1973ರ ‘ಕರ್ನಾಟಕ’ದ ವರ್ತಮಾನ ಹೇಗಿತ್ತು?
ಚಳವಳಿಯ ಭೂಮಿಕೆ ಸಿದ್ಧವಾದ ಕರ್ನಾಟಕದ ಒಟ್ಟು ಪರಿಸರ ಸೊಂಡೂರಿನಲ್ಲಿ ರೈತ ಚಳವಳಿಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು. ಸೊಂಡೂರು ಎಂಬ ಪುಟ್ಟ ತಾಲೂಕಿನ ರೈತರ ವಿಷಯವಾಗಿದ್ದ ಭೂಮಿಯ ಸಮಸ್ಯೆ ರಾಜ್ಯದ ಸಮಸ್ಯೆಯಾಯಿತು. ಈವರೆಗೂ ‘ರಾಜ’ರನ್ನೇ ಆರಾಧ್ಯ ದೈವವಾಗಿಸಿಕೊಂಡು, ರಾಜರ ಎಲ್ಲ ಅಪ್ಪಣೆಗೆ ತಲೆ ಹಾಕುತ್ತಾ ಬಂದವರಲ್ಲಿ ಕೆಲವರು ಎಚ್ಚೆತ್ತು ಚಳವಳಿಗೆ ಕಾರಣರಾದರು. ರಾಜ್ಯದಾದ್ಯಂತ ಚಳವಳಿಗಳ ಮುಖಂಡತ್ವ ವಹಿಸಿಕೊಂಡಿದ್ದವರು ಈ ರೈತರ ಹೋರಾಟಕ್ಕೆ ಬೆಂಬಲಿಸಿದರು. ಸೋಷಲಿಸ್ಟ್ ಪಾರ್ಟಿಯು ಇದು ತನ್ನ ನಿರ್ಣಾಯಕ ಹೋರಾಟವೊ ಎಂಬಂತೆ ಚಳವಳಿಯನ್ನು ರೂಪಿಸಿತು.
1973 ರಲ್ಲಿ ಡಿ.ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದರು. ಕೇಂದ್ರದಲ್ಲಿ ಇಂದಿರಾ ಗಾಂಧಿಯವರು ಸಮರ್ಥ ಆಡಳಿತಗಾರರಾಗಿದ್ದರು. ಆದರೆ ಅವರ ಮಂತ್ರಿಮಂಡಲದ ಮಂತ್ರಿಗಳು ಅವರಂತೆ ನಡೆಯದೆ ಸರಕಾರ ಟೀಕೆಗೆ ಗುರಿಯಾಗಿತ್ತು. ಇಂಥದ್ದೆ ವಿಚಿತ್ರ ಸ್ಥಿತಿ ಅರಸರದು ಕೂಡ. ಅರಸು ಕರ್ನಾಟಕ ಕಂಡ ಸಮರ್ಥ ಮುಖ್ಯಮಂತ್ರಿ ಎನ್ನುವುದು ಆಗಿನ ಜನಾಭಿಪ್ರಾಯವಾಗಿತ್ತು. ಆದರೆ ಅವರ ಮಂತ್ರಿ ಮಂಡಲ ಅವರದೇ ದಾರಿಯಲ್ಲಿ ನಡೆದದ್ದು ಕಡಿಮೆ. ಕೆಲ ಮಂತ್ರಿಗಳ ಮಿತಿ ಮೀರಿದ ವರ್ತನೆ ಹಾಗೂ ಅಧಿಕಾರದ ದುರುಪಯೋಗದ ಪ್ರಕರಣಗಳು ಅರಸರನ್ನು ನೆರಳಿನಂತೆ ಹಿಂಬಾಲಿಸಿದವು. ಪತ್ರಿಕೆಗಳಲ್ಲಿ ಟೀಕೆ ಹಾಗೂ ವಿಧಾನ ಮಂಡಲದಲ್ಲಿ ಶಸ್ತ್ರ ಚಿಕಿತ್ಸೆ ನಡೆದರೂ ಕೂಡ, ಆ ಮಂತ್ರಿಗಳು ತಮ್ಮನ್ನು ತಿದ್ದಿಕೊಳ್ಳಲಿಲ್ಲ. ಇದರಿಂದಾಗಿ ಮಂತ್ರಿಗಳ ಮೇಲಿನ ಬಾಣ ಪ್ರಯೋಗ ಮುಖ್ಯಮಂತ್ರಿಗಳಿಗೂ ನಾಟುತ್ತಿದ್ದವು.
1973ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂಬ ನಾಮಕರಣವಾಯಿತು. ಆಗ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ. ಮಾಧ್ಯಮಗಳು ಕರ್ನಾಟಕಕ್ಕೆ ಹೆಸರು ತಂದು ದೇವರಾಜರು ಹೆಸರಾದರು ಎಂದೆಲ್ಲಾ ವರದಿ ಮಾಡಿದವು. ನವೆಂಬರ್ 1 ರಂದು ಹಂಪಿಯಲ್ಲಿ ಕರ್ನಾಟಕ ಒಗ್ಗೂಡಿದಾಗ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ ಕರ್ನಾಟಕದ ಜ್ಯೋತಿ ಬೆಳಗಿಸಿದರು. ‘ಕರ್ನಾಟಕ’ ಎಂಬ ನಾಮಫಲಕವೊಂದನ್ನು ಅನಾವರಣ ಮಾಡಿದರು. ಸಚಿವರುಗಳು ಅವರ ಕ್ಷೇತ್ರಗಳಿಗೆ ಹೋಗಿ ‘ಕರ್ನಾಟಕ’ ನಾಮಕರಣದ ಸಮಾರಂಭಗಳಲ್ಲಿ ಭಾಗವಹಿಸತೊಡಗಿದರು.
‘ಕರ್ನಾಟಕ’ ಎಂದು ನಾಮಕರಣವಾದ ಈ 1973 ರ ನಾಡಿನ ಅಂದಿನ ವರ್ತಮಾನ ಕುತೂಹಲಕಾರಿಯಾಗಿವೆ. ಕಳ್ಳತನದ ಗುಮಾನಿಯ ಮೇಲೆ ಹಾಸನದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ರಾಜು ಎಂಬ ತರುಣನೊಬ್ಬ ಸತ್ತ. ಈ ಸುದ್ದಿ ಅಲ್ಲಿನ ಜನತೆಯಲ್ಲಿ ಪೊಲೀಸ್ ದೌರ್ಜನ್ಯದ ಶಂಕೆಯನ್ನು ಉಂಟುಮಾಡಿತು. ಇದರಿಂದಾಗಿ ಜನರು ಮತ್ತು ಪೊಲೀಸರ ನಡುವೆ ಘರ್ಷಣೆಯಾಯಿತು (ಸೆಪ್ಟಂಬರ್ 5. 1973). ಇದೇ ವರ್ಷದಲ್ಲಿ ಪೊಲೀಸರಿಂದ ಅಂತಹ ಹತ್ತಕ್ಕೂ ಹೆಚ್ಚು ಲಾಕಪ್‌ಡೆತ್‌ಗಳಾಗಿದ್ದವು. ಆ ಸಂದರ್ಭದಲ್ಲಿ ಪೊಲೀಸರ ಪರವಾಗಿ ನೀಡಲಾದ ವಿವರಣೆಗಳು ಏಕಪ್ರಕಾರ ವಾಗಿದ್ದವು. ಇದು ಬ್ರಿಟಿಷರ ಆಡಳಿತದ ಪೊಲೀಸ್ ದರ್ಪ ದೌರ್ಜನ್ಯಗಳು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ನಿರಂತರವಾದದ್ದರ ಚಿತ್ರವಾಗಿತ್ತು. ಕರ್ನಾಟಕದಾದ್ಯಂತ ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆಗಳಾದವು. ಮಂಗಳೂರಿನ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರ ಬೃಹತ್ ಪ್ರತಿಭಟನೆ, ತುಮಕೂರಿನ ವಿದ್ಯಾರ್ಥಿ ಫೆಡರೇಷನ್ ಹಾಸನದ ಘಟನೆ ವಿರೋಧಿಸಿ ತುಮಕೂರು ಬಂದ್ ಆಚರಿಸಿದ್ದು, ದಕ್ಷಿಣ ಮೈಸೂರಿನ ವಿದ್ಯಾರ್ಥಿ ಗಲಭೆ, ಮಂಡ್ಯದಲ್ಲಿ ವಿದ್ಯಾರ್ಥಿ ದಂಗೆಯಲ್ಲಿ ಪೊಲೀಸರಿಗೂ ವಿದ್ಯಾರ್ಥಿಗಳಿಗೂ ನಡೆದ ಸಂಘರ್ಷ. ಇವು ವಿದ್ಯಾರ್ಥಿಗಳು ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಮಾಡಿದ ಪ್ರತಿಭಟನೆಗಳು. ಇವುಗಳಿಗೆ ಮುಖ್ಯಮಂತ್ರಿಯ ಭರವಸೆಯೆಂದರೆ ‘ಹಾಸನದಲ್ಲಿ ಸಾವು ಅನುಮಾನಸ್ಪದ ನಿಜಾಂಶ ತಿಳಿಯಲು ಸರಕಾರದ ಸರ್ವ ಪ್ರಯತ್ನ’ ಎನ್ನುವುದಾಗಿತ್ತು. 12 ಸೆಪ್ಟಂಬರ್ 1973ರಲ್ಲಿ ಎಲ್ಲ ಪತ್ರಿಕೆಗಳಲ್ಲಿ ಹಾಸನದ ಘಟನೆ ಮುಖಪುಟದ ಸುದ್ದಿಯಾಯಿತು.
ರಾಸಾಯನಿಕ ಗೊಬ್ಬರದ ಹಾವಳಿಗೆ ರೈತರು ತತ್ತರಿಸಿದ್ದರು. ಹಾಗಾಗಿ ಸೀಮೆಗೊಬ್ಬರಕ್ಕಾಗಿ ಪ್ರತಿಭಟನೆಗಳು ಇದೇ ಸಮಯದಲ್ಲಿ ನಡೆದವು. ಸೆಪ್ಟಂಬರ್ 13 ರಂದು ಸಂಜೆ ಸಾವಿರಕ್ಕೂ ಹೆಚ್ಚು ಮಂದಿ ರೈತರು ದಾವಣಗೆರೆಯ ಸಬ್ ಡಿವಿಜನಲ್ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ‘ನಗರದಲ್ಲಿರುವ ಅಘೋಷಿತ ಹಾಗೂ ಕಳ್ಳ ದಾಸ್ತಾನು ಗೊಬ್ಬರ ವರ್ತಕರಲ್ಲಿ ರುವುದೆಂದೂ, ಗೊಬ್ಬರಕ್ಕಾಗಿ ತಾವುಗಳು ಪರಿತಪಿಸುತ್ತಿರುವುದಾಗಿೂ, ದಾಸ್ತಾನು ಹೊರಗೆಳೆದು ತಮಗೆ ನೀಡಬೇಕೆಂದು ಎಚ್ಚರಿಕೆಯ ಬೇಡಿಕೆ ಸಲ್ಲಿಸಿದರು. ದಾವಣಗೆರೆಯ ಶಾಸಕಿ ಶ್ರೀಮತಿ ನಾಗರತ್ನಮ್ಮ ರೈತರ ಪರವಾಗಿ ಒತ್ತಾಯಿಸಿದರು. ಸೆಪ್ಟಂಬರ್ 17 ರಂದು ಭದ್ರಾವತಿಯಲ್ಲಿಯೂ ಸೀಮೆಗೊಬ್ಬರಕ್ಕಾಗಿ ನೂರಾರು ಮಂದಿ ರೈತರು ಪ್ರತಿಭಟಿಸಿದರು. ತಹಶೀಲ್ದಾರರು, ಬಿ.ಡಿ.ಒ. ಮತ್ತು ಕೃಷಿ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕಚೇರಿಗಳನ್ನು ಬಲವಂತವಾಗಿ ಪ್ರವೇಶಿಸಲು ಯತ್ನಿಸಿ ಗೊಂದಲ ಉಂಟಾಯಿತು. ಪೊಲೀಸರಿಗೂ ರೈತರಿಗೂ ಘರ್ಷಣೆಯೂ ಆಯಿತು. ಹೀಗೆ ಕರ್ನಾಟಕದಲ್ಲಿ ಹಲವಾರು ಕಡೆ ಸೀಮೆಗೊಬ್ಬರಕ್ಕಾಗಿ ಕೃಷಿ ಇಲಾಖೆಯನ್ನು ರೈತರು ಮುತ್ತಿಗೆ ಹಾಕಿದ ಘಟನೆಗಳು ನಡೆದವು.
ಬೆಲೆ ಏರಿಕೆ ಮತ್ತು ಆಹಾರ ಅಭಾವಕ್ಕಾಗಿಯೂ ಕರ್ನಾಟಕದ ಬಹುತೇಕ ಕಡೆಗಳಲ್ಲಿ ದೊಂಬಿ ಗಲಭೆಗಳಾದವು. ರಾಣಿಬೆನ್ನೂರಿನಲ್ಲಿ ಧಾನ್ಯ ವ್ಯಾಗನ್‌ಗಳ ಮೇಲೆ ಲೂಟಿ ನಡೆದಿದ್ದರಿಂದ ಪೊಲೀಸರು ಗೋಲಿಬಾರ್ ಮಾಡಿದಾಗ ಒಬ್ಬ ವ್ಯಕ್ತಿ ಮೃತಪಟ್ಟನು. ಗುಬ್ಬಿಯಲ್ಲಿ ಬೆಲೆ ಏರಿಕೆ ವಿರೋಧಿಸಿ ಸರಕಾರಿ ಗೋದಾಮುಗಳನ್ನು ಲೂಟಿ ಮಾಡಿದ್ದಕ್ಕಾಗಿ 30 ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಪಾವಗಡದಲ್ಲಿ ಹಣ್ಣಿನ ಅಂಗಡಿಗಳ ಲೂಟಿ, ಯಲಹಂಕದಲ್ಲಿ ಕೃಷಿ ಮಾರುಕಟ್ಟೆಗಳ ಮೇಲೆ ರೈತರ ದಾಳಿ, ಸೆ.20ರಂದು ಕೃಷಿಯ ಹಾಗೂ ಕೃಷಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ಒತ್ತಾಯ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಪುತ್ತೂರು ಹಾಗೂ ಕುಂದಾಪುರಗಳಲ್ಲಿ ಅಸಿಸ್ಟೆಂಟ್ ಕಮಿಷನರ್‌ಗಳ ಕಚೇರಿ ಮುಂದೆ ನಡೆಸಿದ ಧರಣಿ, ದಿಲ್ಲಿಯಲ್ಲಿ ಬಸ್ ಸಾರಿಗೆಯ ಅವ್ಯವಸ್ಥೆ ವಿರೋಧಿಸಿ ಭಗತ್‌ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೂರು ಬಸ್ಸಿಗೆ ಬೆಂಕಿ ಇಟ್ಟಿದ್ದು, ಮದ್ಯಪಾನ ವಿರೋಧಿ ಚಳುವಳಿಗಳು ಕರ್ನಾಟಕದಲ್ಲಿ ನಡೆಯುತ್ತಿದ್ದ ಕಾಲಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿದಿಯವರು ಮುಂದಿನ ವರ್ಷದಿಂದ ಮದ್ಯಪಾನ ನಿಷೇಧ ಎಂದು ಘಷಿಸಿದ್ದು, ಈ ಎಲ್ಲ ಘಟನೆಗಳು ಕರ್ನಾಟಕದ ಸಾಮಾಜಿಕ ಸ್ಥಿತಿಯನ್ನು ಭಿನ್ನವಾಗಿ ಚಿತ್ರಿಸುತ್ತವೆ.
ಕರ್ನಾಟಕದಲ್ಲಿ 1973ರಲ್ಲಿ ಅಸ್ಪಶ್ಯತೆ ಹಸಿಹಸಿಯಾಗಿ ಭೀಕರವಾಗಿತ್ತು. ಚಾಮರಾಜನಗರ ತಾಲೂಕು ಸಂತೆ ಮಾರನಹಳ್ಳಿಯಲ್ಲಿ ಸವರ್ಣೀಯ ಹಿಂದೂಗಳಿಂದ ಹರಿಜನರಿಗೆ ಸಾರ್ವಜನಿಕ ಬಹಿಷ್ಕಾರ ಹಾಕಲಾಗಿತ್ತು. ಹರಿಜನರನ್ನು ಊರಿನವರು ಯಾವ ಕೆಲಸಕ್ಕೂ ಕರೆಯದೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತೆ ಮಾಡಿದ್ದರು. ಸೆಪ್ಟಂಬರ್ 11 ರಂದು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆದರೂ ಕಟ್ಟುನಿಟ್ಟಿನ ಕ್ರಮವೇನೂ ಜಾರಿಯಾಗಲಿಲ್ಲ. ಇದು ಒಂದು ಘಟನೆ ಮಾತ್ರ. ಇದೇ ವರ್ಷದಲ್ಲಿ ಇಂತಹದೇ ಪ್ರಕರಣಗಳು ಇಪ್ಪತ್ತಕ್ಕೂ ಹೆಚ್ಚು ನಡೆದವು. ಇವುಗಳು ಮಾಧ್ಯಮದ ಕಣ್ಣಿಗೆ ಸಿಕ್ಕವು ಮಾತ್ರ. ಇದೇ ಸಂದರ್ಭದಲ್ಲಿ ತಲೆ ಮೇಲೆ ಮಲ ಹೊರುವ ಪದ್ಧತಿಯ ರದ್ದತಿಗೆ ಕೇಂದ್ರ ಯೋಜನೆಯೊಂದನ್ನು ರೂಪಿಸಿತು. ಮಧ್ಯಮ ವರ್ಗದ ಪಟ್ಟಣಗಳಲ್ಲಿ ತಲೆಮೇಲೆ ಮಲಹೋರುವ ಪದ್ಧತಿಯನ್ನು ರದ್ದು ಮಾಡಲು ಹೊಸ ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದಾಗಿ ಕಾಮಗಾರಿ ಮತ್ತು ನಗರಾಭಿವೃದ್ಧಿ ಸಚಿವ ಭೋಗಾಪಾಸ್ವಾನ್ ಶಾಸ್ತ್ರಿ ಸೆಪ್ಟಂಬರ್ 19ರಂದು ವರದಿಗಾರರಿಗೆ ತಿಳಿಸಿದರು. ರಾಜ್ಯ ಸರಕಾರವೂ ಅಸ್ಪಶ್ಯತೆ ನಿವಾರಣೆಗೆ ಕಾನೂನುಗಳನ್ನು ಜಾರಿಗೊಳಿಸಿತು. ಮುಜರಾಯಿ ದೇವಸ್ಥಾನಗಳ ಸಮಿತಿಯಲ್ಲಿ ಹರಿಜನರಿಗೆ ಸದಸ್ಯತ್ವವನ್ನು ಕಡ್ಡಾಯಗೊಳಿಸಲಾಯಿತು. ಊರಿನ ಎಲ್ಲರ ಜೊತೆ ಹರಿಜನರೂ ಬಾವಿ, ಕೆರೆ, ನಲ್ಲಿಯ ನೀರನ್ನು ಬಳಸುವ ವ್ಯವಸ್ಥೆಗಾಗಿ ಶೇ 50ರಷ್ಟು ಹರಿಜನರಿರುವ ಹಳ್ಳಿಗಳಿಗೆ ರಾಷ್ಟ್ರೀಯ ನೀರು ಪೂರೈಕೆ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಪಂಚಾಯತ್ ಮತ್ತು ತಾಲೂಕು ಅಭಿವೃದ್ಧಿ ಮಂಡಳಿಗಳ ಪ್ರದೇಶದ ಹರಿಜನರಿಗೆ ಓಡಾಡಲು ಪ್ರತಿ ಬಂಧಕವಿರುವ ಸಂಸ್ಥೆಗಳಿಗೆ ಧನ ಸಹಾಯ ನಿಲ್ಲಿಸಲಾಗುತ್ತದೆ ಎಂದು ಸರಕಾರ ಎಚ್ಚರಿಸಿತು. ಇಂತಹ ಸಂದರ್ಭದಲ್ಲಿಯೇ ಸರಕಾರದ ದುರ್ಬಲತೆ, ರಾಜಕೀಯ, ಭ್ರಷ್ಟಾಚಾರ ವಿರೋಧಿಸಿ ಆಂಧ್ರಪ್ರದೇಶದ ವಾರಂಗಲ್‌ನಲಿ ಈ ರಾಷ್ಟ್ರದಲ್ಲಿ ಸಮಾಜವಾದವನ್ನು ಜಾರಿಗೆ ತರಲು ಜನತೆ ಶಸ್ತ್ರ ಸಜ್ಜಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕ್ರಾಂತಿಕಾರಿ ಬರಹಗಾರರ ಸಮ್ಮೇಳನ ಕರೆ ನೀಡಿತು.
ಒಂದು ವರ್ಷದ ಈ ಘಟನೆಗಳನ್ನು ನೋಡಿದರೆ 1973 ಸಂಘರ್ಷದ ವರ್ಷವಾಗಿ ಕಾಣುತ್ತದೆ. ಹಾಸನದಲ್ಲಿ ಒಬ್ಬ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು ನಾಂದಿಯಾಗಿ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಚಳವಳಿ ತೀವ್ರರೂಪ ತಾಳಲು ಕಾರಣವಾಯಿತು. ಇಡೀ ರಾಜ್ಯಕ್ಕೆ ವ್ಯಾಪಿಸುವ ಭೀತಿಯುಂಟಾಯಿತು. ಚಳವಳಿ ಹಿಂಸಾತ್ಮಕ ತಿರುವು ಹೊಂದಿ ಅದನ್ನು ತಹಬದಿಗೆ ತರಲು ಪೊಲೀಸರು ರಾಜ್ಯದ 7 ಪಟ್ಟಣಗಳಲ್ಲಿ ಗೋಲಿಬಾರ್, ಸುಮಾರು 20 ಕಡೆ ಅಶ್ರವಾಯು, ಲಾಟಿ ಪ್ರಹಾರ ಮೊದಲಾದವುಗಳನ್ನು ನಡೆಸಬೇಕಾಯಿತು. ಇದರ ಫಲವಾಗಿ ಲೆಕ್ಕಕ್ಕೆ ಸಿಕ್ಕಂತೆ 5 ಜನ ಸತ್ತರು. ಪೊಲೀಸರೂ ಸೇರಿದಂತೆ ನೂರಾರು ಜನ ಗಾಯಗೊಂಡರು. ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಇತರರೂ ಸೇರಿಕೊಂಡು ಧಾನ್ಯದ ಅಂಗಡಿಗಳು, ಸರಕಾರಿ ಮಳಿಗೆಗಳು, ಸೀಮೆಗೊಬ್ಬರದ ದಾಸ್ತಾನಿನ ಮಳಿಗೆಗಳನ್ನು ಲೂಟಿ ಮಾಡಿ ಅವುಗಳನ್ನು ತಮಗಿಷ್ಟ ಬಂದಂತೆ ಹಂಚಿಕೊಂಡರು. ಅನೇಕ ವಾಹನಗಳು ಮತ್ತು ಮಂಡ್ಯದಲ್ಲಿ 100 ಕ್ಕೂ ಹೆಚ್ಚು ಗುಡಿಸಲುಗಳು ಅಗ್ನಿಗೆ ಆಹುತಿಯಾದವು.
ರಾಜ್ಯದಲ್ಲಾದ ಗಲಭೆ ದೊಂಬಿ ಅಗ್ನಿ ಸ್ಪರ್ಶ, ವಿದ್ಯಾರ್ಥಿಗಳ ಪ್ರತಿಭಟನೆ, ಬೆಲೆ ಏರಿಕೆಯ ವಿರುದ್ಧದ ಜನರ ಧೋರಣೆ ಹಿಂಸಾತ್ಮಕ ರೂಪ ತಾಳಿತು. ಇಷ್ಟೆಲ್ಲಾ ಆದದ್ದು ಯಾಕೆ ಎಂದರೆ ಹಸಿವು ಮತ್ತು ಕೊರತೆ. ಹಸಿವು ಎಲ್ಲಕ್ಕಿಂತ ಭೀಕರವಾದದ್ದು. ವಿಪರೀತ ಪರಿಣಾಮಗಳಿಗೆ ಕಾರಣವಾಗುವಂಥದ್ದು ಆಹಾರಕ್ಕಾಗಿ ಪರಿತಪಿಸಿದ ಇಕ್ಕಟ್ಟಿನ ದಿನಗಳು ಇವಾಗಿದ್ದವು. ಆ ಕಾರಣದಿಂದಲೇ ಈ ಪರಿಯ ಪ್ರತಿಭಟನೆ, ಆಹಾಕಾರ ಭಾರತದಾದ್ಯಂತ ಇತ್ತು. ಅದು ಕರ್ನಾಟಕದಲ್ಲಿ ತೀವ್ರವಾಗಿಯೇ
ಅಭಿವ್ಯಕ್ತಗೊಂಡಿತು. ಮೈಸೂರಿನಂಥ ಅಕ್ಕಿ ಕಣಜದ ಪ್ರದೇಶದಲ್ಲಿ ಕೆ.ಜಿ.ಯ ಧಾರಣೆ ಬೆಳಗಾಗುವುದರಲ್ಲಿ 2 ರೂ.ನಷ್ಟು ಏರಿದರೆ, ಉಳಿದೆಡೆ ಅಕ್ಕಿ ಸಿಗುವುದೇ ಕಷ್ಟವಾಯಿತು. ಇದರಿಂದಾಗಿ ಜನರು ಪ್ರಕ್ಷುಬ್ಧರಾದರು. ಗಲಭೆ ದೊಂಬಿ ಲೂಟಿಗಳಿಗೆ ಗೂಂಡಾಗಳು, ಸಮಾಜ ವಿರೋಧಿ ಶಕ್ತಿಗಳೂ ಕಾರಣವಾದದ್ದು ಸಹಜವಾಗಿತ್ತು. ಸಾಮಾನ್ಯವಾಗಿ ಚಳವಳಿಗಳು ತೀವ್ರ ಸ್ವರೂಪ ತಾಳಿದಾಗ ಅಂಥವರು ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಹೊಸದೇನಲ್ಲ. ಆದರೆ ಚಳವಳಿಯ ಒಟ್ಟು ಮನಸ್ಥಿತಿಯನ್ನು ಈ ನೆಪದಲ್ಲಿ ಸರಳೀಕರಿಸಲು ಸಾಧ್ಯವಿಲ್ಲ.
ಇಲ್ಲಿನ ವಿವರಗಳು ಎಪ್ಪತ್ತರ ದಶಕದ ಕರ್ನಾಟಕವನ್ನು ಪರಿಚಯಿಸುತ್ತವೆ. ಒಂದು: ರಾಜ್ಯದಲ್ಲಿ ಶಾಂತಿ ಇರಲಿಲ್ಲ ಮುಖ್ಯವಾಗಿ ‘ಆಹಾರ’ ಇರದಿದ್ದ ಮೇಲೆ ಶಾಂತಿ ನೆಲೆಸಲು ಹೇಗೆ ಸಾಧ್ಯ. ಎರಡು: ಸಾಮಾನ್ಯ ಜನರಿಗೆ ಪ್ರತಿಭಟನೆಯ ವಿನಃ ಮತ್ತಾವ ದಾರಿಗಳೂ ಕಾಣದಂತಾಗಿತ್ತು. ತಾವು ಹಸಿದಿದ್ದಾಗಲೂ ಕೆಲವರು ಸುಖದ ಸುಪ್ಪತ್ತಿಗೆಯಲ್ಲಿರುವುದು ಜನರನ್ನು ಕೆರಳಿಸಿತ್ತು. ಮೂರು: ದೊಂಬಿ ಗಲಭೆಗಳ ನೆಪದಲ್ಲಿ ಸಂಪತ್ತಿನ ಸಂಗ್ರಹಗಳನ್ನು ಕೊಳ್ಳೆ ಹೊಡೆಯುವುದು, ಶ್ರೀಮಂತರ ಮೇಲಿನ ತಮ್ಮ ಕೋಪವನ್ನು ಈ ರೀತಿ ಕಡಿಮೆ ಮಾಡಿಕೊಳ್ಳುವುದು. ನಾಲ್ಕು: ಒಂದು ವರ್ಷದಲ್ಲಿ ಕನಿಷ್ಠ ಮೂರು ನೂರಕ್ಕೂ ಹೆಚ್ಚಿನ ಪ್ರತಿಭಟನೆ ಚಳವಳಿಗಳು ಜನಸಮುದಾಯದ ಪ್ರತಿಭಟನಾ ಮನೋಭಾವ ಮತ್ತು 1973ರ ಸಂದರ್ಭದಲ್ಲಿದ್ದ ಸಾಮಾಜಿಕ ರಾಜಕೀಯ ವ್ಯವಸ್ಥೆಗೆ ಜನತೆ ಸ್ಪಂದಿಸುತ್ತಿದ್ದ ಬಗೆಯನ್ನು ತೋರಿಸುತ್ತದೆ.
ಚಳವಳಿಯ ಭೂಮಿಕೆ ಸಿದ್ಧವಾದ ಕರ್ನಾಟಕದ ಒಟ್ಟು ಪರಿಸರ ಸೊಂಡೂರಿನಲ್ಲಿ ರೈತ ಚಳವಳಿಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು. ಸೊಂಡೂರು ಎಂಬ ಪುಟ್ಟ ತಾಲೂಕಿನ ರೈತರ ವಿಷಯವಾಗಿದ್ದ ಭೂಮಿಯ ಸಮಸ್ಯೆ ರಾಜ್ಯದ ಸಮಸ್ಯೆಯಾಯಿತು. ಈವರೆಗೂ ‘ರಾಜ’ರನ್ನೇ ಆರಾಧ್ಯ ದೈವವಾಗಿಸಿಕೊಂಡು, ರಾಜರ ಎಲ್ಲ ಅಪ್ಪಣೆಗೆ ತಲೆ ಹಾಕುತ್ತಾ ಬಂದವರಲ್ಲಿ ಕೆಲವರು ಎಚ್ಚೆತ್ತು ಚಳವಳಿಗೆ ಕಾರಣರಾದರು. ರಾಜ್ಯದಾದ್ಯಂತ ಚಳವಳಿಗಳ ಮುಖಂಡತ್ವ ವಹಿಸಿಕೊಂಡಿದ್ದವರು ಈ ರೈತರ ಹೋರಾಟಕ್ಕೆ ಬೆಂಬಲಿಸಿದರು. ಸೋಷಲಿಸ್ಟ್ ಪಾರ್ಟಿಯು ಇದು ತನ್ನ ನಿರ್ಣಾಯಕ ಹೋರಾಟವೊ ಎಂಬಂತೆ ಚಳವಳಿಯನ್ನು ರೂಪಿಸಿತು.