ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಎಕ್ಸ್‌ ರೇ ಯಂತ್ರಗಳ ಅನಗತ್ಯ ಖರೀದಿ

Update: 2024-06-12 04:49 GMT

ಸಾಂದರ್ಭಿಕ ಚಿತ್ರ PC: freepik

ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ರಾಜ್ಯದ ಸಾರ್ವಜನಿಕ ಆಸ್ಪತ್ರೆ ಗಳಲ್ಲಿ ಬೇಡಿಕೆ ಇರದಿದ್ದರೂ ಕೋಟ್ಯಂತರ ರೂ. ಮೊತ್ತದಲ್ಲಿ ಎಕ್ಸ್ ರೇ ಯಂತ್ರೋಪಕರಣಗಳನ್ನು ಖರೀದಿ ಮಾಡಲಾಗಿತ್ತು. ಒದಗಿಸಿದ್ದ ಅನುದಾನವನ್ನು ಖರ್ಚು ಮಾಡುವ ಉದ್ದೇಶದಿಂದ ವಿನಾ ಕಾರಣ ಖರೀದಿಸಿತ್ತು ಎಂದು ಲೋಕಾಯುಕ್ತ ತನಿಖಾ ತಂಡವು ಬಯಲಿಗೆಳೆದಿದೆ.

2019ನೇ ಸಾಲಿನಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಎಕ್ಸ್ ರೇ ಯಂತ್ರೋಪಕರಣಗಳ ಖರೀದಿಯಲ್ಲಿ ಹಲವು ಲೋಪ ಮತ್ತು ಅಕ್ರಮಗಳನ್ನು ನಡೆಸಿದೆ ಎಂದು ಬಿಜೆಪಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಲೋಕಾಯುಕ್ತಕ್ಕೆ 2020ರಲ್ಲಿ ದೂರು ಸಲ್ಲಿಸಿದ್ದರು.

ಈ ದೂರನ್ನಾಧರಿಸಿ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗವು 2024ರ ಜನವರಿಯಲ್ಲೇ ಈ ಸಂಬಂಧ ತನಿಖಾ ವರದಿಯನ್ನು ಸಲ್ಲಿಸಿದೆ. ಇದರ ಪ್ರತಿಯು 'the-file.in'ಗೆ ಲಭ್ಯವಾಗಿದೆ.

ಟೆಂಡರ್ ನಿಯಮದಂತೆ ಯಶಸ್ವಿ ಬಿಡ್‌ದಾರರು ಸಲ್ಲಿಸಿರುವ ಅನುಭವ ದೃಢೀಕರಣ ಪತ್ರವು ನಕಲಿಯಾಗಿದೆ.C-ARM, 500, mA-HF X-Ray and 100ma X-RAYಗಳನ್ನು ಟೆಂಡರ್ ನಿಯಮಗಳಂತೆ ಅಳವಡಿಸಿಲ್ಲ. ಡೆಮೋ ಮತ್ತು ತಪಾಸಣೆಗೆ ಇರಿಸಲಾದ ಮಾದರಿಯಲ್ಲಿ ಇರುವಂತೆ ಉಪಕರಣಗಳನ್ನು ಸರಬರಾಜು ಮಾಡದೇ ಕಳಪೆ ಗುಣಮಟ್ಟದ ಉಪಕರಣಗಳನ್ನು ಸರಬರಾಜು ಮಾಡಲಾಗಿದೆ ಎಂದು ದೂರಿದ್ದರು.

ಕೆಲವು ಉಪಕರಣಗಳನ್ನು ಮಾರುಕಟ್ಟೆ ದರಗಳಿಗಿಂತ ಹೆಚ್ಚಿ ನ ಬೆಲೆಗೆ ಖರೀದಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಗುತ್ತಿಗೆದಾರರು/ಸರಬರಾಜುದಾರರು, ಸರಬರಾಜು ಮಾಡಲಾದ ಉಪಕರಣಗಳ ದಾಸ್ತಾನು ದೃಢೀಕರಣ ಪತ್ರ ಪಡೆಯದೇ ಹಣ ಪಾವತಿ ಮಾಡಲಾಗಿದೆ ಎಂದು ಡಾ.ಸಾರ್ವಭೌಮ ಬಗಲಿ ದಾಖಲೆ ಸಮೇತ ನೀಡಿದ್ದ ದೂರಿನಲ್ಲಿ ವಿವರಿಸಿದ್ದರು.

ಈ ದೂರಿನ ಕುರಿತು ಲೋಕಾಯುಕ್ತ ತಾಂತ್ರಿಕ ತಂಡವು ತನಿಖೆ ನಡೆಸಿತ್ತು ಎಕ್ಸ್ ರೇ ಉಪಕರಣಗಳನ್ನು ಸರಬ ರಾಜು ಮಾಡಿದ್ದ ಕಂಪೆನಿಯ ಅನುಭವ ದೃಢೀ ಕರಣ ಪತ್ರಗಳನ್ನು ಲೋಕಾಯುಕ್ತ ತನಿಖಾ ತಂಡವು ಪರಿಶೀಲಿಸಿತ್ತು. ಈ ಸಂಬಂಧ ನಿಗಮವು ಸಂಬಂಧ ಪಟ್ಟ ಕಚೇರಿ, ಸಂಸ್ಥೆ, ಕಂಪೆನಿ, ಇಲಾಖೆ ಇತ್ಯಾದಿ ಗಳಿಗೆ ಪತ್ರ ಬರೆದು ಅನುಭವ ದೃಢೀಕರಣ ಪತ್ರದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿರುವ ಬಗ್ಗೆ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಿಲ್ಲ ಎಂಬ ಅಂಶವನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಭಾಗವಹಿಸಿದ್ದ ಬಿಡ್‌ದಾರರಲ್ಲಿ ತಾಂತ್ರಿಕವಾಗಿ ಯಶಸ್ವಿ ಬಿಡ್‌ದಾರರು ಆಗಿರುವ ವಿವರಗಳನ್ನು ಮಾತ್ರ ನಮೂದಿಸಲಾಗಿದೆ. ಆದ್ದರಿಂದ ಸದರಿ ಸರಬರಾಜುದಾರರು ಸಲ್ಲಿಸಿರುವ ಅನುಭವ ದೃಢೀಕೃತ ಪ್ರತಿ ಮತ್ತು ಅದರ ನೈಜತೆಯನ್ನು ತಿಳಿಯಲು ಪೂರಕ ವಾದ ದಾಖಲೆಗಳು ತನಿಖೆಗೆ ಲಭ್ಯವಿರುವುದಿಲ್ಲ,’ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

500, mA-HF X-RAY and 100ma X-RAY ಯಂತ್ರಗಳ ಖರೀದಿಯಲ್ಲಿಯೂ ಸಹಾ ಟೆಂಡರ್ ಪರಿಶೀಲನಾ ಸಮಿತಿಯು 2019ರ ಮಾರ್ಚ್ 18ರಂದು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಡ್‌ದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ತಾಂತ್ರಿಕವಾಗಿ ಯಶಸ್ವಿಯಾದ ಬಿಡ್‌ದಾರರನ್ನು ಅಂತಿಮಗೊಳಿಸಿತ್ತು. ಒಟ್ಟಾರೆ ವಿವಿಧ ಸರಬರಾಜು ದಾರರು ಸಲ್ಲಿಸಿರುವ ದಾಖಲೆಗಳ ಅನ್ವಯ ತಾಂತ್ರಿಕ ಪರಿಶೀಲನಾ ಸಮಿತಿಯಲ್ಲಿ ಭಾಗವಹಿಸಿದ ಸರಬರಾಜುದಾರರ ತಾಂತ್ರಿಕವಾಗಿ ಯಶಸ್ವಿಯಾಗಿರುವ ಬಗ್ಗೆ ಮಾತ್ರ ಅನುಮೋದಿಸಿತ್ತು ಎಂಬುದು ತನಿಖಾ ವರದಿಯಿಂದ ತಿಳಿದು ಬಂದಿದೆ.

ಟೆಂಡರ್ ನಿಯಮಗಳಂತೆ ಅಳವಡಿಸಿಲ್ಲ: ಟ್ರಿವಿಟ್ರಾನ್ ಹೆಲ್ತ್ ಕೇರ್ ಪ್ರೈ.ಲಿ. ಅವರೊಂದಿಗೆ 2019ರ ಮೇ 28ರಂದು 23 ಉಪಕರಣಗಳನ್ನು ವಿವಿಧ ಆಸ್ಪತ್ರೆಗಳಿಗೆ ಅಳವಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ 2019ರ ಜೂನ್ 12ರಂದು ಸದರಿ ಸರಬರಾಜುದಾರರಿಗೆ ಆದೇಶ ನೀಡಲಾಗಿದೆ. ಈ ಸರಬರಾಜು ಆದೇಶದ ಅನ್ವಯ 30 ದಿನಗಳೊಳಗಾಗಿ ಸದರಿ ಸರಬ ರಾಜುದಾರರು ಈ ಉಪಕರಣಗಳನ್ನು ಖರೀದಿಸಿ ಅಳವಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು.

ನಂತರದ ದಿನಗಳಲ್ಲಿ ಕೆಲವು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರಬ ರಾಜುಗೊಂಡಿರುವ ಕೆಲವು ಸಿ-ಎಆರ್‌ಎಂ ಯಂತ್ರಗಳು ತಮ್ಮ ಆಸ್ಪತ್ರೆಗೆ ಅವಶ್ಯವಿರುವುದಿಲ್ಲವೆಂದು ಅವುಗಳನ್ನು ಸ್ಥಳಾಂತರಿಸಬೇಕು ಎಂದು ಕೋರಿದ್ದರು.

‘ಮೇಲಿನ ವಿವರಗಳನ್ನು ಗಮನಿಸಿದಾಗ ಈ ಖರೀದಿ ಪ್ರಕ್ರಿಯೆ ಪೂರ್ವದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ಉಪಕರಣಗಳ ಅವಶ್ಯಕತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಅಥವಾ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಂದ ಬೇಡಿಕೆ ಪತ್ರಗಳನ್ನು ಪಡೆದು ಖರೀದಿ ಪ್ರಕ್ರಿಯೆ ನಡೆಸಿರುವುದಿಲ್ಲ. ಬದಲಿಗೆ ಅನುದಾನ ಇರುವುದನ್ನು ಬಳಕೆ ಮಾಡುವ ದೃಷ್ಟಿಯಿಂದ ವಿನಾಕಾರಣ ಖರೀದಿ ಪ್ರಕ್ರಿಯೆ ನಡೆಸಿರುವುದು ಕಂಡುಬಂದಿರುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸರಬರಾಜುದಾರರು ವಿವಿಧ ಆಸ್ಪತ್ರೆಗಳಿಗೆ ಉಪಕರಣಗಳನ್ನು ಸರಬರಾಜು ಮಾಡಿ ಟೆಂಡರ್ ಷರತ್ತುಗಳನ್ವಯ ಅಳವಡಿಸಿರುತ್ತಾರೆ ಎಂದು ಸಂಬಂಧಪಟ್ಟ ವೈದ್ಯಾಧಿಕಾರಿಗಳು ದೃಢೀಕರಿಸಿರುವ ವಿವರಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ. ಅಲ್ಲದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಸಲ್ಲಿಸಿರುವ ದಾಖಲೆ ಗಳಲ್ಲೂ ಸಂಬಂಧಪಟ್ಟ ಜಿಲ್ಲಾ, ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿ ಗಳು ಸದರಿ ಉಪಕರಣಗಳ ಸರಬರಾಜು ಮತ್ತು ಅಳವಡಿಕೆಗೆ ಸಂಬಂಧಿಸಿದ ದೃಢೀಕರಣಗಳು ಇರಲಿಲ್ಲ.

‘ಇದರಿಂದ ಸಂಬಂಧಪಟ್ಟ ಉಪಕರಣಗಳು ಟೆಂಡರ್ ಷರತ್ತು ಗಳಿಗೆ ಅನುಗುಣವಾಗಿ ಅಥವಾ ಬೇಡಿಕೆ ಪತ್ರಗಳಿಗೆ ಅನುಗುಣವಾಗಿ ನಿಗದಿತ ದಿನಾಂಕದೊಳಗೆ ಅಳವಡಿಸಲಾಗಿರುತ್ತದೆ ಮತ್ತು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಆಗಿರುವುದಿಲ್ಲ,’ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಅದೇ ರೀತಿ ಟೆಂಡರ್ (ಸಂಖ್ಯೆ KDL/EQPT/TND/60/2018-19 (IND-560)ಮೂಲಕ ಆಯ್ಕೆ ಯಾದ ಜನರಲ್ ಮೆಡಿಕಲ್ ಇಕ್ವ್ವಿಪ್ಮೆಂಟ್ ಅವರಿಂದ 2 ಸಂಖ್ಯೆಗಳ 500, mA-HF X-Ray ಮತ್ತು 26 ಸಂಖ್ಯೆಗಳ 100 ಎಂಎ ಎಕ್ಸ್ ರೇ ಯಂತ್ರಗಳನ್ನು ಹಾಗೂ ಅಲೆಂಜರ್ಸ್ ಮೆಡಿಕಲ್ಸ್ ಸಿಸ್ಟಮ್ಸ್ ನಿಂದ 23 ಸಂಖ್ಯೆಗಳ 300 ಎಂಎಎಕ್ಸ್ ರೇ ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿತ್ತು.

ಆದರೆ ಈ ಉಪಕರಣಗಳ ಖರೀದಿಯ ಪೂರ್ವದಲ್ಲಿ ವಾಸ್ತವ ವಾಗಿ ಅವಶ್ಯವಿರುವ ಒಟ್ಟು ಉಪಕರಣಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಖರೀದಿ ಪ್ರಕ್ರಿಯೆ ನಡೆಸಿರುವುದು ಕಂಡು ಬಂದಿ ರುವುದಿಲ್ಲ. 2019ರ ಜೂನ್ 12ರಂದು ನೀಡಿರುವ ಸರಬರಾಜು ಆದೇಶದೊಂದಿಗೆ ಲಗತ್ತಿಸಿರುವ ಆಸ್ಪತ್ರೆಯ ವಿವರಗಳನ್ನು ನಂತರದ ದಿನಗಳಲ್ಲಿ ತಿದ್ದುಪಡಿ ಮಾಡಿ ಹೊರಡಿಸಿರುವ ಆದೇಶಗಳೇ ಸಾಕ್ಷಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲದೇ ಈ ಉಪಕರಣಗಳನ್ನು ಸಹಾ ಟೆಂಡರ್ ನಿಯಮಗಳಂತೆ ಅಳವಡಿಸಲಾಗಿರುತ್ತದೆ ಎಂದು ಸಂಬಂಧಪಟ್ಟ ಜಿಲ್ಲಾ, ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಂದಲೂ ಸಹಾ ಯಾವುದೇ ದೃಢೀಕರಣ ಪಡೆದಿದ್ದರ ವಿವರಗಳು ತನಿಖೆ ತಂಡಕ್ಕೆ ಒದಗಿಸಿರಲಿಲ್ಲ. ‘ಈ ಹಿನ್ನೆಲೆಯಲ್ಲಿ ಸದರಿ ಖರೀದಿ ಪ್ರಕ್ರಿಯೆಗಳು ವಾಸ್ತವವಾಗಿ ಇದ್ದ ಅಗತ್ಯಕ್ಕೆ ತಕ್ಕಂತೆ ಖರೀದಿಸಿ ಅಳವಡಿಸಲಾಗಿರುತ್ತದೆ ಎಂದು ತನಿಖೆಗೆ ಒದಗಿಸಲಾದ ದಾಖಲೆಗಳಿಂದ ಸ್ಪಷ್ಟವಾಗಿರುವುದಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News