ಕರ್ನಾಟಕದ ಖಾತರಿ ಯೋಜನೆಗಳು: ಒಂದು ವಿಶ್ಲೇಷಣೆ
ಪ್ರಜಾತಂತ್ರಕ್ಕೆ ಬದ್ಧವಾಗಿರುವ ಒಂದು ದೇಶವು ತನ್ನ ಅತ್ಯಂತ ತಳಮಟ್ಟದಲ್ಲಿರುವ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಕೊಡುವ ಉತ್ತರದಾಯಿತ್ವವನ್ನು ಹೊಂದಿದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಆಕಾಂಕ್ಷೆಯೂ ಮೂಲತಃ ಇದೇ ಆಗಿತ್ತು: ‘‘ಯಾವೊಬ್ಬ ನಾಗರಿಕನು ಕಣ್ಣೀರು ಹಾಕದಂತೆ ನೋಡುವ ಜವಾಬ್ದಾರಿ ಸತ್ತೆಯನ್ನು ನಡೆಸುವ ತಂಡದ್ದು’’ ಎಂದಿದ್ದರು.
ಭಾಗ -1
ಆರ್ಥಿಕ ಪ್ರಗತಿಯ ವಿಪರ್ಯಾಸಗಳು
ಈ ವರ್ಷ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು, ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರಂಭಿಸಿದೆ. ರಾಜ್ಯ ಸರಕಾರದ ಪ್ರಕಾರ ಇವುಗಳ ಉದ್ದೇಶ ಹಸಿವು, ಬಡತನ, ಅಂಧಕಾರ ಮತ್ತು ನಿರುದ್ಯೋಗಗಳನ್ನು ನಿವಾರಿಸುವುದು. ಈ ಯೋಜನೆಗಳ ಬಗ್ಗೆ ಪ್ರತಿಕ್ರಿಯೆಗಳು ವಿಭಿನ್ನವಾಗಿ ಮೂಡಿಬಂದಿವೆ. ಕರ್ನಾಟಕದ ನಡೆಯನ್ನು ಸದ್ಯದಲ್ಲಿಯೇ ಚುನಾವಣೆ ನಡೆಯಲಿರುವ ಬೇರೆ ರಾಜ್ಯಗಳಲ್ಲಿಯೂ ಅನುಕರಿಸುವ ಸೂಚನೆಗಳು ಕಂಡುಬರುತ್ತಿವೆ.
ಯೋಜನೆಗಳ ರಾಜಕೀಯ ಉದ್ದೇಶ ಏನೇ ಇರಲಿ, ಅವುಗಳ ಹಿಂದೆ ಇರುವ ಆರ್ಥಿಕ ನೀತಿಯನ್ನು ಪರಿಶೀಲಿಸುವುದು ಸಕಾಲಿಕ. ಇದನ್ನು ಅರಿತುಕೊಳ್ಳಲು ಇತ್ತೀಚೆಗಿನ ದಶಕಗಳಲ್ಲಿ ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಕಡೆಗೆ ಒಂದು ಸ್ಥೂಲ ನೋಟವನ್ನು ಬೀರಬೇಕು.
ಜನಪರ ಯೋಜನೆಗಳ ಹಿನ್ನೆಲೆ
ಪ್ರಜಾತಂತ್ರ ಪದ್ಧತಿಯಲ್ಲಿ ನಾಗರಿಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಯೋಜನೆಗಳು ಇಂದು ನಿನ್ನೆಯದಲ್ಲ. ಭಾರತದ ಉದಾಹರಣೆಯನ್ನು ಪರಿಶೀಲಿಸಿದರೆ, 1950ರ ದಶಕದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಆರಂಭಿಸಿದಾಗ ಜನರ ಕ್ಷೇಮಾಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯರೂಪಕ್ಕೆ ತಂದಿದ್ದವು. ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿಮೆ ಬೆಲೆಯಲ್ಲಿ ಅಗತ್ಯವಾದ ಆಹಾರ ಧಾನ್ಯಗಳ ಪೂರೈಕೆ, ಮಕ್ಕಳ ಓದಿಗೆ ಅನುಕೂಲವಾಗಲೆಂದು ಫೀಸು ಇಲ್ಲದ ಸರಕಾರಿ ಶಾಲೆಗಳ ಮತ್ತು ಆರೋಗ್ಯ ರಕ್ಷಣೆಗೆ ಬೇಕಾದ ಸರಕಾರಿ ಚಿಕಿತ್ಸಾಲಯಗಳ ಸ್ಥಾಪನೆ, ರೋಗ ನಿವಾರಕ ಉಚಿತ ಚುಚ್ಚು ಮದ್ದುಗಳ ಪೂರೈಕೆ, ಕುಡಿಯಲು ನಗರ ಪ್ರದೇಶಗಳಲ್ಲಿ ಉಚಿತ ನಳ್ಳಿನೀರು ಮತ್ತು ಹಳ್ಳಿಗಳಲ್ಲಿ ಕೊಳವೆ ಬಾವಿಗಳು-ಮುಂತಾದ ಕ್ರಮಗಳ ಮೂಲಕ ಜನಸಾಮಾನ್ಯರ ಜೀವನ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿತ್ತು. ವಿಭಿನ್ನ ಆರ್ಥಿಕ ರಂಗಗಳಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿ ಯುವಜನರಿಗೆ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಅವಕಾಶವನ್ನು ವಿಸ್ತರಿಸಲಾಗಿತ್ತು. ಈ ಕ್ರಮಗಳಿಗೆ ಅಗತ್ಯವಾದ ಸಂಪನ್ಮೂಲಗಳ ಕ್ರೋಡೀಕರಣಕ್ಕೋಸ್ಕರ 1950-70ರ ದಶಕಗಳಲ್ಲಿ ಹಣಕಾಸು ಮತ್ತು ವಿಮಾ ರಂಗದ ವ್ಯವಹಾರಗಳನ್ನು ಸರಕಾರದ ಅಧೀನಕ್ಕೆ ಒಳಪಡಿಸಿ ಅವುಗಳ ವಹಿವಾಟಿನ ನೀತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ತರಲಾಯಿತು.
ಇವುಗಳ ಒಟ್ಟು ಪರಿಣಾಮವಾಗಿ ದೇಶದಲ್ಲಿ ವಸಾಹತು ಕಾಲದ ಬಳುವಳಿಗಳಾದ ಆಹಾರ ಕ್ಷಾಮ, ಸಾಂಕ್ರಾಮಿಕ ರೋಗಗಳ ಹಾವಳಿ, ನಿರಕ್ಷರತೆ, ನಿರುದ್ಯೋಗ ಮತ್ತು ತೀವ್ರ ಬಡತನ-ಮುಂತಾದ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ದೇಶವು ಮುನ್ನಡೆಯನ್ನು ಸಾಧಿಸಿತು.
ಸರ್ವಾಂಗೀಣ ಪ್ರಗತಿಗೆ ಹಿನ್ನಡೆ
ಸರ್ವರನ್ನು ಒಳಗೊಂಡ ಪ್ರಗತಿಯೇ ಸರಕಾರದ ನೀತಿಯ ಗುರಿಯಾಗಿರಬೇಕೆಂಬ ಈ ಧೋರಣೆಗೆ ಹಿನ್ನಡೆ 1990ರ ದಶಕದಲ್ಲಿ ಆರಂಭವಾಯಿತು. ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಇಂಗ್ಲೆಂಡಿನ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಹೊಸ ನೀತಿಗಳು, ಸೋವಿಯೆತ್ ಒಕ್ಕೂಟದ ವಿಭಜನೆ, ಬರ್ಲಿನ್ ಗೋಡೆಯ ಸಾಂಕೇತಿಕ ನಾಶ ಮುಂತಾದ ಬೆಳವಣಿಗೆಗಳು ಜಗತ್ತಿನ ಅನೇಕ ದೇಶಗಳ ಆರ್ಥಿಕ ನೀತಿಯಲ್ಲಿ ಮೂಲಭೂತ ಬದಲಾವಣೆಗಳಿಗೆ ನಾಂದಿ ಹಾಡಿದವು. ಸರಕಾರದ ಹಸ್ತಕ್ಷೇಪದ ಬದಲು ಖಾಸಗಿ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಥಾಪನೆ, ಬೆಳವಣಿಗೆ ಮತ್ತು ವ್ಯವಹಾರಕ್ಕೆ ಅನುಕೂಲವಾದ ವ್ಯವಸ್ಥೆಯನ್ನು ವಿಸ್ತರಿಸುವತ್ತ ಸರಕಾರಗಳು ಒಲವು ತೋರಿಸಿದವು. ‘ಮಿನಿಮಮ್ ಗವರ್ನ್‌ಮೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್’ ಎಂಬ ಘೋಷವಾಕ್ಯ ಸರಕಾರಗಳ ಧೋರಣೆಯ ಮೂಲ ಮಂತ್ರವಾಯಿತು. ಇದರ ಅರ್ಥ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಸರಕಾರದ ಪಾತ್ರವು ಅತ್ಯಂತ ಕನಿಷ್ಠವಾಗಿರಬೇಕು; ಉದ್ದಿಮೆ, ಸಾರಿಗೆ, ಸೇವೆ, ಹಣಕಾಸು, ವ್ಯಾಪಾರ, ಉಚ್ಚ ಶಿಕ್ಷಣ, ಮೂಲ ಸೌಕರ್ಯ ಮುಂತಾದ ರಂಗಗಳಲ್ಲಿರುವ ಸಂಸ್ಥೆಗಳು ಸ್ವಪ್ರೇರಣೆಯಿಂದ ತಮ್ಮ ದಕ್ಷತೆಯನ್ನು ಗರಿಷ್ಠ ಗುಣಮಟ್ಟಕ್ಕೆ ಒಳಪಡಿಸಿ ಸಾಮಾಜಿಕ ಬದ್ಧತೆಯನ್ನು ತೋರಿಸಿಕೊಳ್ಳಬೇಕು. ಸರಕಾರವು ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೆ ಅಗತ್ಯವಾದ ವಾತಾವರಣವನ್ನು (‘ಈಸ್ ಆಫ್ ಡೂಯಿಂಗ್ ಬಿಸಿನೆಸ್’) ಸೃಷ್ಟಿಸುವ ಕಾರ್ಯವನ್ನು ಮಾತ್ರ ಮಾಡಬೇಕು ಎಂಬ ದೃಷ್ಟಿಕೋನ ಪ್ರಚಾರಕ್ಕೆ ಬಂತು.
ಭಾರತದಲ್ಲಿಯೂ 1991ರ ನಂತರದ ವರ್ಷಗಳಲ್ಲಿ ಇದೇ ಧೋರಣೆ ಕಾರ್ಯರೂಪಕ್ಕೆ ಬರಲು ಆರಂಭವಾಯಿತು. ಸರಕಾರಿ ಉದ್ದಿಮೆಗಳ ಖಾಸಗೀಕರಣ, ಹೊಸ ಉದ್ದಿಮೆಗಳ ಮತ್ತು ವಿದೇಶೀ ಕಂಪೆನಿಗಳ ಪ್ರವೇಶಕ್ಕೆ ಅನುಕೂಲಕರವಾದ ರಂಗಸಜ್ಜಿಕೆ, ಕಾನೂನುಗಳ ತಿದ್ದುಪಡಿ, ಸಂಸ್ಥೆಗಳಿಗೆ ಹೆಚ್ಚು ಸ್ವಾಯತ್ತತೆ-ಇವೇ ಮುಂತಾದ ಪ್ರಕ್ರಿಯೆಗಳು ಒಂದರ ಮೇಲೆ ಒಂದರಂತೆ ಸಂಭವಿಸಿದವು.
ಅರ್ಥವ್ಯವಸ್ಥೆಯ ವೈಪರೀತ್ಯ
ಈ ನೀತಿಗಳಿಂದಾಗಿ ದೇಶಗಳೊಳಗೆ ಆರ್ಥಿಕ ಪ್ರಗತಿಯ ಹೊಸತೊಂದು ವೈಪರೀತ್ಯ ಕಂಡುಬಂತು. ಒಂದೆಡೆ, ಮಾಹಿತಿತಂತ್ರಜ್ಞಾನ ರಂಗದ ಕ್ರಾಂತಿಯಿಂದಾಗಿ ಜನರ ಜೀವನ ಕ್ರಮ ಮತ್ತು ಶೈಲಿಗಳಲ್ಲಿ ಮೂಲಭೂತ ಬದಲಾವಣೆಗಳಾದವು. ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾದವು. ದೇಶಗಳೊಳಗೆ ಮುಕ್ತರೀತಿಯ ಆರ್ಥಿಕ ವ್ಯವಹಾರಗಳು ಹೆಚ್ಚಿದವು, ಉಚ್ಚ ಶಿಕ್ಷಣ ಮತ್ತು ಉದ್ಯೋಗಕ್ಕೋಸ್ಕರ ಯುವಜನರ ವಲಸೆಗಳು ಹೆಚ್ಚಿದವು. ದೇಶಗಳ ಒಟ್ಟಾರೆ ಆರ್ಥಿಕತೆ ಹಿಂದೆಂದೂ ಕಂಡರಿಯದ ಗತಿಯಲ್ಲಿ ಊರ್ಧ್ವಮುಖವಾಗಿ, ದೇಶಗಳ ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಸಂಪತ್ತುಗಳು ಏರುತ್ತಾ ಬಂದವು; ಜನರ ಆದಾಯ ಮತ್ತು ಸಂಪತ್ತುಗಳೂ ಹೆಚ್ಚಿದವು.
ಈ ಬೆಳವಣಿಗೆಗಳ ಜೊತೆಗೆ ಇನ್ನೊಂದು ಆತಂಕಕಾರಿ ಬದಲಾವಣೆಯೂ ಕಂಡು ಬರಲಾರಂಭಿಸಿತು. ಬಡವರ ಪ್ರಮಾಣವೇನೋ ಕುಗ್ಗಿತು, ಆದರೆ ಅವರ ಸಂಖ್ಯೆ ವೃದ್ಧಿಸಿತು. ದೇಶದೊಳಗಿನ ಸರಾಸರಿ ತಲಾ ವಾರ್ಷಿಕ ಆದಾಯ ಮೇಲ್ಮುಖವಾಯಿತು, ಆದರೆ ಶ್ರೀಮಂತರು ಮತ್ತು ಬಡವರ ಅಂತರ ತೀವ್ರವಾಗಲಾರಂಭಿಸಿತು. ಅಭಿವೃದ್ಧಿಯ ಪ್ರಯೋಜನ ಸರ್ವವ್ಯಾಪಿಯಾಗಲಿಲ್ಲ. ಪ್ರಗತಿಯ ಕುದುರೆ ತನಗೆ ಕೊಟ್ಟ ಅಗತ್ಯದ ಪೋಷಕಾಂಶಗಳನ್ನು ಹೊಂದಿದ ಆಹಾರವನ್ನು ತಿನ್ನುವಾಗ ಅದರ ಬಾಯಿಯಿಂದ ಕೆಳಗೆ ಬೀಳುವ ಕಾಳುಗಳನ್ನು ಹೆಕ್ಕಿ ತಿನ್ನುವ ಮೂಲಕ ತಳಮಟ್ಟದವರ ಹಸಿವು ಕಡಿಮೆಯಾಗುತ್ತದೆ (ಇಂಗ್ಲಿಷ್‌ನಲ್ಲಿ ‘ಟ್ರಿಕ್‌ಲ್ ಡೌನ್ ಇಫೆಕ್ಟ್’) ಎಂಬ ಅರ್ಥಶಾಸ್ತ್ರಜ್ಞರ ಒಂದು ರೂಪಕವಿದೆ. ಜಾಗತೀಕರಣದ ಯುಗದಲ್ಲಿ ಈ ರೂಪಕ ಮುನ್ನೆಲೆಗೆ ಬಂದಿತ್ತು. ಆದರೆ 21ನೇ ಶತಮಾನದ ಆದಿಯಿಂದಲೇ ಈ ಮಾತು ಹುಸಿಯಾಯಿತು.
ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿಯೇ ಅಭಿವೃದ್ಧಿಯ ಈ ವೈಪರೀತ್ಯದ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ಆರಂಭವಾದವು. 2011ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ‘ಒಕ್ಯುಪೈ ವಾಲ್ ಸ್ಟ್ರೀಟ್’ (ವಾಲ್ ಸ್ಟ್ರೀಟ್ ಅನ್ನು ಆಕ್ರಮಿಸಿ) ಹೆಸರಿನ ಸಾಮೂಹಿಕ ಪ್ರತಿಭಟನೆಯಲ್ಲಿ ‘ನಾವು ಶೇ.99’ (ಪ್ರಗತಿಯ ಫಲಗಳಿಂದ ವಂಚಿತರಾದವರು ಶೇ. 99 ವರ್ಸಸ್ ದೋಚಿಕೊಂಡವರು ಶೇ. 1) ಎಂಬ ಘೋಷಣೆ ಆ ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ವಿರುದ್ಧವಾಗಿತ್ತು. ಇದೇ ಸೆಪ್ಟಂಬರ್‌ತಿಂಗಳಿನಿಂದ ನಡೆಯುತ್ತಿರುವ ಮತ್ತು ಇನ್ನೂ ಪರಿಹಾರ ಕಾಣದಿರುವ ಅಮೆರಿಕದ ದೈತ್ಯ ಕಾರು ಕಂಪೆನಿಗಳ ಕಾರ್ಮಿಕರ ಮುಷ್ಕರ ಇದರ ಹೊಸ ರೂಪ ಅಷ್ಟೇ. ಐರೋಪ್ಯ ದೇಶಗಳಲ್ಲಿ ಸರಕಾರಗಳ ವಿರುದ್ಧ ತಳಮಟ್ಟದಲ್ಲಿ ಸಂಘಟಿತ ಪ್ರತಿಭಟನೆಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ವರದಿಗಳು ಬರುತ್ತಾ ಇವೆ.
ಭಾರತದಲ್ಲಿಯೂ ಅಸಮಾನತೆಗಳ ತೀವ್ರತೆ
ಭಾರತದ ಅರ್ಥವ್ಯವಸ್ಥೆಯನ್ನು ಗಮನಿಸಿದರೆ ಈ ವೈಪರೀತ್ಯ ಇತ್ತೀಚೆಗಿನ ವರ್ಷಗಳಲ್ಲಿ ತೀವ್ರವಾಗಿದೆ. 2004-14ರಲ್ಲಿ ಆಗಿನ ಮನಮೋಹನ್ ಸಿಂಗ್‌ರ ಸರಕಾರವು ಕೆಲವು ಜನಪರ ಯೋಜನೆಗಳನ್ನು-ಆಹಾರ ಭದ್ರತಾ ಯೋಜನೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಶಿಕ್ಷಣದ ಹಕ್ಕು ಮುಂತಾದ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿತ್ತು. ಆದರೆ ಅವುಗಳು ಫಲ ನೀಡುವಷ್ಟರಲ್ಲಿ ಆಡಳಿತ ಬದಲಾಯಿತು. ಆರ್ಥಿಕ ವ್ಯವಸ್ಥೆಯಲ್ಲಿ ವಿರೋಧಾಭಾಸಗಳು ಉಲ್ಬಣಿಸಲು ಆರಂಭವಾಯಿತು.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ಸಂಸ್ಥೆಗಳು ನಡೆಸಿದ ಅಧ್ಯಯನಗಳು, ನಮ್ಮದೇ ನೀತಿ ಆಯೋಗದ ಅಂಕಿ ಅಂಶಗಳು, ಭಾರತೀಯ ರಿಸರ್ವ್ ಬ್ಯಾಂಕಿನ ವರದಿಗಳು ಮತ್ತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ವರದಿಗಳು ಹೆಚ್ಚುತ್ತಿರುವ ಹಸಿವು, ದಾರಿದ್ರ್ಯ, ನಿರುದ್ಯೋಗ, ಕ್ಷೀಣಿಸಿದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳಿಂದ ವಂಚಿತಗೊಂಡ ಪ್ರಾಥಮಿಕ ವಿದ್ಯಾಭ್ಯಾಸ-ಇವುಗಳೆಲ್ಲದರ ಬಗ್ಗೆ ಬೆಳಕು ಬೀರುತ್ತಲೇ ಇವೆ. ಫ್ರಾನ್ಸಿನ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿ 2013ರಲ್ಲಿ ಹೊರತಂದ ತಮ್ಮ ಬಹುಶ್ರುತ ಗ್ರಂಥ- ‘ಕೆಪಿಟಲ್ ಇನ್ ದ ಟ್ವೆಂಟಿಫರ್ಸ್ಟ್ ಸೆಂಚುರಿ’ - 21ನೇ ಶತಮಾನದಲ್ಲಿ ಬಂಡವಾಳದಲ್ಲಿ, ಭಾರತವೂ ಸೇರಿದಂತೆ ವಿಶ್ವದಲ್ಲಿ ವಿಸ್ತರಿಸುತ್ತಿರುವ ಆರ್ಥಿಕ ಅಸಮಾನತೆಗಳತ್ತ ಸರಕಾರಗಳ ಗಮನ ಸೆಳೆದಿದ್ದರು.
2020ರಲ್ಲಿ ಕೊರೋನ ಅಪ್ಪಳಿಸಿದಾಗ ಜಗತ್ತಿನಾದ್ಯಂತ ಸುಮಾರು 130 ಕೋಟಿ ಜನ ಸಂಕಟಕ್ಕೆ ಗುರಿಯಾದರು. ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ತಮ್ಮ ಜೀವನಾಧಾರವನ್ನು ಕಳಕೊಂಡರು. ಭಾರತದಲ್ಲಿ ಸುಮಾರು 10 ಕೋಟಿ ಜನರು ತಮ್ಮನೆಲೆಯನ್ನು ಕಳಕೊಂಡರು. ಕೊರೋನದ ಮೊದಲೇ ಭಾರತದ ಅರ್ಥವ್ಯವಸ್ಥೆ ಹದಗೆಡುತ್ತಾ ಬಂದಿತ್ತು. ಒಂದು ತಲೆಮಾರಿನ ಬಹುತೇಕ ಮಂದಿ ಬದುಕಿನ ಆಸರೆಯನ್ನು ಕಳಕೊಂಡಾಗ ಹಾಗೂ ಅದರಿಂದ ರಕ್ಷಿಸಲು ಯಾವುದೇ ಸಾಮಾಜಿಕ ಭದ್ರತೆ ಇಲ್ಲದಿದ್ದಾಗ, ಅದು ಆರ್ಥಿಕ ಅಭದ್ರತೆಯನ್ನೂ ಸಾಮಾಜಿಕ ಸಮಸ್ಯೆಗಳನ್ನೂ ಉಂಟುಮಾಡುತ್ತದೆ.
ಪ್ರಜಾತಂತ್ರಕ್ಕೆ ಬದ್ಧವಾಗಿರುವ ಒಂದು ದೇಶವು ತನ್ನ ಅತ್ಯಂತ ತಳಮಟ್ಟದಲ್ಲಿರುವ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಕೊಡುವ ಉತ್ತರದಾಯಿತ್ವವನ್ನು ಹೊಂದಿದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಆಕಾಂಕ್ಷೆಯೂ ಮೂಲತಃ ಇದೇ ಆಗಿತ್ತು: ‘‘ಯಾವೊಬ್ಬ ನಾಗರಿಕನು ಕಣ್ಣೀರು ಹಾಕದಂತೆ ನೋಡುವ ಜವಾಬ್ದಾರಿ ಸತ್ತೆಯನ್ನು ನಡೆಸುವ ತಂಡದ್ದು’’ ಎಂದಿದ್ದರು. ಇದನ್ನು ಸಾಧಿಸುವ ದಾರಿ ಯಾವುದು?
ಯುಬಿಐ ಒಂದು ದಾರಿ
ದೇಶದ ಎಲ್ಲ ಆರ್ಥಿಕ ವೈಷಮ್ಯಗಳನ್ನು ಸಂಪೂರ್ಣವಾಗಿ ತೊಲಗಿಸುವುದು ದುಸ್ಸಾಧ್ಯ. ಆದರೆ, ತಜ್ಞರ ಪ್ರಕಾರ ಈ ತರಹದ ಅಸಮಾನತೆಯನ್ನು ಕಡಿಮೆ ಮಾಡಲು ವಿಭಿನ್ನ ದಾರಿಗಳಿವೆ. ಈ ತನಕ ಅನುಸರಿಸುತ್ತಿದ್ದ ನಿರ್ದಿಷ್ಟ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಯೋಜನೆಗಳು ಒಂದು ಮಾರ್ಗ. ಆದರೆ ಅವುಗಳಲ್ಲಿ ಕೆಲವು ಕೊರತೆಗಳು ಇವೆ ಎಂದು ಅನುಭವಸಿದ್ಧವಾಗಿದೆ. ಇದಕ್ಕೆ ಪರ್ಯಾಯವಾಗಿ ಮುನ್ನೆಲೆಗೆ ಈಗ ಬರುತ್ತಿರುವ ಯೋಜನೆಯೇ ಯುಬಿಐ.