ಲಿಂಗ ತಾರತಮ್ಯಕ್ಕೆ ನೈಜಕಾರಣದ ಹುಡುಕಾಟಕ್ಕೆ ನೊಬೆಲ್

ನಿಜ, ಆಕೆಯ ಅಧ್ಯಯನ ಬಹುತೇಕ ಅಮೆರಿಕಕ್ಕೆ ಸೀಮಿತವಾಗಿದೆ. ಎಲ್ಲಾ ದೇಶಗಳು ಅಮೆರಿಕದಂತೆ ಅಭಿವೃದ್ಧಿ ಹೊಂದಿಲ್ಲ. ಆದರೆ ಈ ಮಾದರಿಯ ಅಧ್ಯಯನದಿಂದ ಈವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೊಸ ಆಯಾಮವೊಂದರ ಸೇರ್ಪಡೆ ಅರ್ಥಶಾಸ್ತ್ರಕ್ಕೆ ಆಗುತ್ತದೆ. ಅರ್ಥಶಾಸ್ತ್ರದ ಅಧ್ಯಯನದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಮುನ್ನೆಲೆಗೆ ತರುತ್ತಿರುವ ಗೋಲ್ಡಿನ್ ಅಂತಹವರ ಪ್ರಯತ್ನ ಶ್ಲಾಘನೀಯವಾದದ್ದು. ನೊಬೆಲ್ ಸಮಿತಿ ತನ್ನ ಸೀಮಿತ ಚಿಂತನೆಯಿಂದ ಹೊರಬರುತ್ತಿರುವ ಭರವಸೆಯನ್ನು ಮೂಡಿಸುತ್ತದೆ.

Update: 2023-10-15 05:16 GMT

ಕ್ಲಾಡಿಯಾ ಗೋಲ್ಡಿನ್ Photo: twitter/NobelPrize

ಈಬಾರಿಯ ನೊಬೆಲ್ ಪ್ರಶಸ್ತಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕ್ಲಾಡಿಯಾ ಗೋಲ್ಡಿನ್ ಅವರಿಗೆ ಸಂದಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ತಾರತಮ್ಯವನ್ನು ಕುರಿತ ಅವರ ಅಧ್ಯಯನಕ್ಕೆ ಈ ಬಹುಮಾನ ದೊರೆತಿದೆ. ಅರ್ಥಶಾಸ್ತ್ರವನ್ನು ಮಹಿಳೆಯರ ದೃಷ್ಟಿಕೋನದಿಂದ ನೋಡುವುದಕ್ಕೆ ಅವಕಾಶವಿರಬೇಕೆಂಬ ಧ್ವನಿ ಏರುತ್ತಿರುವ ಸಮಯದಲ್ಲಿ ಗೋಲ್ಡಿನ್ ಅವರಿಗೆ ಪ್ರಶಸ್ತಿ ಬಂದಿರುವುದು ಸಂತಸದ ವಿಷಯ.

ಆಕೆ ಮೂಲತಃ ಕಾರ್ಮಿಕ ಅರ್ಥಶಾಸ್ತ್ರಜ್ಞೆ. ಜೊತೆಗೆ ಅರ್ಥಶಾಸ್ತ್ರದ ಇತಿಹಾಸತಜ್ಞೆ. ಆಕೆ ತನ್ನ ಅಧ್ಯಯನದಲ್ಲಿ ಎರಡೂ ಕ್ಷೇತ್ರಗಳನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಗೋಲ್ಡಿನ್ ಮಹಿಳಾ ಕಾರ್ಮಿಕ ಮಾರುಕಟ್ಟೆಯಲ್ಲಿ ಕಳೆದ 200 ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ಅಧ್ಯಯನ ಮಾಡಿದ್ದಾರೆ. ಅದು ನಿಜವಾಗಿ ತೀರಾ ಸವಾಲಿನ ಕೆಲಸ. ಯಾಕೆಂದರೆ ಇನ್ನೂರು ವರ್ಷಗಳ ಹಿಂದಿನ ಅಂಕಿ ಅಂಶಗಳು ಸಿಗುವುದು ಸುಲಭವಲ್ಲ. ಜೊತೆಗೆ ಆಕೆ ಈ ಕೆಲಸವನ್ನು 30 ವರ್ಷಗಳ ಹಿಂದೆ ಪ್ರಾರಂಭಿಸಿದ್ದು ಆಗ ಕಂಪ್ಯೂಟರ್ ಇತ್ಯಾದಿ ಸೌಲಭ್ಯಗಳು ಈಗಿರುವಂತೆಲ್ಲಾ ಇರಲಿಲ್ಲ. ಒಂದರ್ಥದಲ್ಲಿ ಪತ್ತೆದಾರಿಣಿಯಂತೆ ಕೆಲಸ ಮಾಡಿದ್ದಾರೆ.

ಕಾರ್ಮಿಕರ ವರಮಾನದಲ್ಲಿ ಪುರುಷರು ಹಾಗೂ ಮಹಿಳೆಯರ ನಡುವೆ ಸಾಕಷ್ಟು ತಾರತಮ್ಯಗಳಿವೆ. ಜಾಗತಿಕವಾಗಿ ಕಾರ್ಮಿಕರ ಮಾರುಕಟ್ಟೆಯಲ್ಲಿ ದುಡಿಯುತ್ತಿರುವ ಮಹಿಳೆಯರ ಸಂಖ್ಯೆ ಶೇ.50. ಹಾಗೆ ದುಡಿಯುತ್ತಿರುವ ಪುರುಷರ ಸಂಖ್ಯೆ ಶೇ.80. ಲಿಂಗಾಧಾರಿತ ಅಂತರ ಶೇ.30ರಷ್ಟಿದೆ. ಅಷ್ಟೇ ಅಲ್ಲ ಈ ಅಂತರ ವರಮಾನದಲ್ಲೂ ತೀವ್ರವಾಗಿದೆ. ಜಾಗತಿಕ ಮಟ್ಟದಲ್ಲಿ ನೋಡಿದರೆ ಪುರುಷರಿಗಿಂತ ಮಹಿಳೆಯರ ವರಮಾನ ಶೇ.13ರಷ್ಟು ಕಡಿಮೆ ಇದೆ. ಎಷ್ಟೋ ದೇಶಗಳಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಗಂಡಸರಿಗಿಂತ ಮುಂದಿದ್ದರೂ ಈ ಅಂತರ ಉಳಿದೇ ಇದೆ. ಹಿಂದುಳಿದ ದೇಶಗಳಿಗೆ ಹೋಲಿಸಿದರೆ ಶ್ರೀಮಂತ ರಾಷ್ಟ್ರಗಳಲ್ಲಿ ಈ ಅಂತರ ಕಡಿಮೆ ಇದ್ದರೂ, ಅಂತರ ಇರುವುದು ನಿಜ. ಹಾಗೆಯೇ ಐವತ್ತೋ ನೂರೋ ವರ್ಷಕ್ಕೆ ಹೋಲಿಸಿದರೆ ಈಗ ಈ ಅಂತರ ಕಡಿಮೆಯಾಗಿರುವುದು ನಿಜ. ಆದರೆ ಸುಧಾರಣೆ ತೀರಾ ನಿಧಾನವಾಗಿ ಆಗುತ್ತಿದೆ.

ಗೋಲ್ಡಿನ್ ಅವರ ಚಾರಿತ್ರಿಕ ಅಧ್ಯಯನ ಇದಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಗಂಭೀರವಾಗಿ ಪ್ರಯತ್ನಿಸಿದೆ. ಚರಿತ್ರೆಯಲ್ಲಿ ಆಗಿರುವ ಬದಲಾವಣೆಗೆ ಕಾರಣವನ್ನು ಕಂಡುಕೊಳ್ಳುವುದರ ಜೊತೆಗೆ ಭವಿಷ್ಯದಲ್ಲಿ ಸಾಗಬಹುದಾದ ದಾರಿಯ ಬಗ್ಗೆಯೂ ಹೊಳಹನ್ನು ನೀಡುತ್ತದೆ. ಅವು ಸಾಮಾಜಿಕ ಅಡ್ಡಿಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ಹೇಗೆ ಚಾರಿತ್ರಿಕವಾಗಿ ಪರಿಹಾರಗೊಂಡಿವೆ ಅನ್ನುವುದರ ಬಗ್ಗೆಯೂ ನಮ್ಮ ಅರಿವನ್ನು ಹಿಗ್ಗಿಸುತ್ತದೆ. ಗೋಲ್ಡಿನ್ ತಾನು ಸಂಗ್ರಹಿಸಿರುವ ಮಾಹಿತಿಯನ್ನು ಬಳಸಿಕೊಂಡು ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಹಾಗೂ ವರಮಾನದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಅದಕ್ಕೆ ಇರಬಹುದಾದ ಕಾರಣಗಳನ್ನು ನಮ್ಮ ಮುಂದಿಟ್ಟಿದ್ದಾರೆ.

1980ರಲ್ಲಿ ಗೋಲ್ಡಿನ್ ಅವರು ನಡೆಸಿದ ಅಧ್ಯಯನ ಆವರೆಗೆ ಚಾಲ್ತಿಯಲ್ಲಿದ್ದ ಹಲವು ನಂಬಿಕೆಗಳನ್ನು ಬುಡಮೇಲು ಮಾಡಿದೆ. ಉದಾಹರಣೆಗೆ ಆರ್ಥಿಕತೆ ಹೆಚ್ಚು ಕೈಗಾರಿಕೀಕರಣಗೊಂಡಂತೆ, ಅದರ ಗಾತ್ರ ಬೆಳೆದಂತೆಲ್ಲಾ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ ಎಂದು ನಂಬಲಾಗಿತ್ತು. ಅಂದರೆ ಆರ್ಥಿಕತೆ ಬೆಳೆದರೆ ಸಾಕು ಹೆಚ್ಚೆಚ್ಚು ಮಹಿಳೆಯರು ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸುತ್ತಾರೆ, ಅವರ ವರಮಾನ ಸುಧಾರಿಸುತ್ತದೆ ಇತ್ಯಾದಿ ನಂಬಿಕೆಗಳಿದ್ದವು. ಗೋಲ್ಡಿನ್ ಇದೊಂದು ಮಿಥ್ಯೆ ಅಂತ ತೋರಿಸಿದರು. ಎರಡು ಶತಮಾನಗಳ ಅಮೆರಿಕದ ಅಂಕಿಅಂಶಗಳ ಆಧಾರದ ಮೇಲೆ ಗೋಲ್ಡಿನ್ ಕಾರ್ಮಿಕರ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹಾಗೂ ಆರ್ಥಿಕ ಬೆಳವಣಿಗೆಯ ನಡುವಿನ ಸಂಬಂಧ U ಆಕಾರದಲ್ಲಿ ಸಾಗಿದೆ ಎಂದು ತೋರಿಸಿದರು. ಅಂದರೆ ಕಾರ್ಮಿಕರ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಮೊದಲು ಕಡಿಮೆಯಾಯಿತು. ಕ್ರಮೇಣ ಮತ್ತೆ ಹೆಚ್ಚಿರುವುದನ್ನು ನೋಡಬಹುದು.

ಆಕೆಯ ಸಂಶೋಧನೆಯ ಪ್ರಕಾರ 1790ರಲ್ಲಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದ ವಿವಾಹಿತ ಮಹಿಳೆಯರ ಸಂಖ್ಯೆ ಶೇ.60ರಷ್ಟಿತ್ತು. ಆಗ ಅಮೆರಿಕದ ಆರ್ಥಿಕತೆ ಬಹುತೇಕ ಕೃಷಿಯನ್ನು ಆದರಿಸಿತ್ತು. ಆರ್ಥಿಕ ಬೆಳವಣಿಗೆ ಕಮ್ಮಿ ಇದ್ದ ಬಹುತೇಕ ದೇಶಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಿತ್ತು. ಆಗ ಕೃಷಿಯಲ್ಲಿ ಅದರಲ್ಲೂ ಹೆಚ್ಚಾಗಿ ಕುಟುಂಬದ ತೋಟಗಳಲ್ಲಿ ವೇತನವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದರು. ಕೈಗಾರಿಕೀಕರಣ ಪ್ರಾರಂಭವಾಗಿ, 1890ರ ವೇಳೆಗೆ ಹೊಸ ತಂತ್ರಜ್ಞಾನ ಬರುತ್ತಿದ್ದಂತೆ ವರಮಾನ ಹೆಚ್ಚುತ್ತಿದ್ದಂತೆ ಮಹಿಳೆಯರು ದುಡಿಮೆಯಿಂದ ಹಿಂದೆ ಸರಿದು, ಮನೆಯ ಕೆಲಸಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಲು ಪ್ರಾರಂಭಿಸಿದರು. ಆಗ ಕೃಷಿಯಿಂದ ಕೈಗಾರಿಕೆಯ ಕಡೆಗೆ ಚಲನೆ ಪ್ರಾರಂಭವಾಗಿತ್ತು. ಮಹಿಳೆಯರು ಕಾರ್ಖಾನೆಗಳಲ್ಲಿ ಕೆಲಸ ಮಾಡಬೇಕಾಯಿತು. ಕಾರ್ಖಾನೆಗಳಲ್ಲಿ ಕೆಲಸದ ವಾತಾವರಣ ಅಷ್ಟು ಚೆನ್ನಾಗಿರಲಿಲ್ಲ. ಮದುವೆಯಾದ ಮೇಲೆ ಇಂತಹ ಕಡೆ ಕೆಲಸ ಮಾಡುವುದನ್ನು ತಿರಸ್ಕಾರದಿಂದ ನೋಡಲಾಗುತ್ತಿತ್ತು. ಜೊತೆಗೆ ಹೊರಗೆ ಕೆಲಸಕ್ಕೆ ಹೋದರೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? ಅನ್ನುವ ಸಮಸ್ಯೆಯೂ ಇತ್ತು. ಮಹಿಳೆಯರು ದುಡಿಯುವ ಸಮಯವೇನೂ ಕಮ್ಮಿಯಾಗಲಿಲ್ಲ. ಆದರೆ ಹೊರಗೆ ದುಡಿಯುವುದು ಕಡಿಮೆಯಾಯಿತು. ಅದನ್ನು ಗೋಲ್ಡಿನ್ ‘ಆದಾಯದ ಪರಿಣಾಮ’ ಅಂತ ಕರೆದರು.

1900ರ ಪ್ರಾರಂಭದಲ್ಲಿ ಶೈಕ್ಷಣಿಕ ಮಟ್ಟ, ವೈಜ್ಞಾನಿಕ ಬೆಳವಣಿಗೆ (ವಿಶೇಷವಾಗಿ ಗರ್ಭನಿರೋಧಕ ಗುಳಿಗೆಗಳ ಆವಿಷ್ಕಾರ), ಸಾಮಾಜಿಕ ರೂಢಿಗಳು ವಿಕಾಸಗೊಂಡಂತೆ ಮಹಿಳೆಯರು ಮತ್ತೆ ವೇತನದ ಕೆಲಸಗಳಿಗೆ ಬರಲು ಪ್ರಾರಂಭಿಸಿದರು. ಆಗ ಸೇವಾಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳತೊಡಗಿದವು. ತಂತ್ರಜ್ಞಾನದ ಬೆಳೆವಣಿಗೆ, ಗರ್ಭನಿರೋಧಕ ಮಾತ್ರೆಗಳು, ಶಿಕ್ಷಣ ಹೀಗೆ ಹಲವು ಅಂಶಗಳು ಮಹಿಳೆಯನ್ನು ಮತ್ತೆ ಕಾರ್ಮಿಕ ಮಾರುಕಟ್ಟೆಗೆ ಮರಳಿ ತಂದವು. ಮಹಿಳೆಯರು ಪುರುಷರಷ್ಟೇ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದರು. ಆದರೂ ಮಹಿಳೆಯರ ಆದಾಯ ಪುರಷರಿಗಿಂತ ಕಡಿಮೆಯೇ ಇದೆ. ಯಾಕೆ ಈ ಅಂತರ?

ವೇತನದಲ್ಲೇಕೆ ತಾರತಮ್ಯವಿದೆ?

ಅವರಿಬ್ಬರೂ ಮಾಡುವ ಕೆಲಸಗಳಲ್ಲಿ ಇರುವ ವ್ಯತ್ಯಾಸ ಇದಕ್ಕೆ ಒಂದು ಕಾರಣ ಅನ್ನುತ್ತಾರೆ ಗೋಲ್ಡಿನ್. ಮಹಿಳೆಯರು ‘ಸ್ತ್ರೀಯರ ಕೆಲಸ’ ಅಂತ ಕರೆಸಿಕೊಳ್ಳುವ ಕೆಲಸಗಳಲ್ಲೇ ಹೆಚ್ಚೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಅವುಗಳಿಗೆ ಸಿಗುವ ವೇತನ ಕಡಿಮೆ. ಗೋಲ್ಡಿನ್ ಹೇಳುವಂತೆ ಪ್ರಾರಂಭದ ಹಂತದ ಕೆಲಸಗಳಲ್ಲಿ ವೇತನದಲ್ಲಿ ಅಂತಹ ವ್ಯತ್ಯಾಸವಿಲ್ಲ. ಮೇಲ್ಸ್ತರದ ಕೆಲಸಗಳತ್ತ ಹೋದಂತೆಲ್ಲಾ ವೇತನ ಹೆಚ್ಚುತ್ತಾ ಹೋಗುತ್ತದೆ. ಅಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ. ರಾತ್ರಿ ಹೊತ್ತು ಮೀಟಿಂಗ್ಗಳು ಇರುತ್ತವೆ. ಹೆಚ್ಚು ಪ್ರಯಾಣಿಸಬೇಕಾಗುತ್ತದೆ. ಅಂತಹ ಕೆಲಸಗಳಿಗೆ ಹೆಚ್ಚಿನ ವೇತನ ಹಾಗೂ ಉತ್ತೇಜನ ಸಿಗುತ್ತದೆ. ಅದನ್ನು ಆಕೆ ‘ಗ್ರೀಡಿ (ದುರಾಸೆಯ) ಕೆಲಸಗಳು’ ಅನ್ನುತ್ತಾರೆ. ಇಬ್ಬರೂ ದುಡಿಯುತ್ತಿರುವ ಕುಟುಂಬಗಳಲ್ಲಿ ಒಬ್ಬರಿಗಷ್ಟೇ ಅಂತಹ ಕೆಲಸಗಳಿಗೆ ಹೋಗುವುದಕ್ಕೆ ಸಾಧ್ಯ. ಮತ್ತೊಬ್ಬರು ಮಕ್ಕಳನ್ನು ನೋಡಿಕೊಳ್ಳುವ, ಓದಿಸುವ, ಆಟಕ್ಕೆ, ಸಂಗೀತಕ್ಕೆ, ವೈದ್ಯರ ಬಳಿ ಕರೆದುಕೊಂಡುಹೋಗುವ ‘ಅಮ್ಮನ ಕೆಲಸ’ ಮಾಡಬೇಕಾಗುತ್ತದೆ.

ಅದನ್ನು ಇಬ್ಬರಲ್ಲಿ ಯಾರು ಬೇಕಾದರೂ ಮಾಡಬಹುದಿತ್ತು. ಆದರೆ ಸಾಮಾನ್ಯವಾಗಿ ಗ್ರೀಡಿ ಕೆಲಸಗಳು ಗಂಡಸಿಗೆ ಹೋಗುತ್ತದೆ. ಹೆಂಗಸಿಗೆ ಅಮ್ಮನ ಕೆಲಸ ಸಿಗುತ್ತದೆ. ಇದು ಇಬ್ಬರ ವೇತನದಲ್ಲಿ ಅಂತರ ಹೆಚ್ಚುವುದಕ್ಕೆ ಮುಖ್ಯ ಕಾರಣ ಅನ್ನುತ್ತಾರೆ ಗೋಲ್ಡಿನ್. ಹಾಗಾಗಿ ಪರಿಹಾರ ಇರುವುದು ಕಾರ್ಮಿಕ ಮಾರುಕಟ್ಟೆಯಲ್ಲಿ ಕೆಲಸ ಹಾಗೂ ವೇತನದ ಸ್ವರೂಪವನ್ನು ಬದಲಿಸುವುದರಲ್ಲಿ. ಹೆಚ್ಚು ಹೊತ್ತು ಕೆಲಸ ಮಾಡುವವರು ಹಾಗೂ ನಿರ್ದಿಷ್ಟ ಹೊತ್ತಿನಲ್ಲಿ ಕೆಲಸ ಮಾಡುವವರಿಗೆ ಅತಿಯಾದ ವೇತನವನ್ನು ಕೊಡುವ ಮೂಲಕ ಉತ್ತೇಜಿಸುವ ಪರಿಪಾಠವನ್ನು ಬಿಡಬೇಕು. ಅಂತಹ ಬದಲಾವಣೆ ಕೆಲವು ಕ್ಷೇತ್ರಗಳಲ್ಲಿ ತಂತ್ರಜ್ಞಾನ, ವಿಜ್ಞಾನ, ಆರೋಗ್ಯ ಇಂತಹ ಕೆಲವು ಕ್ಷೇತ್ರಗಳಲ್ಲಿ ಆಗಿದೆ. ಕಾರ್ಪೊರೇಟ್, ಕಾನೂನು ಹಾಗೂ ಹಣಕಾಸಿನ ಕ್ಷೇತ್ರಗಳಲ್ಲಿ ಆಗಬೇಕಾಗಿದೆ.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಕೇವಲ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ ದೇಶದ ಸಮೃದ್ಧಿಯ ದೃಷ್ಟಿಯಿಂದಲೂ ಮುಖ್ಯ. ಜನರಿಗೆ ಅವರ ನಿಪುಣತೆಗೆ ತಕ್ಕುದಾದ ಕೆಲಸವನ್ನು ವಹಿಸದೇ ಹೋದರೆ ಶ್ರಮದ ವಿತರಣೆ ಪರಿಣಾಮಕಾರಿಯಾಗಿ ಇರುವುದಿಲ್ಲ. ಅದರಿಂದ ಆರ್ಥಿಕತೆಗೆ ಹೊರೆಯಾಗುತ್ತದೆ. ಉತ್ತಮ ಕೌಶಲವಿರುವ ಮಹಿಳೆಯರನ್ನು ಉತ್ಪಾದನೆಯಲ್ಲಿ ತೊಡಗಿಸದೇ ಇದ್ದರೆ ಆರ್ಥಿಕತೆಯ ಪರಿಣಾಮಕಾರಿತ್ವವೂ ಕಡಿಮೆಯಾಗುತ್ತದೆ. ಹಾಗಾಗಿ ಈ ಲಿಂಗಾಧಾರಿತ ಅಂತರವನ್ನು ಕಡಿಮೆ ಮಾಡುವುದು ಜಾಗತಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಭಾರತವೂ ಈಕೆಯ ಅಧ್ಯಯನದಿಂದ ಸಾಕಷ್ಟು ಕಲಿಯಬೇಕಾಗಿದೆ.

ನಿಜ, ಆಕೆಯ ಅಧ್ಯಯನ ಬಹುತೇಕ ಅಮೆರಿಕಕ್ಕೆ ಸೀಮಿತವಾಗಿದೆ. ಎಲ್ಲಾ ದೇಶಗಳು ಅಮೆರಿಕದಂತೆ ಅಭಿವೃದ್ಧಿ ಹೊಂದಿಲ್ಲ. ಆದರೆ ಈ ಮಾದರಿಯ ಅಧ್ಯಯನದಿಂದ ಈವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೊಸ ಆಯಾಮವೊಂದರ ಸೇರ್ಪಡೆ ಅರ್ಥಶಾಸ್ತ್ರಕ್ಕೆ ಆಗುತ್ತದೆ. ಅರ್ಥಶಾಸ್ತ್ರದ ಅಧ್ಯಯನದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಮುನ್ನೆಲೆಗೆ ತರುತ್ತಿರುವ ಗೋಲ್ಡಿನ್ ಅಂತಹವರ ಪ್ರಯತ್ನ ಶ್ಲಾಘನೀಯವಾದದ್ದು. ನೊಬೆಲ್ ಸಮಿತಿ ತನ್ನ ಸೀಮಿತ ಚಿಂತನೆಯಿಂದ ಹೊರಬರುತ್ತಿರುವ ಭರವಸೆಯನ್ನು ಮೂಡಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಟಿ.ಎಸ್. ವೇಣುಗೋಪಾಲ್

contributor

Similar News