ಬಿಜೆಪಿ ಸರಕಾರದ ಅವಧಿಯಲ್ಲಿ ಸಂಬಂಧವೇ ಇಲ್ಲದವರಿಗೆ ಬೆಳೆ ನಷ್ಟ ಪರಿಹಾರ ಪಾವತಿ

Update: 2024-07-22 04:43 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯ ಬೆಳೆ ನಷ್ಟ ಪರಿಹಾರ ಪಾವತಿಯಲ್ಲಿಯೂ ಬಹು ಕೋಟಿ ರೂ. ಅಕ್ರಮ ನಡೆದಿತ್ತು. ಸಂತ್ರಸ್ತ ರೈತರಿಗೆ ತಲುಪಬೇಕಿದ್ದ ಬೆಳೆ ನಷ್ಟದ ಪರಿಹಾರ ಮೊತ್ತವು ಸಂಬಂಧವೇ ಇಲ್ಲದವರಿಗೆ ಪಾವತಿಯಾಗಿತ್ತು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ರೂ. ಹಗರಣವನ್ನು ಮುಂದಿರಿಸಿ ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿಯು, ತನ್ನದೇ ಸರಕಾರದ ಅವಧಿಯಲ್ಲಿ ಬೆಳೆ ನಷ್ಟದ ಪರಿಹಾರದಲ್ಲಿಯೂ ಸಂಬಂಧವೇ ಇಲ್ಲದ ಅನ್ಯ ಖಾತೆದಾರರ ಖಾತೆಗೆ ಕೋಟ್ಯಂತರ ರೂ. ಪಾವತಿ ಮಾಡಿರುವ ಪ್ರಕರಣಗಳು ಇದೀಗ ಮುನ್ನೆಲೆಗೆ ಬಂದಿದೆ.

ವಿಶೇಷ ಎಂದರೇ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಪ್ರಕರಣವನ್ನು ಮುಂದಿರಿಸಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕಂದಾಯ ಸಚಿವರಾಗಿದ್ದಾಗಿನ ಅವಧಿಯಲ್ಲಿಯೇ ಬೆಳೆ ನಷ್ಟ ಪರಿಹಾರದಲ್ಲಿ ಅಕ್ರಮ ನಡೆದಿತ್ತು. ಈ ಪ್ರಕರಣದ ಕುರಿತು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದರೇ 2024ರ ಫೆ.2ರಂದು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದರ ಪ್ರತಿಯು "The-file.iಟಿ"ಗೆ ಲಭ್ಯವಾಗಿದೆ.

ಮತ್ತೊಂದು ವಿಶೇಷ ಎಂದರೇ ಇದೇ ಪ್ರಕರಣದ ಕುರಿತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನೂ (ಪ್ರಶ್ನೆ ಸಂಖ್ಯೆ;308) ಕೇಳಿದ್ದಾರೆ. ಇದಕ್ಕೆ ಕಂದಾಯ ಇಲಾಖೆಯು ಸಿದ್ಧಪಡಿಸಿರುವ ಉತ್ತರದಲ್ಲಿ ಕಡೂರು ತಾಲೂಕಿನಲ್ಲಿ ನಡೆದಿರುವ ಅಕ್ರಮ ಪ್ರಕರಣದ ಕುರಿತಾದ ಮಾಹಿತಿ ಇದೆ.

ಪ್ರಕರಣದ ಹಿನ್ನೆಲೆ: ಕಡೂರು ತಾಲೂಕಿನ ಅಜ್ಜಂಪುರ ಠಾಣೆ ವ್ಯಾಪ್ತಿಯ ಕಲ್ಕೆರೆ ಗ್ರಾಪಂನ ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಎಂಬವರು 2022ರ ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಸರಕಾರದಿಂದ ಮಂಜೂರಾಗಿದ್ದ ಒಟ್ಟು ಬೆಳೆ ಪರಿಹಾರದ ಪೈಕಿ 2.01 ಕೋಟಿ ರೂ.ನಷ್ಟು ಮೊತ್ತವನ್ನು ಸಂಬಂಧವಿಲ್ಲದ ಅನ್ಯ ಖಾತೆದಾರರಿಗೆ ಪಾವತಿಸಿದ್ದರು.

ಕಡೂರು ತಾಲೂಕು ಚೌಳ ಹಿರಿಯೂರು ಹೋಬಳಿಯ ಅಂತರಘಟ್ಟೆ ಹಾಗೂ ಕಲ್ಕೆರೆ ವೃತ್ತಗಳ ಪೈಕಿ ಬರುವ ಒಟ್ಟು 13 ಗ್ರಾಮಗಳ 651 ಪ್ರಕರಣಗಳಲ್ಲಿ 2.01 ಕೋಟಿ ರೂ.ಯಷ್ಟು ಮೊತ್ತವನ್ನು ಸಂಬಂಧವಿಲ್ಲದ ಅನ್ಯ ಖಾತೆದಾರರಿಗೆ ಪಾವತಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಅವರು ತಮ್ಮ ಲಾಗಿನ್‌ಅನ್ನು ದುರುಪಯೋಗಪಡಿಸಿಕೊಂಡು ಈ ಹಣವನ್ನು ಅನ್ಯ ಖಾತೆದಾರರಿಗೆ ಪಾವತಿಸಿದ್ದರು. ಈ ಮೂಲಕ ರೈತರಿಗೆ ಮತ್ತು ಸರಕಾರಕ್ಕೆ ವಂಚಿಸಿ ಮೋಸ ಮಾಡಿದ್ದರು. ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರ ಪ್ರಾಥಮಿಕ ಪರಿಶೀಲನಾ ವರದಿಯಿಂದ ಮೇಲ್ನೋಟಕ್ಕೆ ಕಂಡುಬಂದಿತ್ತು. ಇವರ ವಿರುದ್ಧ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

2022-2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆನಷ್ಟ ಹೊಂದಿರುವ ರೈತರಿಗೆ 651 ಪ್ರಕರಣಗಳಲ್ಲಿ 2.01 ಕೋಟಿ ರೂ.ಗಳನ್ನು ಪಾವತಿಸದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ನೌಕರನ ಲಾಗಿನ್ ದುರುಪಯೋಗಪಡಿಸಿಕೊಂಡಿದ್ದರು. ಇವರ ವಿರುದ್ಧ ಐಪಿಸಿ 468, 471, 420, 409 ಅನ್ವಯ ಪ್ರಕರಣ ದಾಖಲಾಗಿತ್ತು.

ಕಂದಾಯ ಇಲಾಖೆಯ ಉತ್ತರದಲ್ಲೇನಿದೆ?: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಕೆರೆ ಗ್ರಾಪಂನಲ್ಲಿ 2022-23ನೇ ಸಾಲಿನ ಬೆಳೆ ಹಾನಿ ಪರಿಹಾರವನ್ನು ನಕಲಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಆಧರಿಸಿ ಹಣ ಪಾವತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ಉಪ ವಿಭಾಗದ ಉಪ ವಿಭಾಗಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಜಂಟಿ ತನಿಖೆ ನಡೆದಿತ್ತು.

ಈ ಪ್ರಕರಣದ ಪೂರ್ಣ ತನಿಖಾ ವರದಿಯನ್ನು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಇಲಾಖೆಯ ಅಧಿಕಾರಿಗಳನ್ನು ಗುರುತಿಸಿ ವರದಿ ಸಲ್ಲಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರಿಗೆ ಇಲಾಖೆಯು ಸೂಚಿಸಿದೆ.

ಅಕ್ರಮವಾಗಿ ಬೆಳೆ ಪರಿಹಾರ ಮೊತ್ತವನ್ನು ಅನ್ಯ ಖಾತೆದಾರರಿಗೆ ಪಾವತಿಸಿರುವ ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯು ಉತ್ತರ ನೀಡಲಿದೆ ಎಂದು ಗೊತ್ತಾಗಿದೆ.

ಬಡ ರೈತರಿಗೆ ಪರಿಹಾರ ಹಣ ವಿತರಣೆಯಲ್ಲಿಯೂ ಅಕ್ರಮದ ವಾಸನೆ ಬಡಿದಿದೆ. ಪರಿಹಾರ ಹಣ ವಿತರಣೆಗೆ ಸಂಬಂಧಿಸಿ ನಕಲಿ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಬಳಸಿ ಒಂದೇ ಒಂದು ಗ್ರಾಪಂನಲ್ಲಿ 6 ಕೋಟಿ ರೂ.ಗೂ ಹೆಚ್ಚು ಹಣ ಡ್ರಾ ಮಾಡಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.

ಚಿಕ್ಕಮಗಳೂರಿನ ಕಡೂರು ತಾಲೂಕಿನ ಗ್ರಾಪಂಗಳ ಪೈಕಿ ಕಲ್ಕೆರೆ ಗ್ರಾಪಂ ಒಂದರಲ್ಲೇ ನಕಲಿ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ನೀಡಿದ್ದವರಿಗೆ ರೈತರ ಪರಿಹಾರ ರೂಪದಲ್ಲಿ ನೀಡಬೇಕಿದ್ದ 6 ಕೋಟಿ ರೂ.ಗೂ ಹೆಚ್ಚಿನ ಮೊತ್ತ ವಿತರಣೆಯಾಗಿದೆ. ಈ ಪ್ರಕರಣ ಸಂಬಂಧ ಸೂಕ್ತ ಕ್ರಮಕೈಗೊಳ್ಳಳು ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು ಕಡೂರು ತಾಲೂಕಿನ ತಹಶೀಲ್ದಾರ್‌ಗೆ ಸೂಚಿಸಿದ್ದರು.

‘ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚೌಳ ಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಪಂನಲ್ಲಿ ರೈತರ ಪರಿಹಾರ ಹಣ 6 ಕೋಟಿ ರೂ.ಗೂ ಹೆಚ್ಚು ಹಣವನ್ನು ಕೆಲವರು ನಕಲಿ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ನೀಡಿ ಹಣ ಪಡೆದಿದ್ದು ಇದಕ್ಕೆ ಪಂಚಾಯತ್ ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್ ಹೊಣೆಗಾರರಾಗಿದ್ದಾರೆ. ಅದ ಕಾರಣ ಬಡ ರೈತರಿಗೆ ಅನ್ಯಾಯವಾಗಿದ್ದು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು,’ ಎಂದು ಓಂಕಾರಪ್ಪ ಎಂಬವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು ತನಿಖೆ ನಡೆಸಲು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News