ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಹೈಟೆಕ್ ಕೈಗಾರಿಕೆ

Update: 2024-04-19 09:30 GMT

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂ 1ರಲ್ಲಿರುವ 120-00 ಎಕರೆ ಜಮೀನು ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದ್ದರೂ ಹೈಟೆಕ್ ಕೈಗಾರಿಕೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವ ಸಲ್ಲಿಕೆಯಾಗಿರುವುದು ಇದೀಗ ಬಹಿರಂಗವಾಗಿದೆ.

ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅಥವಾ ಮಂಜೂರು ಮಾಡುವುದು ಅರಣ್ಯ ಸಂರಕ್ಷಣಾ ಕಾಯ್ದೆ (1980ರ) ಅನ್ವಯ ಉಲ್ಲಂಘನೆಯಾಗಲಿದೆ ಎಂದು ಗೊತ್ತಿದ್ದರೂ ಸಹ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇಂತಹದೊಂದು ಪ್ರಸ್ತಾವವನ್ನು ಸಲ್ಲಿಸಿದೆ. ಈ ಸಂಬಂಧ ಅಧಿಕಾರಿಗಳು ಸಚಿವ ಎಂ.ಬಿ. ಪಾಟೀಲ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಈ ಸರ್ವೇ ನಂಬರ್‌ನಲ್ಲಿರುವ ಅರಣ್ಯ ಪ್ರದೇಶದ ಕುರಿತಾಗಿ 2024ರ ಫೆ.9ರಂದು ವಾಸ್ತವಾಂಶದ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

120 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು ಮಾಡುವ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಇಲಾಖೆಯ ಅಧಿಕಾರಿಗಳು 2024ರ ಮಾರ್ಚ್ 28ರಂದು ಸಭೆ ನಡೆಸಿರುವುದು ಗೊತ್ತಾಗಿದೆ. ಈ ಸಭೆಯಲ್ಲಿ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಮತ್ತೊಂದು ವಿಶೇಷವೆಂದರೆ ಇದೇ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಕೈಗಾರಿಕೆ ಪ್ರದೇಶದಲ್ಲಿ 28 ಎಕರೆ 2,219 ಚದುರ ಅಡಿ ವಿಸ್ತೀರ್ಣದ ಜಮೀನನ್ನು ಅಭಿವೃದ್ದಿಗೊಳಿಸುವ ಸಲುವಾಗಿ 2007ರ ಜೂನ್ 7ರಂದು ಕಾನ್ಕಾರ್ಡ್ ಕಂಪೆನಿ ಪರವಾಗಿ ಕೆಐಎಡಿಬಿಯು ಭೋಗ್ಯಕ್ಕೆ ನೀಡಿತ್ತು. ಅಲ್ಲದೆ ಭೋಗ್ಯ ಮತ್ತು ಮಾರಾಟದ ಕರಾರಿನ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸ್ವತ್ತನ್ನು ಒತ್ತೆಯಿಟ್ಟು ಪ್ರತಿಷ್ಠಿತ ಕಂಪೆನಿಯೊಂದು ಖಾಸಗಿ ಬ್ಯಾಂಕ್‌ನಿಂದ ಅಂದಾಜು 2,500 ಕೋಟಿ ರೂ. ಸಾಲವನ್ನು ಎತ್ತಿತ್ತು.

ಹೀಗಿದ್ದರೂ ಸಹ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಇದೇ ಜಾಗದಲ್ಲಿ ಹೈಟೆಕ್ ಕೈಗಾರಿಕೆ ಪ್ರದೇಶವನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News