10 ವರ್ಷಗಳಲ್ಲಿ ಸರಕಾರಿ ಬಂದರುಗಳಿಗೆ ಅದಾನಿ ಬಂದರುಗಳು ನೀಡಿದ ಹೊಡೆತ ಎಷ್ಟು?!

10 ವರ್ಷಗಳಲ್ಲಿ ಅದಾನಿ ಬಂದರುಗಳು ನಿರ್ವಹಿಸುವ ಒಟ್ಟು ಸರಕಿನ ಪ್ರಮಾಣ ಸುಮಾರು ನಾಲ್ಕು ಪಟ್ಟು ಹೆಚ್ಚಿದ್ದು, 2023ನೇ ಆರ್ಥಿಕ ವರ್ಷದಲ್ಲಿ ಅದು 337 ಮಿಲಿಯನ್ ಟನ್‌ಗಳಿಗೆ ಏರಿದೆ. ಈ ಉದ್ಯಮದಲ್ಲಿನ ವಾರ್ಷಿಕ ಏರಿಕೆ ಶೇ.4ರಷ್ಟಿದ್ದರೆ, ಅದಾನಿ ಸಮೂಹ ಈ ವಲಯದಲ್ಲಿ ವಾರ್ಷಿಕವಾಗಿ ಬೆಳೆಯುತ್ತಿರುವ ಪ್ರಮಾಣ ಶೇ.14ರಷ್ಟಿದೆ. ಕೇಂದ್ರ ಸರಕಾರ ನಿಯಂತ್ರಿತ ಬಂದರುಗಳು 2013ರಲ್ಲಿ ಶೇ.58.5 ಇದ್ದದ್ದು ಈಗ ಸುಮಾರು ಶೇ.54.5ಕ್ಕೆ ಇಳಿದಿವೆ.

Update: 2023-11-02 05:17 GMT

Photo: adani.com/businesses/ports-and-terminals

14 ಬಂದರುಗಳು ಮತ್ತು ಟರ್ಮಿನಲ್‌ಗಳ ಒಡೆತನ. ಭಾರತದ ಬಂದರುಗಳ ಮೂಲಕ ಹಾದುಹೋಗುವ ಎಲ್ಲಾ ಸರಕುಗಳ ಕಾಲುಭಾಗದಷ್ಟರ ನಿರ್ವಹಣೆ. ದೇಶದ 5,422 ಕಿ.ಮೀ. ಕರಾವಳಿಯಲ್ಲಿ ಪ್ರತೀ 500 ಕಿ.ಮೀ.ಗೂ ಉಪಸ್ಥಿತಿ. 10 ವರ್ಷಗಳ ಹಿಂದೆ ದೇಶದ ಪಶ್ಚಿಮ ತುದಿಯಲ್ಲಿ ಸಣ್ಣದಾಗಿ ಶುರುವಾದ ವ್ಯವಹಾರ ಇಂದು ಬೆಳೆದಿರುವುದು ಈ ಮಟ್ಟಕ್ಕೆ.

ಇದು ಅದಾನಿ ಸಮೂಹದ ಬಗ್ಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮಾಡಿರುವ ವರದಿಯಲ್ಲಿನ ಮಾಹಿತಿ.

ಬಂದರು ಉದ್ಯಮದಲ್ಲಿ ಮಾರುಕಟ್ಟೆ ಏಕಸ್ವಾಮ್ಯದ ಅಪಾಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೂವರು ಉನ್ನತ ಅಧಿಕಾರಿಗಳು, ಕಳೆದ 10 ವರ್ಷಗಳಲ್ಲಿ ಅದಾನಿ ಸಮೂಹದ ಅಸಾಮಾನ್ಯ ವಿಸ್ತರಣೆಯನ್ನು ಎತ್ತಿ ತೋರಿಸಿರುವುದಾಗಿಯೂ ವರದಿ ಹೇಳಿದೆ.

10 ವರ್ಷಗಳಲ್ಲಿ ಅದಾನಿ ಬಂದರುಗಳು ನಿರ್ವಹಿಸುವ ಒಟ್ಟು ಸರಕಿನ ಪ್ರಮಾಣ ಸುಮಾರು ನಾಲ್ಕು ಪಟ್ಟು ಹೆಚ್ಚಿದ್ದು, 2023ನೇ ಆರ್ಥಿಕ ವರ್ಷದಲ್ಲಿ ಅದು 337 ಮಿಲಿಯನ್ ಟನ್‌ಗಳಿಗೆ ಏರಿದೆ. ಉದ್ಯಮದಲ್ಲಿನ ವಾರ್ಷಿಕ ಏರಿಕೆ ಶೇ.4ರಷ್ಟಿದ್ದರೆ, ಅದಾನಿ ಸಮೂಹ ವಾರ್ಷಿಕವಾಗಿ ಬೆಳೆಯುತ್ತಿರುವ ಪ್ರಮಾಣ ಶೇ.14ರಷ್ಟಿದೆ. ಅದಾನಿ ಪಾಲನ್ನು ತೆಗೆದುಹಾಕಿದರೆ ಬೆಳವಣಿಗೆ ಪ್ರಮಾಣ ಕೇವಲ ಶೇ. 2.7ರಷ್ಟು ಮಾತ್ರ ಎನ್ನುತ್ತದೆ ವರದಿ.

2013ರಲ್ಲಿ ಸುಮಾರು ಶೇ.9ರಷ್ಟಿದ್ದ ಸರಕು ನಿರ್ವಹಣೆಯಲ್ಲಿನ ಅದಾನಿ ಸಮೂಹದ ಮಾರುಕಟ್ಟೆ ಪಾಲು ಸುಮಾರು ಮೂರು ಪಟ್ಟು ಹೆಚ್ಚಿದ್ದು, 2023ರಲ್ಲಿ ಸುಮಾರು ಶೇ.24ರಷ್ಟಾಗಿದೆ. ಕೇಂದ್ರ ಸರಕಾರ ನಿಯಂತ್ರಿತ ಬಂದರುಗಳು 2013ರಲ್ಲಿ ಶೇ.58.5 ಇದ್ದದ್ದು ಈಗ ಸುಮಾರು ಶೇ.54.5ಕ್ಕೆ ಇಳಿದಿವೆ. ಕೇಂದ್ರ ಸರಕಾರದ ಅಡಿಯಲ್ಲಿಲ್ಲದ ಬಂದರುಗಳ ಪೈಕಿ ಅದಾನಿ ಮಾರುಕಟ್ಟೆ ಪಾಲು ಶೇ.50ನ್ನು ದಾಟಿದೆ ಎಂದು ವರದಿ ಉಲ್ಲೇಖಿಸಿದೆ.

ಹೀಗಾಗಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಪಿಎಸ್‌ಇ ಝಡ್)ನ ಕರಾವಳಿ ಜಾಲ ಕೇಂದ್ರ ಸರಕಾರದ 12ಕ್ಕೂ ಹೆಚ್ಚು ಬಂದರುಗಳೊಂದಿಗೆ ಪೈಪೋಟಿಗೆ ನಿಂತಿದೆ. ವಾಸ್ತವವಾಗಿ, ಬಂದರುಗಳ ವಲಯದಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಪಾಲು 10 ವರ್ಷಗಳಲ್ಲಿ ಶೇ.9ರಿಂದ ಶೇ.24ಕ್ಕೆ ಏರಿಕೆಯಾಗಿರುವುದರಿಂದ ಹೊಡೆತ ತಿಂದಿರುವುದು ಕೇಂದ್ರ ಸರಕಾರದ ನಿಯಂತ್ರಿತ ಬಂದರುಗಳೇ ಆಗಿವೆ. ಉದ್ಯಮದ ಭಾಷೆಯಲ್ಲಿ ಪ್ರಮುಖ ಬಂದರುಗಳು ಎಂದು ಕರೆಯಲಾಗುವ ಇವುಗಳ ನಿರ್ವಹಣೆಯಲ್ಲಿನ ಸರಕುಗಳ ಪಾಲು ಕುಸಿದಿದೆ ಎಂಬುದನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಹೇಳಿದೆ.

ಇದರ ಬಗ್ಗೆ ಆರ್ಥಿಕ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿರುವುದನ್ನು ವರದಿ ಉಲ್ಲೇಖಿಸಿದೆ. ಈ ಬೆಳವಣಿಗೆ ಅಜೈವಿಕ ಮಾರ್ಗದ ಮೂಲಕ ಆಗಿದೆ ಎಂಬುದು ಸರಕಾರಿ ಅಧಿಕಾರಿಗಳು ಮತ್ತು ನಿಯಂತ್ರಕರ ಒಂದು ವರ್ಗದ ಕಳವಳ.

ತನಿಖಾ ವರದಿ ವಿಶ್ಲೇಷಿಸಿದ ಸರಕು ನಿರ್ವಹಣೆ ಅಂಕಿ ಅಂಶ, ಕಳೆದ ದಶಕದಲ್ಲಿ ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡ ಬಂದರುಗಳು ಕಂಪೆನಿ ನಿರ್ವಹಿಸುವ ಒಟ್ಟು ಸರಕು ಪ್ರಮಾಣದಲ್ಲಿ (337 ಮಿಲಿಯನ್ ಟನ್‌ಗಳಲ್ಲಿ 123.7 ಮಿಲಿಯನ್ ಟನ್‌ಗಳು ಅಥವಾ ಶೇ.37ರಷ್ಟು) ಮೂರನೇ ಒಂದು ಭಾಗದಷ್ಟನ್ನು ಹೊಂದಿವೆ ಎಂಬುದನ್ನು ತೋರಿಸುತ್ತವೆ.

ಇಂತಹ ಬೆಳವಣಿಗೆಯ ರೀತಿ ಅಪಾಯಕಾರಿಯಾಗಿದೆ ಎಂಬುದು ಅಧಿಕಾರಿಗಳ ಚಿಂತೆಯಾಗಿದೆ. ಪಶ್ಚಿಮದಿಂದ ಪೂರ್ವಕ್ಕೆ ಇಡೀ ಕರಾವಳಿಯಲ್ಲಿ ಒಬ್ಬನೇ ಉದ್ಯಮಿಯ ಹೆಚ್ಚುತ್ತಿರುವ ಪ್ರಾಬಲ್ಯ, ಹಡಗು ಕಂಪೆನಿಗಳು ನಿರ್ದಿಷ್ಟವಾಗಿ ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಹೊಂದಿರುವ ಹತೋಟಿ ಕ್ರಮೇಣ ದುರ್ಬಲಗೊಳ್ಳಲು ಕಾರಣವಾಗಬಹುದು ಎಂಬುದರ ಬಗ್ಗೆ ವರದಿ ಗಮನ ಸೆಳೆಯುತ್ತದೆ.

ಉನ್ನತ ಅಧಿಕಾರಿಗಳ ಕಳವಳ

ಶಿಪ್ಪಿಂಗ್ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಡಿಮೆ ಸ್ಪರ್ಧೆಯ ಅಪಾಯಗಳು, ಹೊಸ ಮತ್ತು ಸಣ್ಣ ಉದ್ಯಮಿಗಳಿಗೆ ಹೆಚ್ಚಿನ ಪ್ರವೇಶ ಸಾಧ್ಯವಾಗದಿರುವ ಸ್ಥಿತಿ, ಪ್ರಬಲರ ಮೇಲೆಯೇ ಹೆಚ್ಚಿನ ಅವಲಂಬನೆಗಳು ಮತ್ತು ಪ್ರಬಲರು ಇದನ್ನು ದುರುಪಯೋಗಪಡಿಸಿಕೊಳ್ಳುವ ಹೆಚ್ಚಿನ ಸಾಧ್ಯತೆಗಳ ಬಗ್ಗೆ ಹೇಳಿದ್ದಾರೆ.

ಆರ್ಥಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯವನ್ನೂ ವರದಿ ಉಲ್ಲೇಖಿಸಿದೆ. ಶಿಪ್ಪಿಂಗ್‌ನಂತಹ ನಿರ್ಣಾಯಕ ಉದ್ಯಮದಲ್ಲಿ ಈ ಮಾರುಕಟ್ಟೆ ಬಲವರ್ಧನೆಯ ಬಗ್ಗೆ ಕಳವಳವನ್ನು ಹೆಚ್ಚಿಸಿರುವುದು ಅದಾನಿ ಸಮೂಹಕ್ಕೆ ಸಂಬಂಧಿಸಿದ ಲೆಕ್ಕಪತ್ರ ವಂಚನೆ ಮತ್ತು ಷೇರು ತಿರುಚುವಿಕೆಗೆ ಸಂಬಂಧಿಸಿದ ಆರೋಪಗಳು ಎಂಬುದು ಅವರ ಅಭಿಪ್ರಾಯ.

ಈ ವರ್ಷ ಜನವರಿಯಲ್ಲಿ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಈ ಆರೋಪಗಳನ್ನು ಮಾಡಿತು. ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯಿಂದ (ಒಸಿಸಿಆರ್‌ಪಿ) ಪಡೆದ ದಾಖಲೆಗಳ ಆಧಾರಿತ ಇತ್ತೀಚಿನ ವರದಿಗಳಲ್ಲಿ ಹಲವು ಆರೋಪಗಳು ಕೇಳಿಬಂದವು. ಆದರೆ ಎಲ್ಲಾ ಆರೋಪಗಳನ್ನು ಅದಾನಿ ಸಮೂಹ ನಿರಾಕರಿಸಿದೆ.

ಬಂದರುಗಳನ್ನು ವಿಶಾಲ ಮಟ್ಟದಲ್ಲಿ ನೈಸರ್ಗಿಕ ಏಕಸ್ವಾಮ್ಯವೆಂದು ಪರಿಗಣಿಸಬಹುದಾದರೂ, ಇದರಿಂದ ಸಮಸ್ಯೆಗಳಿವೆ ಎಂಬುದು ಭಾರತದ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಮಾಜಿ ಅಧ್ಯಕ್ಷರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. ಎಪಿಎಸ್‌ಇಝಡ್ ಪಾಲು ನಿರಂತರವಾಗಿ ಬೆಳೆಯುತ್ತಿದೆ. ಒಬ್ಬ ಉದ್ಯಮಿಯ ಸಾಮರ್ಥ್ಯದ ಸ್ವಾಧೀನತೆಯ ಪರಿಣಾಮವಾಗಿ ಇತರರು ಕುಸಿದರೆ ಅಥವಾ ಅವರ ಬೆಳವಣಿಗೆಯ ಮಟ್ಟ ಕ್ಷೀಣಿಸಿದರೆ ಅದು ಖಂಡಿತವಾಗಿಯೂ ಕಳವಳಕಾರಿ. ಇದು ಈಗ ತುಂಬಾ ಸ್ಪಷ್ಟವಾಗಿಲ್ಲದಿರಬಹುದು ಆದರೆ ಸರಕಾರ ಮತ್ತು ಸಿಸಿಐ ಗಮನಹರಿಸಬೇಕು ಎಂದು ಆ ಮಾಜಿ ಅಧಿಕಾರಿ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ತ್ವರಿತ ವಿಸ್ತರಣೆ

ಒಂದು ದಶಕದ ಹಿಂದೆ, 2013ರ ಆರ್ಥಿಕ ವರ್ಷದಲ್ಲಿ ಅದಾನಿ ಸಮೂಹದ ಬಂದರುಗಳ ವ್ಯವಹಾರ ಸುಮಾರು 91 ಮಿಲಿಯನ್ ಟನ್‌ಗಳ ಸರಕು ಪ್ರಮಾಣವನ್ನು ಹೊಂದಿತ್ತು ಎಂಬುದರ ಕಡೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಗಮನ ಸೆಳೆದಿದೆ. ಆ ಪ್ರಮಾಣವು ಎಲ್ಲಾ ಬಂದರುಗಳು ನಿರ್ವಹಿಸುವ ಒಟ್ಟಾರೆ ಸರಕು ಪ್ರಮಾಣದಲ್ಲಿ ಕೇವಲ ಶೇ.10ರಷ್ಟಾಗಿತ್ತು. ಶೇ.23ಕ್ಕಿಂತ ಹೆಚ್ಚು ಪ್ರಮಾಣದ ಸರಕುಗಳನ್ನು ಎಲ್ಲಾ ಸಣ್ಣ ಬಂದರುಗಳಿಂದ ನಿರ್ವಹಿಸಲಾಗುತ್ತಿತ್ತು.

ಸರಕಾರದ ನಿಯಂತ್ರಣದಲ್ಲಿಲ್ಲದಿದ್ದರೆ ಅಂತಹ ಬಂದರನ್ನು ಸಣ್ಣ ಬಂದರು ಎನ್ನಲಾಗುತ್ತದೆ. ಅದರ ಹೊರತಾಗಿ, ಹೀಗೆ ಸಣ್ಣ ಬಂದರು ಎಂದು ಕರೆಯುವುದಕ್ಕೂ, ಬಂದರಿನ ಗಾತ್ರ ಅಥವಾ ಅದು ನಿರ್ವಹಿಸುವ ಸರಕು ಪ್ರಮಾಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ.

ಅದಾನಿ ಒಡೆತನದ ಮುಂದ್ರಾ ಬಂದರು - ಇದು ಒಂದು ಸಣ್ಣ ಬಂದರು 2023ರ ಆರ್ಥಿಕ ವರ್ಷದಲ್ಲಿ 155 ಮಿಲಿಯನ್ ಟನ್‌ಗಳಷ್ಟು ಹೆಚ್ಚಿನ ಸರಕುಗಳನ್ನು ನಿರ್ವಹಿಸಿದೆ. ಈ ಪ್ರಮಾಣ ಯಾವುದೇ 12 ಕೇಂದ್ರ ಸರಕಾರದ ಸ್ವಾಮ್ಯದ ಬಂದರುಗಳು ನಿರ್ವಹಿಸಿದ ಸರಕು ಪ್ರಮಾಣಕ್ಕಿಂತ ಹೆಚ್ಚು.

2023ನೇ ಆರ್ಥಿಕ ವರ್ಷದಲ್ಲಿ ಸಣ್ಣ ಬಂದರುಗಳು ಸುಮಾರು 650 ಮಿಲಿಯನ್ ಟನ್‌ಗಳಷ್ಟು ಸರಕುಗಳನ್ನು ನಿರ್ವಹಿಸಿದವು. ಎಪಿಎಸ್‌ಇಝಡ್ ಸುಮಾರು 337 ಮಿಲಿಯನ್ ಟನ್‌ಗಳಷ್ಟು ಪ್ರಮಾಣವನ್ನು ನಿರ್ವಹಿಸಿತು. ಈಗಾಗಲೇ ಹೇಳಿದಂತೆ 505ರ ಗೆರೆಯನ್ನು ಅದು ದಾಟಿತ್ತು. ಈ ಸರಕುಗಳು ಪ್ರಾಥಮಿಕವಾಗಿ ಭಾರತದಲ್ಲಿನ ಅದರ ಎಂಟು ಕಾರ್ಯಾಚರಣೆಯ ಸಣ್ಣ ಬಂದರುಗಳಿಂದ ಬಂದವು ಎಂಬುದನ್ನು ವರದಿ ಗಮನಿಸಿದೆ.

ಈ 10 ವರ್ಷಗಳಲ್ಲಿ, ಎಪಿಎಸ್‌ಇಝಡ್ ಸರಕು ಪ್ರಮಾಣ ಹೆಚ್ಚಿನ ವರ್ಷಗಳಲ್ಲಿ ಪ್ರಮುಖ ಬಂದರುಗಳು ಮತ್ತು ಸಣ್ಣ ಬಂದರುಗಳು ನಿರ್ವಹಿಸಿದ ಸರಕು ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

2021ರ ಆರ್ಥಿಕ ವರ್ಷದಲ್ಲಿ ಕೋವಿಡ್ ಕಾರಣದಿಂದಾಗಿ ಭಾರತದ ಒಟ್ಟಾರೆ ಬಂದರುಗಳಲ್ಲಿನ ಸರಕು ನಿರ್ವಹಣೆ ಪ್ರಮಾಣ, ಪ್ರಮುಖ ಮತ್ತು ಸಣ್ಣ ಬಂದರುಗಳಲ್ಲಿನ ಪ್ರಮಾಣಗಳು ವರ್ಷದಿಂದ ವರ್ಷಕ್ಕೆ ಶೇ.4ರಷ್ಟು ಕುಸಿದಾಗಲೂ ಎಪಿಎಸ್‌ಇಝಡ್ ನಿರ್ವಹಿಸಿದ ಸರಕು ಪ್ರಮಾಣ ಹಿಂದಿನ ವರ್ಷಕ್ಕಿಂತ ಸುಮಾರು ಶೇ.11ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಎಪಿಎಸ್‌ಇಝಡ್ ವಿಸ್ತರಣೆಗೆ ಇನ್ನಷ್ಟು ಕಾರಣವೆಂದರೆ, ಬಂದರುಗಳ ಸತತ ಸ್ವಾಧೀನಗಳು. ಒಡಿಶಾದಲ್ಲಿ ಧಮ್ರಾ, ತಮಿಳುನಾಡಿನ ಕಟ್ಟುಪಲ್ಲಿ, ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಮತ್ತು ಗಂಗಾವರಂ ಮತ್ತು ಮಹಾರಾಷ್ಟ್ರದ ದಿಘಿ ಬಂದರುಗಳನ್ನು ಅದು ಸ್ವಾಧೀನಪಡಿಸಿಕೊಂಡಿದೆ. 2023ರ ಆರ್ಥಿಕ ವರ್ಷದಲ್ಲಿ ಎಪಿಎಸ್‌ಇಝಡ್‌ನ ಮುಂದ್ರಾ ಬಂದರು ಹೊರತಾದ ಪ್ರಮಾಣ ಅದರ ಒಟ್ಟಾರೆ ಬಂದರು ಸರಕುಗಳ ಶೇ.54ರಷ್ಟು ಭಾಗವನ್ನು ಹೊಂದಿತ್ತು ಮತ್ತು 2013ರ ಆರ್ಥಿಕ ವರ್ಷದಲ್ಲಿದ್ದುದಕ್ಕಿಂತ ಸುಮಾರು ಶೇ.36ರಷ್ಟು ಬೆಳವಣಿಗೆಯಾಗಿದೆ ಎಂದು ವರದಿ ಹೇಳಿದೆ.

ಕುತೂಹಲಕಾರಿ ವಿಚಾರವೆಂದರೆ, ಅದಾನಿ ಸಮೂಹ ಇತರ ಕೆಲವು ಕ್ಷೇತ್ರಗಳಲ್ಲಿಯೂ ಕ್ಷಿಪ್ರ ಬೆಳವಣಿಗೆಯನ್ನು ಕಂಡಿದೆ. ಇದು ಭಾರತದ ಅತಿದೊಡ್ಡ ಖಾಸಗಿ ವಲಯದ ವಿಮಾನ ನಿಲ್ದಾಣ ನಿರ್ವಹಣಾ ಕಂಪೆನಿಯೂ ಆಗಿದೆ. ಇದು ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತದೆ. ಇದಲ್ಲದೆ, ಇದು ದೇಶದ ಅತಿದೊಡ್ಡ ಸಿಮೆಂಟ್ ತಯಾರಕ ಮತ್ತು ಖಾಸಗಿ ವಲಯದ ಉಷ್ಣ ವಿದ್ಯುತ್ ಉತ್ಪಾದಕ ಕಂಪೆನಿಯೂ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಪ್ರವೀಣ್ ಎನ್.

contributor

Similar News