ಒಳ ಮೀಸಲಾತಿ: ಇಚ್ಛಾ ಶಕ್ತಿಯಿಲ್ಲದ ರಾಜಕೀಯ ಪಕ್ಷಗಳು ಮಾಡುತ್ತಿರುವುದು ಮಹಾದ್ರೋಹ ಮಾತ್ರ

ಒಳ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸತತ ಅನ್ಯಾಯ ಮತ್ತು ವಂಚನೆಗೆ ಒಳಗಾಗಿರುವ ದಲಿತ ಸಮುದಾಯ ದಶಕಗಳಿಂದ ಒಳ ಮೀಸಲಾತಿಗಾಗಿ ಆಗ್ರಹಿಸುತ್ತಿದ್ದರೂ ಅದರ ಪರವಾಗಿ ಯಾವುದೇ ರಾಜಕೀಯ ಪಕ್ಷಗಳೂ ಇಚ್ಛಾಶಕ್ತಿ ತೋರಿಸಿಲ್ಲ. ಈ ನಡುವೆ ಎಂದಿನಂತೆ ಬಿಜೆಪಿಯ ಬೃಹನ್ನಾಟಕ ಮುಂದುವರಿದಿದೆ.

Update: 2023-11-21 06:54 GMT
Editor : Thouheed | Byline : ಆರ್. ಜೀವಿ

photo: twitter/ Narendramodi

ಮೊನ್ನೆ ಮೋದಿಯವರ ಮಹಾ ನಾಟಕವೊಂದು ಗಮನ ಸೆಳೆಯಿತು. ಸಂದರ್ಭ, ಒಳ ಮೀಸಲಾತಿಗಾಗಿ ಆಗ್ರಹಿಸಿ ಹೈದರಾಬಾದ್‌ನಲ್ಲಿ ಮಾದಿಗ ಸಮುದಾಯ ನವೆಂಬರ್ 11ರಂದು ಆಯೋಜಿಸಿದ್ದ ಬೃಹತ್ ವಿಶ್ವರೂಪ ಸಮಾವೇಶ. ಅದರ ಮುಖ್ಯ ಅತಿಥಿಯಾಗಿದ್ದವರು ಪ್ರಧಾನಿ ನರೇಂದ್ರ ಮೋದಿ. ಸಮಾವೇಶದಲ್ಲಿ ಅವರು ಮಾದಿಗ ದಂಡೋರಾದ ಅಧ್ಯಕ್ಷ ಕೃಷ್ಣ ಮಾದಿಗ ಅವರನ್ನು ತಬ್ಬಿಕೊಂಡು, ಅವರ ಈ ಹೋರಾಟದಲ್ಲಿ ತಾವು ಜೊತೆಗಿರುವುದಾಗಿ ಘೋಷಿಸಿದರು. ಕಳೆದ 30 ವರ್ಷಗಳಲ್ಲಿ ಹಳೆಯ ಸರಕಾರಗಳು ಈ ಸಮುದಾಯಕ್ಕೆ ನ್ಯಾಯ ಒದಗಿಸದೆ ಇರುವುದಕ್ಕೆ ತಾವು ಕ್ಷಮೆ ಕೇಳುವುದಾಗಿ ಹೇಳಿದರು. ಆ ಮೂಲಕ, ಬಿಜೆಪಿ ಮಾತ್ರ ಸಾಚಾ, ಬೇರೆಲ್ಲ ಪಕ್ಷಗಳು ಅಥವಾ ಸರಕಾರಗಳು ಈ ವಿಚಾರದಲ್ಲಿ ಅನ್ಯಾಯ ಎಸಗಿವೆ ಎಂದು ಬಿಂಬಿಸಲು ನೋಡಿದರು.

ತಮಾಷೆಯೆಂದರೆ, ಈ 30 ವರ್ಷಗಳಲ್ಲಿ ತಾನೇ 10 ವರ್ಷಗಳಿಂದ ಆಡಳಿತದಲ್ಲಿರುವುದು ಮತ್ತು ಪ್ರಚಂಡ ಬಹುಮತದ ಸರಕಾರವಾಗಿದ್ದ ಬಿಜೆಪಿ ಮನಸ್ಸು ಮಾಡಿದ್ದರೆ ಒಳ ಮೀಸಲಾತಿ ಜಾರಿ ಖಂಡಿತ ಸಾಧ್ಯವಿತ್ತು ಎಂಬ ಸತ್ಯವನ್ನು ಅವರು ಮರೆಮಾಚಿದರು.

ಏನಿದು ಒಳ ಮೀಸಲಾತಿ ಹೋರಾಟ?

ದೇಶಾದ್ಯಂತ ಮಾದಿಗ ಸಮುದಾಯ ಕಳೆದ 30 ವರ್ಷಗಳಿಂದ ಈ ಚಳವಳಿಯಲ್ಲಿ ತೊಡಗಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈ ಬೇಡಿಕೆಯಿದೆ.

2004ರಲ್ಲಿ ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಪರಿಶಿಷ್ಟ ವರ್ಗಗಳ ಮರುವರ್ಗೀಕರಣ ಕಾನೂನು ಬಾಹಿರ ಎಂದೂ, ರಾಜ್ಯ ಸರಕಾರಗಳಿಗೆ ಆ ಶಾಸನಾತ್ಮಕ ಅಧಿಕಾರವನ್ನು ಸಂವಿಧಾನ ನೀಡಿಲ್ಲ ಎಂದೂ ತೀರ್ಪಿನಲ್ಲಿ ಹೇಳಿತು. 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾ.ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಒಳ ಮೀಸಲಾತಿ ವರ್ಗೀಕರಣದ ಪರವಾಗಿ ತೀರ್ಪು ನೀಡಿ, ರಾಜ್ಯಗಳಿಗೆ ಆ ವಿಚಾರದಲ್ಲಿ ಶಾಸನಾತ್ಮಕ ಅಧಿಕಾರ ಇದೆಯೆಂದು ಹೇಳಿತು. ಒಳ ಮೀಸಲಾತಿ ಸಲ್ಲದು ಎಂದ ಪೀಠ ಹಾಗೂ ಒಳ ಮೀಸಲಾತಿಗೆ ಸಮ್ಮತಿ ವ್ಯಕ್ತಪಡಿಸಿದ ಪೀಠಗಳೆರಡೂ ಐವರು ನ್ಯಾಯಾಧೀಶರ ಪೀಠಗಳಾಗಿರುವುದರಿಂದ, ಪ್ರಕರಣದ ವಿಚಾರಣೆಗೆ ಏಳು ನ್ಯಾಯಾಧೀಶರ ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಪೀಠವು ಮನವಿ ಮಾಡಿತು.

2023ರ ಅಕ್ಟೋಬರ್‌ನಲ್ಲಿ ಏಳು ನ್ಯಾಯಾಧೀಶರ ಪೀಠ ರಚನೆಯಾಗಿದೆ. 2024ರ ಜನವರಿ 12ರೊಳಗೆ ತಮ್ಮ ವಾದಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಎಲ್ಲಾ ಅಹವಾಲುದಾರರಿಗೂ ಹೇಳಲಾಗಿದೆ.

ಯುಪಿಎ ಸರಕಾರದ ಅವಧಿಯಲ್ಲಿ ಆದದ್ದೇನು?

2007ರಲ್ಲಿ ಒಳ ಮೀಸಲಾತಿಯ ಬಗ್ಗೆ ಆಗಿನ ಯುಪಿಎ ಸರಕಾರ ನ್ಯಾ.ಉಷಾ ಮೆಹ್ರಾ ನೇತೃತ್ವದ ಆಯೋಗವನ್ನು ರಚಿಸಿತ್ತು. 2008ರಲ್ಲಿ ಆಯೋಗ ತನ್ನ ವರದಿಯನ್ನು ನೀಡಿ, ಸಂವಿಧಾನದ 341ನೇ ಕಲಮಿಗೆ 341(3) ಎಂಬ ತಿದ್ದುಪಡಿ ಮಾಡಿ ರಾಜ್ಯ ಶಾಸನಸಭೆಗಳಿಗೆ ಒಳ ಮೀಸಲಾತಿಯನ್ನು ಜಾರಿಗೆ ತರುವ ಅಧಿಕಾರ ನೀಡಲು ಶಿಫಾರಸು ಮಾಡಿತ್ತು. ಆದರೆ ಉಷಾ ಮೆಹ್ರಾ ಆಯೋಗದ ಶಿಫಾರಸಿಗೆ ಪೂರಕವಾಗಿ ಸರಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸಹಮತ ರೂಪಿಸುವ ಪ್ರಯತ್ನಕ್ಕೆ ಯುಪಿಎ ಸರಕಾರ ಮುಂದಾಗಲಿಲ್ಲ.

ಇಲ್ಲಿ ಇನ್ನೊಂದು ಬಿಕ್ಕಟ್ಟು ಇತ್ತು. 1989ರಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವ ಸರಕಾರಗಳಿಗೂ ಬಹುಮತವಿರಲಿಲ್ಲ. ಹಾಗಾಗಿ ಒಳ ಮೀಸಲಾತಿಯಂಥ ವಿಚಾರದಲ್ಲಿ ಸಹಮತ ರೂಪುಗೊಳ್ಳುವುದು ಖಿಚಡಿ ಸರಕಾರಗಳ ಕಾಲದಲ್ಲಿ ಕಷ್ಟವಿತ್ತು.

ಆದರೆ ಬಿಜೆಪಿ ಸರಕಾರ ಮಾಡಿದ್ದೇನು?

2014ರಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ಭರ್ಜರಿ ಬಹುಮತವಿದೆ. ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ದಲಿತ ಮೀಸಲಾತಿಯೊಳಗಿನ ವರ್ಗೀಕರಣವನ್ನು ಮಾಡುವುದಾಗಿ ಭರವಸೆ ಕೊಟ್ಟಿದ್ದ ಬಿಜೆಪಿ ಏನನ್ನೂ ಮಾಡಲಿಲ್ಲ. ಬೇಕಿರದ ಜನವಿರೋಧಿ ಮಸೂದೆಗಳನ್ನೆಲ್ಲ ತನಗಿರುವ ಬಹುಮತದ ಕಾರಣದಿಂದ ಜಾರಿಗೆ ತಂದಿರುವ ಬಿಜೆಪಿ ಒಳ ಮೀಸಲಾತಿ ವಿಚಾರದಲ್ಲಿ ನಾಟಕ ಮಾಡಿಕೊಂಡೇ ಬಂದಿದೆ.

ಏಳು ನ್ಯಾಯಾಧೀಶರ ಪೀಠ ರಚನೆಗೆ ಮನವಿ ಮಾಡಲಾಗಿದ್ದ ತೀರ್ಪು ಬಂದಿದ್ದು 2020ರಲ್ಲಿ. ಅದಾದ ಬಳಿಕವೂ ಕೇಂದ್ರ ಬಿಜೆಪಿ ಸರಕಾರ ತ್ವರಿತವಾಗಿ ಏಳು ನ್ಯಾಯಾಧೀಶರ ಪೀಠ ರಚನೆಗೆ ಮುಂದಾಗಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಏಳು ನ್ಯಾಯಾಧೀಶರ ಪೀಠ ರಚಿಸಲಾಗಿದೆ.

ಹೈದರಾಬಾದ್‌ನಲ್ಲಿ ಕೃಷ್ಣ ಮಾದಿಗ ಅವರನ್ನು ತಬ್ಬಿಕೊಂಡು ಸಂತೈಸುವ ನಾಟಕವಾಡಿದ ಮೋದಿಯವರಾಗಲಿ, ಅವರ ಪಕ್ಷ ಬಿಜೆಪಿಯಾಗಲಿ ಬೇರೆ ಪಕ್ಷಗಳ ಮೇಲೆ ತಪ್ಪು ಹೊರಿಸುತ್ತಿದ್ದಾರೆಯೇ ಹೊರತು ಈ ಸಮುದಾಯದ ಬೇಡಿಕೆಗೆ ಸ್ಪಂದಿಸಿಲ್ಲ ಎಂಬುದು ಎದ್ದು ಕಾಣುತ್ತದೆ. ಒಳ ಮೀಸಲಾತಿ ಜಾರಿಗೆ ಇದ್ದ ನ್ಯಾಯಾಂಗ ಮತ್ತು ಶಾಸಕಾಂಗದ ಮಾರ್ಗಗಳೆರಡರಲ್ಲಿಯೂ ಕೇಂದ್ರದ ಬಿಜೆಪಿ ಸರಕಾರ ಏನನ್ನೂ ಮಾಡಿಲ್ಲ ಎನ್ನುವುದೂ ಕಾಣಿಸುತ್ತಿದೆ.

ಹೈದರಾಬಾದ್ ಸಮಾವೇಶದಲ್ಲಿ ಮಾದಿಗ ಸಮುದಾಯದ ಪರವಾಗಿ ಪರಮ ಕಾಳಜಿ ತೋರಿಸಿದವರಂತೆ ಮಾಡಿದ ಮೋದಿ ಕಡೆಗೂ ಕೊಟ್ಟ ಭರವಸೆ ಸಂವಿಧಾನ ತಿದ್ದುಪಡಿಯದ್ದಲ್ಲ; ಬದಲಿಗೆ ಸಮಿತಿ ರಚನೆ.

ಕಳೆದ ಐದು ವರ್ಷಗಳಿಂದಲೂ ಒಳ ಮೀಸಲಾತಿ ವಿಚಾರದಲ್ಲಿ ಮುಂದಡಿ ಇಡುವುದನ್ನು ಕೇಂದ್ರ ಸರಕಾರ ತಪ್ಪಿಸಿಕೊಳ್ಳುತ್ತಲೇ ಬಂದಿದೆ. ಅವರದೇ ಪಕ್ಷದ ನಾಯಕರೇ ಇದನ್ನು ಪ್ರಶ್ನಿಸಿದ್ದೂ ಇದೆ. 2023ರ ಜುಲೈ 26ರಂದು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಜಿ.ವಿ.ಎಲ್. ನರಸಿಂಹರಾವ್ ಅವರು ಕೇಳಿದ್ದ ಪ್ರಶ್ನೆಗೂ ಕೇಂದ್ರ ಸರಕಾರ ಅಷ್ಟೇ ಅಸ್ಪಷ್ಟ ಉತ್ತರ ಕೊಟ್ಟಿದೆ.

ಒಳಮೀಸಲಾತಿಯ ಬಗ್ಗೆ ಈವರೆಗೆ ಬೇರೆಬೇರೆ ರಾಜ್ಯಗಳು ನೀಡಿರುವ ಅಭಿಪ್ರಾಯಗಳ ಕುರಿತು ಮಾತ್ರವಲ್ಲದೆ, ಕೇಂದ್ರ ಸರಕಾರದ ಮುಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರಕಾರಗಳಿಗೆ ಒಳಮೀಸಲಾತಿ ಅಧಿಕಾರ ನೀಡುವ ಯೋಜನೆ ಇದೆಯೇ? ಇದ್ದಲ್ಲಿ ಎಷ್ಟು ಕಾಲಾವಧಿಯೊಳಗೆ ಅದು ಜಾರಿಯಾಗಲಿದೆ ಎಂಬುದರ ಕುರಿತು ಅವರು ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಮೋದಿ ಸಂಪುಟದ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ ಮಂತ್ರಿ, ಕರ್ನಾಟಕದ ಎ.ನಾರಾಯಣಸ್ವಾಮಿ ಹೇಳಿರುವುದೇನೆಂದರೆ,

1.ಸಂವಿಧಾನದಲ್ಲಿ ಈಗಿರುವ ಅವಕಾಶಗಳಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಿಲ್ಲ.

2. ಸಂವಿಧಾನ ತಿದ್ದುಪಡಿ ವಿಚಾರವಾಗಿ ರಾಷ್ಟ್ರೀಯ ಆಯೋಗ ಮಾಡಿದ್ದ ಶಿಫಾರಸಿಗೆ ಈವರೆಗೆ ಬಂದಿರುವ ಅಭಿಪ್ರಾಯಗಳಲ್ಲಿ 7 ರಾಜ್ಯಗಳು ಪರವಾಗಿಯೂ, 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಒಳ ಮೀಸಲಾತಿಯ ವಿರುದ್ಧವಾಗಿಯೂ ಅಭಿಪ್ರಾಯ ನೀಡಿವೆ.

3. ಈ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಸರಕಾರ ಏನೂ ಮಾಡಲಾಗದು.

ಅರ್ಥ ಇಷ್ಟೆ: ಬಿಜೆಪಿ ಸರಕಾರಕ್ಕೆ ಒಳ ಮೀಸಲಾತಿ ವಿಚಾರದಲ್ಲಿ ಏನನ್ನೂ ಮಾಡುವ ಇಚ್ಛೆಯಿಲ್ಲ. ಅದಕ್ಕೆ ಅದು ಬೇಕಾಗಿಯೂ ಇಲ್ಲ.

ಪರಿಣಿತರು ಹೇಳುತ್ತಿರುವುದೇನು?

ಈಗಿರುವ ಸನ್ನಿವೇಶದಲ್ಲಿ ಸದಾಶಿವ ಆಯೋಗದ ವರದಿಯನ್ನು ಕರ್ನಾಟಕ ಸರಕಾರ ಜಾರಿಗೆ ತರಲಾಗದು. ಅಂಥ ಭರವಸೆಯನ್ನು ಯಾವುದೇ ಪಕ್ಷಗಳು ನೀಡಿದರೂ, ವರದಿ ಜಾರಿಗೆ ಯಾರೇ ಒತ್ತಾಯಿಸಿದರೂ ಅದು ಅರ್ಥಹೀನ. ಆದರೆ ಖಂಡಿತವಾಗಿ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದೂ, ಅದರ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದೂ ಮತ್ತು ಕರ್ನಾಟಕ ವಿಧಾನಸಭೆ ಒಕ್ಕೊರಲಿಂದ ಒಳಮೀಸಲಾತಿಗೆ ಆಗ್ರಹಿಸಿ ಗೊತ್ತುವಳಿ ಸ್ವೀಕರಿಸಬೇಕೆಂದೂ ಆಗ್ರಹಿಸಬೇಕು.

ಪರಿಣಿತರು ಹೇಳುವ ಪ್ರಕಾರ, ಒಳ ಮೀಸಲಾತಿ ಜಾರಿಗೆ ಇರುವುದು ಎರಡೇ ಮಾರ್ಗ. ಮೊದಲನೆಯದು, 2024ರ ಜನವರಿ 12ರಿಂದ ಏಳು ನ್ಯಾಯಾಧೀಶರ ಪೀಠದಲ್ಲಿ ಆರಂಭವಾಗಲಿರುವ ವಿಚಾರಣೆಯಲ್ಲಿ ಒಳ ಮೀಸಲಾತಿ ಪರವಾಗಿ ಕೇಂದ್ರ ಸರಕಾರ ಪ್ರಬಲ ವಾದ ಮಂಡಿಸಬೇಕಿದೆ. ಆದರೆ ವಿಚಾರಣೆ ಇನ್ನೆಷ್ಟು ಕಾಲ ನಡೆದು ಯಾವ ತೀರ್ಪು ಬರುವುದೋ ಗೊತ್ತಿಲ್ಲ. ಅದೇನಿದ್ದರೂ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರದ ಮಂಡನೆ ಮತ್ತು ವರ್ತನೆಗಳನ್ನು, ಪೀಠದಲ್ಲಿರುವ ನ್ಯಾಯಾಧೀಶರನ್ನು ಆಧರಿಸಿರುತ್ತದೆ. ಪೀಠದ ಸಂಖ್ಯೆ ದೊಡ್ಡದಾದ ಮಾತ್ರಕ್ಕೆ ನ್ಯಾಯ ಖಾತರಿ ಎಂಬ ಯಾವ ಗ್ಯಾರಂಟಿಯೂ ಇಲ್ಲ ಎನ್ನುತ್ತಾರೆ ಪರಿಣಿತರು.

ಒಳಮೀಸಲಾತಿ ಜಾರಿಗೆ ಇರುವ ಎರಡನೇ ಮಾರ್ಗವೆಂದರೆ, ಸಂವಿಧಾನ ತಿದ್ದುಪಡಿ. ಒಳ ಮೀಸಲಾತಿ ಪರವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು, ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿಯ ಅಧಿಕಾರ ನೀಡುವ ಕಾಯ್ದೆಯನ್ನು ರೂಪಿಸಬೇಕಿದೆ.

ಆದರೆ ಈ ಎರಡೂ ಮಾರ್ಗಗಳ ವಿಚಾರದಲ್ಲಿ ಕೇಂದ್ರದಲ್ಲಿನ ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇದ್ದ ಹಾಗಿಲ್ಲ ಎಂದೇ ಹೇಳಲಾಗುತ್ತಿದೆ.

ಸದ್ಯಕ್ಕೆ, ಒಳ ಮೀಸಲಾತಿ ಎಂಬುದು ಅದರ ಹೆಸರು ಹೇಳಿಕೊಂಡು ಬೇಕಾಬಿಟ್ಟಿ ರಾಜಕೀಯ ಮಾಡುವುದಕ್ಕೆ, ನಾಟಕವಾಡುವುದಕ್ಕೆ ಮಾತ್ರ ಬಳಕೆಯಾಗುತ್ತಿದೆ. ದಶಕಗಳಿಂದಲು ಹೋರಾಟ ಮಾಡುತ್ತಲೇ ಬಂದಿರುವ ದಲಿತ ಸಮುದಾಯ ನ್ಯಾಯಕ್ಕಾಗಿ ಕಾಯುತ್ತಲೇ ಇದೆ. ಆದರೆ ಇನ್ನೂ ಎಷ್ಟು ಕಾಲ ಎಂಬುದು ಈಗಂತೂ ಉತ್ತರವಿಲ್ಲದ ಪ್ರಶ್ನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News