ಪ್ರಚಾರಕ್ಕಷ್ಟೇ ಸೀಮಿತವಾದ ಅಲ್ಪಸಂಖ್ಯಾತರ ಅಭಿವೃದ್ಧಿ ?
ಬೆಂಗಳೂರು, ಅ.24: ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು, ಜೈನರು, ಸಿಖ್ಖರು ಹಾಗೂ ಪಾರ್ಸಿಗಳ ಜನಸಂಖ್ಯೆ 96,00,475. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸೆ.20ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 1,55,180. ಆದರೆ, ಈ ಪೈಕಿ ಯೋಜನೆಗಳ ಪ್ರಯೋಜನ ಲಭಿಸುವುದು ಕೇವಲ 10,547 ಮಂದಿಗೆ ಮಾತ್ರ.
ಸ್ವಾವಲಂಬಿ ಸಾರಥಿ, ಶ್ರಮ ಶಕ್ತಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ ಹಾಗೂ ಗಂಗಾಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರಿ ಜಾಹೀರಾತುಗಳಲ್ಲಿ ನೀಡುತ್ತಿರುವ ಪ್ರಚಾರದಂತೆ ನಿಜವಾಗಿಯೂ ಈ ಸಮುದಾಯಗಳ ಕಲ್ಯಾಣಕ್ಕಾಗಿ ನ್ಯಾಯಯುತ ಪಾಲು ಈ ಯೋಜನೆಗಳಿಗೆ ನಿಗದಿಪಡಿಸಿರುವ ಗುರಿಯಿಂದ ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
ಸ್ವಾವಲಂಬಿ ಸಾರಥಿ ಯೋಜನೆಯಡಿ ಗೂಡ್ಸ್ ವಾಹನಗಳಿಗೆ 3 ಲಕ್ಷ ರೂ.ವರೆಗೆ ಸಹಾಯಧನ, ಶ್ರಮ ಶಕ್ತಿ ಯೋಜನೆಯಡಿ 50 ಸಾವಿರ ರೂ.ವರೆಗೆ ಸಹಾಯಧನ, ವೃತ್ತಿ ಪ್ರೋತ್ಸಾಹ ಯೋಜನೆಯಡಿ 1 ಲಕ್ಷ ರೂ.ವರೆಗೆ ಸಹಾಯ ಧನ ಹಾಗೂ ಗಂಗಾಕಲ್ಯಾಣ ಯೋಜನೆಯಡಿ ಒಂದು ಘಟಕಕ್ಕೆ ಸುಮಾರು 3 ರಿಂದ 4 ಲಕ್ಷ ರೂ.ವರೆಗೆ ಸಹಾಯಧನ ಸಿಗುತ್ತದೆ.
2023-24ನೇ ಸಾಲಿನಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿ ಸೆ.20ರವರೆಗೆ 23,728 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಇಡೀ ರಾಜ್ಯದಲ್ಲಿ ಕೇವಲ 333 ಮಂದಿಗೆ ಮಾತ್ರ ಈ ಯೋಜನೆಯ ಸೌಲಭ್ಯ ಕಲ್ಪಿಸಲು ಗುರಿ ನೀಡಲಾಗಿದೆ. ಅದೇ ರೀತಿ, ಗಂಗಾ ಕಲ್ಯಾಣ ಯೋಜನೆಯಡಿ 3,386 ಅರ್ಜಿಗಳು ಸಲ್ಲಿಕೆಯಾಗಿವೆ. 714 ಫಲಾನುಭವಿಗಳ ಗುರಿ ನೀಡಲಾಗಿದೆ.
2011ರ ಜನಗಣತಿ ಪ್ರಕಾರ ಅಲ್ಪಸಂಖ್ಯಾತರ ಜನಸಂಖ್ಯೆ
ಬೆಂಗಳೂರು ವಿಭಾಗ:
ಬೆಂಗಳೂರು ನಗರ -18,55,032,
ಬೆಂಗಳೂರು ಗ್ರಾಮಾಂತರ -99,326,
ರಾಮನಗರ-1,22,047,
ಕೋಲಾರ -2,29,492,
ಚಿಕ್ಕಬಳ್ಳಾಪುರ- 1,53,818,
ಚಿತ್ರ ದುರ್ಗ-1,36,110,
ತುಮಕೂರು-2,60,784,
ಶಿವಮೊಗ್ಗ- 2,70,939,
ದಾವಣಗೆರೆ- 2,78,113.
ಗುಲ್ಬರ್ಗ ವಿಭಾಗ:
ರಾಯಚೂರು- 2,89,375,
ಕೊಪ್ಪಳ-1,69,130,
ಬಳ್ಳಾರಿ- 3,44,205,
ಬೀದರ್-4,02,900,
ಗುಲ್ಬರ್ಗ- 5,36,749,
ಯಾದಗಿರಿ-1,73,837.
ಮೈಸೂರು ವಿಭಾಗ:
ಚಿಕ್ಕಮಗಳೂರು- 1,32,236,
ಹಾಸನ-1,42,354,
ಕೊಡಗು- 1,04,919
ಮೈಸೂರು-3,61,778,
ಮಂಡ್ಯ- 90,535,
ದಕ್ಷಿಣ ಕನ್ನಡ-6,84,661,
ಚಾಮರಾಜ ನಗರ-75,162,
ಉಡುಪಿ-1,67,505.
ಬೆಳಗಾವಿ ವಿಭಾಗ:
ಬೆಳಗಾವಿ-7,28,263,
ಬಿಜಾಪುರ-3,81,618,
ಧಾರವಾಡ- 4,46,819,
ಉತ್ತರ ಕನ್ನಡ-2,49,237,
ಹಾವೇರಿ-3,10,654,
ಗದಗ-1,53,400
ಬಾಗಲಕೋಟೆ-2,49,477
2011ರ ಜನಗಣತಿಯಂತೆ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಟ್ಟು ಜನಸಂಖ್ಯೆ 96,00,475 ಆಗಿದೆ.
ಗಂಗಾಕಲ್ಯಾಣ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ದೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯಡಿ ಸಂಪೂರ್ಣ ಸಹಾಯಧನ ಇರುತ್ತದೆ. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರಕಾರವು 4 ಲಕ್ಷ ರೂ.ಗಳನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಿದೆ. ಇತರ ಜಿಲ್ಲೆಗಳಿಗೆ 3 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ.
ಶ್ರಮ ಶಕ್ತಿ ಯೋಜನೆಯಡಿ 73,058 ಅರ್ಜಿಗಳು ಸಲ್ಲಿಕೆಯಾಗಿವೆ. ಗುರಿ 1 ಸಾವಿರ ಮಂದಿಗೆ ಮಾತ್ರ. ಶ್ರಮ ಶಕ್ತಿ(ಮಹಿಳೆ) ಯೋಜನೆಯಡಿ 9,370 ಅರ್ಜಿಗಳು ಸಲ್ಲಿಕೆಯಾಗಿವೆ. ಗುರಿ 1 ಸಾವಿರ ಮಂದಿ ಮಾತ್ರ. ವೃತ್ತಿ ಪ್ರೋತ್ಸಾಹ ಯೋಜನೆಯಡಿ 39,167 ಅರ್ಜಿಗಳು ಸಲ್ಲಿಕೆಯಾಗಿವೆ. ಗುರಿ 1 ಸಾವಿರ ಫಲಾನುಭವಿಗಳು ಮಾತ್ರ.
ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ನೀಡುವ ಸಾಲ ಸೌಲಭ್ಯಕ್ಕಾಗಿ 44 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೆ ಎಷ್ಟು ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಸೌಲಭ್ಯ ಒದಗಿಸಬೇಕು ಎಂಬ ಗುರಿ ನಿಗದಿಪಡಿಸಿಲ್ಲ. ಸಮುದಾಯ ಆಧಾರಿತ ತರಬೇತಿ ಕಾರ್ಯಕ್ರಮದಡಿಯೂ 111 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಗುರಿ ಇನ್ನೂ ನಿಗದಿ ಮಾಡಿಲ್ಲ. ಹೀಗೆ ಒಟ್ಟಾರೆ ಈ ಎಲ್ಲ ಯೋಜನೆಗಳಿಗೆ ಸಂಬಂಧಿಸಿದಂತೆ 1,55,180 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈ ಪೈಕಿ ಸೌಲಭ್ಯ ಸಿಗುವುದು 10,547 ಫಲಾನುಭವಿಗಳಿಗೆ ಮಾತ್ರ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತ ಸಮುದಾಯಗಳ ಕೊಡುಗೆ ದೊಡ್ಡಮಟ್ಟದಲ್ಲಿದೆ. ಅವರಿಗೂ, ಸರಕಾರದ ಬಜೆಟ್‌ನಲ್ಲಿ ನ್ಯಾಯಯುತ ಪಾಲು ಸಿಗಬೇಕು. ಕೆಎಂಡಿಸಿ ಘೋಷಿಸಿರುವ ಈ ಯೋಜನೆಗಳ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ನೀಡಲಾಗುತ್ತಿದೆ. ಆದರೆ, ಅವುಗಳನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ಸುಮಾರು ೧ ಕೋಟಿಯಷ್ಟಿರುವ ಅಲ್ಪಸಂಖ್ಯಾತರ ಜನಸಂಖ್ಯೆಗೆ ಹೋಲಿಸಿದರೆ ಶೇ.೧-೨ರಷ್ಟು ಜನರಿಗೂ ಇವುಗಳ ಲಾಭ ಸಿಗುವಂತೆ ಕಾಣುತ್ತಿಲ್ಲ. ಅಲ್ಪಸಂಖ್ಯಾತರನ್ನು ಜಾಹೀರಾತುಗಳ ಮೂಲಕ ಸಂತೋಷಪಡಿಸುವ ಕೆಲಸ ಮಾಡಿದಂತೆ ಕಾಣುತ್ತಿದೆ. ಕೆಎಂಡಿಸಿ ವತಿಯಿಂದ ನಿಗದಿಪಡಿಸಿರುವ ಗುರಿ ಅತ್ಯಂತ ಖಂಡನೀಯ. ಸರಕಾರ ಅಲ್ಪಸಂಖ್ಯಾತರನ್ನು ಮೋಸ ಮಾಡದೆ, ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಿ, ಘೋಷಿಸಿರುವ ಯೋಜನೆಗಳನ್ನು ಪರಿಷ್ಕರಣೆ ಮಾಡಲಿ.
- ತಾಹೀರ್ ಹುಸೇನ್,
ರಾಜ್ಯಾಧ್ಯಕ್ಷ, ವೆಲ್ಫೇರ್ ಪಾರ್ಟಿ