ರಾಜ್ಯದಲ್ಲಿ 21,67,320 ಕೋವಿಶೀಲ್ಡ್ ಡೋಸ್ ಖರೀದಿಸಿದ್ದ ಬಿಜೆಪಿ ಸರಕಾರ

Update: 2024-05-03 07:20 GMT

ಬೆಂಗಳೂರು, ಮೇ 2: ರಾಜ್ಯದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರಕಾರವು ಆ್ಯಸ್ಟ್ರಝೆನಕ ಕಂಪೆನಿಯು ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್‌ನ 21,67,320 ಡೋಸ್‌ಗಳನ್ನು ಖರೀದಿಸಿತ್ತು.

ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಆಗಲಿದೆ ಎಂದು ಆ್ಯಸ್ಟ್ರಝೆನಕವು ಒಪ್ಪಿಕೊಂಡಿರುವ ಬೆನ್ನಲ್ಲೇ ಹಿಂದಿನ ಬಿಜೆಪಿ ಸರಕಾರವು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಮೂಲಕ 68.15 ಕೋಟಿ ರೂ. ಮೊತ್ತದ ಕೋವಿಶೀಲ್ಡ್ ಲಸಿಕೆಗಳನ್ನು ಖರೀದಿಸಿತ್ತು ಎಂಬುದು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ‘The-file.in’ಗೆ ದಾಖಲೆಗಳು ಲಭ್ಯವಾಗಿವೆ.

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಎಪ್ರಿಲ್‌ನಲ್ಲಿ 3,00,000 ಡೋಸ್‌ಗಳನ್ನು ಪಡೆದಿತ್ತು. ಮೇ 3ರಂದು 7,04,050, ಮೇ 6ರಂದು 3,50,000, ಮೇ 29ರಂದು 8,13,270 ಸೇರಿ ಒಟ್ಟಾರೆ 21,67,320 ಡೋಸ್‌ಗಳನ್ನು ಖರೀದಿಸಿತ್ತು ಎಂಬುದು ತಿಳಿದು ಬಂದಿದೆ.

ಈ ಸಂಬಂಧ ಹಿಂದಿನ ಬಿಜೆಪಿ ಸರಕಾರವು ರಾಜ್ಯದ ಅನುದಾನದಿಂದ ಕಂಪೆನಿಗೆ 68.27 ಕೋಟಿ ರೂ. ಪೈಕಿ 67.15 ಕೋಟಿ ರೂ.ಗಳನ್ನು ಪಾವತಿಸಿರುವುದು ಗೊತ್ತಾಗಿದೆ.

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಖರೀದಿಸಿದ್ದ 21.67 ಲಕ್ಷ ಸಂಖ್ಯೆಯ ಕೋವಿಶೀಲ್ಡ್ ಡೋಸ್‌ಗಳನ್ನು ಎಲ್ಲಾ ಜಿಲ್ಲೆಗಳಿಗೂ ಹಂಚಿಕೆ ಮಾಡಿತ್ತು. ಆದರೆ ಭಾರತ ಸರಕಾರದ ಆರೋಗ್ಯ ಸಚಿವಾಲಯವು ಕರ್ನಾಟಕಕ್ಕೆ 66,41,620 ಸಂಖ್ಯೆಯ ಕೋವಿಶೀಲ್ಡ್ ಗಳನ್ನು ಸರಬರಾಜು ಮಾಡಿತ್ತು.

ಗುಜರಾತ್‌ಗೆ 97,43,830, ಮಧ್ಯ ಪ್ರದೇಶಕ್ಕೆ 71,02,720, ಮಹಾರಾಷ್ಟ್ರಕ್ಕೆ 1,13,19,250, ತಮಿಳುನಾಡಿಗೆ 46,46,820, ತೆಲಂಗಾಣಕ್ಕೆ 24,44,160, ಉತ್ತರ ಪ್ರದೇಶಕ್ಕೆ 1,04,43,580 ಕೋವಿಶೀಲ್ಡ್ ಲಸಿಕೆಗಳನ್ನು ಸರಬರಾಜು ಮಾಡಿತ್ತು ಎಂಬುದು ಭಾರತ ಸರಕಾರದ ಆರೋಗ್ಯ ಸಚಿವಾಲಯದ ದತ್ತಾಂಶಗಳಿಂದ ಗೊತ್ತಾಗಿದೆ.

ಗುಜರಾತ್‌ಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸೇರಿ ಒಟ್ಟು 1,10,19,330 (ಕೋವಿಶೀಲ್ಡ್ 97,43,830 ಮತ್ತು ಕೊವ್ಯಾಕ್ಸಿನ್ 12,75,500), ಮಹಾರಾಷ್ಟ್ರಕ್ಕೆ ಒಟ್ಟು 1,29,62,470, (ಕೋವಿಶೀಲ್ಡ್ 1,13,19,250 ಮತ್ತು ಕೊವ್ಯಾಕ್ಸಿನ್ 16,43,220), ರಾಜಸ್ಥಾನಕ್ಕೆ ಒಟ್ಟು 1,11,62,360 (ಕೋವಿಶೀಲ್ಡ್ 1,05,77,540 ಮತ್ತು ಕೋವ್ಯಾಕ್ಸಿನ್ 5,84,820) ಮತ್ತು ಉತ್ತರ ಪ್ರದೇಶಕ್ಕೆ 1,17,96,780 (ಕೋವಿಶೀಲ್ಡ್ 1,04,43,580 ಮತ್ತು ಕೋವ್ಯಾಕ್ಸಿನ್ 13,53,200) ಲಸಿಕೆಗಳನ್ನು ಸರಬರಾಜು ಮಾಡಿರುವುದು ಲಭ್ಯವಿರುವ ದತ್ತಾಂಶಗಳಿಂದ ತಿಳಿದು ಬಂದಿದೆ.

ಕೋವಿಡ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗಿದ್ದ ಹೊತ್ತಿನಲ್ಲಿ ಮಾರ್ಚ್ 17ರಂದು ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ್ದ ಮಾಹಿತಿ ಪ್ರಕಾರ ರಾಷ್ಟ್ರೀಯ ಲಸಿಕೆ ಪ್ರಮಾಣವು ಶೇ.6.5ರಷ್ಟಿತ್ತು. ಕರ್ನಾಟಕ, ತೆಲಂಗಾಣ, ಆಂಧ್ರ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಲಸಿಕೆ ವ್ಯರ್ಥ ಸರಾಸರಿ ಪ್ರಮಾಣವು ರಾಷ್ಟ್ರೀಯ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿತ್ತು.

ಒಟ್ಟು ಉತ್ಪಾದನೆಯಾಗಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರ್ಪೊರೇಟ್ ಆಸ್ಪತ್ರೆಗಳು ಖರೀದಿಸಿರುವುದು ಬಹಿರಂಗವಾಗಿತ್ತು. ವಿಶೇಷವೆಂದರೆ ಕರ್ನಾಟಕದಲ್ಲಿ ಕೋವಿಡ್ 3ನೇ ಅಲೆಯನ್ನು ತಡೆಗಟ್ಟಲು ರಚಿಸಿರುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ಡಾ.ದೇವಿಶೆಟ್ಟಿ ಅವರು ನಡೆಸುವ ನಾರಾಯಣ ಹೃದಯಾಲಯವು 2.02 ಲಕ್ಷ ಡೋಸ್‌ಗಳನ್ನು ಮೇ ತಿಂಗಳಲ್ಲಿ ಖರೀದಿಸಿತ್ತು.

2.2 ಲಕ್ಷ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡಿರುವ ನಾರಾಯಣ ಆಸ್ಪತ್ರೆಯ ಮುಖ್ಯಸ್ಥರೂ ಮತ್ತು ಕೋವಿಡ್ 3ನೇ ಅಲೆ ತಡೆಗಟ್ಟಲು ಕರ್ನಾಟಕ ಸರಕಾರವು ರಚಿಸಿರುವ ಉನ್ನತ ತಜ್ಞರ ಸಮಿತಿಯ ಅಧ್ಯಕ್ಷರಾಗಿರುವ ಡಾ.ದೇವಿಶೆಟ್ಟಿ ಸ್ವ-ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಗುರಿಯಾಗಿದ್ದರು.

ಕೋವಿಡ್ ಲಸಿಕೆಗಳ ಖರೀದಿ ಸಂಬಂಧ ಕೇಂದ್ರ ಸರಕಾರವು ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯ ಸರಕಾರದ ಬೊಕ್ಕಸದ ಮೇಲೆ ಈವರೆಗೆ ಅಂದಾಜು 55.78 ಕೋಟಿ ರೂ. ಹೊರೆಬಿದ್ದಿತ್ತು. ಆದಾಯ ಕೊರತೆಯಿಂದಾಗಿ ಬಳಲುತ್ತಿರುವ ಹೊತ್ತಿನಲ್ಲಿಯೇ ಕೇಂದ್ರದ ನೀತಿಯಿಂದಾಗಿಯೇ ರಾಜ್ಯ ಸರಕಾರದ ಮೇಲೆ 55.78 ಕೋಟಿ ಆರ್ಥಿಕ ಹೊರೆ ಬಿದ್ದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News