ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ | ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅವಶ್ಯಕತೆಯೇ ಇಲ್ಲ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

Update: 2024-12-31 10:25 GMT

ಯಾದಗಿರಿ : ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಡೆತ್ ನೋಟ್ ನಲ್ಲಿ ಅವರ ಹೆಸರು ಉಲ್ಲೇಖವಾಗಿಲ್ಲ ಆದರೂ ಅವರ ವಿರುದ್ದ ಬಿಜೆಪಿಯ ಷಡ್ಯಂತ್ರ ರೂಪಿಸುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದೆ. ಇದು ಖಂಡನಾರ್ಹವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ. ರಾಜ್ಯದ ಪೊಲೀಸರು ಸಮರ್ಥರಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲಿದ್ದಾರೆ. ಹಾಗಾಗಿ ಸಿಬಿಐ ಗೆ ವಹಿಸುವ ಪ್ರಮೇಯವೇ ಇಲ್ಲ ಹಾಗೂ ಸಚಿವರು ರಾಜೀನಾಮೆ ನೀಡುವ ಅವಶ್ಯಕತೆಯೇ ಇಲ್ಲ.

ಪ್ರಿಯಾಂಕ್ ಖರ್ಗೆ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಸಚಿವರಾಗಿದ್ದು, ಅವರಿಗೆ ವಹಿಸಿದ ಐಟಿ ಬಿಟಿ ಖಾತೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅವರು ರಾಜಕೀಯವಾಗಿ ಎತ್ತರಕ್ಕೆ ಏರುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ನಾಯಕರು ಹೊಟ್ಟೆಕಿಚ್ಚಿನಿಂದ ಈ ಪ್ರಕರಣವನ್ನು ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಬಳೆಸುತ್ತಿದ್ದಾರೆ. ಇದು ಅತ್ಯಂತ ಹೇಯವಾಗಿದ್ದು ಖಂಡನಾರ್ಹವಾಗಿದೆ ಎಂದರು.

ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಹಾಗೂ ವೈಯಕ್ತಿಕವಾಗಿ ನಾನು ಸಚಿವರ ಬೆನ್ನಿಗಿದ್ದೇವೆ. ತನಿಖೆಯ ನಂತರ ಬಿಜೆಪಿಯ ಷಡ್ಯಂತ್ರ ಬಯಲಿಗೆ ಬರಲಿದೆ. ವಿರೋಧ ಪಕ್ಷವಾಗಿ ವೈಫಲ್ಯವಾಗಿರುವ ಬಿಜೆಪಿ ಸುಳ್ಳು ಅಪಾದನೆ ಮಾಡುತ್ತಾ ಸರ್ಕಾರಕ್ಕೆ ಹಾಗೂ ಸಚಿವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ. ಬಿಜೆಪಿಯ ಎಲ್ಲ ಆಟಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News