ಸುರಪುರ | ನಗರಸಭೆಯಲ್ಲಿ 13.10 ಲಕ್ಷ ರೂ. ಕೊರತೆ ಬಜೆಟ್ ಮಂಡನೆ

ಸುರಪುರ : ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಮುಂಗಡ ಪತ್ರ(ಬಜೆಟ್) ಮಂಡನಾ ಸಭೆ ನಡೆಯಿತು.
2025-26ನೇ ಸಾಲಿನ ಬಜೆಟ್‌ನಲ್ಲಿ 33.59ಕೋಟಿ ರೂ. ಆದಾಯ ನಿರೀಕ್ಷೆ ಹಾಗೂ 33.73ಕೋಟಿ ರೂ. ಖರ್ಚು ಗುರಿ ಹೊಂದಲಾಗಿದ್ದು ಒಟ್ಟು 13.10ಲಕ್ಷ ರೂ. ಕೊರತೆ ಬಜೆಟ್‌ನ್ನು ಮಂಡಿಸಲಾಯಿತು.
ಈ ಸಾಲಿನ ಬಜೆಟ್‌ನಲ್ಲಿ ಸರಕಾರ ಮೂಲದಿಂದ ಬರುವ ಆದಾಯ ಪ್ರಕಾರ 15ನೇ ಹಣಕಾಸು ಮುಕ್ತ ನಿಧಿ-6ಕೋ.ರೂ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ-1.5ಕೋ ರೂ,ಎಸ್‌ಎಫ್‌ಸಿ ಇತರೆ ಅನುದಾನ-50ಲಕ್ಷ ರೂ, ಎಸ್‌ಎಫ್‌ಸಿ ವೇತನ ಅನುದಾನ-5.75 ಕೋ. ರೂ, ಎಸ್‌ಎಫ್‌ಸಿ ವಿದ್ಯುತ್ ಅನುದಾನ-7ಕೋ. ರೂ, ನಲ್ಮ ಅನುದಾನ-20ಲಕ್ಷ ರೂ, 24.10ಅನುದಾನ -60. 25ಲಕ್ಷ. ರೂ, 7.25 ಅನುದಾನ-11.25ಲಕ್ಷ ರೂ, 5% ಅನುದಾನ-75ಲಕ್ಷ ರೂ ಹಾಗೂ ಪೌರ ಕಾರ್ಮಿಕ ಗೃಹ ಭಾಗ್ಯ ಅನುದಾನ-15ಲಕ್ಷ ರೂ ನಿರೀಕ್ಷಿಸಲಾಗಿದೆ ಹಾಗೂ ನಗರಸಭೆ ಸ್ವಂತ ಆದಾಯದ ಮೂಲಗಳಾದ ನಗರಸಭೆ ಕಟ್ಟಡಗಳ ಬಾಡಿಗೆ-30ಲಕ್ಷ ರೂ, ಕಟ್ಟಡ ಪರವಾನಿಗೆ ಶುಲ್ಕ-15ಲಕ್ಷ ರೂ, ಅಭಿವೃದ್ಧಿ ಶುಲ್ಕ-40ಲಕ್ಷ ರೂ, ವ್ಯಾಪಾರ ಪರವಾನಿಗೆ ಶುಲ್ಕ-7.50ಲಕ್ಷ ರೂ, ನೀರು ಸರಬರಾಜು ಬಳಕೆದಾರರ ಶುಲ್ಕ-1.65ಕೋ.ರೂ, ಸ್ಟ್ಯಾಂಪ್ ಡ್ಯೂಟಿ ಚಾರ್ಜಸ್-6.50ಲಕ್ಷ.ರೂ, ನಮೂನೆ-3 ಶುಲ್ಕ-5ಲಕ್ಷ.ರೂ, ಆಸ್ತಿ ತೆರಿಗೆ ಆದಾಯ-1.85ಕೋ.ರೂ ಹಾಗೂ ವರ್ಗಾವಣೆ ಶುಲ್ಕದಿಂದ-60ಲಕ್ಷ ರೂ ಆದಾಯ ನಿರೀಕ್ಷಿಸಲಾಗಿದೆ.
ಈ ಸಾಲಿನ ಬಜೆಟ್‌ನಲ್ಲಿ ನಗರದಲ್ಲಿ ರಸ್ತೆ ನಿರ್ಮಾಣಕ್ಕಾಗಿ-1ಕೋಟಿ ರೂ., 50ಲಕ್ಷ ರೂ.-ಚರಂಡಿ ನಿರ್ಮಾಣ, 45ಲಕ್ಷ ರೂ.-ಉದ್ಯಾನವನ ಅಭಿವೃದ್ಧಿ, 20ಲಕ್ಷ ರೂ.-ಸ್ಮಶಾನ ಅಭಿವೃದ್ಧಿ, 30ಲಕ್ಷ ರೂ.-ಕಟ್ಟಡಗಳ ನಿರ್ಮಾಣ ಹಾಗೂ ವೇತನ ಮತ್ತು ವಿದ್ಯುತ್ ಖರ್ಚು ಮಾಡುವ ನಿರೀಕ್ಷೆ ಹೊಂದಲಾಗಿದೆ.
ಸರಕಾರದಿಂದ ಬಾರದ ಅನುದಾನ :
ಕಳೆದ ಸಾಲಿನ ಬಜೆಟ್‌ನಲ್ಲಿ ನಗರದ ಅಭಿವೃದ್ಧಿ ಕೆಲಸಗಳಿಗಾಗಿ ಅನುದಾನ ಕಲ್ಪಿಸಲಾಗಿತ್ತು ಆದರೆ ರಾಜ್ಯ ಸರಕಾರದಿಂದ ಯಾವುದೇ ಅನುದಾನ ಬರಲೇ ಇಲ್ಲ ಏಕೆ ಬರಲಿಲ್ಲ? ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ಅವರು ಸಭೆಯಲ್ಲಿ ಪ್ರಶ್ನಿಸಿದರು. ಅನುದಾನ ಬಾರದೇ ಇದ್ದಾಗ ಅಭಿವೃದ್ಧಿ ಕೆಲಸ ಹೇಗೆ ಆಗುವುವುದು ಟೆಂಡರ್ ತೆಗೆದುಕೊಂಡ ಗುತ್ತಿಗೆದಾರರು ಏನು ಮಾಡಬೇಕು. ಈ ಬಗ್ಗೆ ಏನಾದರೂ ನಿರ್ಧಾರ ಮಾಡಿ ಎಂದು ಆಗ್ರಹಿಸಿದ ಅವರು, ಜಿಲ್ಲೆಯ ಎರಡು ನಗರಸಭೆಗಳಿಗೆ ಅನುದಾನ ಬಂದಿದೆ. ಆದರೆ ಸುರಪುರ ನಗರಸಭೆಗೆ ಅನುದಾನ ಬರಲಿಲ್ಲ ಕೇಂದ್ರ ಸರಕಾರದ ಕಡೆಗೆ ಬೆರಳು ತೋರಿಸಬೇಡಿ ರಾಜ್ಯ ಸರಕಾರ ಅನುದಾನ ಬಳಕೆಯ ಯುಸಿ ಸರ್ಟಿಫಿಕೇಟ್ ಕೊಡದ ಕಾರಣ ಕೇಂದ್ರ ಸರಕಾರದ ಅನುದಾನ ಕೂಡಾ ಬರಲಿಲ್ಲ ಅಧಿಕಾರದಲ್ಲಿರುವ ನೀವು ಅನುದಾನ ತೆಗೆದುಕೊಂಡು ಬರಬೇಕಾಗಿತ್ತು ಎಂದುತಿಳಿಸಿದರು.
ಈ ಬಗ್ಗೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ ಉತ್ತರಿಸಿ, ಸರಕಾರದ ಅನುದಾನ ಬರುವ ನಿರೀಕ್ಷೆ ಇಟ್ಟುಕೊಂಡು ಬಜೆಟ್ ತಯಾರಿಸಿದ್ದು, ಶಾಸಕರ ಗಮನಕ್ಕೆ ತಂದು ಸರಕಾರದಿಂದ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ನೀರಿನ ಬಿಲ್ ಹೆಚ್ಚಳದ ಕುರಿತು ಸದಸ್ಯರಿಂದ ತೀವ್ರ ತರಾಟೆ :
ನಗರದ ಕೆಲವು ಕಡೆಗಳಲ್ಲಿ ಚಿಕ್ಕ ಕುಟುಂಬಗಳು ಇರುವ ಮನೆಗಳಿಗೆ ಹೆಚ್ಚು ನೀರಿನ ಬಿಲ್ಲು ನೀಡಲಾಗಿದೆ. ಬಡವರು ಹಾಗೂ ಸಣ್ಣ ಕುಟುಂಬಗಳಿಗೆ ಹೆಚ್ಚಿನ ಬಿಲ್ಲು ಬರುತ್ತಿದೆ ಇದನ್ನು ಹೇಗೆ ಅವರು ತುಂಬಲು ಸಾಧ್ಯ ಎಂದು ಸದಸ್ಯರಾದ ನರಸಿಂಹಕಾಂತ ಪಂಚಮಗಿರಿ, ವಿಷ್ಣು ಗುತ್ತೇದಾರ, ಮಾನಪ್ಪ ಚಳ್ಳಿಗಿಡ ಅವರು ನಾಗರಿಕರಿಗೆ ಬಂದಿರುವ ನೀರಿನ ಬಿಲ್‌ನ್ನು ಪ್ರದರ್ಶಿಸಿ ಸಭೆಯ ಗಮನಸೆಳೆದರು. ಆಗ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹಾಗೂ ಕೆಯುಡಬ್ಲ್ಯೂಎಸ್ ಎಇ ಶಂಕರಗೌಡ ಅವರು ಉತ್ತರಿಸಿ, ಕೆಲವು ತಾಂತ್ರಿಕ ತಪ್ಪುಗಳಿಂದಾಗಿ ಬಿಲ್ಲು ಹೆಚ್ಚಿಗೆ ಬಂದಿರಬಹುದು ಅಂತಹ ಮನೆಗಳ ಬಿಲ್ಲನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಕಸದ ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆ ಕಾರ್ಯಗಳನ್ನು ಸರಿಯಾಗಿ ಕೈಗೊಳ್ಳಬೇಕು ಅಧಿಕಾರಿಗಳು ವಾರ್ಡುಗಳಿಗೆ ಭೇಟಿ ನೀಡುವದಿಲ್ಲ ಶಾಸಕರು ಹೇಳಿದ ಮಾತಿಗೂ ಬೆಲೆ ಕೊಡುವುದಿಲ್ಲ ಎಂದು ಸದಸ್ಯೆ ಸುವರ್ಣಾ ಸಿದ್ರಾಮ ಎಲಿಗಾರ ಅವರು ಸಭೆಯಲ್ಲಿ ಹೇಳಿದರು.
ಯಂತ್ರಗಳನ್ನು ಕೆಡಿಸುತ್ತಿರುವ ನಗರಸಭೆ ಸಿಬ್ಬಂದಿಗಳು :
ನಗರಸಭೆಗೆ ಸರಕಾರದಿಂದ ಬಂದಿರುವ ಶೌಚಾಲಯ ಟ್ಯಾಂಕ್ ಸ್ವಚ್ಛಗೊಳಿಸುವ ಸಕ್ಕಿಂಗ್ ಯಂತ್ರ, ಕಸದ ಯಂತ್ರಗಳು, ಜೆಸಿಬಿ ಇನ್ನೂ ಅನೇಕ ಯಂತ್ರಗಳು ಧೂಳು ತಿನ್ನುತ್ತಾ ಬಿದ್ದಿದ್ದು, ಉಪಯೋಗಕ್ಕೆ ಬಾರದೇ ಹಾಳಾಗಿ ಹೋಗುತ್ತಿವೆ. ಈ ಬಗ್ಗೆ ನೈರ್ಮಲ್ಯ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸುತ್ತಿದ್ದಾರೆ. ನಗರಸಭೆಯ ಕೆಲವು ಸಿಬ್ಬಂದಿಗಳೇ ನಗರಸಭೆಗೆ ಬಂದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರಗಳನ್ನು ಕೆಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ಆರೋಪಿಸಿದರು.