ಯಾದಗಿರಿ | ಅರ್ಥಪೂರ್ಣವಾಗಿ ವಿಶ್ವಮಾನವ ದಿನಾಚರಣೆಗೆ ನಿರ್ಧಾರ
ಯಾದಗಿರಿ : ರಾಷ್ಟ್ರಕವಿ ಕುವೆಂಪುರವರ ಜಯಂತ್ಯೋತ್ಸವ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಡಿ.29 ರಂದು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪಕೋಟೆಪ್ಪಗೊಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವಮಾನವ ದಿನಾಚರಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಮಾತನಾಡಿ, ಅಂದು ಬೆಳಿಗ್ಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು, ವೇದಿಕೆ, ಆಹ್ವಾನ ಪತ್ರಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಈ ಜಯಂತ್ಯೋತ್ಸವ ತಪ್ಪದೇ ಆಚರಿಸಲು ಹಾಗೂ ತಾಲೂಕು ಮಟ್ಟದಲ್ಲಿ, ಗ್ರಾಮ ಪಂಚಾಯತ್ಗಳಲ್ಲಿ ಈ ಜಯಂತಿ ಆಚರಣೆಗೆ ಸಕಲ ಕ್ರಮಗಳನ್ನು ಕೈಗೊಳ್ಳಬೇಕು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ಹಾಗೂ ನುರಿತ ಉಪನ್ಯಾಸಕರನ್ನು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಅರುಣಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಸುಲೈಮಾನ ಡಿ.ನದಾಫ್, ಪ್ರೊ.ಎನ್. ಗುರುಪ್ರಸಾದ್ ವೈದ್ಯ, ದುರ್ಗಪ್ಪ ಪೂಜಾರಿ, ದೇವಿಂದ್ರಪ್ಪ ಧೋತ್ರೆ, ಮಧುಕುಮಾರ, ನಿವೃತ್ತ ಉಪನ್ಯಾಸಕ ಸಿ.ಎಂ.ಪಟ್ಟೇದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.