ಆರ್ಥಿಕ ಇಲಾಖೆಯ ಅಭಿಪ್ರಾಯ ಉಲ್ಲಂಘಿಸಿ ಮಠ, ದೇವಾಲಯಗಳಿಗೆ 25.82 ಕೋಟಿ ರೂ. ಬಿಡುಗಡೆ
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ದೇವಾಲಯ ಮತ್ತು ಮಠಗಳಿಗೆ ಸಹಾಯಾನುದಾನ ಕೋರಿ ಸಲ್ಲಿಸುವ ಪ್ರಸ್ತಾವಗಳನ್ನು ಮುಂದೂಡಬೇಕು ಎಂದು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿದ್ದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರಕಾರವು ಒಟ್ಟಾರೆ 25.82 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ ಖರೀದಿಸಲು ದಾನಿಗಳ ಮುಂದೆ ಕೈಯೊಡ್ಡಿಸಿದ್ದು ಮತ್ತು ಉತ್ತರ ಪತ್ರಿಕೆಗಳ ವೆಚ್ಚವನ್ನು ಭರಿಸಲು ವಿದ್ಯಾರ್ಥಿಗಳ ಜೇಬಿಗೆ ಕೈ ಹಾಕಿದ್ದರ ಬೆನ್ನಲ್ಲೇ ಮಠ, ದೇಗುಲ, ಧಾರ್ಮಿಕ ಸಂಸ್ಥೆಗಳಿಗೆ 25.82 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೇ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮಠ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 3.99 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಈ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ವರುಣ ವಿಧಾನಸಭೆ ಕ್ಷೇತ್ರಕ್ಕೆ 1.50 ಕೋಟಿ ರೂ.ಮಂಜೂರಾಗಿತ್ತು. ಇದು ಒಟ್ಟು ಅನುದಾನದಲ್ಲಿ ಸಿಂಹಪಾಲು ವರುಣ ಕ್ಷೇತ್ರಕ್ಕೆ ದಕ್ಕಿದಂತಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ಧಾರ, ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 2024ರ ಮಾರ್ಚ್ 2ರಂದು 10.83 ಕೋಟಿ ರೂ., ಮಾರ್ಚ್ 5ರಂದು 7.86 ಕೋಟಿ ರೂ., ಮಾರ್ಚ್ 6ರಂದು 7.13 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶಗಳ ಪ್ರತಿಗಳು ‘The-file.in’ಗೆ ಲಭ್ಯವಾಗಿವೆ.
ಮಾರ್ಚ್ 2ರಂದು ಹೊರಡಿಸಿರುವ ಆದೇಶದ ಪ್ರಕಾರ ಒಟ್ಟು 197 ದೇಗುಲ, ಮಠ, ಧಾರ್ಮಿಕ ಸಂಸ್ಥೆಗಳಿಗೆ 10.86 ಕೋಟಿ ರೂ. ಮಂಜೂರು ಮಾಡಿದೆ. ಮಾರ್ಚ್ 5ರಂದು 137 ದೇವಸ್ಥಾನಗಳಿಗೆ 7.86 ಕೋಟಿ ರೂ. 6ರಂದು ಹೊರಡಿಸಿರುವ ಆದೇಶದಂತೆ 136 ದೇವಾಲಯಗಳಿಗೆ 7.13 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ವಿಶೇಷವೆಂದರೇ ದೇವಾಲಯ ಮತ್ತು ಮಠಗಳಿಗೆ ಸಹಾಯಾನುದಾನ ಕೋರಿ ಶಾಸಕರು ಅನೇಕ ಪ್ರಸ್ತಾವ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ತಳ್ಳಿ ಹಾಕಿತ್ತು. ‘ಆಡಳಿತ ಇಲಾಖೆಯ ಪ್ರಸ್ತಾವವನ್ನು ಪರಿಶೀಲಿಸಿದೆ. ಪ್ರಸಕ್ತ ವರ್ಷದಲ್ಲಿ ಹೊಸದಾಗಿ ಶಾಸಕರಿಂದ, ಸಂಸ್ಥೆಗಳಿಂದ ದೇವಾಲಯ, ಮಠಗಳಿಗೆ ಸಹಾಯಾನುದಾನ ಕೋರಿ ಸಲ್ಲಿಸುವ ಪ್ರಸ್ತಾವಗಳ ಬಗ್ಗೆ ಸದ್ಯಕ್ಕೆ ಕ್ರಮ ವಹಿಸಬಾರದು ಮತ್ತು ಆ ಎಲ್ಲ ಪ್ರಸ್ತಾವಗಳನ್ನು ಮುಂದೂಡಬೇಕು’ ಎಂದು 2024ರ ಫೆ.14ರಂದೇ ಆರ್ಥಿಕ ಇಲಾಖೆಯು (ಸಂಖ್ಯೆ; ಆಇ 183 ವೆಚ್ಚ-7/ 2024) ಕಂದಾಯ ಇಲಾಖೆಗೆ ತಿಳಿಸಿತ್ತು.
ಬೀದರ್, ದಾವಣಗೆರೆ, ವರುಣ, ವಿಜಯಪುರ, ಹಾಸನ ಜಿಲ್ಲೆಯ ಹಲವು ದೇವಸ್ಥಾನ ಮತ್ತು ಮಠಗಳಿಗೆ ಬಿಡುಗಡೆ ಮಾಡಿರುವ ಒಟ್ಟು 3.99 ಕೋಟಿ ರೂ. ಅನುದಾನದ ಪೈಕಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ಮೈಸೂರಿನ ವರುಣ ವಿಧಾನಸಭೆ ಕ್ಷೇತ್ರಕ್ಕೆ ಆರಂಂಭದಲ್ಲೇ ಸಿಂಹಪಾಲು ದಕ್ಕಿತ್ತು. ಹಿಂದಿನ ಬಿಜೆಪಿ ಸರಕಾರ ಕೊನೆಯ ಹಂತದಲ್ಲಿ 116 ಕೋಟಿ ರೂ. ಅನುದಾನವನ್ನು ಒದಗಿಸಿತ್ತು.
ಅಲ್ಲದೆ ಪಲಿಮಾರು ಮಠ ಸಹಿತ ಇನ್ನಿತರ 178 ಮಠಗಳಿಗೆ 108.24 ಕೋಟಿ ರೂ. ಅನುದಾನ ಒದಗಿಸಿತ್ತು. ಬೀದರ್‌ನ ಶಿವಾನಂದಸ್ವಾಮಿ ಶಾಂತ ಆಶ್ರಮ ಬ್ಯಾಲಹಳ್ಳಿಗೆ 5 ಲಕ್ಷ ರೂ., ಕೋಲಾರ ತಾಲೂಕಿನ ಚೌಡದೇನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನಕ್ಕೆ 12 ಲಕ್ಷ ರೂ., ಹಾಸನ ತಾಲೂಕಿನ ಮಲ್ಲಿಗೆವಾಳು ಗ್ರಾಮದ ಮಲ್ಲೆಶ್ವರ ಸ್ವಾಮಿ ದೇವಸ್ಥಾನಕ್ಕೆ 5 ಲಕ್ಷ ರೂ. ಸೇರಿ ಒಟ್ಟು 22 ಲಕ್ಷ ರೂ.ಗಳನ್ನು ಒದಗಿಸಿತ್ತು.