ಶಾಸಕರ ಸ್ಥಾನದ ಘನತೆ, ಗಾಂಭೀರ್ಯ ಮರೆತ ಪ್ರದೀಪ್ ಈಶ್ವರ್

Update: 2023-10-16 10:06 GMT
Editor : Thouheed | By : ಆರ್. ಜೀವಿ

ಪ್ರದೀಪ್ ಈಶ್ವರ್ ಎಂಬ ಹೊಸ ರಾಜಕಾರಣಿ ಬರೀ ಪ್ರಚಾರ ಪ್ರಿಯ ಟೊಳ್ಳು ವ್ಯಕ್ತಿತ್ವವೇ ಎಂಬ ಅನುಮಾನವೊಂದು ಅವರು ಶಾಸಕರಾದ ನಂತರ ಬಹಳಷ್ಟು ಜನರನ್ನು ಕಾಡಿತ್ತು. ಅವರೀಗ ತಮ್ಮ ಸ್ಥಾನದ ಗಾಂಭೀರ್ಯ ಮರೆತು ಬಿಗ್ಬಾಸ್ ರಿಯಾಲಿಟಿ ಶೋಗೆ ಹೊಗಿರುವುದನ್ನು ನೋಡಿದ ಮೇಲೆ ಆ ಅನುಮಾನ ನಿಜ ಎಂದುಕೊಳ್ಳುವ ಹಾಗಾಗಿದೆ. ಪ್ರದೀಪ್ ಈಶ್ವರ್ ಹೀಗೇಕೆ ಮಾಡಿದರು ಎಂಬುದಕ್ಕಿಂತಲೂ, ಹೀಗೆ ಮಾಡುವುದು ಸರಿಯಲ್ಲ ಎಂಬ ನಿಲುವೇ ಅವರಿಗೆ ಇದ್ದಂತಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಪ್ರದೀಪ್ ಈಶ್ವರ್ ಗೆದ್ದಾಗ ದೊಡ್ಡ ಸಂಚಲನವೇ ಉಂಟಾಗಿತ್ತು. ಮಹಾ ಭ್ರಷ್ಟ, ದುರಹಂಕಾರಿ ಎಂದು ವ್ಯಾಪಕ ಆರೋಪ ಹೊತ್ತಿದ್ದ ಡಾ.ಸುಧಾಕರ್ ದಂತಹ ಘಟಾನುಘಟಿ ವಿರುದ್ಧ ಮೊದಲ ಯತ್ನದಲ್ಲೇ ಗೆದ್ದದ್ದು ಪ್ರದೀಪ್ ಈಶ್ವರ್ ಹೆಗ್ಗಳಿಕೆಯಾಗಿತ್ತು. ಅವರು ಗೆಲ್ಲಲೇಬೇಕಿದ್ದವರು, ಗೆದ್ದಿದ್ದಾರೆ ಎಂಬ ಖುಷಿಯನ್ನು ಬಹಳಷ್ಟು ಮಂದಿ ವ್ಯಕ್ತಪಡಿಸಿದ್ದರು. ಹಾಗೆ ಪ್ರದೀಪ್ ಅವರ ಗೆಲುವನ್ನು ಸಂಭ್ರಮಿಸಿದವರಲ್ಲಿ ಹೆಚ್ಚಿನವರು ಕಾಂಗ್ರೆಸಿಗರಲ್ಲ. ಅವರೆಲ್ಲರೂ ಭ್ರಷ್ಟ ಜನವಿರೋಧಿ ಸುಧಾಕರ್ ಸೋತರು ಎಂಬ ಸಂತಸದಲ್ಲಿ ಪ್ರದೀಪ್ ಗೆಲುವು ತಮ್ಮದೇ ಗೆಲುವು ಎಂಬಂತೆ ಸಂಭ್ರಮಿಸಿದ್ದರು.

ಬಿಜೆಪಿ ಅವಧಿಯಲ್ಲಿ ರಾಜ್ಯ ಕಂಡ ದುರಾಡಳಿತದ ಸಂಕೇತ ದಂತಿದ್ದ ಸುಧಾಕರ್ ಸೋಲುವ ಮೂಲಕ ಹೊಸದೇ ಒಂದು ತಿರುವು ರಾಜ್ಯ ರಾಜಕಾರಣಕ್ಕೆ ಸಿಕ್ಕಿದೆ ಎಂಬಂಥ ಆಶಾ ಭಾವನೆಗಳೂ ವ್ಯಕ್ತವಾದವು. ಆದರೆ ಬರುಬರುತ್ತಾ, ಯಾವ ಮಾತುಗಾರಿಕೆಯಿಂದ ಪ್ರದೀಪ್ ಈಶ್ವರ್ ಜನಮನ ಗೆದ್ದಿದ್ದರೋ ಅದೇ ಮಾತುಗಾರಿಕೆಯೇ ಅವರ ಖಯಾಲಿ ಎಂಬಂತೆ ಕಾಣಿಸತೊಡಗಿತು. ಮಾತ್ರವಲ್ಲ, ಅವರ ಬರೀ ಮಾತುಗಳು ಅವರನ್ನೇ ತಿಂದು ಹಾಕುತ್ತಿರುವ ಹಾಗೆಯೂ ಕಾಣಿಸತೊಡಗಿತ್ತು.

ಕಾರಣವಿಷ್ಟೆ. ಬಡ ಮಕ್ಕಳಿಗೆ ನೆರವಾಗುವುದನ್ನು, ಸೀಟು ಕೊಡಿ ಎಂದು ಕಾಲೇಜು ಆಡಳಿತ ಮಂಡಳಿಯವರಿಗೆ ಹೇಳುವುದನ್ನು, ಎಷ್ಟು ಓದುವ ಮನಸ್ಸಿದೆಯೋ ಅಷ್ಟರವರೆಗೂ ಓದಿಸುವ ಹೊಣೆ, ಖರ್ಚು ತನ್ನದು ಎಂಬುದನ್ನು ಎಲ್ಲವನ್ನೂ ಅವರು ಕ್ಯಾಮೆರಾ ಇಟ್ಟುಕೊಂಡೇ ಮಾಡುತ್ತಿದ್ದರು. ಎಲ್ಲಿಗೆ ಹೋದರು ಕ್ಯಾಮರಾ ಅವರನ್ನು ಹಿಂಬಾಲಿಸುತ್ತಿತ್ತು. ಅಥವಾ ಕ್ಯಾಮರಾ ಮೊದಲು ತಲುಪುತ್ತಿತ್ತು, ಮತ್ತೆ ಪ್ರದೀಪ್ ಈಶ್ವರ್ ಪ್ರತ್ಯಕ್ಷರಾಗುತ್ತಿದ್ದರು.

ಅವರ ಸರಳತೆಯಲ್ಲಿ ಸಹಜತೆ ಇಲ್ಲದೆ ಅದರಲ್ಲಿ ಪ್ರಧಾನಿ ಮೋದಿ ಮಾಡಿದಂತೆ ಇಮೇಜ್ ಮ್ಯಾನೇಜ್ ಮೆಂಟ್ ಮಾಡುವ ಕೃತಕತೆ ಎದ್ದು ಕಾಣುತ್ತಿತ್ತು. ಪ್ರತಿಯೊಂದನ್ನೂ ವೀಡಿಯೊ ಮಾಡುವ ಅವರ ಪ್ರಚಾರ ಪ್ರಿಯತೆ, ಅವರ ವಿಚಿತ್ರ ಕಾರ್ಯವೈಖರಿ ನೋಡ ನೋಡುತ್ತ ಜನರಿಗೆ ತೀರಾ ಅಸಹಜ ಹಾಗೂ ಕಿರಿಕಿರಿ ಎನ್ನಿಸತೊಡಗಿತ್ತು. ಪ್ರತಿ ಮಾತಿನಲ್ಲಿಯೂ ತನ್ನ ಬಗ್ಗೆಯೇ ಹೇಳಿಕೊಳ್ಳುವ ಅವರ ರೀತಿಯೂ ಜನರಿಗೆ ಇರಿಸು ಮುರಿಸು ತರುತ್ತಿತ್ತು.

ಹಿಡಿತವೇ ಇಲ್ಲದ ಹಾಗೆ ಮಾತನಾಡುವ ತಮ್ಮ ಶೈಲಿಯನ್ನೇ ಅಸೆಂಬ್ಲಿಯಲ್ಲೂ ತೋರಿಸಲು ಹೋಗಿ, ಸರಿಯಾದ ಮಾಹಿತಿಯಿಲ್ಲದೆ ಮಾತಾಡಿ, ತಾವು ಮುಜುಗರಕ್ಕೆ ಒಳಗಾದದ್ದು ಮಾತ್ರವಲ್ಲದೆ, ಪಕ್ಷವನ್ನೂ ಮುಜುಗರಕ್ಕೆ ಸಿಲುಕಿಸಿದ್ದರು. ಇಂಥ ಶಾಸಕ ಪ್ರದೀಪ್ ಈಶ್ವರ್ ಈಗ ಬಿಗ್ ಬಾಸ್ ಮನೆಗೆ ಹೋಗಿ ಕೂತುಬಿಟ್ಟಿದ್ದಾರೆ.

ಯೂಥ್ ಐಕಾನ್ ಎನ್ನಿಸಿಕೊಂಡಿದ್ದ ವ್ಯಕ್ತಿ, ಅದರಲ್ಲೂ ಒಬ್ಬ ಎಂಎಲ್ಎ ತನ್ನ ಸ್ಥಾನದ ಜವಾಬ್ದಾರಿಯನ್ನು, ಜನಪ್ರತಿನಿಧಿಗೆ ಇರಬೇಕಾದ ಘನತೆ, ಗಾಂಭೀರ್ಯವನ್ನು ಮರೆತುಬಿಟ್ಟರೆ?. ಜನಪ್ರತಿನಿಧಿಯಾದವರೊಬ್ಬರು ಒಂದು ಟಿವಿ ಚಾನೆಲ್ಲಿನ ರಿಯಾಲಿಟಿ ಶೋ ಸ್ಪರ್ಧಿಯಾಗುವುದೆಂದರೆ, ಇಂಥ ಬೆಳವಣಿಗೆಗೆ ಏನು ಹೇಳುವುದು?

ಮೊದಲು ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಅವರು ಈಗ ರಾಜಧಾನಿ ಬೆಂಗಳೂರಲ್ಲಿ ಕಾಲೇಜುಗಳನ್ನೇ ಪ್ರಾರಂಭಿಸಿದ್ದಾರೆ. ಎಲ್ಲವೂ ಬಡವರ ವಿರೋಧಿ ಎಂಬ ಆರೋಪ ಹೊತ್ತ ನೀಟ್ ಪರೀಕ್ಷೆಯನ್ನು ಕೇಂದ್ರೀಕರಿಸಿದ್ದಾಗಿವೆ. ನೀಟ್ ಪರೀಕ್ಷೆಗೆ ಮಕ್ಕಳನ್ನು ಯಂತ್ರ ಗಳಂತೆ ಸಜ್ಜುಗೊಳಿಸುವ ಕಾರ್ಖಾನೆಗಳು ಅವು. ಜಗತ್ತಿನಲ್ಲೇ ಎಲ್ಲೂ ಇಲ್ಲದ ತರಬೇತು ಕೇಂದ್ರಗಳು ಎಂಬಂತೆ ಪ್ರಚಾರ ಮಾಡಲಾಗುವ ಅಲ್ಲಿ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶವಿಲ್ಲ. ಏನಿದ್ದರೂ ನೀಟ್ ಪರೀಕ್ಷೆ ಪಾಸಾಗಿ ಮೆಡಿಕಲ್ ಸೀಟು ಸಿಗೋದಕ್ಕೆ ಎಲ್ಲ ಶ್ರಮ. ಇರಲಿ. ಅದರದ್ದೂ ಬೇರೆಯೇ ಕತೆ.

ಈಗ ಬಿಗ್ಬಾಸ್ ಮನೆಗೆ ಹೋಗುವಾಗಲೂ ಅವರು, ಶೋನಿಂದ ಬರುವ ಹಣವನ್ನು ಅನಾಥ ಮಕ್ಕಳಿಗೆ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಅನಾಥ ಮಕ್ಕಳಿಗೆ ಹಣ ತರಲು ಒಬ್ಬ ಜನಪ್ರತಿನಿಧಿ ಟಿವಿ ರಿಯಾಲಿಟಿ ಶೋಗೆ ಹೋಗಬೇಕಿತ್ತೆ?. ಹಾಗೆ ನೋಡಿದರೆ ಪ್ರದೀಪ್ ಈಶ್ವರ್ ಇಂಥ ವಿರೋಧಾಭಾಸಗಳ ಹೊರೆಯನ್ನೇ ಹೊತ್ತವರ ಹಾಗಿದ್ದಾರೆ.

ಪಿಯುಸಿ ಓದಿದ ಅವರು ತಮ್ಮನ್ನು ತಾವೇ ಮೆಡಿಕಲ್ ಮೇಷ್ಟ್ರು ಎಂದು ಹೇಳಿಕೊಳ್ಳುತ್ತಾರೆ, ನೀಟ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ವ್ಯಕ್ತಿತ್ವ ವಿಕಸನದ ಪಾಠ ಮಾಡುವ ಪ್ರದೀಪ್ ಈಶ್ವರ್ ನೀಟ್ ಲಾಂಗ್ ಟರ್ಮ್ ಕೋಚಿಂಗ್ಗೆ ಒಬ್ಬ ವಿದ್ಯಾರ್ಥಿಯಿಂದ ಪಡೆಯೋ ಫೀಸ್ ಸುಮಾರು 3 ಲಕ್ಷ ಎಂದು ಹೇಳಲಾಗುತ್ತದೆ. ಅವರ ಪರಿಶ್ರಮ ಅಕಾಡೆಮಿಯಲ್ಲಿ 2 ಸಾವಿರ ವಿದ್ಯಾರ್ಥಿಗಳಿದ್ದು, ಪ್ರದೀಪ್ ಈಶ್ವರ್ ವಾರ್ಷಿಕ ಸಂಪಾದನೆ 60 ಕೋಟಿ ರೂಪಾಯಿ ಎನ್ನಲಾಗುತ್ತದೆ. ಅವರ ಪರಿಶ್ರಮ ಅವರಿಗೆ ಅಷ್ಟೊಂದು ಕೋಟಿ ಆದಾಯ ತರುತ್ತಿದೆ. ಸಂತೋಷ.

ಇಂಥ ಕೋಟಿ ಕೋಟಿ ಸಂಪಾದನೆ ಇರುವವರು ಅನಾಥ ಮಕ್ಕಳಿಗೋಸ್ಕರ ಹಣ ತರಲು ಬಿಗ್ಬಾಸ್ ಶೋಗೆ ಹೋಗಬೇಕಿತ್ತೆ?. ಹಾಗೆ ಬಿಗ್ಬಾಸ್ ಶೋಗೆ ಹೋಗಿ ಹಣ ತರುವ ಅವರು ಆ ಮೂಲಕ ಅನಾಥ ಮಕ್ಕಳಿಗೂ, ನಾಡಿನ ಯುವಜನತೆಗೂ ಯಾವ ರೀತಿಯ ಸಂದೇಶ ಕೊಡಲಿದ್ದಾರೆ? ಯಾವ ಬಗೆಯಲ್ಲಿ ಪ್ರೇರಣೆಯಾಗಲಿದ್ದಾರೆ?.

ಎಲ್ಲರ ಮನೆಗೂ ಹೋಗಿ, ಓದುವ ಮಕ್ಕಳನ್ನು ತಾನು ಓದಿಸುತ್ತೇನೆ ಎಂದು ಘೋಷಿಸಿ ವೀಡಿಯೊ ಮಾಡಿಕೊಳ್ಳುವ ಪ್ರದೀಪ್ ಈಶ್ವರ್, ಈಗ ಬಿಗ್ಬಾಸ್ ಮನೆ ಕ್ಯಾಮೆರಾದೆದುರು ಕಾಣಿಸಿಕೊಳ್ಳುವ ಮೂಲಕ, ತನ್ನ ಕ್ಷೇತ್ರದ ಅದೇ ಮಕ್ಕಳಿಗೆ, ಯುವಜನರಿಗೆ ಏನು ಸಂದೇಶ ಕೊಡಬಯಸಿದ್ದಾರೆ?. ಕಾಂಗ್ರೆಸ್ ಶಾಸಕರಾಗಿದ್ದುಕೊಂಡೇ ಕಟ್ಟರ್ ಆರೆಸ್ಸೆಸ್ ವಾದಿಗಳನ್ನು ತನ್ನ ಆದರ್ಶ, ತನ್ನ ರೋಲ್ ಮಾಡೆಲ್, ತನ್ನ ಆರಾಧ್ಯ ದೈವ, ತಾನವರ ವೀರಾಭಿಮಾನಿ ಎಂದು ಹೇಳಿಕೊಳ್ಳುವ ಪ್ರದೀಪ್ ಈಶ್ವರ್ ಪ್ರತಿಪಾದಿಸುವ ಆದರ್ಶ ಯಾವುದು?

ರಾಹುಲ್ ಗಾಂಧಿ ಪ್ರತಿಪಾದಿಸುವ ಮೌಲ್ಯಗಳಿಗೂ, ರಾಹುಲ್ ಗಾಂಧಿ ಯಾವ ಮೌಲ್ಯಗಳಿಗಾಗಿ ಹೋರಾಡುತ್ತಿದ್ದಾರೆ ಅದಕ್ಕೂ ಪ್ರದೀಪ್ ಈಶ್ವರ್ ಗೂ ಏನಾದರೂ ಸಂಬಂಧ ಇದೆಯೇ ?. ಸುಧಾಕರ್ ಅವರನ್ನು ಬೈಯುತ್ತಲೇ ಅವರ ಜೊತೆಗೆ ಒಳ್ಳೆಯ ಸಂಬಂಧವನ್ನೂ ಉಳಿಸಿಕೊಂಡಿದ್ದರೆಂಬ ಕಾರಣಕ್ಕೂ ಅವರು ಟೀಕೆಗೆ ಒಳಗಾದದ್ದಿದೆ. ಹಾಗಾದರೆ, ಜನರೆದುರಿಗೆ ಸುಧಾಕರ್ ಅವರನ್ನು ವಿರೋಧಿಸಿ ಮಾತನಾಡುವ, ಜನರೆದುರಿಗೆ ಪರಮ ಪ್ರಾಮಾಣಿಕನೆಂಬಂತೆ ಕಾಣಿಸುವ ಪ್ರದೀಪ್ ಈಶ್ವರ್ ಅಸಲೀಯತ್ತೇನು?.

2018ರ ಚುನಾವಣೆಯಲ್ಲಿ ತಮ್ಮದೇ ಸಮುದಾಯದ ನವೀನ್ ಕಿರಣ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಅವರ ಪರವಾಗಿ ಪ್ರಚಾರ ಮಾಡುವ ಮೂಲಕ ಪ್ರದೀಪ್ ಈಶ್ವರ್ ರಾಜಕೀಯ ವಲಯದ ಗಮನ ಸೆಳೆದಿದ್ದರು. ಆ ಚುನಾವಣೆಯಲ್ಲಿ ಸುಧಾಕರ್ ಅವರಿಗೇ ಗೆಲುವಾಯಿತು. ಆದರೆ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಂಪಾದಿಸಲು ಪ್ರದೀಪ್ ಈಶ್ವರ್ ಅವರಿಗೆ ಅವರ ಮಾತು ಬಂಡವಾಳದಂತಾಯಿತು. ಸುಧಾಕರ್ ಅವರನ್ನು ಮಣಿಸಿದ್ದೂ ಆಯಿತು.

ಆದರೆ ಈ ಗೆಲುವು ಬರೀ ತನ್ನ ಮಾತಿನಿಂದಾಗಿ ಬಂದುದಲ್ಲ, ತನ್ನ ಹಿಂದಿರುವ ಪಕ್ಷದ ರಾಜಕೀಯ ಬಲ ಮತ್ತು ಸಮುದಾಯದ ಬಲ, ಹಿಂದಿನ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಎಲ್ಲವೂ ಸೇರಿದ್ದರಿಂದ ಬಂದ ಗೆಲುವು ಎಂಬುದನ್ನು ಮರೆತವರಂತೆ ಕಾಣತೊಡಗಿದ್ದರು ಪ್ರದೀಪ್ ಈಶ್ವರ್.

ಈಗ ಅವರು ಬಿಗ್ ಬಾಸ್ ಮನೆ ಸೇರಿಕೊಂಡು ಮತ್ತೊಂದು ಯಡವಟ್ಟು ಮಾಡಿಕೊಂಡಿರುವ ಹಾಗಿದೆ. ಪ್ರದೀಪ್ ಈಶ್ವರ್ ನಡೆ ಕಾಂಗ್ರೆಸ್ಗೆ ಒಪ್ಪಿಗೆಯಾಗಿದೆಯೆ? ಗೊತ್ತಿಲ್ಲ. ಆದರೆ ಬಹಳ ಸಲ ಅದು ಕೋಲು ಕೊಟ್ಟು ಹೊಡೆಸಿಕೊಳ್ಳುವ ಸ್ಥಿತಿಯನ್ನೇ ಎದುರಿಸುವುದಿದೆ. ಮತ್ತು ಈಗಲೂ ಹಾಗೆಯೇ ಆಗಿದೆ. ಬಿಜೆಪಿ ಸೇರಿದಂತೆ ರಾಜಕೀಯ ವಿರೋಧಿಗಳು ಈಗ ಲೇವಡಿ ಮಾಡಿ ನಗುತ್ತಿದ್ದಾರೆ.

ಅವರ ವಿರುದ್ಧ ಸೋತಿರುವ ಸುಧಾಕರ್ ಅವರಿಗೂ ಆಡಿಕೊಳ್ಳಲು ಇದೊಂದು ಒಳ್ಳೆಯ ಅವಕಾಶವಾಗಿ ಒದಗಿದೆ. ಒಬ್ಬ ಎಂಎಲ್ಎ ಬಿಗ್ಬಾಸ್ ಮನೆಗೆ ಹೋಗಿ ಕುಣಿದಿರುವುದು ಇದೇ ಮೊದಲು. ಇದೊಂದು ನಾಚಿಕೆಗೇಡಿನ ಸಂಗತಿ. ಅವರು ಕ್ಷೇತ್ರದ ಮರ್ಯಾದೆ ಕಳೆದಿದ್ದಾರೆ ಎಂದು ಸುಧಾಕರ್ ಟೀಕಿಸಿದ್ದಾರೆ.

ಅವರನ್ನು ವಜಾಗೊಳಿಸುವಂತೆ ಸ್ಪೀಕರ್ ಅವರಿಗೆ ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವ್ಯಕ್ತಿತ್ವ ವಿಕಸನದ ಪಾಠವೇ ಬೇರೆ, ರಾಜಕೀಯವೇ ಬೇರೆ ಎಂಬುದನ್ನು ಪ್ರದೀಪ್ ಈಶ್ವರ್ ತಿಳಿಯಬೇಕಿದೆ. ಬರೀ ಮಾತು ಬಹುದೂರ ಕರೆದುಕೊಂಡು ಹೋಗಲಾರದು ಎಂಬ ಸತ್ಯವನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ. ಆದರೆ ಬಿಗ್ ಬಾಸ್ ಮನೆ ಸೇರಿಕೊಂಡಿರುವ ಅವರು, ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುವುದಿಲ್ಲ.

ಜನತೆಯ ಪ್ರತಿನಿಧಿಯಾಗಿರುವ ಅವರು ಹೇಗೆ ಬಿಗ್ಬಾಸ್ ಶೋನ ಸ್ಪರ್ಧಿಯಾಗುತ್ತಾರೆ ಎಂಬುದು ಅವರೇ ಕೇಳಿಕೊಳ್ಳಬೇಕಿದ್ದ ಪ್ರಶ್ನೆಯಾಗಿತ್ತು. ಆದರೆ ಅವರು ಕೇಳಿಕೊಳ್ಳಲಿಲ್ಲ. ಮನುಷ್ಯರನ್ನು ಸರ್ಕಸ್ ನ ಪ್ರಾಣಿಗಳಂತೆ ಕೂಡಿಟ್ಟು ಅವರನ್ನು ಗುಲಾಮರಂತೆ ನಡೆಸಿಕೊಳ್ಳುವ ಒಂದು ಶೋ ಯಾರಿಗಾದರೂ ಏನು ಪ್ರೇರಣೆ ಕೊಡುತ್ತೆ ? ಯಾವ ಸಂದೇಶ ರವಾನಿಸುತ್ತದೆ ? ಟಿ ಆರ್ ಪೀ ಗಾಗಿ ಏನೂ ಮಾಡಲು ಹೇಸದ ಈ ಶೋ ನಾಗರಿಕ ಸಮಾಜಕ್ಕೆ ಯೋಗ್ಯ ಮನರಂಜನೆಯೇ ? ನಾವು ಮನುಷ್ಯರನ್ನು ಬಂಧಿಗಳಂತೆ ಇಟ್ಟು ಅವರಿಂದ ನಮಗೆ ಬೇಕಾದ್ದನ್ನು ಮಾಡಿಸುತ್ತೇವೆ. ನೀವು ದಿನಾ ಗಂಟೆಗಟ್ಟಲೆ ಕೂತು ಅದನ್ನು ನೋಡಿ ಮಜಾ ತೆಗೆದುಕೊಳ್ಳಿ ಎನ್ನುವ ಷೋ ಗೆ ಒಬ್ಬ ಶಾಸಕರು ಹೋಗಬೇಕಾ ?

ಒಬ್ಬ ಶಾಸಕಾಂಗ ಸಭೆಯ ಸದಸ್ಯರಿಗೆ ಇಂತಹ ತೀರಾ ಕೀಳು ಅಭಿರುಚಿಯ ಪ್ರಹಸನ ಒಂದರಲ್ಲಿ ತಾನು ಒಂದು ದಿನಕ್ಕಾದರೂ ಭಾಗವಹಿಸಬಹುದು ಎಂದು ಅನಿಸಿದರೆ ಅದು ಏನನ್ನು ಸೂಚಿಸುತ್ತದೆ ?. ಇಂಥ ಒಬ್ಬ ಶಾಸಕ, ಅಥವಾ ಅವರಂಥವರು ನಿಜವಾಗಿಯೂ ಕಾಂಗ್ರೆಸ್ ಪಾಲಿಗೆ ಹೊರೆಯಾಗುವ ಸಾಧ್ಯತೆ ಇದೆ ಎನ್ನಿಸುವುದಿಲ್ಲವೆ?.

ಒಬ್ಬ ಶಾಸಕ ನಿಜವಾಗಿಯೂ ಮಾಡಬೇಕಾದ ಜನರ ಕೆಲಸಗಳು ಹಾಗು ಸರಕಾರದ ನೀತಿ ನಿರೂಪಣೆಯಲ್ಲಿ ನೀಡಬೇಕಾದ ಕೊಡುಗೆ ಇದೇನಾ ? ಶಾಸಕರಾಗಿ ಅವರ ಕ್ಷೇತ್ರದ ಜನರ ನಿಜವಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರದೀಪ್ ಅವರ ಪಾತ್ರವೇನು? ಹಿಂದುಳಿದ ಪ್ರದೇಶ ದಂತಿರುವ ಚಿಕ್ಕಬಳ್ಳಾಪುರ ವನ್ನು ಅದರ ಶಾಸಕರು ಬಿಗ್ ಬಾಸ್ ಗೆ ಹೋಗಿ ಉದ್ಧಾರ ಮಾಡ್ತಾರ ? ಆ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ಅವರು ಬಿಗ್ ಬಾಸ್ ಗೆ ಹೋಗಿದ್ದಾರಾ ?.

ಒಬ್ಬ ಶಾಸಕರಿಗೆ ಸದನದಲ್ಲಿ ಸ್ಪೀಕರ್ ಅವರೇ ಬಿಗ್ ಬಾಸ್. ಅವರ ಆದೇಶವೇ ಫೈನಲ್. ಸದನದ ಹೊರಗೆ ಬಂದರೆ ಕ್ಷೇತ್ರದ ಜನರೇ ಅವರ ಬಾಸ್. ಆದರೆ ಆ ಎರಡೂ ನಿಜವಾದ ಬಾಸ್ ಗಳನ್ನು ಬಿಟ್ಟು ಪ್ರದೀಪ್ ಈಶ್ವರ್ ಟಿವಿ ಬಿಗ್ ಬಾಸ್ ಹಿಂದೆ ಹೋಗಿದ್ದಾರೆ. ಪ್ರದೀಪ್ ಈಶ್ವರ್ ಹೋಗಿ ಹೋಗಿ ಬಿಗ್ಬಾಸ್ ಮನೆ ಸೇರಿ ಕೂತಿರುವ ಈ ಹೊತ್ತಲ್ಲಿ, ಈ ಬಗ್ಗೆ ಅವರ ಕ್ಷೇತ್ರದ ಮತದಾರರು, ರಾಜ್ಯದ ಜನ, ಕಾಂಗ್ರೆಸ್ ಪಕ್ಷ ಗಂಭೀರವಾಗಿ ಯೋಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News