಿಗೆ ಅನಗತ್ಯ ಗೊಂದಲ, ಸಂಕಷ್ಟಗಳನ್ನು ಹುಟ್ಟುಹಾಕದಂತೆ ಮುಂಜಾಗ್ರತೆ ವಹಿಸಬೇಕು.

ಈ ಮೂಲ ತತ್ವಗಳನ್ನು ಕಡೆಗಣಿಸಿ ಭಾರತ ಸರಕಾರವು 2016 ನವೆಂಬರ್ 8ರಂದು 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಆ ರಾತ್ರಿ 12 ಗಂಟೆಗೆ ದೇಶದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಶೇ. 86ರಷ್ಟು ಉಪಯೋಗಕ್ಕೆ ಬಾರದ ಪೇಪರ್‌ಗಳಾದವು.

ಉದ್ದೇಶಗಳು

ಆ ದಿನ ರಾತ್ರಿ 8ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದತಿಯ ಉದ್ದೇಶಗಳನ್ನು ಸ್ಪಷ್ಟವಾಗಿ ಹೇಳಿದರು:

1. ದೇಶದಲ್ಲಿರುವ ಕಪ್ಪು ಹಣವನ್ನು ಹೊರ ತರುವುದು.

2. ಭ್ರಷ್ಟಾಚಾರಕ್ಕೆ ತಡೆ ನೀಡುವುದು.

3. ಭಯೋತ್ಪಾದಕರಿಗೆ ಹಣ ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಅವರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು.

4. ನಕಲಿ ನೋಟುಗಳ ಹಾವಳಿಯನ್ನು ನಿವಾರಿಸುವುದು.

ಭಾಷಣದಲ್ಲಿ ಪ್ರಸ್ತುತಪಡಿಸಿದ ಈ ಉದ್ದೇಶಗಳಿಗೆ ಮತ್ತೊಂದನ್ನು ಆಮೇಲೆ ಸೇರಿಸಲಾಯಿತು: ದೇಶದ ಆರ್ಥಿಕ ವ್ಯವಹಾರಗಳಲ್ಲಿ ನಗದಿನ ಉಪಯೋಗವನ್ನು ಕಡಿತಗೊಳಿಸಿ ಅದರ ಬದಲಿಗೆ ತಂತ್ರಜ್ಞಾನ ಮೂಲದ ಯುಪಿಐಯ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಉಪಯೋಗಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಆ ಮೂಲಕ ಕ್ರಮೇಣ ನಗದಿನ ವ್ಯವಹಾರವನ್ನೇ ತಡೆಯುವುದು. ಈ ಗುರಿಯಲ್ಲಿಯೂ ಕ್ರಮೇಣ ಬದಲಾವಣೆಯಾಯಿತು: ನಗದುರಹಿತ ಅರ್ಥವ್ಯವಸ್ಥೆ (ಕ್ಯಾಶ್-ಲೆಸ್ ಇಕಾನಮಿ)ಯನ್ನು ಕೈಬಿಟ್ಟು ಕಡಿಮೆ ನಗದು (ಲೆಸ್ ಕ್ಯಾಶ್) ಬಳಸುವ ಅರ್ಥವ್ಯವಸ್ಥೆಯನ್ನು ಪೋಷಿಸುವುದು ನೋಟುರದ್ದತಿಯ ಒಂದು ಗುರಿ ಎಂದು ಬಿಂಬಿಸಲಾಯಿತು.

ಘೋಷಿತ ಉದ್ದೇಶಗಳು ಉತ್ತಮವಾಗಿದ್ದವು. ದೇಶವು ಕಳ್ಳ ಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದಕರ ಹಾವಳಿಗಳಿಂದ ಸಾಕಷ್ಟು ಬವಣೆಗೆ ಈಡಾಗಿತ್ತು. ಅವುಗಳಿಂದ ಸಮಾಜದಲ್ಲಿಯೂ ಅಶಾಂತಿ ಅಸಮಾನತೆಗಳು ಹೆಚ್ಚುತ್ತಿದ್ದವು. ನೋಟು ರದ್ದತಿ ಈ ಸಮಸ್ಯೆಗಳಿಗೆ ಒಂದು ಪ್ರಭಾವಶಾಲಿ ಪ್ರತ್ಯಸ್ತ್ರವಾಗಲಿದೆ ಎಂದು ಪ್ರಚಾರಮಾಡಲಾಯಿತು.

ಆದರೆ ನೋಟು ರದ್ದತಿಯನ್ನು ಕಾರ್ಯರೂಪಕ್ಕೆ ತಂದ ಕ್ರಮ, ಜನಸಾಮಾನ್ಯರ ಜೀವನದ ಮೇಲೆ ಅದರಿಂದಾದ ಪರಿಣಾಮಗಳು, ದೇಶದ ಅರ್ಥವ್ಯವಸ್ಥೆಗೆ ಆದ ಬಾಧಕಗಳು ಮತ್ತು ರಿಸರ್ವ್ ಬ್ಯಾಂಕಿನ(ಆರ್‌ಬಿಐ) ಕಾರ್ಯವೈಖರಿ-ಇವುಗಳೆಲ್ಲ ದೇಶವನ್ನು ಅನಪೇಕ್ಷಿತ ಹಾಗೂ ತೀವ್ರವಾದ ಹಿಂಜರಿತಕ್ಕೆ ತಳ್ಳಿದವು. ಪ್ರಜಾತಂತ್ರದಲ್ಲಿ ವಿಶ್ವಾಸವಿರುವವರು ಈ ತರದ ನೀತಿ ನಿರ್ಧಾರಗಳನ್ನು ಕಾಲಾನುಕಾಲಕ್ಕೆ ಪುನರ್ವಿಮರ್ಶಿಸುವ ಅಗತ್ಯವಿದೆ-ಪುನರ್ವಿಮರ್ಶೆಗಳು ಕಲಿಯಬೇಕಾದ ಪಾಠಗಳನ್ನು ಮುನ್ನೆಲೆಗೆ ತರುತ್ತವೆ.

ಕಳ್ಳ ಹಣದ ಸಮಸ್ಯೆ

ನೋಟು ರದ್ದತಿಯ ಒಂದು ಉದ್ದೇಶ ಕಳ್ಳಹಣವನ್ನು ಬಯಲಿಗೆ ಎಳೆಯುವುದು ಎಂದು ಪ್ರಧಾನಿಯವರೇ ಘೋಷಿಸಿದ್ದರು. ಇದನ್ನು ದೇಶ ಸಾಧಿಸಿತೇ?

ಕಳ್ಳ ಹಣವನ್ನು ಅಧಿಕ ಮೌಲ್ಯದ ನೋಟುಗಳ ರೂಪದಲ್ಲಿ ಮನೆಯ ಕಪಾಟುಗಳಲ್ಲಿ, ಹಾಸಿಗೆ ಮತ್ತು ತಲೆದಿಂಬುಗಳ ಒಳಗೆ ಭದ್ರವಾಗಿ ಅಡಗಿಸಿ ಇಡುತ್ತಾರೆಂದು ಹೇಳಿಕೊಂಡು 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಸರಕಾರಕ್ಕೆ ವಾಸ್ತವದ ಬಗ್ಗೆ ಅರಿವು ಇರಲಿಲ್ಲ ಅಥವಾ ಜಾಣಮರೆವು ಬಾಧಿಸಿತ್ತು. ಕಳ್ಳ ದಾರಿಯಿಂದ ಹಣಸಂಪಾದನೆ ಮಾಡುವವರ ವಿವೇಚನಾ ಶಕ್ತಿ ಸಾಮಾನ್ಯ ನಾಗರಿಕರಿಗಿಂತ ಮೇಲ್ಮಟ್ಟದ್ದು. ಕಳ್ಳ ಹಣವನ್ನು ನೋಟುಗಳ ರೂಪದಲ್ಲಿ ಮನೆಯಲ್ಲಿಯೇ ಇಟ್ಟುಕೊಳ್ಳುವಷ್ಟು ವಿವೇಚನಾ ಶೂನ್ಯರು ಅವರಲ್ಲ. ಆ ಹಣವನ್ನು ಬೇರೆ ಬೇರೆ ರೂಪದಲ್ಲಿ ಶೇಖರಿಸಲಾಗುತ್ತದೆ ಎಂದು ತಜ್ಞರ ಅಧ್ಯಯನಗಳು ತೋರಿಸಿವೆ. ಸರಕಾರದ ಈ ನಿಲುವು ತರ್ಕರಹಿತ ಎಂಬುದನ್ನು ನೋಟುಗಳನ್ನು ಬದಲಾಯಿಸಲು ನೀಡಿದ ಅವಧಿಯ ಒಳಗೆ ಅಮಾನ್ಯಗೊಂಡ ಬಹುತೇಕ ಎಲ್ಲ ನೋಟುಗಳೂ ಆರ್‌ಬಿಐಗೆ ಮರಳಿ ಬಂದವೆಂಬುದು ಸಾಧಿಸುತ್ತದೆ.

ಇದೂ ಅಲ್ಲದೆ, ಕಳ್ಳಹಣವನ್ನು ಅಧಿಕ ಮುಖಬೆಲೆಯ ನೋಟುಗಳ ರೂಪದಲ್ಲಿ ದಾಸ್ತಾನು ಮಾಡುತ್ತಾರೆ ಎಂಬುದು ಸತ್ಯವಾಗಿದ್ದರೆ, ಅಮಾನ್ಯಗೊಂಡ 1,000 ರೂ. ಮುಖಬೆಲೆಯ ನೋಟಿನ ಬದಲಾಗಿ ಇನ್ನೂ ದುಬಾರಿಯಾದ 2,000 ರೂ. ಮುಖಬೆಲೆಯ ನೋಟನ್ನು ಸರಕಾರ ಯಾಕೆ ಚಲಾವಣೆಗೆ ತಂದಿತು? ಮತ್ತೆ 2023ರಲ್ಲಿ 2000 ರೂ. ಮುಖಬೆಲೆಯ ನೋಟನ್ನು ಚಲಾವಣೆಯಿಂದ ಯಾಕೆ ಹಿಂಪಡೆಯಿತು? ಸರಕಾರವಾಗಲೀ, ಪ್ರಧಾನ ಮಂತ್ರಿಯಾಗಲೀ ಈ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬಲ್ಲರೆ?

ಭ್ರಷ್ಟಾಚಾರ ನಿವಾರಣೆಯೆಂಬ ಹಗಲುಗನಸು?

ನೋಟು ರದ್ದತಿಯು ದೇಶದಲ್ಲಿ ಬೇರು ಬಿಟ್ಟ ಭ್ರಷ್ಟಾಚಾರಕ್ಕೆ ಮಾರಕ ಹೊಡೆತ ನೀಡಲಿದೆ ಮತ್ತು ಭ್ರಷ್ಟಾಚಾರಿಗಳಿಗೆ ದುಃಸ್ವಪ್ನವಾಗಲಿದೆ ಎಂದು ಪ್ರಧಾನಿ ಘೋಷಿಸಿದ್ದರು.

ಏಳು ವರ್ಷಗಳಲ್ಲಿ ಬೆಳಕಿಗೆ ಬಂದ ಮತ್ತು ಬರುತ್ತಾ ಇರುವ ಅನೇಕ ಘಟನೆಗಳು ತೀರಾ ಭಿನ್ನವಾದ ಒಂದು ಚಿತ್ರವನ್ನು ತೆರೆದಿಡುತ್ತವೆ. ಕರ್ನಾಟಕದ ವಿದ್ಯಮಾನಗಳನ್ನು ಗಮನಿಸಿದರೆ ಈ ವರ್ಷ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಅನೇಕ ಸರಕಾರಿ ಉದ್ಯೋಗಿಗಳ ಮನೆಗಳ ಮೇಲೆ, ಕಚೇರಿಗಳಲ್ಲಿ ಲೋಕಾಯುಕ್ತದ ಅಧಿಕಾರಿಗಳು ಯಾಕೆ ದಾಳಿ ನಡೆಸಿದರು? ಬಸವರಾಜ ಬೊಮ್ಮಾಯಿಯವರ ಸರಕಾರದ ಮೇಲೆ ಶೇ. 40 ಕಮಿಷನ್ ಸರಕಾರ ಎಂಬ ಅಪವಾದ ಹೇಗೆ ಅಂಟಿತು? ಒಂದೆಡೆ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ಪಕ್ಷದ ನಾಯಕರ ಮೇಲೆ ನಿರಂತರ ಈ.ಡಿ., ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಯುತ್ತದೆ; ಇನ್ನೊಂದೆಡೆ ಆಳುವ ಪಕ್ಷದ ರಾಷ್ಟ್ರೀಯ ನಾಯಕರು ವಿರೋಧ ಪಕ್ಷದ ನಾಯಕರ ಮೇಲೆ ಮೊದಲು ಗಂಭೀರವಾದ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಅವರು ಬಿಜೆಪಿಗೆ ಸೇರಿದರೆ ಆ ಆರೋಪಗಳೆಲ್ಲ ನೇಪಥ್ಯಕ್ಕೆ ಸರಿಯುತ್ತವೆ.

ಸಂಸತ್ತಿನ ಈ ಬಾರಿಯ ಮಳೆಗಾಲದ ಅಧಿವೇಶನದಲ್ಲಿ ದೇಶದ ಸಿಎಜಿ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ಸಂಸ್ಥೆಯ ಅನೇಕ ವರದಿಗಳನ್ನು ಮಂಡಿಸಲಾಗಿತ್ತು. ಆ ವರದಿಗಳು ಕೇಂದ್ರ ಸರಕಾರದ ಬೇರೆ ಬೇರೆ ವಿಭಾಗಗಳಲ್ಲಿ, ಅನೇಕ ಯೋಜನೆಗಳ ಹೆಸರಿನಲ್ಲಿ ಸಂಭವಿಸಿದ ಅಕ್ರಮಗಳನ್ನು ಉಲ್ಲೇಖಿಸಿವೆ. ಇತ್ತೀಚೆಗೆ ಕಲ್ಲಿದ್ದಲು ಆಮದಿನಲ್ಲಿಯೂ ಒಂದು ಖಾಸಗಿ ಸಂಸ್ಥೆಗೆ ಲಾಭವಾಗುವಂತೆ ನಿಯಮಗಳನ್ನು ಸಡಿಲಿಸಲಾಗಿದೆ ಎಂಬ ವರದಿ ಬಂದಿದೆ.

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ಭ್ರಷ್ಟಾಚಾರ ನಡೆದ ವರದಿಗಳು ಬಂದಿವೆ, ಇನ್ನೂ ಬರುತ್ತಲೇ ಇವೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ, ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಸೀಟು ಕೊಡಿಸುತ್ತೇವೆಂದು ಕೋಟಿಗಟ್ಟಲೆ ಹಣದ ವಸೂಲಿಯ ಬಗ್ಗೆ, ಅಕ್ರಮವಾಗಿ ಕೂಡಿಟ್ಟ ಹಣ, ಸಂಪತ್ತು, ಸೀರೆ, ಇತ್ಯಾದಿಗಳ ಬಗ್ಗೆ ವರದಿಗಳು ಬರುತ್ತಿವೆ.

ಕೇಂದ್ರ ಸರಕಾರವು ಜಾರಿಗೆ ತಂದ ಚುನಾವಣಾ ಬಾಂಡುಗಳು ಭ್ರಷ್ಟಾಚಾರಕ್ಕೆ ಆಸ್ಪದ ಕೊಡುತ್ತವೆ ಎಂಬ ವಿಷಯದ ಬಗ್ಗೆ ಈಗ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

ಇವೆಲ್ಲದರ ಒಟ್ಟು ಅರ್ಥ ಅಂದರೆ ಭ್ರಷ್ಟಾಚಾರ ನಿವಾರಣೆಯಾಗುವುದು ಬಿಡಿ, ಕಡಿತವೂ ಆಗಿಲ್ಲ. ಹಾಗಿದ್ದರೆ ನೋಟು ರದ್ದತಿಯು ಭ್ರಷ್ಟಾಚಾರ ನಿವಾರಣೆಯ ಗುರಿಯ ಕುರಿತಂತೆ ಏನು ಸಾಧಿಸಿತು?

ನಕಲಿ ನೋಟುಗಳ ಚಲಾವಣೆ

ಕಳ್ಳ ಅಥವಾ ಖೋಟಾ ನೋಟುಗಳ ಹಾವಳಿಯನ್ನು ತಡೆಯಲು ನೋಟು ರದ್ದತಿ ಅತ್ಯಂತ ಪ್ರಭಾವಶಾಲಿ ದಾರಿ ಎಂದು ಸರಕಾರ ಹೇಳಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡು ವಿಷಯಗಳು ಚರ್ಚಾರ್ಹ. ಒಂದು, ನೋಟು ರದ್ದತಿಯ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ ಕಳ್ಳ ನೋಟುಗಳ ಪ್ರಮಾಣ ಎಷ್ಟು? ಎರಡು, ಅಂದಿನ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ರದ್ದಾಗಿ ಹೊಸ 500 ಮತ್ತು 2,000 ರೂ. ಮುಖಬೆಲೆಯ ನೋಟುಗಳನ್ನು ಹೊರತಂದ ಮೇಲೆ ಕಳ್ಳ ನೋಟುಗಳು ಚಲಾವಣೆಯಲ್ಲಿ ಇಲ್ಲವೆ?

ಆರ್‌ಬಿಐಯ 2016ರ ವಾರ್ಷಿಕ ವರದಿಯ ಪ್ರಕಾರ 2015-16ರಲ್ಲಿ ದೇಶದಲ್ಲಿ ಪತ್ತೆ ಹಚ್ಚಲ್ಪಟ್ಟ ಖೋಟಾ ನೋಟುಗಳ ಸಂಖ್ಯೆ ಕೇವಲ 6,32,926; ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಸಂಖ್ಯೆ 9,02,660 ಲಕ್ಷ. ಅಂದರೆ ಖೋಟಾ ನೋಟುಗಳ ಪ್ರಮಾಣ ಶೇಕಡಾ 0.0000070. ಇಷ್ಟು ಸಣ್ಣ ಪ್ರಮಾಣದ ಕಳ್ಳ ನೋಟುಗಳನ್ನು ಅಳಿಸಲು, ಚಲಾವಣೆಯಲ್ಲಿರುವ ನೋಟುಗಳ ಒಟ್ಟು ಶೇ. 86ರಷ್ಟನ್ನು ರದ್ದುಗೊಳಿಸಿದ್ದು ಎಷ್ಟು ಸಮಂಜಸ?

ಹೆಚ್ಚು ಮುಖಬೆಲೆಯ ನೋಟುಗಳು ಕಳ್ಳ ಹಣಕ್ಕೆ ಮತ್ತು ನಕಲಿ ನೋಟುಗಳ ಚಲಾವಣೆಗೆ ಅವಕಾಶ ಮಾಡುವುದಾದರೆ ರದ್ದು ಮಾಡಿದ 1,000 ರೂ. ಮುಖಬೆಲೆಯ ನೋಟುಗಳ ಬದಲು ಅದರ ದುಪ್ಪಟ್ಟು ಮುಖಬೆಲೆಯ 2000 ರೂ. ನೋಟನ್ನು ಯಾಕೆ ಮುದ್ರಿಸಲಾಯಿತು? ರದ್ದುಗೊಳಿಸಿದ 500 ರೂ. ಮೌಲ್ಯದ ನೋಟಿನ ಜಾಗದಲ್ಲಿ ಮತ್ತೆ ಅದೇ ಮೌಲ್ಯದ ಹೊಸ 500ರ ನೋಟುಗಳನ್ನು ಯಾಕೆ ಚಲಾವಣೆಗೆ ತರಲಾಯಿತು?

ಮುಂದಿನ ಏಳು ವರ್ಷಗಳಲ್ಲಿ ಕಳ್ಳ ನೋಟುಗಳ ಸಂಖ್ಯೆ ಕೋಷ್ಟಕ 1ರಲ್ಲಿ ಹೇಳಿದಂತೆ ಇಳಿಮುಖವಾಗಿದೆ. ಆದರೆ ನಿವಾರಣೆಯಾಗಿಲ್ಲ. ಕೆಲವೊಮ್ಮೆ ಬ್ಯಾಂಕು ಎಟಿಎಂ ಗಳಲ್ಲಿಯೇ ಕಳ್ಳ ನೋಟುಗಳು ಸಿಕ್ಕಿದ ವರದಿಗಳು ಬಂದಿವೆ.

ಭಯೋತ್ಪಾದನೆಗೆ ತಡೆ?

ಕಳ್ಳ ನೋಟುಗಳ ನಿವಾರಣೆಯ ಮೂಲಕ ಗಡಿಯಾಚೆಯ ಮತ್ತು ದೇಶದೊಳಗಿನ ಭಯೋತ್ಪಾದನೆಗೆ ಸಂಪನ್ಮೂಲದ ಪೂರೈಕೆಯನ್ನು ನಿಲ್ಲಿಸಿ ಭಯೋತ್ಪಾದಕರ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವೆಂಬ ಹೇಳಿಕೆಯೂ ನೋಟು ರದ್ದತಿಯ ಸಂದರ್ಭದಲ್ಲಿ ಕೇಳಿ ಬಂದಿತ್ತು. ದೇಶ ಇದನ್ನು ಸಾಧಿಸಿತೇ? ವಾಸ್ತವದತ್ತ ಒಮ್ಮೆ ದೃಷ್ಟಿ ಹಾಯಿಸಬೇಕು.

2019ರಲ್ಲಿ ಸಂವಿಧಾನದ 370ನೆಯ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ರಾಜ್ಯ ಸ್ಥಾನಮಾನವನ್ನು ಕಿತ್ತು ಅದನ್ನು ಕೇಂದ್ರಾಡಳಿತದ ಪ್ರದೇಶವನ್ನಾಗಿ ಪರಿವರ್ತಿಸಲು ಒಂದು ಮುಖ್ಯ ಕಾರಣ ಕೇಂದ್ರ ಸರಕಾರದ ನೇರ ಆಡಳಿತದ ಮೂಲಕ ಅಲ್ಲಿ ಆತಂಕವಾದಿಗಳನ್ನು ಬಗ್ಗು ಬಡಿಯಬಹುದು ಎಂಬುದಾಗಿತ್ತು. ಹಾಗಿದ್ದರೆ, ಅದಕ್ಕಿಂತಲೂ ಮೂರು ವರ್ಷದ ಹಿಂದೆ ಮಾಡಿದ ನೋಟು ರದ್ದತಿ ಹೊಂದಿದ ಅದೇ ಉದ್ದೇಶ ಈಡೇರಲಿಲ್ಲ ಎಂದು ಊಹಿಸಬೇಕಾಗುತ್ತದೆ.

ಈ ವರ್ಷದ ಮೇ ತಿಂಗಳಿನಿಂದ ಪೂರ್ವೋತ್ತರ ರಾಜ್ಯ ಮಣಿಪುರದಲ್ಲಿ ಆಗುತ್ತಿರುವ ಹೃದಯವಿದ್ರಾವಕ ಯಾದವೀಯ ಕಲಹವನ್ನು ನಿಯಂತ್ರಿಸುವ ಉದ್ದೇಶದಿಂದ ನವೆಂಬರ್ 13ರಂದು ಕೇಂದ್ರ ಸರಕಾರವು ಅಲ್ಲಿನ 8 ಮೈತೈ ಸಂಘಟನೆಗಳನ್ನು ನಿಷೇಧಿಸಿದೆ. ಅದಕ್ಕೆ ಒಂದು ಕಾರಣ ಅವುಗಳು ಉಗ್ರಗಾಮಿ ಕೃತ್ಯಗಳಿಗೆ ಉತ್ತೇಜನ ನೀಡುತ್ತವೆ ಎಂಬುದು. ಇನ್ನು ಮಧ್ಯಭಾರತದ ಛತ್ತೀಸ್‌ಗಡದಲ್ಲಿ ಆಗಾಗ ನಕ್ಸಲರ ಕುಕೃತ್ಯಗಳ ಬಗ್ಗೆ ಕೇಳಿಬರುತ್ತಿದೆ. ಸಂಪತ್ತು ಮತ್ತು ಜೀವ ಹಾನಿಗಳು ಆದ ವರದಿಗಳು ಬರುತ್ತಲೇ ಇವೆ.

ನೋಟು ರದ್ದತಿಯ ಬಳಿಕವೂ ಭಯೋತ್ಪಾದನೆ ಅವ್ಯಾಹತವಾಗಿ ನಡೆಯುತ್ತಿದ್ದರೆ ರದ್ದತಿಯ ಉದ್ದೇಶ ಈಡೇರಿತೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಟಿ.ಆರ್. ಭಟ್

contributor

Similar News