ರಾಜ್ಯಾಧ್ಯಕ್ಷೆ ಆಗ್ತಾರಾ ಶೋಭಾ ಕರಂದ್ಲಾಜೆ ?

Update: 2023-10-26 10:12 GMT
Editor : Thouheed | By : ಆರ್. ಜೀವಿ

ರಾಜ್ಯ ಬಿಜೆಪಿ ಸೋಲಿನ ಹತಾಶೆಯಿಂದಲೂ, ದೆಹಲಿ ಬಾಸ್ಗಳ ವಿಶ್ವಾಸಕ್ಕೆ ತಕ್ಕ ನಾಯಕರಿಲ್ಲದ ಕಾರಣದಿಂದಲೂ ಕುಗ್ಗಿಹೋಗಿದೆಯೆ?. ಮೋದಿಯೇ ಗತಿ ಎನ್ನುವಂಥ ಸ್ಥಿತಿಯಿಂದ ಹೊರಬರಲಾರದ ಬಿಜೆಪಿಯ ಎದುರಿನ ಸವಾಲುಗಳೇನು?. ಅದಕ್ಕೆ ಮೆತ್ತಿಕೊಂಡಿರುವ ಟಿಕೆಟ್ ಕಾಳದಂಧೆಯ ಕಳಂಕ ಇನ್ನಷ್ಟು ಕುಗ್ಗಲು, ತಲೆತಗ್ಗಿಸುವಂತಾಗಲು ಕಾರಣವಾಗಿದೆಯೆ?.

ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪವಿರುವ ಚೈತ್ರಾ ಕುಂದಾಪುರ ಪ್ರಕರಣದ ಬೆನ್ನಲ್ಲೇ ಮತ್ತೊಂದು ಹಗರಣ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದ ಕಟೀಲ್ ಗೂ ಸುತ್ತಿಕೊಳ್ಳುತ್ತಿರುವುದರಿಂದ ​ಬಿಜೆಪಿಗೆ ತೀವ್ರ ಮುಜುಗರ ತಂದಿದೆಯೇ ?. ಚುನಾವಣೆ ಮುಗಿದು ಐದು ತಿಂಗಳುಗಳೇ ಕಳೆದರೂ ವಿಧಾನಸಭೆ ವಿರೋಧ ಪಕ್ಷ ನಾಯಕನನ್ನು ಆರಿಸಿಕೊಳ್ಳಲಾರದ ಅದರ ದುರವಸ್ಥೆ ಯಾವ ಥರದ್ದು?.

ಯಡಿಯೂರಪ್ಪನವರನ್ನು ಪಕ್ಷದೊಳಗೆ ಬದಿಗೆ ಸರಿ​ಸಿದ ಬಳಿಕ ರಾಜ್ಯದಲ್ಲಿ ಪ್ರಬಲವಾಗಿ ಎದ್ದು ನಿಲ್ಲಲು ಬಿಜೆಪಿ ಎದುರಿರುವ ಸವಾಲುಗಳೇನೇನು ?. ಈಗ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿರುವ ಶೋಭಾ ಕರಂದ್ಲಾಜೆಯವರ ಹೆಸರೇ ಅಂತಿಮಗೊಂಡರೆ ಮತ್ತೆ ಬಿಜೆಪಿಯೊಳಗೆ ಉಂಟಾಗಬಹುದಾದ ಅಲ್ಲೋಲ ಕಲ್ಲೋಲಗಳು ಏನಿರಬಹುದು?.

ಬಹುಶಃ ರಾಜ್ಯ ಬಿಜೆಪಿಯ ಇವತ್ತಿನ ಅವಸ್ಥೆಯ ಚಿತ್ರವೊಂದು ಇದಿಷ್ಟೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಮೂಲಕ ಸ್ಪಷ್ಟವಾದರೂ ಆಗಬಹುದು. ಆದರೆ, ಬಿಜೆಪಿಯಲ್ಲಿ ಈಗಿರುವ ಗೊಂದಲಗಳು ಮಾತ್ರ ಬಿಜೆಪಿಯನ್ನು ಬಾಧಿಸುತ್ತಲೇ ಇರಲಿದೆ ಎಂಬ ಸುಳಿವುಗಳೂ ಈಗಿನ ವಿದ್ಯಮಾನಗಳನ್ನು ಗಮನಿಸಿದರೆ ಸಿಗುತ್ತವೆ.

ಒಂದೇ ಸಲ ಎರಡೆರಡು ವಿಚಾರಗಳು ಈಗ ರಾಜ್ಯ ಬಿಜೆಪಿಯನ್ನು ಸುದ್ದಿಯ ಕೇಂದ್ರದಲ್ಲಿ ತಂದು ನಿಲ್ಲಿಸಿವೆ. ಮೊದಲನೆಯದು, ಕಡೆಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ಕೌಂಟ್​ ಡೌನ್ ಶುರುವಾಗಿದೆಯೆಂಬ ಕಾರಣಕ್ಕೆ ಮೂಡಿರುವ ಸಂಚಲನ. ಎರಡನೆಯದು, ಮತ್ತೊಂದು ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ ಬಂದಿರುವುದು ಹಾಗೂ ಅದು ಈಗ ರಾಜ್ಯಾಧ್ಯಕ್ಷ ಹುದ್ದೆಯಲ್ಲಿರುವ ನಳಿನ್ ಕುಮಾರ್ ಕಟೀಲ್ ಸುತ್ತಲೇ ಸುತ್ತುತ್ತಿರುವುದು.

ಮೊದಲು ರಾಜ್ಯಾಧ್ಯಕ್ಷ ಹುದ್ದೆಗೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿರುವ ವಿಚಾರವನ್ನು ನೋಡುವುದಾದರೆ, ಇದು ಈಗ ಬಿಜೆಪಿಯೊಳಗಿರುವ ಕೆಲ ಗೊಂದಲಗಳನ್ನು ಬಗೆಹರಿಸಬಹುದೆಂಬಂತೆ ಕಂಡರೂ ತಳಮಳಗಳು ಮತ್ತು ಬೇಗುದಿಯನ್ನು ಕಡಿಮೆ ಮಾಡೀತು ಎಂದು ಹೇಳಲಿಕ್ಕಾಗದು.

ಆದರೆ, ಶೋಭಾ ಹೆಸರು ಮುಂದೆ ತರುವ ಮೂಲಕ ಹೈಕಮಾಂಡ್, ಯಡಿಯೂರಪ್ಪನವರು ವಿರೋಧ ವ್ಯಕ್ತಪಡಿಸಲು ಅವಕಾಶವೇ ಇಲ್ಲದಂತೆ ಮಾಡಿದೆ. ತಮ್ಮ ಮಗ ವಿಜಯೇಂದ್ರ ಅವರನ್ನೇ ಅಧ್ಯಕ್ಷ ಹುದ್ದೆಗೆ ತರುವ ಒತ್ತಾಯ ಮುಂದಿಟ್ಟಿದ್ದ ಯಡಿಯೂರಪ್ಪನವರಿಗೆ ಹೈಕಮಾಂಡ್ ಮಣಿದಿಲ್ಲ. ಹಾಗೆಂದು, ಲೋಕಸಭೆ ಚುನಾವಣೆ ಎದುರಿಗಿರುವ ಹೊತ್ತಿನಲ್ಲಿ ಅವರ ವಿರೋಧ ಕಟ್ಟಿಕೊಳ್ಳುವ ಮೊಂಡುತನವನ್ನೂ ತೋರಿಸಿಲ್ಲ.

ಯಡಿಯೂರಪ್ಪನವರ ಆಪ್ತ ವಲಯದ ಶೋಭಾ ಅವರನ್ನು ಈ ಹುದ್ದೆಗೆ ತರುವ ಮೂಲಕ ಅತ್ತ ಯಡಿಯೂರಪ್ಪನವರೂ ಸಮಾಧಾನದಿಂದಿರುವಂತೆ ಮಾಡುವುದು, ಜೊತೆಗೇ ಯಡಿಯೂರಪ್ಪನವರ ಕುಟುಂಬವನ್ನು ಆದಷ್ಟೂ ದೂರವಿಡುವ ತನ್ನ ಉದ್ದೇಶವನ್ನು ಪೂರೈಸುವುದು ಎರಡನ್ನೂ ಸಾಧಿಸಿದಂತಾಗುತ್ತದೆ ಎಂಬುದು ದೆಹಲಿ ವರಿಷ್ಠರ ಮೊದಲ ಲೆಕ್ಕಾಚಾರ.

ಶೋಭಾ ಕರಂದ್ಲಾಜೆ ಈ ಹುದ್ದೆಗೆ ಬಂದರೆ ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಮಹಿಳೆಯೊಬ್ಬರು ಬಂದಂತಾಗುತ್ತದೆ. ಖಡಕ್ ಆಗಿ ಮಾತನಾ​ಡುವ ಕರಂದ್ಲಾಜೆ, ಕೇಂದ್ರ ಸಚಿವೆಯಾಗಿ, ಸಂಸದೆಯಾಗಿ, ರಾಜ್ಯ ಸಚಿವೆಯಾಗಿ ಅನುಭವವಿರುವವರು​. ಹೈಕಮಾಂಡ್ ಮಟ್ಟದಲ್ಲಿ ಉತ್ತಮ ನಂಟು ಹೊಂದಿದವರು. ಉತ್ತರಾಖಂಡ ಚುನಾವಣೆಯಲ್ಲಿ ಉಸ್ತುವಾರಿಯಾಗಿಯೂ ಗಮನ ಸೆಳೆದಿದ್ದವರು.

ಬಿಜೆಪಿಗೆ ಬೇಕಾಗಿರುವ ಗುಣ​ಗಳುಳ್ಳ ನಾಯಕಿ ಎಂಬುದು ಬಿಜೆಪಿ ದೃಷ್ಟಿಯಿಂದ ಶೋಭಾ ಅವರ ಮತ್ತೊಂದು ಹೆಗ್ಗಳಿಕೆ. ಪ್ರಖರ ಹಿಂದುತ್ವದ ಅಜೆಂಡಾ ಪೂರೈಸಬಲ್ಲ ನಾಯಕಿ ಎಂಬುದರ ಜೊತೆಗೇ, ಯಡಿಯೂರಪ್ಪ ಬಣದವರು, ಒಕ್ಕಲಿಗ ಸಮುದಾಯದವರು ಎಂಬ ಅಂಶಗಳೂ ರಾಜ್ಯದಲ್ಲಿ ಬಿಜೆಪಿಯನ್ನು ಬಲಗೊಳಿಸಲು ನೆರವಾಗಲಿವೆ ಎಂಬ ಲೆಕ್ಕಾಚಾರ ಇಲ್ಲದೆ ಇಲ್ಲ.

ಡಿಕೆ ಶಿವಕುಮಾರ್ ಅಂಥವರನ್ನು ಎದುರಿಸುವುದಕ್ಕೆ ಸೂಕ್ತ ನಾಯಕಿ ಎಂಬುದೂ ಮತ್ತೊಂದು ಲೆಕ್ಕಾಚಾರ. ಯಡಿಯೂರಪ್ಪನವರ ಆಪ್ತ ವಲಯದವರಾಗಿದ್ದರೂ, ಹೈಕಮಾಂಡ್ಗೆ ನಿಷ್ಠೆ ವಿಚಾರದಲ್ಲಿ ಇನ್ನೂ ಹೆಚ್ಚು ವಿಶ್ವಾಸಾರ್ಹರು ಎಂಬುದು ಕೂಡ ಅವರ ಆಯ್ಕೆಗೆ ಪೂರಕವಾದ ಅಂಶ. ಹಾಗಾದರೆ, ರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ನಲ್ಲಿದ್ದ ನಾಯಕರ ಕಥೆಯೇನು? ಅವರ ಪ್ರತಿಕ್ರಿಯೆ ಏನಿರಬಹುದು?

ಬಿ.ವೈ ವಿಜಯೇಂದ್ರ, ಸಿಟಿ ರವಿ, ಸುನೀಲ್ ಕುಮಾರ್, ಆರ್ ಅಶೋಕ್, ಅಶ್ವತ್ಥನಾರಾಯಣ ಮೊದಲಾದವರಲ್ಲದೆ ಹಲವರು ಈ ಹುದ್ದೆಯ ಬಗ್ಗೆ ಆಸೆ ಇಟ್ಟುಕೊಂಡಿದ್ದರು.

ಈಗ ವಿಜಯೇಂದ್ರ ಅವರಿಗೆ ನಿರಾಸೆಯಾಗಲಿದೆ. ಆದರೆ ಶೋಭಾ ಕರಂದ್ಲಾಜೆ ವಿಚಾರದಲ್ಲಿ ಬಿಎಸ್ವೈ ವಿರೋಧ ಇಲ್ಲದೆ ಇರುವುದರಿಂದ ವಿಜಯೇಂದ್ರ ಸುಮ್ಮನಾಗುವುದು ಅನಿವಾರ್ಯವಾಗಲಿದೆ. ಇನ್ನು, ಉಳಿದ ನಾಯಕರು ವಿರೋಧವನ್ನೂ ಮಾಡಲಾರದಷ್ಟು ಮಟ್ಟಿಗೆ ಪಕ್ಷದ ಆಶ್ರಯದಲ್ಲಿರುವವರು. ಈಗ ಸುದ್ದಿಯಿರುವಂತೆ, ಶೋಭಾ ಅವರೇ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಹೊಸ ಹುರುಪೊಂದು ಪಕ್ಷದೊಳಗೆ ಮೂಡಬಹುದು. ಆದರೆ ಎಲ್ಲರೂ ಶೋಭಾ ಅವರ ನಾಯಕತ್ವವನ್ನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡು ನಡೆಯುತ್ತಾರೆ ಎಂದೇನೂ ಅಲ್ಲ.

ಸಂಪುಟದ ಭಾಗವಾಗಿದ್ದುಕೊಂಡು ನಿರ್ವಹಿಸುವ ಜವಾಬ್ದಾರಿಗಳು ಬೇರೆ ಮತ್ತು ಒಂದು ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆಯೇ ಬೇರೆಯಾಗಿರುವುದರಿಂದ ಶೋಭಾ ಅವರಿಗೂ ಇದು ದೊಡ್ಡ ಸವಾಲೇ ಆಗಬಹುದು. ಯಾಕೆಂದರೆ, ಶೋಭಾ ಕರಂದ್ಲಾಜೆ​ ​ಅಂದರೇ ಆಗದ ಹಲವು ಹಿರಿಯ ನಾಯಕರೂ ಪಕ್ಷದಲ್ಲಿದ್ದಾರೆ. ಹಾಗಾಗಿ ಬಣ ರಾಜಕೀಯ ಎಂಬುದು ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ಇನ್ನೂ ಪ್ರಬಲವಾಗಿ ಕಾಡುವ ಸಾಧ್ಯತೆಯೂ ಇದ್ದೇ ಇದೆ.

ಸದ್ಯದ ಸಂದರ್ಭದಲ್ಲಿಯೂ ಪಕ್ಷವನ್ನು ಮುನ್ನಡೆಸುವಾಗ ಹಲವು ಸವಾಲುಗಳಿವೆ. ಲೋಕಸಭೆ ಚುನಾವಣೆಗೆ ಹೆಚ್ಚು ಸಮಯ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಈ ಸವಾಲಿನ ಸ್ವರೂಪ ಇನ್ನೂ ತೀವ್ರವಾಗಿರುತ್ತದೆ. ಸೋಮವಾರ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಶೋಭಾ ಕರಂದ್ಲಾಜೆ​ "ನಾನು ಕೇಂದ್ರ ಸಚಿವೆಯಾಗಿ ಸಂತೋಷವಾಗಿದ್ದೇನೆ. ಅಲ್ಲಿಯೇ ಇರುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ​" ಎಂದು ಹೇಳಿದ್ದಾರೆ.

​"​ ನನಗೆ ಒಳ್ಳೆ ಖಾತೆ ಸಿಕ್ಕಿದೆ. ಅಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರುವಂತೆ ನನಗೆ ಯಾವ ವರಿಷ್ಠರಿಂದಲೂ ಯಾವ ಸೂಚನೆಗಳು ಇಲ್ಲ. ಇವೆಲ್ಲ ಸುದ್ದಿ ಹೇಗೆ ಬರುತ್ತಿವೆಯೂ ನನಗೆ ಗೊತ್ತಿಲ್ಲ​" ಎಂ​ದಿದ್ದಾರೆ. ಈ​ ಗೊಂದಲದ ನಡುವೆಯೇ , ಪಕ್ಷಕ್ಕೆ ಈಗಾಗಲೇ ಮೆತ್ತಿಕೊಂಡಿರುವ ಕಳಂಕ ಇನ್ನಷ್ಟು ಕಾಡಲಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಹಿಂ​ದುತ್ವ ಭಾಷಣಕಾರ್ತಿ ಚೈತ್ರಾ ಕುಂದಾಪುರ ವಂಚಿಸಿದ್ದಾರೆ ಎಂಬ ಪ್ರಕರಣದ ಬೆನ್ನಿಗೇ ರಾಜ್ಯದಲ್ಲಿ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿರುವುದು ರಾಜ್ಯ ಬಿಜೆಪಿಯಲ್ಲಿ ದೊಡ್ಡ ತಳಮಳಕ್ಕೆ ಕಾರಣವಾಗಿದೆ.

​ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಕೊಟ್ಟೂರು ತಾಲೂಕಿನ ಬೆನಕನಹಳ್ಳಿಯ ರೇವಣಸಿದ್ದಪ್ಪ ಮತ್ತು ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್ ಪಿ ಎಂಬವರು, ಒಟ್ಟು 2 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಪಿಡಬ್ಲ್ಯುಡಿ ನಿವೃತ್ತ ಎಂಜಿನಿಯರ್ ಸಿ. ಶಿವಮೂರ್ತಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ​ಅವರಲ್ಲಿ ಮಾತಾಡಿ ಅವರೇ ಸೂಚಿಸಿದ ವ್ಯಕ್ತಿ ಬಳಿ ಮಾತಾಡಿ ಹಣ ನೀಡಿದ್ದು. ಹಣವನ್ನು ವಾಪಾಸ್ ಕೊಡುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಶಿವಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.​ ಆರೋಪಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಂಟಿರುವುದು ಟಿಕೆಟ್ ಕಾಳದಂಧೆ ಮಾರಾಟದ ಎರಡೂ ಪ್ರಕರಣಗಳಲ್ಲಿ ಸಾಮ್ಯತೆಯಿರುವ ಒಂದು ಅಂಶವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯವರಾಗಿರುವುದು ಮತ್ತು ಕಾಳದಂಧೆಯಲ್ಲಿ ದಕ್ಷಿಣ ಕನ್ನಡ ಮೂಲದ ಜನರ ಹೆಸರು ಕೇಳಿಬರುತ್ತಿರುವುದು ಕಾಕತಾಳೀಯ​ವೇ ?. ತಾನು ನೀಡಿದ ಹಣಕ್ಕೆ ದಾಖಲೆಗಳೂ ಇವೆ ಎಂದು ನಿವೃತ್ತ ಅಧಿಕಾರಿ ತಿಳಿಸಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಆರೋಪಿಸಲಾಗಿರುವ ಪ್ರಕಾರ, ಪ್ರಕರಣದಲ್ಲಿ ದುಡ್ಡು ಪಡೆದುಕೊಂಡ ಆರೋಪಿಗಳೆಲ್ಲರೂ ಬಿಜೆಪಿ ಮುಖಂಡರೇ ಆಗಿದ್ದಾರೆ.

ಇಂಥದೊಂದು ಕಳಂಕದ ಪರಿಣಾಮವಾಗಿ ಬಿಜೆಪಿ ಜನರೆದುರಿನಲ್ಲಿ ತಲೆತಗ್ಗಿಸಬೇಕಾದ ಸ್ಥಿತಿಯಿದೆ. ಪ್ರಮುಖ ವಿರೋಧ ಪಕ್ಷವಾಗಿ ಗಟ್ಟಿ ಧ್ವನಿ ಹೊಂದಿರಬೇಕಿದ್ದ ಅದು ಇದರಿಂದಾಗಿ ವಿಚಿತ್ರ ಸಂದಿಗ್ಧದಲ್ಲಿ ಸಿಕ್ಕಿಹಾಕಿಕೊಂಡಿದೆ. ​ಇದು ಸಾಲದ್ದಕ್ಕೆ ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ದೊಡ್ಡ ಹಗರಣವಾಗಿ ಬೆಳೆಯುತ್ತಿದೆ. ಕೋಟಿ ಕೋಟಿ ಖರ್ಚು ಮಾಡಿ ಕಂಚಿನ ಪ್ರತಿಮೆ ಮಾಡಿದ್ದೇವೆ ಎಂದು ಹೇಳಿದ್ದ ಪ್ರತಿಮೆ ಫೈಬರ್ ನದ್ದು ಎಂದು ಬಯಲಾಗಿದೆ. ಈಗ ಪ್ರತಿಮೆಯೇ ನಾಪತ್ತೆಯಾಗಿದೆ. ಹಿಂದುತ್ವ ಕಾರ್ಯಕರ್ತರೇ ಅಲ್ಲಿನ ಬಿಜೆಪಿ ಶಾಸಕ ಸುನಿಲ್ ಕುಮಾರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಕಾರ್ಕಳದ ಜನರನ್ನು ವಂಚಿಸಿದ್ದಾರೆ ಎಂಬ ವ್ಯಾಪಕ ಆರೋಪ ಕೇಳಿ ಬಂದಿದೆ.

ಬಿಜೆಪಿಯ ತಳಮಳಗಳು ಇಷ್ಟಕ್ಕೇ ಮುಗಿದಿಲ್ಲ. ಮುಖ್ಯವಾಗಿ ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆಯೇ ರಾಜ್ಯ ಬಿಜೆಪಿಯ ಬಹಳಷ್ಟು ನಾಯಕರಲ್ಲಿ ಅಸಮಾಧಾನವಿದೆ. ಆದರೆ ಬಹಿರಂಗವಾಗಿ ಮಾತನಾಡಲಾರದ ಅಸಹಾಯಕತೆಯೂ ಅವರದಾಗಿದೆ. ಅದು ರಾಜ್ಯ ನಾಯಕರ ಸಮ್ಮತಿಯಿಂದ ಆದ ಮೈತ್ರಿಯೇನೂ ಅಲ್ಲ. ದೆಹಲಿ ವರಿಷ್ಠರ ಮಟ್ಟದಲ್ಲಿ ನಡೆದದ್ದು. ಆ ಕಾರಣಕ್ಕಾಗಿ ಬಾಯ್ಮುಚ್ಚಿಕೊಂಡಿರಬೇಕಾದ ಸ್ಥಿತಿ ರಾಜ್ಯ ಬಿಜೆಪಿ ನಾಯಕರದ್ದಾಗಿದೆ.

ಇದರ ನಡುವೆಯೇ, ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ರಾಜ್ಯ ನಾಯಕರನ್ನು ಹೈಕಮಾಂಡ್ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನವನ್ನು ನೇರವಾಗಿ ಹೊರಹಾಕಿದ್ದವರು ಮಾಜಿ ಸಿಎಂ ಡಿವಿ ಸದಾನಂದಗೌಡ. ಸದಾನಂದಗೌಡರನ್ನು ರಾಜ್ಯ ರಾಜಕಾರಣವಾಗಲೀ, ಅವರ ಪಕ್ಷದ ಕೇಂದ್ರ ನಾಯಕರಾಗಲೀ ತೀರಾ ಗಂಭೀರವಾಗಿಯೇನೂ ತೆಗೆದುಕೊಳ್ಳುತ್ತಿಲ್ಲವಾದರೂ ಈಗಿನ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕರ ವಿರೋಧ ಕಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ.

ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ನಿರ್ಧಾರ ವಿಳಂಬದ ಬಗ್ಗೆಯೂ ಸದಾನಂದಗೌಡ ದನಿಯೆತ್ತಿದ್ದರು. ಹಾಗಾಗಿಯೇ ಸದಾನಂದಗೌಡರಿಗೆ ಹೈಕಮಾಂಡ್ ಬುಲಾವ್ ಬಂದಿರುವ ಸುದ್ದಿಯಿದ್ದು, ವರಿಷ್ಠರ ಭೇಟಿಗೆ ಡಿವಿಎಸ್ ಹೋಗಲಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆಯೇ, ಮೋದಿ ಮುಖವಿಲ್ಲದೆ ಚುನಾವಣೆ ಎದುರಿಸಲಾರದ ಅನಿವಾರ್ಯತೆಯಲ್ಲಿಯೇ ರಾಜ್ಯ ಬಿಜೆಪಿ ಈಗಲೂ ಇದೆ ಎಂಬ ವಿಚಾರ.

ಕಳೆದ ಚುನಾವಣೆಯಲ್ಲಿ ಮೋದಿ ಮತ್ತೆ ಮತ್ತೆ ಬಂದು ಭಾಷಣ ಮಾಡಿದರೂ ಬಿಜೆಪಿಗೆ ಮತಗಳು ಬರಲಿಲ್ಲ. ಈಗ ಮತ್ತೆ ಲೋಕಸಭೆ ಚುನಾವಣೆಯಲ್ಲಿಯೂ ಮೋದಿಯೇ ಅನಿವಾರ್ಯ ಎಂದು ರಾಜ್ಯದಲ್ಲಿನ ಅಸಹಾಯಕ ನಾಯಕರು ಹೇಳುತ್ತಲೇ ಇದ್ದಾರೆ. ಮೋದಿಯನ್ನು ಮೆಚ್ಚಿಸುವ ಇಂಥ ಹೇಳಿಕೆಗಳು ಬೇರೆ, ಚುನಾವಣೆಯಲ್ಲಿ ಮತದಾರನ ತೀರ್ಮಾನಕ್ಕೆ ಕಾರಣವಾಗುವ ಅಂಶಗಳು ಬೇರೆ. ಇಂಥ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಗೆ ಹೊಸ ನಾಯಕತ್ವ ಬರಲಿದೆ. ಅದು ತರುವ ಬಿಕ್ಕಟ್ಟುಗಳು, ಒಡಕುಗಳು, ಬೇಗುದಿಗಳು ಬಿಜೆಪಿಯ ಪಾಲಿನ ಹೊಸ ಸವಾಲುಗಳಾಗಲಿವೆಯೆ?

ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News