ಕಾರ್ಗಿಲ್ ಚುನಾವಣಾ ಫಲಿತಾಂಶ: ಬಿಜೆಪಿ ನೀತಿಯ ವಿರುದ್ಧದ ಸ್ಪಷ್ಟ ಸಂದೇಶ

ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ಗೆಲುವು ನಿರೀಕ್ಷಿತವೇ ಆಗಿತ್ತಾದರೂ ಅದು ಇಷ್ಟು ದೊಡ್ಡ ಮಟ್ಟದ್ದಾಗಿರುವುದು ಹೊಸ ಸಂದೇಶವನ್ನೇ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರ ವಿರುದ್ಧ ಮತ್ತು ಆ ರಾಜ್ಯದಿಂದ ಪ್ರತ್ಯೇಕಿಸಿದ್ದರ ವಿರುದ್ಧ ಕಾರ್ಗಿಲ್‌ನಲ್ಲಿ ವ್ಯಾಪಕ ಅಸಮಾಧಾನವನ್ನು ಗಮನಿಸಿದರೆ ಮೈತ್ರಿಕೂಟದ ಗೆಲುವು ಅಚ್ಚರಿಯದ್ದೇನಲ್ಲ.

Update: 2023-10-12 04:18 GMT

ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಹಿಲ್ ಕೌನ್ಸಿಲ್‌ಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು 26 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದಿದೆ. ಆಗಸ್ಟ್ 5, 2019ರ ನಿರ್ಧಾರ ಮತ್ತು ಆನಂತರದ ನೀತಿಗಳನ್ನು ಜನತೆ ಸ್ಪಷ್ಟವಾಗಿ ತಿರಸ್ಕರಿಸಿರುವುದರ ಸಂಕೇತ ಇದೆಂದೇ ವ್ಯಾಖ್ಯಾನಿಸಲಾಗುತ್ತಿದೆ.

ಆರ್ಟಿಕಲ್ 370ರ ಅಡಿಯಲ್ಲಿನ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರ ವಿರುದ್ಧ ಮತ್ತು ಆ ರಾಜ್ಯದಿಂದ ಪ್ರತ್ಯೇಕಿಸಿದ್ದರ ವಿರುದ್ಧ ಕಾರ್ಗಿಲ್‌ನಲ್ಲಿ ವ್ಯಾಪಕ ಅಸಮಾಧಾನವನ್ನು ಗಮನಿಸಿದರೆ ಮೈತ್ರಿಕೂಟದ ಗೆಲುವು ಅಚ್ಚರಿಯದ್ದೇನಲ್ಲ. ನ್ಯಾಷನಲ್ ಕಾನ್ಫರೆನ್ಸ್ 12 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದೆ. ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನಲ್ಲಿ ಬಹುಮತಕ್ಕೆ ಬೇಕಿರುವುದು 16 ಸ್ಥಾನಗಳು ಮಾತ್ರ.

ಬಿಜೆಪಿ ಎರಡು ಸ್ಥಾನಗಳನ್ನಷ್ಟೇ ಗೆದ್ದಿದ್ದರೆ, ಉಳಿದೆರಡು ಸ್ಥಾನಗಳು ಪಕ್ಷೇತರರ ಪಾಲಾಗಿವೆ. 30 ಸದಸ್ಯರ ಹಿಲ್ ಕೌನ್ಸಿಲ್‌ನಲ್ಲಿ-ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿರುವ - ನಾಲ್ಕು ಸ್ಥಾನಗಳು ಸರಕಾರದಿಂದ ನಾಮನಿರ್ದೇಶನಗೊಂಡಿವೆ.

ಆಗಸ್ಟ್ 2019ರಲ್ಲಿ ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ನಂತರ ಕಾರ್ಗಿಲ್‌ನಲ್ಲಿ ನಡೆದ ಮೊದಲ ಚುನಾವಣೆ ಇದಾಗಿತ್ತು.

ಸಾಂಕೇತಿಕ ಚುನಾವಣೆ

ಕಾರ್ಗಿಲ್‌ನ ಜನರು ಆಗಸ್ಟ್ 5, 2019ರ ನಿರ್ಧಾರಗಳನ್ನು ಸ್ವೀಕರಿಸುತ್ತಾರೆಯೇ ಅಥವಾ ತಿರಸ್ಕರಿಸುತ್ತಾರೆಯೇ ಎಂಬುದನ್ನು ತಿಳಿಯಲೆಂದೇ ನಡೆಸಿದಂತಿದ್ದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದವು.

ಕಾರ್ಗಿಲ್ ರಾಜಕೀಯದಲ್ಲಿ ಬಿಜೆಪಿ ಎಂದಿಗೂ ದೊಡ್ಡ ಪಾತ್ರ ವಹಿಸದಿದ್ದರೂ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮೂಲಕ ಮುಟ್ಟಿಸಿದ ಸಂದೇಶ ದೊಡ್ಡದಾಗಿತ್ತು. ಎರಡೂ ಪಕ್ಷಗಳು ಹೊಸದಾಗಿ ರೂಪುಗೊಂಡ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿವೆ ಎಂಬುದು ಕೂಡ ಈ ಹೊತ್ತಿನಲ್ಲಿ ಗಮನೀಯ ಸಂಗತಿ.

ಈ ಫಲಿತಾಂಶವು ಅಪ್ರಜಾಸತ್ತಾತ್ಮಕವಾಗಿ ಮತ್ತು ಅಸಾಂವಿಧಾನಿಕವಾಗಿ ಜಮ್ಮು, ಕಾಶ್ಮೀರ ಮತ್ತು ಲಡಾಖ್ ರಾಜ್ಯವನ್ನು ಅದರ ಜನರ ಒಪ್ಪಿಗೆಯಿಲ್ಲದೆ ವಿಭಜಿಸಿದ ಎಲ್ಲಾ ಶಕ್ತಿಗಳು ಮತ್ತು ಪಕ್ಷಗಳಿಗೆ ಒಂದು ಸಂದೇಶವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

2019ರವರೆಗೆ ಲೇಹ್ ಮತ್ತು ಕಾರ್ಗಿಲ್ ಎರಡರಲ್ಲೂ ಹಿಲ್ ಕೌನ್ಸಿಲ್ ಚುನಾವಣೆಗಳು ಸ್ಥಳೀಯ ವ್ಯವಹಾರಗಳಾಗಿದ್ದವು, ಲಡಾಖ್‌ನ ಗಡಿಯಾಚೆಗೆ ಇವುಗಳ ಪ್ರಭಾವವಿರುತ್ತಿರಲಿಲ್ಲ. ಆದರೆ, ಈ ಚುನಾವಣೆ, ಲಡಾಖ್ ಅನ್ನು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲಾದ, ಆಗಸ್ಟ್ 2019ರ ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಮಹತ್ವ ಪಡೆದಿತ್ತು. ಅನೇಕ ಅಭ್ಯರ್ಥಿಗಳ ಪಾಲಿಗೆ ಹಿಲ್ ಕೌನ್ಸಿಲ್ ಚುನಾವಣೆ ಅಸೆಂಬ್ಲಿ ಚುನಾವಣೆಗೆ ಬದಲಿಯೆಂಬಂತಿತ್ತು.

ನಮ್ಮ ಶಾಸಕರು ನಮ್ಮ ಕಾಳಜಿಯನ್ನು ಎತ್ತುವ ವಿಧಾನಸಭೆ ಈಗ ನಮಗೆ ಇಲ್ಲ. ಆದರೆ ಆಗಸ್ಟ್ 5, 2019ರ ವಿದ್ಯಮಾನದ ಬಗ್ಗೆ ಧ್ವನಿಯೆತ್ತಲು ನಮಗೀಗ ಗೆಲುವು ಸಿಕ್ಕಿದೆ ಎಂಬುದು ನ್ಯಾಷನಲ್ ಕಾನ್ಫರೆನ್ಸ್ ನಾಯಕರ ಅಭಿಪ್ರಾಯವಾಗಿದೆ.

ಮುಸ್ಲಿಮ್ ಬಾಹುಳ್ಯವಿರುವ ಕಾರ್ಗಿಲ್ ಕಾಶ್ಮೀರ ಕಣಿವೆಯೊಂದಿಗೆ ಮತ್ತೆ ಒಂದಾಗಬೇಕೆಂಬ ಆಶಯಕ್ಕೆ ಪಕ್ಷಗಳು ಬದ್ಧವಾಗಿರುವಂತೆ ಕಂಡುಬರುತ್ತಿದೆ. ಕಾರ್ಗಿಲ್ ಫಲಿತಾಂಶಕ್ಕೂ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಮೊದಲ ಚುನಾವಣೆಯ ಫಲಿತಾಂಶಕ್ಕೂ ಗಮನಾರ್ಹ ಹೋಲಿಕೆಯಿದೆ.

ಅಸೆಂಬ್ಲಿ ಚುನಾವಣೆಯ ಅನುಪಸ್ಥಿತಿಯಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿದ್ದರ ವಿರುದ್ಧದ ಆಳವಾದ ಅಸಮಾಧಾನ ಕಾಶ್ಮೀರದಲ್ಲಿ 2020ರ ನವೆಂಬರ್-ಡಿಸೆಂಬರ್‌ನಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ ಫಲಿತಾಂಶಗಳಲ್ಲಿ ವ್ಯಕ್ತವಾಗಿತ್ತು. 2019ರಲ್ಲಿನ ಆ ತೀರ್ಮಾನವನ್ನು ವಿರೋಧಿಸಿದ ಪಕ್ಷಗಳನ್ನು ಮತದಾರರು ಅಗಾಧವಾಗಿ ಬೆಂಬಲಿಸಿದ್ದರು.

ಪರಿಣಾಮಕಾರಿ ಮೈತ್ರಿ

ಈಗಿನ ಫಲಿತಾಂಶಗಳು ತೋರಿಸಿರುವಂತೆ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್‌ನ ಮೈತ್ರಿ ಮಹತ್ವದ ಮತ್ತು ಪರಿಣಾಮಕಾರಿ ಶಕ್ತಿಯಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳಲ್ಲಿ ಶೇ.70ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗೆಯೇ ಕಾಂಗ್ರೆಸ್‌ನ ಶೇ.45ರಷ್ಟು ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಒಂಭತ್ತು ಸ್ಥಾನಗಳಲ್ಲಿ, ಬಿಜೆಪಿಯೊಡನೆ ನೇರ ಸ್ಪರ್ಧೆಯ ಸ್ಥಿತಿ ಕಂಡಾಗ, ಮೈತ್ರಿಕೂಟ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತು ಮತ್ತು ಎಲ್ಲಾ ಒಂಭತ್ತು ಸ್ಥಾನಗಳನ್ನೂ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹಾಗೆಯೇ, ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳನ್ನು ಮೌನವಾಗಿ ಬೆಂಬಲಿಸಲಿದ್ದ ನಾಲ್ಕು ಸ್ಥಾನಗಳಲ್ಲಿ ಕೂಡ ಮೈತ್ರಿಕೂಟ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರವನ್ನು ಅನುಸರಿಸಿತು. ಆ ನಾಲ್ಕೂ ಕ್ಷೇತ್ರಗಳು ಮೈತ್ರಿ ಪಾಲಾಗಿವೆ.

ಆದರೂ, ಗಮನಾರ್ಹವಾದ ಬೌದ್ಧ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರವಾದ ಸ್ಟಾಕ್‌ಚಾಯ್ ಖಂಗ್ರಾಲ್ ಕ್ಷೇತ್ರದಲ್ಲಿ ಜನರ ನಾಡಿಮಿಡಿತವನ್ನು ಗ್ರಹಿಸುವುದು ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಅಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಎರಡೂ ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಜೆಪಿ ಮೊದಲ ಬಾರಿಗೆ ಆ ಸ್ಥಾನವನ್ನು ಗೆದ್ದಿದೆ.

ತಗ್ಗಿದ ಪಕ್ಷೇತರರ ಗೆಲುವು

ಸಾಂಪ್ರದಾಯಿಕವಾಗಿ, ಕಾರ್ಗಿಲ್‌ನಲ್ಲಿನ ಪ್ರತೀ ಗುಡ್ಡಗಾಡು ಕೌನ್ಸಿಲ್ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುತ್ತಿದ್ದರು ಮತ್ತು ಅಂತಿಮವಾಗಿ ವಿವಿಧ ಪಕ್ಷಗಳಿಗೆ ಅವರು ತಮ್ಮ ಬೆಂಬಲವನ್ನು ನೀಡುತ್ತಿದ್ದರು.

ಉದಾಹರಣೆಗೆ 2013ರ ಕಾರ್ಗಿಲ್ ಗಿರಿಧಾಮ ಮಂಡಳಿ ಚುನಾವಣೆಯಲ್ಲಿ ಒಟ್ಟು ಎಂಟು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅದೇ ರೀತಿ 2018ರ ಚುನಾವಣೆಯಲ್ಲಿ ಐದು ಸ್ಥಾನಗಳು ಪಕ್ಷೇತರರ ಪಾಲಾಗಿದ್ದವು. ಆದರೆ, ಈ ಚುನಾವಣೆಯಲ್ಲಿ ಇಬ್ಬರು ಪಕ್ಷೇತರರು ಮಾತ್ರ ಗೆಲುವು ಸಾಧಿಸಿದ್ದಾರೆ.

2019ರಿಂದ ಲೆಫ್ಟಿನೆಂಟ್ ಗವರ್ನರ್ ಮೂಲಕ ಹೊಸದಿಲ್ಲಿಯಿಂದ ನೇರವಾಗಿ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಜಮ್ಮು-ಕಾಶ್ಮೀರದ ಹಳೆಯ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಹೊರಹೊಮ್ಮಿದ್ದು, ಮುಸ್ಲಿಮ್ ಬಹುಸಂಖ್ಯಾತ ಜಿಲ್ಲೆ ಕಾರ್ಗಿಲ್ ರಾಜಕೀಯವಾಗಿ ಬೇರ್ಪಡಿಸಲಾಗದು ಎಂಬುದನ್ನು ತೋರಿಸಿದೆ.

ಬಿಜೆಪಿಯನ್ನು ಕಾರ್ಗಿಲ್ ಜನರು ತಿರಸ್ಕರಿಸಿದ್ದಾರೆ ಎಂದು ಲಡಾಖ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಜಿ ಅಸ್ಗರ್ ಅಲಿ ಕರ್ಬಾಲಿ ಹೇಳಿದ್ದಾರೆ. ಬಿಜೆಪಿ ಮತ್ತು ಅದರ ನೀತಿಗಳು ಇಲ್ಲಿನ ಜನರಿಗೆ ಸ್ವೀಕಾರಾರ್ಹವಲ್ಲ ಎಂಬ ಸಂದೇಶ ಈ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆಯ ಗೆಲುವು ಎಂದು ಹೇಳಿದ್ದು ಫಲಿತಾಂಶಗಳು ಲಡಾಖ್ ಮತ್ತು ಕಾರ್ಗಿಲ್‌ನಲ್ಲಿ ಹೊಸ ಪ್ರಜಾಸತ್ತಾತ್ಮಕ ಉದಯಕ್ಕೆ ನಾಂದಿಯಾಗಿದೆ ಎಂದು ಹೇಳಿದ್ದಾರೆ.

ಕಾರ್ಗಿಲ್ ಹಿಲ್ ಕೌನ್ಸಿಲ್ ಚುನಾವಣೆಯ 26 ಸ್ಥಾನ ಗಳಿಗೆ ಅಕ್ಟೋಬರ್ 4ರಂದು ಮತದಾನ ನಡೆಯಿತು. ಒಟ್ಟು 95,388 ಮತದಾರರಲ್ಲಿ ಸುಮಾರು ಶೇ.78 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 25 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು. ಕೌನ್ಸಿಲ್ ಅಧ್ಯಕ್ಷರಾಗಿದ್ದ ನ್ಯಾಷನಲ್ ಕಾನ್ಫರೆನ್ಸ್‌ನ ಫಿರೋಝ್ ಅಹಮದ್ ಖಾನ್ ಅವರ ಐದು ವರ್ಷಗಳ ಅಧಿಕಾರಾವಧಿ ಈಗಾಗಲೇ ಪೂರ್ಣಗೊಂಡಿತ್ತು.

(ಆಧಾರ:scroll.in)

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಹರೀಶ್ ಎಚ್.ಕೆ.

contributor

Similar News