ವಾರ್ ರಿಪೋರ್ಟಿ೦ಗ್ ಹೆಸರಲ್ಲಿ ರೀಲ್ಸ್ ಮಾಡುವ, ಫೋಟೋಗೆ ಪೋಸ್ ಕೊಡುವ ಭಟ್ಟಂಗಿಗಳಲ್ಲ ಇವರು

Update: 2023-11-08 09:16 GMT
Editor : Thouheed | Byline : ಆರ್. ಜೀವಿ

ಯುದ್ಧ ವರದಿಗಾರಿಕೆ ಸಾಧಾರಣವಾದುದಲ್ಲ. ​ಇಲ್ಲಿನ ಕೆಲವು ಭಟ್ಟಂಗಿ ಆಂಕರ್ ಗಳು ಮಾಡಿದಂತೆ ಅದು ಪ್ರಹಸನ, ರೀಲ್ಸ್ ಅಂತೂ ಅಲ್ಲವೇ ಅಲ್ಲ.

ಜಗತ್ತಿನ ಬಹಳಷ್ಟು ಪತ್ರಕರ್ತರಿಗೆ ಅದು​ ಅತ್ಯಂತ ದೊಡ್ಡ ಸವಾಲಿನ, ಅತ್ಯಂತ ಕ್ಲಿಷ್ಟಕರ ಹಾಗು ಅತ್ಯಂತ ಹೆಮ್ಮೆಯ ವಿಚಾರ. ಮತ್ತೆ​ ಕೆಲವರಿಗೆ ಅದು, ಯುದ್ಧ ವರದಿಗಾರಿಕೆ ಹೆಸರಿನಲ್ಲಿ ಪ್ರವಾಸದ ಶೋಕಿ ಹಾಗೂ ಯಾವುದೋ ಸುರಕ್ಷಿತ ಜಾಗದಿಂದ ವರದಿಗಾರಿಕೆಯ ನಾಟಕ ಮಾಡಿ ಶಹಬ್ಬಾಸ್ಗಿರಿ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತ.

ಆದರೆ ಗಾಝಾದಲ್ಲಿ ಯುದ್ಧ ವರದಿಗಾರಿಕೆಗೆ ನಿಂತಿರುವ ಅಲ್ಲಿನದೇ ಪತ್ರಕರ್ತರಿಗೆ ಮಾತ್ರ ಅದು ಸತ್ಯವನ್ನು ಜಗತ್ತಿಗೆ ಮುಟ್ಟಿಸುವ ತಹತಹ, ಸಾವಿನೆದುರೇ ನಿಂತು ಕಡೇ ಕ್ಷಣದವರೆಗೂ ಕರ್ತವ್ಯ ನಿಭಾಯಿಸುವ ಪ್ರಾಮಾಣಿಕ ಪತ್ರಿಕಾವೃತ್ತಿ. ಗಾಝಾದಲ್ಲಿನ ಫೆಲೆಸ್ತೀನಿ ಪತ್ರಕರ್ತರ ಈ ರೀತಿ​, ಈ ಧೈರ್ಯ, ಸಾಹಸ ಜಗತ್ತಿನಲ್ಲಿ ​ಇನ್ನೆಲ್ಲೂ ಕಂಡುಬರದಂಥದು.

ತಮ್ಮ ಮನೆ ಬಾಗಿಲಲ್ಲಿಯೇ ನಡೆದಿರುವ ಯುದ್ಧದ ಭೀಕರತೆಯನ್ನು ವರದಿ ಮಾಡುತ್ತಿರುವ ಅವರು ಯಾವುದೇ ಕ್ಷಣದಲ್ಲಿಯೂ ಸಾವಿಗೆ ತುತ್ತಾಗಬಹುದಾದ ಸ್ಥಿತಿ. ನಿಂತಿರುವ ಜಾಗದಲ್ಲಿನ ಮೇಲ್ಛಾವಣಿಯ ಮೇಲೆಯೇ ಬಾಂಬ್ಗಳು ಬೀಳುತ್ತವೆ. ಅಡಗಿಕೊಳ್ಳಲು ಸ್ಥಳವಿಲ್ಲ, ಅಲ್ಲಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಗಾಝಾದಲ್ಲಿ ​ಈಗ ಇರುವುದು ಸಾವು ಎಂಬುದು ಅವರಿಗೆ​ ಬಹಳ ಚೆನ್ನಾಗಿ ಗೊತ್ತು.

​ಅಲ್ಲಿ ಹೆಲ್ಮೆಟ್ ಮತ್ತು ಬುಲೆಟ್ ಪ್ರೂಫ್ ಜಾಕೆಟ್ಗಳು ಉಪಯೋಗಕ್ಕೆ ಬರುವುದಿಲ್ಲ ಎಂಬುದು ಗೊತ್ತಿದ್ದರೂ ಗಾಝಾದಿಂದ ಅವರು ವರದಿ ಮಾಡುವುದನ್ನು ನಿಲ್ಲಿಸಿಲ್ಲ.​ ಎಲ್ಲೋ ದೂರದ ಸುರಕ್ಷಿತ ಸ್ಥಳದಲ್ಲಿ ಹೆಲ್ಮೆಟ್ ಹಾಗು ಜಾಕೆಟ್ ಹಾಕಿ ಫೋಟೋ ಶೂಟ್ ಮಾಡಿಸುವ ಭಟ್ಟಂಗಿ ಆಂಕರ್ ಗಳು ಅವರಲ್ಲ. ಇಲ್ಲೇ ಸ್ಟುಡಿಯೋದಲ್ಲೇ ಜಾಕೆಟ್ ಹಾಕಿಕೊಂಡು ಷೋ ಆಫ್ ಮಾಡುವವರೂ ಅವರಲ್ಲ.

ಅಲ್ಲಿ ಸ್ಫೋಟ, ದಾಳಿಗಳ ನಡುವೆಯೇ ನಿಂತು ಸುದ್ದಿ ಕೊಡುತ್ತಿರುವವರು ನಿಜವಾದ ಪತ್ರಕರ್ತರು, ನೈಜ ವರದಿಗಾರರು. ಅಲ್ಲಿ ಪತ್ರಕರ್ತರು ಲೈವ್ನಲ್ಲಿ ವರದಿ ಮಾಡುತ್ತಲೇ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ಬಿಚ್ಚಿ​ಡುವ ದೃಶ್ಯ ನೋಡಿದರೆ ಕರುಳು ಚುರ್ ಎನ್ನುತ್ತದೆ. ಯಾವ ಕ್ಷಣದಲ್ಲಿಯೂ ಎರಗಬಹುದಾದ ಸಾವಿಗೆ ಸಿದ್ಧರಾಗುತ್ತಲೇ ಅವರು ವರದಿಗಾರಿಕೆಯಲ್ಲಿ ತೊಡಗಿದ್ದಾರೆ.

ತಾವು ಧರಿಸಿರುವ ಬುಲೆಟ್ ಪ್ರೂಫ್ ಜಾಕೆಟ್ ಆಗಲಿ, ಹೆಲ್ಮೆಟ್ ಆಗಲಿ ತಮ್ಮನ್ನು ಉಳಿಸಲಾರದು ಎಂಬುದನ್ನು ಅರಿತವರಂತೆ, ಅದರ ಹಂಗು ಬೇಡ ಎಂಬ ಹಾಗೆ ಅವರು ತೋರಿಸುವ ದಿಟ್ಟತನ ಜಗತ್ತಿನ ಒಂದು ಭಾಗವನ್ನಾದರೂ ಕಲಕದೇ ಇರಲಾರದು. ಮಹಮ್ಮದ್ ಅಬು ಹತಾಬ್ ಅಂಥವರಲ್ಲಿ ಒಬ್ಬರಾಗಿದ್ದರು. ಅವರು ತಮ್ಮ ಪತ್ನಿ, ಮಗ, ಸಹೋದರ, ಅಲ್ಲದೆ ಇನ್ನೂ ಅನೇಕ ಕುಟುಂಬ ಸದಸ್ಯರೊಂದಿಗೇ ಬಾಂಬ್ ದಾಳಿಗೆ ಬಲಿಯಾಗಿ ಹೋದರು.

ಹಾಗೆ ಬಲಿಯಾಗುವುದಕ್ಕೆ ಅರ್ಧ ತಾಸು ಮೊದಲು ಅವರು ಯುದ್ಧದ ವರದಿಗಾರಿಕೆಯಲ್ಲಿ ತೊಡಗಿದ್ದರು. ​ಅಲ್ ಜಝೀರಾದ ಗಾಝಾ ಮುಖ್ಯ ವರದಿಗಾರ ವಾಯಿಲ್ ದಹ್ ದೂಹ್ ವರದಿ ಮಾಡುತ್ತಿರುವಾಗಲೇ ಅವರ ಪತ್ನಿ, ಮಗ, ಮಗಳು ಹಾಗು ಮೊಮ್ಮಗ ಇಸ್ರೇಲಿ ದಾಳಿಗೆ ಬಲಿಯಾದರು. ಅವರ ಇಡೀ ಕುಟುಂಬವೇ ಇಲ್ಲವಾಯಿತು. ತನ್ನವರನ್ನು ಕಳಕೊಂಡ ನೋವಿಗೆ ದುಃಖಿಸುವ ಅವಕಾಶವೂ ಅವರಿಗೆ ಸಿಗಲಿಲ್ಲ. ಬಲಿಯಾದ ಕುಟುಂಬ ಸದಸ್ಯರನ್ನು ಸಮಾಧಿ ಮಾಡಿ ಮತ್ತೆ ವರದಿಗಾರಿಕೆ ಶುರು ಮಾಡಿದರು ವಾಯಿಲ್ ದಹ್ ದೂಹ್.

ಎಂಥ ಸಂಕಟದ ಕಥೆ ಅಲ್ಲವೆ?

ಗಾಝಾದಲ್ಲಿ ನಿಂತು ವರದಿಗಾರಿಕೆಯಲ್ಲಿ ತೊಡಗಿರುವ ಅವರೆಲ್ಲರ ಸ್ಥಿತಿಯೂ ಒಂದೇ ಬಗೆಯದು. ಅವರ ನಡುವಿನ ಒಂದೇ ಒಂದು ಅಂತರವೆಂದರೆ, ಈಗ ಒಬ್ಬನ ಸಾವು ಸಂಭವಿಸುತ್ತದೆ. ಮತ್ತೊಬ್ಬನ ಸಾವು ​ಮುಂದಿನ ಯಾವುದೇ ಕ್ಷಣದಲ್ಲಿಯೂ ಆಗಬಹುದು.

ಜೊತೆಜೊತೆಯಲ್ಲಿಯೇ ಇದ್ದ ಹಲವರು ಕೊಲ್ಲಲ್ಪಟ್ಟಿದ್ದಾರೆ. ಮಹಮ್ಮದ್ ಅಬು ಹತಾಬ್ ಅವರ ಹಾಗೆಯೇ ಕುಟುಂಬ ಸಹಿತ ದಾಳಿಗೆ ಬಲಿಯಾಗಿರುವ​ ಫೆಲೆಸ್ತೀನಿ ಪತ್ರಕರ್ತರು ಹಲವರು. ಆದರೂ​ ಅಲ್ಲಿನ ಪತ್ರಕರ್ತರ ವರದಿಗಾರಿಕೆ ನಿಂತಿಲ್ಲ. ಅದು ಮುಂದುವರಿದೇ ಇದೆ. ಈ ಫೆಲೆಸ್ತೀನ್ ಪತ್ರಕರ್ತರ ಪಾಲಿಗೆ ಅವರ ಧೈರ್ಯ ಮತ್ತು ಕರ್ತವ್ಯದ ಮುಂದೆ ಪ್ರತಿ ಸವಾಲೂ ಸಣ್ಣದೇ ಆಗಿದೆ. ಕೇವಲ ಒಂದು ಸುದ್ದಿಗಾಗಿ​, ವರದಿಗಾಗಿ ತಮ್ಮ ಪ್ರಾಣವನ್ನೇ ಕೊಡುತ್ತಿರುವ ಬದ್ಧತೆ ಅವರದು.

ಈ ಫೆಲೆಸ್ತೀನ್ ಪತ್ರಕರ್ತರು ಆಹಾರ, ನೀರು ಮತ್ತು ಸಂಬಳವಿಲ್ಲದಿದ್ದರೂ ವರದಿ ಮಾಡುತ್ತಿದ್ದಾರೆ ಮತ್ತು ತಮ್ಮ ಆ ಕೆಲಸದ ನಡುವೆಯೇ ಸಾಯುತ್ತಿದ್ದಾರೆ. ಪತ್ರಕರ್ತರ​ನ್ನೇ ಉದ್ದೇಶಪೂರ್ವಕವಾಗಿ​ ಇಸ್ರೇಲ್ ಟಾರ್ಗೆಟ್ ಮಾ​ಡುತ್ತಿದೆ ಎಂಬುದು ಗಾಝಾ ಪತ್ರಕರ್ತರ ನೋವು. ಯುದ್ಧ ಶುರುವಾದ ಬಳಿಕ ಈವರೆಗೆ 35ಕ್ಕೂ ಹೆಚ್ಚು ಪತ್ರಕರ್ತರು ಬಲಿಯಾಗಿದ್ದಾರೆ. ಅವರಲ್ಲಿ 30ಕ್ಕೂ ಹೆಚ್ಚು ಫೆಲೆಸ್ತೀನ್ ಪತ್ರಕರ್ತರು. ನಾಲ್ವರು ಇಸ್ರೇಲಿ ಮತ್ತು ಒಬ್ಬ ಲೆಬನಾನ್ ಪತ್ರಕರ್ತ ಗಾಝಾದಲ್ಲಿ ಸಾವಿಗೀಡಾಗಿದ್ದಾರೆ.

ಯುದ್ಧ ಶುರುವಾದಾಗಿನಿಂದ ಎಷ್ಟು ಇಸ್ರೇಲಿಗಳು ಬಲಿಯಾದರು​ ಎಂಬುದರ ಲೆಕ್ಕವನ್ನು ಕೊಡುವ ಮಾಧ್ಯಮಗಳು ಎಷ್ಟು ಮಂದಿ ಫೆಲೆಸ್ತೀನಿಯರು ಬಲಿಯಾದರು ಎಂಬುದರ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ ಎಂಬ ಮತ್ತೊಂದು ಕಟು ವಾಸ್ತವವೂ ಇಂದಿನ ಪತ್ರಿಕೋದ್ಯಮದಲ್ಲಿ ಇದೆ.

ಅಕ್ಟೋಬರ್ 30ರವರೆಗೆ ಗಾಝಾದಲ್ಲಿ ಸತ್ತವರ ಸಂಖ್ಯೆ 8 ಸಾವಿರ ದಾಟಿದೆ. ಆದರೆ ಇಸ್ರೇಲ್ ಮತ್ತು ಇಸ್ರೇಲನ್ನು ಬೆಂಬಲಿಸುವ ​ಬಹುತೇಕ ವಿದೇಶಿ ಮಾಧ್ಯಮಗಳಿಗೆ ಕಾಣುವುದು ಇಸ್ರೇಲಿಗಳ ಸಾವು ಮಾತ್ರ. ಈಗಲೂ ಮೊದಲ ದಿನದ ಹಮಾಸ್ ದಾಳಿಯ ಕ್ಲಿಪ್ಪಿಂಗ್ಗಳನ್ನೇ ತೋರಿಸುತ್ತ,​ ಅದಕ್ಕೂ ಮೊದಲಿನ ಹಾಗು ಆಮೇಲಿನ ಒಂದಿಡೀ ತಿಂಗಳ ತನ್ನ ಕ್ರೌರ್ಯವನ್ನು ಮರೆಮಾಚುವ ಕೆಲಸವನ್ನೂ ಇಸ್ರೇಲ್ ಮಾಡುತ್ತಿದೆ.

ಅಲ್ಲಿಯೂ ಭಾರತದಲ್ಲಿನ ಬಿಜೆಪಿ ಸರ್ಕಾರದಲ್ಲಿ ನಡೆಯುವ ಹಾಗೆ ಯಾವುದನ್ನು ತೋರಿಸಬೇಕು, ಯಾವುದನ್ನು ಎಡಿಟ್ ಮಾಡಬೇಕು, ಯಾವುದನ್ನು ತೋರಿಸಿದರೆ ತನ್ನ ಬೆಂಬಲಿಗರಲ್ಲಿ ಭಾವನಾತ್ಮಕ ಪ್ರಚೋದನೆ ಉಂಟು ಮಾಡಬಹುದು, ಯಾವುದರಿಂದ ತನಗೆ ಲಾಭ ಎಂಬ ಲೆಕ್ಕಾಚಾರ ಮಾಡಿಯೇ ತೋರಿಸಲಾಗುತ್ತಿದೆ.

ಹಮಾಸ್ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತ ಹತ್ಯಾಕಾಂಡ ಎಂದು ಹೇಳುವ ಇಸ್ರೇಲ್, ಅದರ ಹಲವಾರು ಪಟ್ಟು ಹೆಚ್ಚು ಭೀಕರ ಸನ್ನಿವೇಶವನ್ನು ತನ್ನ ದಾಳಿಯ ಮೂಲಕ ಗಾಝಾದಲ್ಲಿ ಸೃಷ್ಟಿಸಿದೆ.​ ಅದರ ಬಗ್ಗೆ ಅದು ಚಕಾರವೆತ್ತುವುದಿಲ್ಲ. ಜಗತ್ತಿನ ಕಣ್ಣಿನಲ್ಲಿ ಮಾತ್ರ ಸಾಚಾ ಎಂದು ತೋರಿಸಿಕೊಳ್ಳುವ ಕಸರತ್ತು ನಡೆಸಿಯೇ ಇದೆ. ಇಂಥ, ಸತ್ಯ ಮರೆಮಾಚುವ ಸನ್ನಿವೇಶದಲ್ಲಿ ಫೆಲೆಸ್ತೀನ್ ಪತ್ರಕರ್ತರು ಜಗತ್ತಿಗೆ ಸತ್ಯವನ್ನು ಹೇಳುವ ಹೊಣೆಗಾರಿಕೆಯೊಂದಿಗೆ, ಸಾವು ಎದುರಲ್ಲೇ ಇದೆ ಎಂದು ಗೊತ್ತಿದ್ದರೂ ತೊಡಗಿದ್ದಾರೆ. ಆ ಹೊಣೆ ನಿಭಾಯಿಸುತ್ತಲೇ ಸಾಯುತ್ತಿದ್ದಾರೆ.

ಅಮೆರಿಕದಂಥ ದೇಶವೂ ಸೇರಿ ಎಲ್ಲರೂ ಇಸ್ರೇಲ್ ಪರ ನಿಂತಾಗ, ಗಾಝಾದಲ್ಲಿನ​ ವಾಸ್ತವ ಹೇಗಾದರೂ ಬಯಲಿಗೆ ಬರಲು ಸಾಧ್ಯವಾದೀತು? ಫೆಲೆಸ್ತೀನಿಯರ ಸಂಕಟ ಯಾರಿಗೆ ಅರ್ಥವಾದೀತು?. ಇಂಥ ಸನ್ನಿವೇಶದಲ್ಲಿ ಸತ್ಯವನ್ನು ಜಗತ್ತಿಗೆ ಮುಟ್ಟಿಸುವ ಯತ್ನವಾಗಿ ಸಾವಿಗೆ ಎದೆ ಕೊಟ್ಟು ವರದಿಗಾರಿಕೆಯಲ್ಲಿ ತೊಡಗಿದ್ದಾರೆ ಫೆಲೆಸ್ತೀ​ನೀ ಪತ್ರಕರ್ತರು. ತಮ್ಮ ಸುತ್ತಲಿನ ವ್ಯಾಪಕ ವಿನಾಶವನ್ನು ​ದಾಖಲಿಸಲು ತೊಡಗಿದ್ದಾರೆ. ತಮ್ಮ ಫೋನ್ಗಳನ್ನೇ ಬಳಸಿಕೊಂಡು, ಅಲ್ಲೇನಾಗುತ್ತಿದೆ ಎಂಬುದನ್ನು ಜಗತ್ತಿನೆದುರು ತೆರೆದಿಡುವ ಕೆಲಸ ಮಾಡುತ್ತಿದ್ದಾರೆ.

​ಕೇವಲ 22 ವರ್ಷ ವಯಸ್ಸಿನ ಪ್ಲೆಸ್ಟಿಯಾ ಅಲಕಾಡ್‌ ಕೂಡ ಅಂತಹ ಒಬ್ಬರು. ಆಕೆ ತನ್ನ ಇನ್ಸ್ಟಾಗ್ರಾಂ ಪೋಸ್ಟ್ಗಳಲ್ಲಿ ಹಂಚಿಕೊಂಡ ವೀಡಿಯೊಗಳಲ್ಲಿ ಅಲ್ಲಿನ ಕರಾಳತೆ ಎಂಥದು ಎಂಬುದನ್ನು ಕಾಣಬಹುದು. ಹಿನ್ನೆಲೆಯಲ್ಲಿಯೇ ಬಾಂಬ್ ಸ್ಫೋಟಿಸುವುದಕ್ಕೆ ತತ್ತರಿಸುತ್ತ ಮಾತು ನಿಲ್ಲಿಸುವುದನ್ನೂ, ಎಲ್ಲ ಧ್ವಂಸವಾಗಿರುವ ಚಿತ್ರಗಳನ್ನೂ ನೋಡಬಹುದು. ಬಾಂಬ್ ದಾಳಿಯಿಂದ, ಕಟ್ಟಡಗಳು ನೆಲಸಮವಾಗಿರುವುದ​ರಿಂದ ಎದ್ದ ಧೂಳಿನ ಚಿತ್ರಗಳು ಉಳಿಸಿರುವ ವಿಷಾದವನ್ನು ಗ್ರಹಿಸಬಹುದು.

ಇಂಟರ್ನೆಟ್ ಇಲ್ಲದೆ, ಯಾವುದೇ ವೀಡಿಯೊಗಳನ್ನು ಪೋಸ್ಟ್ ಮಾಡಲು ಅಥವಾ ಯಾವುದೇ ಸಂದರ್ಶನಗಳನ್ನು ಮಾಡಲು ಸಾಧ್ಯವಾಗದ ಸ್ಥಿತಿಯ ಬಗ್ಗೆಯೂ ಆಕೆ ಹೇಳುತ್ತಾರೆ. ಅಲ್ಲಿನ ಬೀದಿಗಳು ಎಷ್ಟು ನಾಶವಾಗಿವೆ ಎಂದರೆ, ಆಂಬ್ಯುಲೆನ್ಸ್ಗಳು ಯಾವುದೇ ಸ್ಥಳಕ್ಕೆ ತಲುಪಲು ಸಾಧ್ಯವಿಲ್ಲ ಎನ್ನುತ್ತಾರೆ.

ವೀಡಿಯೊ ಮಾಡಲು ತಾನು ಬಳಸುವ ಫೋನ್‌ಗಳಲ್ಲಿ ಬ್ಯಾಟರಿ ಕೂಡ ಮುಗಿಯುತ್ತಿರುವುದನ್ನೂ, ಆಸ್ಪತ್ರೆಯಲ್ಲಿ ಫೋನ್‌ಗಳನ್ನು ಚಾರ್ಜ್‌ ಮಾಡಿಕೊಳ್ಳುವುದನ್ನೂ ಆಕೆ ಹೇಳಿಕೊಂಡಿದ್ದಾರೆ. ಅಲ್ಲಿ ಯಾವುದೇ ಆಶ್ರಯವಿಲ್ಲ, ಸುರಕ್ಷಿತ ಸ್ಥಳಗಳಿಲ್ಲ ಮತ್ತು ಸುರಕ್ಷತೆಯಂತೂ ಇಲ್ಲವೇ ಇಲ್ಲ ಎಂಬುದನ್ನು ವಿವರಿಸುತ್ತಾರೆ. ಗಾಝಾದಲ್ಲಿ ನೀರು, ವಿದ್ಯುತ್ ಅಥವಾ ಇಂಟರ್ನೆಟ್ ಇಲ್ಲ. ಗಾಝಾದಲ್ಲಿ ಎಷ್ಟು ಅಪಾಯಕಾರಿ ಸ್ಥಿತಿಯಿದೆಯೆಂದರೆ, ಯಾವುದೇ ಸಮಯದಲ್ಲಿ ಎಲ್ಲೇ ಆದರೂ ಬಾಂಬ್ ಬೀಳಬಹುದು ಎನ್ನುತ್ತಾರೆ.

ತನ್ನದೇ ಮನೆ ಧ್ವಂಸಗೊಂಡು ಬಿದ್ದಿರುವುದನ್ನು ನೋಡುತ್ತ ಮಾತಿಲ್ಲದಂತಾಗುವುದನ್ನೂ ಆಕೆ ವಿವರಿಸುತ್ತಾರೆ. ಅಲ್ ಜಝೀರಾ ಚಾನಲ್ ತನ್ನೆಲ್ಲ ಇತಿಮಿತಿಗಳ ಹೊರತಾಗಿಯೂ ಸದ್ಯಕ್ಕೆ ಫೆಲೆಸ್ತೀನ್ ಮೇಲಿನ ಇಸ್ರೇಲ್ ಆಕ್ರಮಣದ ಬಗ್ಗೆ ವಿವರವಾಗಿ ವರದಿ ಮಾಡುತ್ತಿರುವ, ಅಲ್ಲಿನ ಕಟು ವಾಸ್ತವಗಳನ್ನು ಜಗತ್ತಿಗೆ ತೋರಿಸುತ್ತಿರುವ ಏಕೈಕ ಜಾಗತಿಕ ಚಾನಲ್. ಅಲ್ ಜಝೀರಾ ಇದ್ದಿದ್ದರಿಂದ ಫೆಲೆಸ್ತೀನ್ ಮೇಲೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಇಷ್ಟಾದರೂ ಸತ್ಯ ಹೊರಬರುತ್ತಿದೆ. ಜಗತ್ತಿನೆಲ್ಲೆಡೆ ಜನರನ್ನು ತಲುಪುತ್ತಿದೆ. ಅದಕ್ಕಾಗಿ ಅಲ್ ಜಝೀರಾ ಇಸ್ರೇಲ್ ಹಾಗು ಅಮೇರಿಕಾದ ಕೆಂಗಣ್ಣಿಗೂ ಗುರಿಯಾಗಿದೆ. ಜೆರುಸಲೇಮ್ ನಲ್ಲಿರುವ ಅಲ್ ಜಝೀರಾ ಬ್ಯುರೋ ವನ್ನು ಬಂದ್ ಮಾಡಬೇಕು ಎಂದೂ ಇಸ್ರೇಲ್ ಸಚಿವರು ತಯಾರಿ ನಡೆಸಿದ್ದರು.

ಇದನ್ನೆಲ್ಲ ನೋಡಿ ಮನಸ್ಸು ಕಲಕುವಾಗ ಇಲ್ಲಿ ಮೋದಿ ಮೋದಿ ಎನ್ನುವ ​ಮಡಿಲ ಮೀಡಿಯಾಗಳು, ಬದ್ಧತೆ ಪ್ರಾಮಾಣಿಕತೆ, ಹೋಗಲಿ ಕನಿಷ್ಠ ಸ್ವಾಭಿಮಾನವೂ ಇಲ್ಲದ, ಲಜ್ಜೆಯೂ ಇಲ್ಲದ ಅವುಗಳ ಪತ್ರಕರ್ತರು, ಸಂಪಾದಕರು, ಚಾನೆಲ್ ಮಾಲೀಕರು ಫೆಲೆಸ್ತೀನ್ ಅನ್ನು ದ್ವೇಷಿಸುವ ರೀತಿ ಇನ್ನಷ್ಟು ಕಠೋರವೂ ಭಯಂಕರವೂ ಆಗಿದೆ.

ಇಲ್ಲಿಂದಲೂ ಇಸ್ರೇಲ್-ಫೆಲೆಸ್ತೀನ್ ಯುದ್ಧ ವರದಿಗೆಂದು ಹಲವರು ಹೋಗಿ ಬಂದಿದ್ದಾರೆ. ಅವರೆಲ್ಲರ ಈ ಪ್ರವಾಸವನ್ನು ಬಿಜೆಪಿ ಸರ್ಕಾರವೇ ನೋಡಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ. ಯುದ್ಧ ವರದಿ ಹೆಸರಿನಲ್ಲಿ ಅವರೆಲ್ಲರ ದೊಡ್ಡ ನಾಟಕವೂ ನಡೆದು ಹೋಯಿತು.​ ಅವರು ಅಲ್ಲಿ ಎಲ್ಲಿಂದಲೋ ವರದಿಗಾರಿಕೆ ಮಾಡುತ್ತಿರುವಂತೆ ಫೂಟೇಜ್ ಕಳಿಸುವುದು, ಸ್ಟುಡಿಯೋದಲ್ಲಿಯೇ ಯುದ್ಧ ದೃಶ್ಯಗಳನ್ನು ಅವರ ವರದಿಗೆ ಹಿನ್ನೆಲೆಯಾಗಿ ಹೊಂದಿಸಿ ತೋರಿಸಿ ಗ್ರೌಂಡ್ ರಿಪೋರ್ಟ್ ಎಂಬ ಅಸಭ್ಯವೂ ಆತ್ಮವಂಚನೆಯೂ ನಡೆದದ್ದು ಅಚ್ಚರಿಯ ವಿಚಾರವೇನಲ್ಲ.

​ಯುದ್ಧ ವರದಿಗೆ ಹೋಗಿ ಆರಾಮವಾಗಿ ರೀಲ್ಸ್ ಮಾಡುವ, ಬೇರೆ ಬೇರೆ ಭಂಗಿಗಳಲ್ಲಿ ತಮ್ಮದೇ ಫೋಟೋ, ವಿಡಿಯೋಗಳಿಗೆ ಪೋಸು ಕೊಡುವ, ಅಲ್ಲೂ ಮೋದಿಯನ್ನು ಹೊಗಳುವ, ಅಲ್ಲಿನ ಜನರಲ್ಲೂ ಮೋದಿ ಬಗ್ಗೆ ಕೇಳುವ ಪ್ರಹಸನಗಳನ್ನೆಲ್ಲಾ ನಾವು ನೋಡಿದ್ದೇವೆ. ಯಾಕೆಂದರೆ, ಸತ್ಯ ಅವರಾರಿಗೂ ಬೇಕಾಗಿಯೂ ಇಲ್ಲ, ಅದನ್ನು ತೋರಿಸುವುದು ಅವರ ಜಾಯಮಾನವೂ ಅಲ್ಲ. ಎಂದಿನಂತೆ ಅವರ ನಾಟಕ ಯುದ್ಧ ವರದಿಗಾರಿಕೆಯಲ್ಲಿಯೂ ಮುಂದುವರಿಯಿತು. ಬಹುಶಃ ಅವರಾರಿಗೂ ಫೆಲೆಸ್ತೀನ್ ಪತ್ರಕರ್ತರ ನಿಷ್ಠುರತೆ ಮತ್ತು ನಿರ್ಭೀತಿ ಖಂಡಿತ ಅರ್ಥವಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News