ಹಮಾಸ್ ನೆಪದಲ್ಲಿ ಇಸ್ರೇಲ್ ನಡೆಸುತ್ತಿರುವ ಫೆಲೆಸ್ತೀನಿಯರ ಜನಾಂಗೀಯ ನರಮೇಧ ನಿಲ್ಲಲಿ
ಈಗಲೂ ಇಸ್ರೇಲಿನಲ್ಲೇ ಇದ್ದುಕೊಂಡು, ಹಮಾಸ್ ದಾಳಿ ನಡೆದ ನಂತರವೂ ಇಸ್ರೇಲಿನ ಜನರಲ್ಲಿ ದ್ವೇಷದ ಬದಲು ವಿವೇಕವನ್ನು ಉದ್ದೀಪಿಸುತ್ತಾ, ಇದು ನಮ್ಮ ಬೆಂಬಲದೊಂದಿಗೆ ನಮ್ಮ ಸರಕಾರ ನಡೆಸುತ್ತಾ ಬಂದಿರುವ ಅಪಾರ್ಥೈಡ್ ಅನಾಚಾರಗಳ ಫಲಿತಾಂಶವೆಂದೂ ತಿಳಿ ಹೇಳುತ್ತಾ, ಹಮಾಸ್ ದಾಳಿಗೆ ಬಲಿಯಾದವರ ಬಗ್ಗೆ ಕಣ್ಣೀರಿಡುತ್ತಲೇ ಅದಕ್ಕೆ ಗಾಝಾದ ಅಮಾಯಕ ಜನರನ್ನು ಬಲಿಗೊಡುವುದು ಉತ್ತರವಲ್ಲವೆಂದು ವಿವೇಕ ಹೇಳುತ್ತಾ... ಹಾಗೆ ಹೇಳುತ್ತಿರುವುದರಿಂದ ತಮ್ಮ ಜೀವವನ್ನು ಇಸ್ರೇಲಿ ಉಗ್ರರ ದಾಳಿಗೆ ತುತ್ತಾಗಿಸಿಕೊಳ್ಳುತ್ತಿರುವ ಹಲವಾರು ಸಾಕ್ಷಿ ಪ್ರಜ್ಞೆಗಳು ಈಗಲೂ ಇಸ್ರೇಲಿನಲ್ಲಿ ಕ್ರಿಯಾಶೀಲರಾಗಿದ್ದಾರೆ.
ಮಾನವ ಕುಲ ನೈತಿಕ ಹಾಗೂ ನಾಗರಿಕ ಅಧಃಪತನದ ಪಾತಳಿಯನ್ನು ತಲುಪುವ ಪೈಪೋಟಿಯಲ್ಲಿರುವ ಈ ಕಾಲದಲ್ಲಿ ಇಸ್ರೇಲ್ ಇಡೀ ಗಾಝಾ ಪ್ರದೇಶದ ಫೆಲೆಸ್ತೀನಿಯರನ್ನು ಕೂಡಿಹಾಕಿ ವಾಯು ಹಾಗೂ ಭೂ ದಾಳಿ ಮಾಡುವ ಮೂಲಕ ಇಪ್ಪತ್ತೊಂದನೇ ಶತಮಾನದ ಬಹುದೊಡ್ಡ ಜನಾಂಗೀಯ ನರಮೇಧದ ಪಾತಕಕ್ಕೆ ಮುಂದಾಗಿದೆ.
ಗಾಝಾ ಪ್ರದೇಶದಲ್ಲಿ 21 ಲಕ್ಷ ಫೆಲೆಸ್ತೀನಿಯರು ವಾಸಿಸುತ್ತಾರೆ. ಅದರಲ್ಲಿ ಶೇ. 70 ಜನರು ಕಳೆದ ಎಪ್ಪತ್ತು ವರ್ಷಗಳಲ್ಲಿ ಇಸ್ರೇಲ್ ದಾಳಿಯಿಂದ-ಕಿರುಕುಳ-ಆಕ್ರಮಣ-ದೌರ್ಜನ್ಯಗಳಿಂದ ತಮ್ಮದೇ ದೇಶದಲ್ಲಿ ನೆಲೆಯನ್ನು ಕಳೆದುಕೊಂಡು ಗಾಝಾ ಸೇರಿಕೊಂಡವರು. ತಮ್ಮದೇ ದೇಶದಲ್ಲಿ ನಿರಾಶ್ರಿತರಾದವರು. ಈಗ ಹಮಾಸ್ ದಾಳಿಯನ್ನು ನೆಪವಾಗಿರಿಸಿಕೊಂಡು ಇಸ್ರೇಲ್ 11 ಲಕ್ಷ ಗಾಝಾ ವಾಸಿಗಳಿಗೆ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಹಾಗೂ ಅಲ್ಲಿಂದ ಈಜಿಪ್ಟ್‌ಗೆ ವಲಸೆ ಹೋಗಲು ಆದೇಶಿಸಿದ್ದಾರೆ. ಅದಕ್ಕೆ ಕೇವಲ ಎರಡು ದಿನಗಳ ಗಡುವು ಕೊಟ್ಟಿದ್ದಾರೆ.
‘‘ಇದು ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಅನಿವಾರ್ಯವಾಗಿ ಮಾಡುತ್ತಿರುವ ತಾತ್ಕಾಲಿಕ ಎತ್ತಂಗಡಿ. ಈ ಯುದ್ಧ ಮುಗಿದ ಮೇಲೆ ಅವರು ವಾಪಸ್ ಮರಳಬಹುದು. ಆಗ ಇಸ್ರೇಲ್ ಅವರಿಗೆ ಅಲ್ಲಿ ಒಂದು ಸಿಂಗಾಪುರವನ್ನು ಕಟ್ಟಿಕೊಡಲಿದೆ’’ ಎಂದೆಲ್ಲಾ ಇಸ್ರೇಲ್ ಬಲೂನು ಕಟ್ಟಿದ ಬಾಂಬುಗಳನ್ನು ಗಾಝಾ ಮೇಲೆ ಸುರಿಸುತ್ತಿದೆ. ಅದೇ ಸಮಯದಲ್ಲಿ ಯುದ್ಧಾನಂತರ ಗಾಝಾದಲ್ಲಿ ಗಾಝಾ ಜನರು ಆಯ್ಕೆ ಮಾಡುವ ಸರಕಾರ ಇರಲಾರದು ಎಂಬ ಸೂಚನೆಯನ್ನು ಕೊಟ್ಟಿದೆ. ಅಂದರೆ ಈ ಯುದ್ಧವು ಫೆಲೆಸ್ತೀನಿಯರಿಂದ ಗಾಝಾ ಭಾಗವನ್ನೂ ಕಸಿದುಕೊಳ್ಳುವ ಸಂಚೇ?
ಏಕೆಂದರೆ ಇಸ್ರೇಲಿನ ಇತಿಹಾಸವನ್ನು ನೋಡಿದರೆ ಫೆಲೆಸ್ತೀನಿಯರ ಎತ್ತಂಗಡಿ ಎನ್ನುವುದು ಜಗತ್ತನ್ನು ಮೋಸಗೊಳಿಸಲು ಹೇಳುವ ಸುಳ್ಳು ಎಂದು ಪದೇ ಪದೇ ಸಾಬೀತಾಗಿದೆ.
ಇತಿಹಾಸದುದ್ದಕ್ಕೂ ಪ್ರಧಾನವಾಗಿ ಕ್ರಿಶ್ಚಿಯನ್ನರಿಂದ ಹಾಗೂ ಆಗಾಗ ಮುಸ್ಲಿಮರಿಂದ ಧಾರ್ಮಿಕ ಪೂರ್ವಗ್ರಹ ಹಾಗೂ ದ್ವೇಷಗಳ ಕಾರಣಗಳಿಂದ ಯೆಹೂದಿಗಳು ಪದೇ ಪದೇ ದಾಳಿಗಳಿಗೆ ಗುರಿಯಾಗುತ್ತಿದ್ದರು ಹಾಗೂ ನೆಲೆಯಿಲ್ಲದೆ ಯೂರೋಪಿನಾದ್ಯಂತ ಹರಡಿಕೊಂಡಿದ್ದರು. 19ನೇ ಶತಮಾನದ ಕೊನೆಯ ವೇಳೆಗೆ ತಮ್ಮದೇ ಆದ ಒಂದು ಪ್ರತ್ಯೇಕ ಯೆಹೂದಿ ರಾಷ್ಟ್ರ ಬೇಕೆಂಬ ‘ಜಿಯೊನಿಸ್ಟ್’ ಚಳವಳಿ ಪ್ರಾರಂಭವಾಯಿತು. ಮುಸ್ಲಿಮರಿಗೂ, ಕ್ರಿಶ್ಚಿಯನ್ನರಿಗೂ ಹಾಗೂ ಯೆಹೂದಿಗಳಿಗೂ ಪವಿತ್ರ ಸ್ಥಳವಾಗಿರುವ ಜೆರುಸಲೆಂ ಇರುವ ಫೆಲೆಸ್ತೀನ್‌ನಲ್ಲಿಯೇ ಒಂದು ತಾಯ್ನೆಲವನ್ನು ಕಂಡುಕೊಳ್ಳುವ ಪ್ರಯತ್ನ ಪ್ರಾರಂಭವಾಯಿತು. ಇದಕ್ಕೆ ಬ್ರಿಟಿಷರ ವಸಾಹತುಶಾಹಿ ಒಡೆದಾಳುವ ನೀತಿಯೂ ಕುಮ್ಮಕ್ಕು ಕೊಟ್ಟಿತು. ಎರಡನೇ ಮಹಾಯುದ್ಧದ ನಂತರ ಹಿಟ್ಲರ್‌ನಿಂದ ನರಮೇಧಕ್ಕೆ ಗುರಿಯಾಗಿದ್ದ ಯೆಹೂದಿಗಳಿಗೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಫೆಲೆಸ್ತೀನ್‌ನ ಭೂಭಾಗದಲ್ಲಿ ಅರ್ಧಕ್ಕಿಂತಲೂ ಹೆಚ್ಚನ್ನು ಕಿತ್ತುಕೊಟ್ಟು ಇಸ್ರೇಲ್ ದೇಶವನ್ನು ಸೃಷ್ಟಿಸಲಾಯಿತು.
2,000 ವರ್ಷಗಳಿಂದಲೂ ಫೆಲೆಸ್ತೀನ್‌ನಲ್ಲಿ ವಾಸಿಸುತ್ತಿರುವ ಫೆಲೆಸ್ತೀನಿಯರಿಗೆ ಶೇ.45 ಭೂ ಭಾಗ. ಹೊಸದಾಗಿ ಬಂದು ನೆಲೆಸಿದ ಇಸ್ರೇಲಿಗಳಿಗೆ ಶೇ.55 ಭೂ ಭಾಗ ಎಂಬ ಅನ್ಯಾಯದ ಹಂಚಿಕೆ ಮಾಡುವ ಮೂಲಕ ಇಸ್ರೇಲಿನ ಹುಟ್ಟಿನಿಂದಲೇ ಫೆಲೆಸ್ತೀನಿಯರ ಮೇಲಿನ ದಮನ ಶುರುವಾಯಿತು.
ಆದರೆ ಇಸ್ರೇಲ್ ಅಷ್ಟಕ್ಕೆ ಸುಮ್ಮನಾಗಲಿಲ್ಲ. 1948ರಿಂದಲೇ ತನಗೆ ಕೊಟ್ಟ ಭೂ ಭಾಗದ ಆಸುಪಾಸಿನಲ್ಲಿರುವ ಫೆಲೆಸ್ತೀನಿಯರ ಮೇಲೆ ದಾಳಿ, ಆಕ್ರಮಣ, ಕೊಲೆ, ಸುಲಿಗೆಗಳನ್ನು ಮಾಡಿ ಬಲವಂತದಿಂದ ಫೆಲೆಸ್ತೀನಿಯರನ್ನು ತಮ್ಮ ಅಧಿಕೃತ ನೆಲೆಯಿಂದಲೂ ಹೊರಹಾಕಲು ಪ್ರಾರಂಭಿಸಿತು.
ಫೆಲೆಸ್ತೀನಿಯರು ಇದನ್ನು ‘ನಕ್ಬಾ’-ಅನಾಹುತ ಎಂದು ಕರೆಯುತ್ತಾರೆ.
1948ರಿಂದ ಪ್ರಾರಂಭವಾದ ಈ ನಕ್ಬಾ ನಿರಂತರವಾಗಿ ನಡೆಯುತ್ತಲೇ ಇದೆ. ಈ ನಕ್ಬಾಗಳಿಗೆ ಗುರಿಯಾಗಿ ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಲಕ್ಷಾಂತರ ಫೆಲೆಸ್ತೀನಿಯರು ಗಾಝಾ ಸೇರಿಕೊಂಡರು. ಇನ್ನು ಫೆಲೆಸ್ತೀನ್ ಭೂಭಾಗವಾಗಿದ್ದ ವೆಸ್ಟ್ ಬ್ಯಾಂಕ್ (ಪಶ್ಚಿಮ ದಂಡೆ) ಪ್ರದೇಶದಲ್ಲೂ ಹೊಸ ಹೊಸ ಇಸ್ರೇಲಿ ವಲಸಿಗರು ಫೆಲೆಸ್ತೀನಿ ಭೂಭಾಗಗಳನ್ನು ಆಕ್ರಮಿಸುತ್ತಿದ್ದಾರೆ. ಅದು ಇಸ್ರೇಲಿನಲ್ಲಿ ನೆತನ್ಯಾಹು ನೇತೃತ್ವದ ಅತ್ಯುಗ್ರಗಾಮಿ ಜನಾಂಗೀಯವಾದಿ ಸರಕಾರ ಬಂದ ಮೇಲೆ ಹೆಚ್ಚಾಗಿದೆ.
ಈ ಸಶಸ್ತ್ರ ಇಸ್ರೇಲಿ ನೆಲಸಿಗರು ದಿನನಿತ್ಯ ಅಲ್ಲಿ ವಾಸಿಸುತ್ತಿರುವ ಫೆಲೆಸ್ತೀನಿಯರನ್ನು ಹೊಡೆದು ಬಡಿದು ಹೊರದಬ್ಬಿ ತಮ್ಮ ಪ್ರದೇಶಗಳನ್ನು ವಿಸ್ತರಿಸಿಕೊಳ್ಳುತ್ತಲೇ ಇದ್ದಾರೆ. ಇಸ್ರೇಲಿಗಳ 250ಕ್ಕೂ ಹೆಚ್ಚು ಅಕ್ರಮ ವಸತಿ ಪ್ರದೇಶಗಳು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲೂ ತಲೆ ಎತ್ತಿವೆ.
ಹಮಾಸ್ ದಾಳಿಯ ನೆಪದಲ್ಲಿ ಇಂದು ಇಸ್ರೇಲ್ ಗಾಝಾದಲ್ಲಿ ಮಾಡುತ್ತಿರುವುದು ಈ ನಕ್ಬಾದ ಮುಂದುವರಿಕೆಯೇ. ಇದರ ಹಿಂದಿರುವುದು ಸ್ವಾರ್ಥ, ಜನಾಂಗೀಯ ದ್ವೇಷ ಮತ್ತು ವ್ಯವಸ್ಥಿತ ಅಪಾರ್ಥೈಡ್ ಜನಾಂಗೀಯ ಭೇದದ ಸಿದ್ಧಾಂತ.
ಆದರೆ ಇಸ್ರೇಲಿನ ಈ ಜನಾಂಗೀಯ ದುರಭಿಮಾನಿ ಆಳ್ವಿಕೆಯನ್ನು ಜಗತ್ತಿನ ನೂರಾರು ಪ್ರಖ್ಯಾತ ಯೆಹೂದಿ ಗಣ್ಯರೇ ವಿರೋಧಿಸುತ್ತಾ ಬಂದಿದ್ದಾರೆ ಹಾಗೂ ಫೆಲೆಸ್ತೀನಿಯರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ.
ಇದರಲ್ಲಿ ಅತ್ಯಂತ ಪ್ರಮುಖರು ಪ್ರೊ. ನೋಮ್ ಚಾಮ್‌ಸ್ಕಿ. ಅವರು ಇಸ್ರೇಲಿಗಳು ಫೆಲೆಸ್ತೀನಿಯರ ಮೇಲೆ ನಡೆಸುತ್ತಿರುವುದು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ಕರಿಯರ ಮೇಲೆ ನಡೆಸಿದ ಅಪಾರ್ಥೈಡ್‌ಗಿಂತ ಭೀಕರವಾದ ಜನಾಂಗೀಯ ದ್ವೇಷದ ಆಡಳಿತ ಎಂದು ತಮ್ಮ ವಿದ್ವತ್ಪೂರ್ಣ ಕೃತಿಗಳಿಂದ ಜಗತ್ತಿನೆದುರು ತೆರೆದಿಟ್ಟಿರುವುದಲ್ಲದೆ ಫೆಲೆಸ್ತೀನಿಯರ ಹೋರಾಟಕ್ಕೆ ಬೆಂಬಲಿಸುತ್ತಾ ಬಂದಿದ್ದಾರೆ.
ತೀರಾ ಇತ್ತೀಚೆಗೆ ಯೆಹೂದಿ ಹಿನ್ನೆಲೆಯ ಜಗತ್ತಿನ 2,000ಕ್ಕೂ ಹೆಚ್ಚು ಗಣ್ಯ ಮಾನ್ಯರು ಇಸ್ರೇಲಿನಲ್ಲಿರುವುದು ಅಪಾರ್ಥೈಡ್ ಎಂದು ಘೋಷಿಸಿದ್ದಲ್ಲದೆ, ಗಾಝಾ ಪ್ರದೇಶವನ್ನು ಇಸ್ರೇಲ್ ಜಗತ್ತಿನ ಅತಿದೊಡ್ಡ ಬಯಲು ಬಂದಿಖಾನೆಯಾಗಿ ಪರಿವರ್ತಿಸಿದೆ ಎಂದು ಘೋಷಿಸಿದ್ದರು.
ತಮ್ಮ ತಮ್ಮ ಜಾತಿ, ಜನಾಂಗ, ಧರ್ಮ, ದೇಶಗಳ ದುರಭಿಮಾನವನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರು ತಮ್ಮ ಗುಂಪುಗಳಿಗೆ ಸೇರಿದ ಆಳುವ ಜನರ ಕಾಲಾಳುಗಳಾಗಿ ತಾವು ಅನ್ಯರು ಎಂದು ಭಾವಿಸುವವರ ಮೇಲೆ ಕುರುಡು ದ್ವೇಷ ದಾಳಿಗಳನ್ನು ನಡೆಸುತ್ತಿರುವ ಈ ಹೊತ್ತಿನಲ್ಲಿ, ಜಾತಿ-ಜನಾಂಗಗಳನ್ನು ಮೀರಿ ನ್ಯಾಯದ ಪರವಾಗಿ ನಿಂತ ಇಂತಹವರ ನಡೆನುಡಿಗಳು ಬೆಳಕಿನ ಕಿರಣಗಳಾಗಿ ಗೋಚರಿಸುತ್ತವೆ.
ಈಗಲೂ ಇಸ್ರೇಲಿನಲ್ಲೇ ಇದ್ದುಕೊಂಡು, ಹಮಾಸ್ ದಾಳಿ ನಡೆದ ನಂತರವೂ ಇಸ್ರೇಲಿನ ಜನರಲ್ಲಿ ದ್ವೇಷದ ಬದಲು ವಿವೇಕವನ್ನು ಉದ್ದೀಪಿಸುತ್ತಾ, ಇದು ನಮ್ಮ ಬೆಂಬಲದೊಂದಿಗೆ ನಮ್ಮ ಸರಕಾರ ನಡೆಸುತ್ತಾ ಬಂದಿರುವ ಅಪಾರ್ಥೈಡ್ ಅನಾಚಾರಗಳ ಫಲಿತಾಂಶವೆಂದೂ ತಿಳಿ ಹೇಳುತ್ತಾ, ಹಮಾಸ್ ದಾಳಿಗೆ ಬಲಿಯಾದವರ ಬಗ್ಗೆ ಕಣ್ಣೀರಿಡುತ್ತಲೇ ಅದಕ್ಕೆ ಗಾಝಾದ ಅಮಾಯಕ ಜನರನ್ನು ಬಲಿಗೊಡುವುದು ಉತ್ತರವಲ್ಲವೆಂದು ವಿವೇಕ ಹೇಳುತ್ತಾ... ಹಾಗೆ ಹೇಳುತ್ತಿರುವುದರಿಂದ ತಮ್ಮ ಜೀವವನ್ನು ಇಸ್ರೇಲಿ ಉಗ್ರರ ದಾಳಿಗೆ ತುತ್ತಾಗಿಸಿಕೊಳ್ಳುತ್ತಿರುವ ಹಲವಾರು ಸಾಕ್ಷಿ ಪ್ರಜ್ಞೆಗಳು ಈಗಲೂ ಇಸ್ರೇಲಿನಲ್ಲಿ ಕ್ರಿಯಾಶೀಲರಾಗಿದ್ದಾರೆ.
ಅದರಲ್ಲಿ ಇಸ್ರೇಲಿನ ರಾಜಧಾನಿ ಟೆಲ್ ಅವೀವ್‌ನಿಂದ +972 ಎಂಬ ವೆಬ್ ಪತ್ರಿಕೆ ತರುತ್ತಿರುವ ಹಗ್ಗೈ ಮತರ್ ಹಾಗೂ ಹಾರೆಟ್ಝ್ ಪತ್ರಿಕೆಯ ಪ್ರಖ್ಯಾತ ಪತ್ರಕರ್ತ ಗೈಡನ್ ಲೆವಿ ಪ್ರಮುಖರು. ಇವರಿಬ್ಬರೂ ಯೆಹೂದಿಗಳು ಮತ್ತು ಇಸ್ರೇಲಿಗಳು. ಹಮಾಸ್ ದಾಳಿಯ ನಂತರವೂ ಅವರು ಇಸ್ರೇಲಿನ ಜನರನ್ನು ಉದ್ದೇಶಿಸಿ ಬರೆದಿರುವ ಲೇಖನಗಳು ದ್ವೇಷದ ಹುಚ್ಚಿನಲ್ಲಿ ಮನುಷ್ಯರು ನೈತಿಕ ಪಾತಳಿಯನ್ನು ತಲುಪುತ್ತಿರುವ ಈ ಹೊತ್ತಿನಲ್ಲಿ ಔಷಧಿಯಂತೆ ಕಾಣುತ್ತದೆ.
ಹಾಗೆಯೇ ಫೆಲೆಸ್ತೀನ್ ವಿಷಯದಲ್ಲಿ ಯುರೋಪಿನ ಮತ್ತು ಅಮೆರಿಕನ್ ನಾಗರಿಕ ಸಮಾಜದ ಸೋಗಲಾಡಿತನವನ್ನು ಉದ್ದೇಶಿಸಿ ಯುರೋಪಿನ ಗಣ್ಯ ರಾಜಕಾರಣಿ ಹಾಗೂ ಪ್ರೊಫೆಸರ್ ಯಾನಿಸ್ ವಾರೊಫಾಕಿಸ್ ಬರೆದಿರುವ ಲೇಖನವೂ ನ್ಯಾಯದ ಕಣ್ಣನ್ನು ತೆರೆಸುತ್ತದೆ.
ಜಾಗತಿಕ ಸಾಕ್ಷಿ ಪ್ರಜ್ಞೆಗಳಂತಿರುವ ಆ ಮೂರು ಜನರ ಲೇಖನಗಳನ್ನು ಕನ್ನಡದ ಓದುಗರಿಗಾಗಿ ಈ ಬಾರಿಯ ಅಂಕಣದಲ್ಲಿ ಅನುವಾದಿಸಿದ್ದೇನೆ.
ದಯವಿಟ್ಟು ಓದಿ.
ಬಿಕ್ಕಟ್ಟಿನ ಸಮಯದಲ್ಲೂ ಈ ರೀತಿ ನ್ಯಾಯವನ್ನು ನುಡಿಯುವ ಮತ್ತು ನ್ಯಾಯವನ್ನು ನಡೆಯುವ ಈ ನೈತಿಕ ಹಾಗೂ ರಾಜಕೀಯ ವಿವೇಕ ಭಾರತ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಅಗತ್ಯವಿದೆಯಲ್ಲವೇ?