ಕರ್ನಾಟಕದ ಖಾತರಿ ಯೋಜನೆಗಳು: ಒಂದು ವಿಶ್ಲೇಷಣೆ

Update: 2023-10-27 04:32 GMT

ಭಾಗ- 2

ಯುಬಿಐ ಮತ್ತು ಅದರ ಉದ್ದೇಶ

ಹಿಂದಿನ ಭಾಗದಲ್ಲಿ ಯುಬಿಐಯ ಪ್ರಸ್ತಾಪ ಮಾಡಲಾಗಿದೆ. ಯುಬಿಐ, ಅಂದರೆ ಸಾರ್ವತ್ರಿಕ ಕನಿಷ್ಠ ಆದಾಯ (ಯುನಿವರ್ಸಲ್ ಬೇಸಿಕ್ ಇನ್‌ಕಂ-ಯುಬಿಐ; ಹಿಂದಿಯಲ್ಲಿ ‘ನ್ಯೂನತಮ್ ಆಯ್ ಯೋಜನಾ’-ಅಥವಾ ನ್ಯಾಯ್) ಸಮಾಜದಲ್ಲಿ ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿರುವ ಜನರಿಗೆ ಸರಕಾರವು ತನ್ನ ಖಜಾನೆಯಿಂದಲೇ ನಗದನ್ನು ಕೊಟ್ಟು ಅವರ ಆದಾಯವನ್ನು ಕನಿಷ್ಠ ಮಟ್ಟಕ್ಕೆ ಏರಿಸುವುದು ಯುಬಿಐಯ ಉದ್ದೇಶ.

ಈ ಹಿಂದೆ ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹಾಕಾರರಾಗಿದ್ದ ಅರವಿಂದ ಸುಬ್ರಮಣ್ಯನ್ ಅವರು 2008ರ ತಮ್ಮ ಲೇಖನವೊಂದರಲ್ಲಿ ಕೇಂದ್ರ ಸರಕಾರವು ಬೇರೆಬೇರೆ ಜನಪರ ಯೋಜನೆಗಳಿಗೆ ಕೊಡಮಾಡುವ ಸಂಪನ್ಮೂಲಗಳು ಮತ್ತು ಸಹಾಯಧನಗಳ ಒಟ್ಟು ಮೊತ್ತ (ಆ ಲೇಖನ ಬರೆದ ಸಂದರ್ಭದಲ್ಲಿ)- ರೂ. 1,80,000 ಕೋಟಿಯಾಗಿದ್ದು ಅದನ್ನು ಒಟ್ಟು ಸೇರಿಸಿ ಬಡತನದ ರೇಖೆಯಿಂದ ಕೆಳಗಿರುವವರಿಗೆ ನೇರವಾಗಿ ಕೊಟ್ಟರೆ ಹೆಚ್ಚು ಪರಿಣಾಮಕಾರಿಯಾಗಬಲ್ಲುದು ಎಂದು ಪ್ರಸ್ತಾಪಿಸಿದ್ದರು. ಮೋದಿ ಸರಕಾರವು ತನ್ನ 2016-17ರ ಆರ್ಥಿಕ ಸಮೀಕ್ಷೆಯಲ್ಲಿಯೂ ಈ ಬಗ್ಗೆ ಉಲ್ಲೇಖಿಸಿತ್ತು.

2017-18ರಲ್ಲಿ ಯುರೋಪಿನ ಫಿನ್‌ಲ್ಯಾಂಡ್ ದೇಶದಲ್ಲಿ ನಿರುದ್ಯೋಗಿಗಳಿಗೆ ಈ ಸೌಕರ್ಯವನ್ನು ನೀಡಲು ಸರಕಾರವೇ ಆರಂಭಿಸಿತು. ಅದರ ಮೊದಲು ಅಮೆರಿಕದ ಅಲಾಸ್ಕ ರಾಜ್ಯದಲ್ಲಿ 1982ರಲ್ಲಿ ಪ್ರತಿಯೊಬ್ಬ ನಾಗರಿಕನಿಗೂ 1,000ದಿಂದ 2,000 ಡಾಲರ್‌ಗಳ ಸಹಾಯ ನೀಡಲಾಗಿತ್ತು.

ತಮ್ಮ ಈ ವರ್ಷದ ಸ್ವಾತಂತ್ರ್ಯೋತ್ಸವದ ಒಂದು ಭಾಷಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶದಲ್ಲಿ ಸಂಪತ್ತಿನ ವಿತರಣೆಯಲ್ಲಿ ಮತ್ತು ಸಂಪಾದನೆಯಲ್ಲಿ ಕಾಣಬರುವ ತೀವ್ರ ಅಸಮಾನತೆಗಳನ್ನು ಹತ್ತಿಕ್ಕುವಲ್ಲಿ ಸಾಮಾಜಿಕ ನ್ಯಾಯದ ಅಗತ್ಯವನ್ನು ಒತ್ತಿ ಹೇಳಿದ್ದರು. ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನರ ಮಾತನ್ನು ಉಲ್ಲೇಖಿಸುತ್ತಾ ಆರ್ಥಿಕ ಪ್ರಗತಿಯೇ ನೈಜ ಸ್ವಾತಂತ್ರ್ಯ, ಸರಕಾರದ ಗ್ಯಾರಂಟಿ ಯೋಜನೆಗಳ ಉದ್ದೇಶವು ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದು ಎಂದೂ ಹೇಳಿದ್ದರು. ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ಯುಬಿಐಯ ಎರಡು ಮಾದರಿಗಳು. ಇವುಗಳಂತೆ ಉಳಿದ ಗ್ಯಾರಂಟಿಗಳ ಉದ್ದೇಶವೂ ತಳಮಟ್ಟದ ನಾಗರಿಕರನ್ನು ಆರ್ಥಿಕವಾಗಿ ಸಬಲೀಕರಿಸುವುದಾಗಿದೆ.

ಯುಬಿಐಯ ಪ್ರಯೋಜನಗಳು

ದೇಶದ ಕೃಷಿ ಆರ್ಥಿಕತೆಯ ತಜ್ಞರಾದ ದೇವೇಂದ್ರ ಶರ್ಮರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಯುಬಿಐ ಮೂಲಕ ಕುಟುಂಬಗಳ ಸಂಪನ್ಮೂಲಗಳು ವೃದ್ಧಿಸಿದಾಗ ಬೇಡಿಕೆಗಳು ಹೆಚ್ಚಾಗುತ್ತವೆ. ಬೇಡಿಕೆ ಹೆಚ್ಚಾದಂತೆ ಉತ್ಪಾದನಾ ಘಟಕಗಳಿಗೆ ಉತ್ತೇಜನ ಸಿಕ್ಕಿ ಆರ್ಥಿಕ ಚಟುವಟಿಕೆ ಊರ್ಧ್ವ ಮುಖವಾಗುತ್ತದೆ. ಹಳ್ಳಿಗಳಲ್ಲಿ ಇಂದಿಗೂ ಆರ್ಥಿಕ ಮುಗ್ಗಟ್ಟು ಬಂದಾಗ ಸಾಲದ ಮೊರೆ ಹೋಗುವವರಿಗೆ ಸಾಲ-ಬಡ್ಡಿ- ಸಂಪಾದನೆಯ ಖೋತ-ಮತ್ತೆ ಸಾಲದ ವಿಷವರ್ತುಲದಿಂದ ಹೊರಬರಲು ಕಷ್ಟವಾಗುತ್ತದೆ. ನೇರ ಹಣ ಸಹಾಯ ಅಂತಹ ಕುಟುಂಬಗಳಿಗೆ ಸಾಲದ ಹೊರೆಯನ್ನು ಕಳಚಿಹಾಕಲು ಸಹಕಾರಿಯಾಗಬಲ್ಲುದು. ಬದುಕನ್ನು ಅರಸುತ್ತಾ ನಗರಕ್ಕೆ ವಲಸೆಹೋಗುವವರ ಸಂಖ್ಯೆಯೂ ಕಡಿಮೆಯಾಗಬಹುದು ಎಂದೂ ಶರ್ಮರು ವಿವರಿಸುತ್ತಾರೆ.

ಈ ತನಕ ಸರಕಾರದ ಬೇರೆ ಬೇರೆ ಯೋಜನೆಗಳಲ್ಲಿ ನಿಗದಿ ಪಡಿಸಿದ ಸಹಾಯಧನವನ್ನು ನಿರ್ದಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಮಾತ್ರ ಕೊಡಲಾಗುತ್ತಿತ್ತು. ಅವುಗಳ ಬಗೆಗೂ ಅನೇಕ ಟೀಕೆಗಳು ಕೇಳಿಬರುತ್ತಿದ್ದವು. ಹಾಗಿದ್ದೂ ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರವೇ ಬಡವರಿಗೆ 10 ಕಿಲೊಗ್ರಾಂ ಅಕ್ಕಿಯನ್ನು ಬಿಟ್ಟಿಯಾಗಿ ನೀಡುತ್ತಿತ್ತು ಮಾತ್ರವಲ್ಲ ಅದನ್ನು ಈಗಲೂ ಮುಂದುವರಿಸಿದೆ. ಕೇಂದ್ರದ ಹೇಳಿಕೆಯಂತೆ ಸುಮಾರು 80 ಕೋಟಿ ನಾಗರಿಕರು ಇಂದಿಗೂ ಈ ಯೋಜನೆಯ ಮೂಲಕ ಹಸಿವಿನಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಅದೇ ರೀತಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಲಕ್ಷಾಂತರ ನಿರುದ್ಯೋಗಿಗಳು ವರ್ಷದಲ್ಲಿ ಕೆಲವು ದಿನವಾದರೂ ದುಡಿದು ಉಣ್ಣುತ್ತಾರೆ.

ಯುಬಿಐಯು ಈ ಯೋಜನೆಗಳಿಗಿಂತ ಹೆಚ್ಚು ಸ್ವಾತಂತ್ರ್ಯವನ್ನು ಫಲಾನುಭವಿಗಳಿಗೆ ನೀಡುತ್ತದೆ. ನಗದು ಕೊಡುವಾಗ ಅದನ್ನು ಯಾವ ಉದ್ದೇಶಕ್ಕಾಗಿ ವ್ಯಯಿಸಬೇಕೆಂಬುದು ಫಲಾನುಭವಿಗಳ ವಿವೇಚನೆಗೆ ಬಿಟ್ಟದ್ದು. ಕೈಗೆ ಬಂದ ಹಣವನ್ನು ಕುಟುಂಬದ ಏಳಿಗೆಗೆ ಉಪಯೋಗಿಸಬೇಕೆಂಬ ಅರಿವು ಜನಸಾಮಾನ್ಯರಿಗೆ ಇಲ್ಲವೆಂಬುದು ತಪ್ಪು ಕಲ್ಪನೆ.

ರಾಜ್ಯದ ಗೃಹಲಕ್ಷ್ಮಿಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿಯಾದ ಮಹಿಳೆಯ ಬ್ಯಾಂಕ್ ಖಾತೆಗೆ ನಿಬಂಧನೆಗಳಿಗೆ ಅನುಗುಣವಾಗಿ ತಿಂಗಳಿಗೆ 2,000 ರೂ.ನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದೆ. ಪಿತೃಪ್ರಧಾನ ವ್ಯವಸ್ಥೆ ಇನ್ನೂ ಬದಲಾಗಿರದಿದ್ದರೂ ಒಂದು ಕುಟುಂಬವನ್ನು ನಡೆಸಿಕೊಂಡು ಬರುವ ಮಹತ್ತಾದ ಜವಾಬ್ದಾರಿ ಅದರ ಮಹಿಳೆಯ ಮೇಲಿದೆ. ಅಪವಾದಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ನಮ್ಮ ಮಹಿಳೆಯರು ತಮ್ಮ ಕೈಗೆ ಬರುವ ಹಣವನ್ನು ಬಹಳ ಜಾಗರೂಕತೆಯಿಂದ ಉಪಯೋಗಿಸುತ್ತಾರೆ-ಕುಟುಂಬದ ಎಲ್ಲರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಯೇ ಆಕೆ ವೆಚ್ಚದ ಕುರಿತಾದ ನಿರ್ಧಾರವನ್ನು ಕೈಗೊಳ್ಳುತ್ತಾಳೆ ಎಂಬುದು ಬಹುತೇಕ ಸತ್ಯ. ಅವಳ ನಿರ್ಧಾರದಲ್ಲಿ ಮನೆಯ ಮಕ್ಕಳ ಪುರೋಭಿವೃದ್ಧಿಯೂ ಒಳಗೊಂಡಿದೆ ಎಂಬುದು ನಿಸ್ಸಂಶಯ. ಇವೂ ಅಲ್ಲದೆ, ಮುಂದೆ ಯಾವುದಾದರೂ ಆಪತ್ತು ಬಂದರೆ ಸ್ವಲ್ಪವಾದರೂ ಭದ್ರತೆ ಬೇಕೆಂದು ಕೈಗೆ ಬಂದ ಹಣದಲ್ಲಿಯೇ ಸ್ವಲ್ಪವನ್ನಾದರೂ ಉಳಿಸಿ ಆಪದ್ಧನವಾಗಿ ಕಾಯ್ದಿರಿಸುತ್ತಾಳೆ. ಈ ಎಲ್ಲಾ ದೃಷ್ಟಿಯಿಂದ ನಗದನ್ನು ಅವಳ ಕೈಗೆ ನೀಡುವುದು ಸ್ತ್ರೀಯ ಸಬಲೀಕರಣದ ಒಂದು ದಿಟ್ಟ ಹೆಜ್ಜೆ ಎನ್ನಬೇಕು.

ಯುವನಿಧಿಯೂ ರಾಜ್ಯದ ಅರ್ಹ ಯುವಜನರಿಗೆ ತಮ್ಮ ಕಾಲಿನಲ್ಲಿ ನಿಲ್ಲಲು ಪ್ರೇರಣೆ ಕೊಡುವ ಸಾಧ್ಯತೆ ಹೆಚ್ಚು. ಉಚ್ಚಶಿಕ್ಷಣ ಮುಗಿಸಿ ಉದ್ಯೋಗ ಸಿಗುವ ತನಕ ಅಥವಾ ತನ್ನದೇ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವ ತನಕ ತಾನು ಊಟಕ್ಕೆ ಮತ್ತು ಜೀವನೋಪಾಯವನ್ನು ಹುಡುಕುವ ವೆಚ್ಚಕ್ಕೆ ಬೇರೆಯವರತ್ತ ಕೈಯೊಡ್ಡುವ ಅಗತ್ಯವಿಲ್ಲ. ಸರಕಾರದ ಸಹಾಯ ನಿಯಮಿತ ಕಾಲದ ತನಕ ಮಾತ್ರವಿರುವುದರಿಂದ ಸ್ವತಂತ್ರ ದಾರಿ ಹುಡುಕಬೇಕಾದ ಒತ್ತಡ ಸ್ವಾಭಿಮಾನಿಗಳಾದ ಯುವಜನರ ಮೇಲೆ ಬೀಳುತ್ತದೆ. ಎರಡು ವರ್ಷಗಳ ಅವಧಿಯಲ್ಲಿ ಕೌಶಲವನ್ನೂ ಬೆಳೆಸಿಕೊಳ್ಳಬಹುದು.

ಪ್ರತಿಕ್ರಿಯೆಗಳ ಇಬ್ಬಂದಿತನ

ನೇರ ಹಣಸಹಾಯ ನೀಡುವುದರ ಬಗ್ಗೆ ಬಹಳ ಮುಖ್ಯವಾದ ಟೀಕೆ ಎಂದರೆ ಹಣ ಬಿಟ್ಟಿಯಾಗಿ ಕೈಗೆ ಬಂದಾಗ ಸೋಮಾರಿತನ ಬೆಳೆಯುತ್ತದೆ, ಪ್ರಜೆಗಳು ಆರಾಮದಿಂದ ಮನೆಯಲ್ಲಿಯೇ ಉಂಡುತಿಂದು ತೇಗುತ್ತಾರೆ ಎಂದು. ಆದರೆ ಮೇಲೆ ವಿವರಿಸಿದಂತೆ, ನಮ್ಮ ರಾಜ್ಯದ ಗೃಹಲಕ್ಷ್ಮಿಯೋಜನೆಯಲ್ಲಿ ಮಹಿಳೆಯೇ ಫಲಾನುಭವಿಯಾದುದರಿಂದ ಆ ಸಾಧ್ಯತೆ ಬಹಳ ಕಡಿಮೆ ಎನ್ನಬೇಕು.

ಇನ್ನೊಂದು ಆಕ್ಷೇಪವು ಅನರ್ಹ ನಾಗರಿಕರು ಸುಳ್ಳು ದಾಖಲೆ ನೀಡಿ ಸಹಾಯವನ್ನು ಪಡೆಯುತ್ತಾರೆಂಬುದು. ಈ ಸಮಸ್ಯೆ ಇಂದು ನಿನ್ನೆಯದಲ್ಲ: ಎಲ್ಲ ಯೋಜನೆಗಳ ಬಗ್ಗೆಯೂ ಈ ತರದ ದೂರುಗಳು ಬರುತ್ತಿವೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಹಾಗೆಂದು ಯೋಜನೆಯನ್ನು ತಿರಸ್ಕರಿಸುವುದು ಸಮಂಜಸವಾಗಲಾರದು.

ಮತ್ತೊಂದು ಆಕ್ಷೇಪವು ಸಂಪನ್ಮೂಲಗಳನ್ನು ಜೋಡಿಸುವುದರ ಕುರಿತಂತೆ ಬರುತ್ತದೆ. ರಾಜ್ಯ ಸರಕಾರದ ಐದು ಯೋಜನೆಗಳಿಂದ ವಾರ್ಷಿಕ ವೆಚ್ಚ ಸುಮಾರು ರೂ. 50,000 ಕೋಟಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 4 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆಯಲ್ಲಿ ಸಂಗ್ರಹಿಸಿದ ಹಣವನ್ನು ಕರ್ನಾಟಕವು ಕೇಂದ್ರಕ್ಕೆ ಕೊಡುತ್ತಿದೆ ಮಾತ್ರವಲ್ಲ ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲಿಯೇ ರಾಜ್ಯಕ್ಕೆ ಎರಡನೆಯ ಸ್ಥಾನವಿದೆ.

ರಾಜ್ಯಕ್ಕೆ ನ್ಯಾಯವಾಗಿ ಬರಬೇಕಾದ ಪಾಲನ್ನು ಕೇಂದ್ರವು ಮರುಪಾವತಿಸಿದರೆ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲಗಳ ಕೊರತೆಯಾಗುವುದಿಲ್ಲ ಎಂದೂ ಮುಖ್ಯಮಂತ್ರಿಯವರು ಹೇಳಿದ್ದಾರೆ.

ಬಿಟ್ಟಿಯಾಗಿ ನಾಗರಿಕರಿಗೆ ಯಾವುದನ್ನೂ ಸರಕಾರವು ನೀಡಬಾರದು ಎಂದು ಪ್ರಚಲಿತವಿರುವ ಒಂದು ದೃಷ್ಟಿಕೋನ. ಇದರಲ್ಲಿ ಒಂದು ಮೂಲಭೂತವಾದ ಇಬ್ಬಂದಿತನವನ್ನು ಗಮನಿಸಬಹುದು. ಈ ಇಬ್ಬಂದಿತನ ಪ್ರಶ್ನಾರ್ಹ.

ದೇಶದಲ್ಲಿ ಹೊಸ ಉದ್ದಿಮೆಗಳನ್ನು ಆರಂಭಿಸಲು ಅನೇಕ ರೀತಿಯ ಪ್ರೋತ್ಸಾಹವನ್ನು ಸರಕಾರ ಮತ್ತು ಅದರ ಅಂಗ ಸಂಸ್ಥೆಗಳು ನೀಡುತ್ತವೆ. ಅಗತ್ಯದ ಭೂಮಿಯನ್ನು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಸರಕಾರವು ಕೊಡುತ್ತದೆ, ನೀರು ಮತ್ತು ವಿದ್ಯುಚ್ಛಕ್ತಿಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತದೆ, ವಿಭಿನ್ನ ಕರಗಳಿಂದ ಕೆಲವು ವರ್ಷಗಳ ತನಕ ವಿನಾಯಿತಿ ಇದೆ. ಸಾಲವನ್ನು ಕೊಡುವಾಗಲೂ ಬಡ್ಡಿದರ, ದೀರ್ಘವಾದ ಮರುಪಾವತಿಯ ಅವಧಿ, ಸಾಲಕ್ಕೆ ಭದ್ರತೆಗಳಿಂದ ವಿನಾಯಿತಿ-ಮುಂತಾದ ಸೌಕರ್ಯಗಳು ಹೊಸ ಉದ್ದಿಮೆದಾರರಿಗೆ ಇದೆ.

ಒಂದು ವೇಳೆ ಉದ್ದಿಮೆ ನಷ್ಟ ಅನುಭವಿಸಿದಾಗ ಹಿಂದೆ ಕಡಿಮೆಗೆ ಕೊಟ್ಟ ಭೂಮಿಯನ್ನು ಸರಕಾರ ವಾಪಸ್ ವಶಪಡಿಸಿಕೊಳ್ಳುವುದಿಲ್ಲ; ಸಾಲ ಮತ್ತು ಬಡ್ಡಿಗಳನ್ನು ಕೆಲವು ಸಂದರ್ಭಗಳಲ್ಲಿ ಮನ್ನಾ ಮಾಡಲಾಗುತ್ತದೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಸಂಸತ್ತಿನಲ್ಲಿ ಸರಕಾರವು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ 2014-15 ಮತ್ತು 2022-23ರ ಒಂಭತ್ತು ವರ್ಷಗಳ ಅವಧಿಯಲ್ಲಿ ರೂ. 14.56 ಲಕ್ಷ ಕೋಟಿಯಷ್ಟು ಕೆಟ್ಟ ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡಿವೆ ಎಂದು ಹೇಳಿದೆ. ಅದರಲ್ಲಿ ಸುಮಾರು ರೂ. 7.41 ಲಕ್ಷ ಕೋಟಿ ದೊಡ್ಡ ಉದ್ದಿಮೆಗಳಿಗೆ ಹಾಗೂ ಸೇವಾ ರಂಗಗಳಿಗೆ ಕೊಟ್ಟ ಸಾಲ!

ಇನ್ನೊಂದು ವಿಷಯವೂ ಗಮನಾರ್ಹ. ಕಂಪೆನಿಗಳು ತಮ್ಮ ಲಾಭಾಂಶದ ಮೇಲೆ ಕೊಡಬೇಕಾದ ಆದಾಯ ತೆರಿಗೆಯನ್ನು ಪ್ರಸಕ್ತ ಕೇಂದ್ರ ಸರಕಾರವು 2019ರಲ್ಲಿ ಕಡಿತಗೊಳಿಸಿತ್ತು. ಈ ಕಡಿತದಿಂದಾಗಿ ಸರಕಾರಕ್ಕೆ ಆಗಬಹುದಾದ ಆದಾಯ ನಷ್ಟವು ಸುಮಾರು ರೂ. 1,45,000 ಕೋಟಿಯಷ್ಟು ಎಂದು ಹಣಕಾಸು ಸಚಿವಾಲಯವೇ ಹೇಳಿತ್ತು. ಸರಕಾರಕ್ಕೆ ನ್ಯಾಯೋಚಿತವಾಗಿ ಬರುವ ರಾಜಸ್ವದಲ್ಲಿ ಖೋತ ಮಾಡಿಕೊಂಡು ಕಂಪೆನಿಯ ಮಾಲಕರಿಗೆ ಲಾಭವಾಗುವಂತೆ ಮಾಡಿದ ಕ್ರಮ ಅದು.

ಈ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ಅರ್ಹ ಬಳಕೆದಾರರಿಗೆ ಒಂದು ಮಿತಿಯ ತನಕ ಉಚಿತ ವಿದ್ಯುಚ್ಛಕ್ತಿಯನ್ನು ಪೂರೈಸಿದರೆ ಯಾಕೆ ನ್ಯಾಯೋಚಿತವಲ್ಲ?

ಇವೆಲ್ಲದರ ಜೊತೆಗೆ ಮತ್ತೊಂದು ವಾಸ್ತವವನ್ನೂ ಪರಿಶೀಲಿಸಬೇಕು. ವರ್ಷಂಪ್ರತಿ ಎಷ್ಟೋ ಲಕ್ಷ ವಿದ್ಯುತ್ ಯುನಿಟ್‌ಗಳು ಕಳವಾಗುತ್ತವೆ; ಭಾರೀ ಬಳಕೆದಾರರು ತಮ್ಮ ಬಿಲ್ಲುಗಳನ್ನು ಕ್ಲಪ್ತ ಸಮಯದಲ್ಲಿ ಪಾವತಿ ಮಾಡುವುದಿಲ್ಲ. ಇದಕ್ಕೆ ಹೋಲಿಸಿದರೆ ಸಾಮಾನ್ಯ ಬಳಕೆದಾರರು ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ವ್ಯವಹರಿಸುತ್ತಾರೆ. ಈಗ ಕೊಡಲಾಗುವ ಸೌಕರ್ಯ ಅವರ ನೈತಿಕತೆಗೆ ಸರಕಾರ ನೀಡುವ ಮನ್ನಣೆ ಎಂದು ಅರ್ಥಮಾಡಿಕೊಳ್ಳಬೇಕು. ಮಾತ್ರವಲ್ಲ, ಬಳಕೆಯಾದ ಯುನಿಟ್‌ಗಳಿಗೆ ಮಿತಿ ಹೇರಲಾದುದರಿಂದ, ಇದರ ಪ್ರಯೋಜನ ಪ್ರತಿತಿಂಗಳೂ ಲಭಿಸಬೇಕಿದ್ದರೆ ವಿದ್ಯುತ್ ಬಳಕೆಯನ್ನು ಮಿತಿಯ ಒಳಗೇ ಮಾಡುವ ಒತ್ತಡವೂ ಬಳಕೆದಾರರ ಮೇಲೆ ಬೀಳುತ್ತದೆ. ವಿದ್ಯುತ್ ಸರಬರಾಜು ಕಂಪೆನಿಗಳಿಗೂ ಅಸಂಖ್ಯಾತ ತಳಮಟ್ಟದ ಬಳಕೆದಾರರಿಂದ ಬಾಕಿ ವಸೂಲಿ ಮಾಡುವ ಹೊರೆಯೂ ಕಡಿಮೆಯಾಗಿ ದಕ್ಷತೆ ಹೆಚ್ಚಾಗುವ ಸಾಧ್ಯತೆ ಇದೆ.

ಇವು ಕೆಲವು ಉದಾಹರಣೆಗಳು ಮಾತ್ರ. ಈ ಎಲ್ಲ ಯೋಜನೆಗಳ ಉದ್ದೇಶ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ವಿನಾಯಿತಿಗಳಿಂದ ಕೆಲವರಿಗೆ ಮಾತ್ರ ಉಪಯೋಗ-ಉದ್ದಿಮೆದಾರರು ವ್ಯಕ್ತಿಗತವಾಗಿ ಮೇಲೆಬರುತ್ತಾರೆ; ಅವರು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ, ದೇಶದ ಆರ್ಥಿಕತೆಗೆ ನೀಡಿದ ಕೊಡುಗೆಯು ಸರಕಾರದಿಂದ ದೊರೆತ ಸೌಕರ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ಇದೆಯೇ, ಸಹಾಯಧನ ಅನರ್ಹರಿಗೆ ಹೋಗಿದೆಯೇ, ಸೋರಿಕೆ ಇಲ್ಲವೇ-ಎಂಬುದರ ಕುರಿತು ಚರ್ಚೆ ಆಗುವುದಿಲ್ಲ. ಹಾಗಿದ್ದರೆ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯಲ್ಲಿ ಕಡುಬಡವರಿಗೆ ಕನಿಷ್ಠ ಆದಾಯವನ್ನು ಸರಕಾರದ ಖಜಾನೆಯಿಂದ ಕೊಡುವುದು ಮತ್ತು ನ್ಯಾಯಸಮ್ಮತವಲ್ಲವೇ?

ದೂರಗಾಮಿ ಪರಿಣಾಮ

ಪ್ರತಿಯೊಂದು ಯೋಜನೆಯ ಅನುಷ್ಠಾನದಲ್ಲಿ ತೊಡಕುಗಳು ಇದ್ದೇ ಇರುತ್ತವೆ. ಯೋಜನೆಗಳ ಉದ್ದೇಶ ಮತ್ತು ಗುರಿಗಳು ಮಾನ್ಯವಾದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಬುನಾದಿ ಹಾಕಲು ಸಾಧ್ಯವಾಗುತ್ತದೆ. ರಾಜ್ಯದ ಹೊಸ ಯೋಜನೆಗಳು ಈ ದೃಷ್ಟಿಯಿಂದ ಒಂದು ಅರ್ಥಪೂರ್ಣವಾದ ಹೆಜ್ಜೆ. ಆರ್ಥಿಕವಾಗಿ ಬಹಳಷ್ಟು ಮುಂದುವರಿದ ಒಂದು ರಾಜ್ಯವಾದ ಕರ್ನಾಟಕದಲ್ಲಿ ಇನ್ನೂ ಪರಿಹಾರ ಸಿಕ್ಕಿಲ್ಲದ ಬಡತನದ ಬೇಗೆಯನ್ನು ತಡೆಯುವಲ್ಲಿ ಈ ಕ್ರಮಗಳು ದೀರ್ಘಾವಧಿ ಪ್ರಭಾವವನ್ನು ಬೀರಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಟಿ.ಆರ್. ಭಟ್

contributor

Similar News