ಯಾದಗಿರಿ | ಕಾರ್ಮಿಕ ಇಲಾಖೆಯಿಂದ ದಾಳಿ : 14 ಬಾಲ ಕಾರ್ಮಿಕರ ರಕ್ಷಣೆ

Update: 2024-12-19 10:06 GMT

ಯಾದಗಿರಿ : ವಾಹನಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋದಲ್ಲಿ ತಮ್ಮ ವಾಹನಗಳನ್ನು ಸೀಜ್ ಮಾಡಲಾಗುವುದೆಂದು ವಾಹನಗಳ ಮಾಲಕರಿಗೆ ಮೋಟಾರ್ ವಾಹನ ನಿರೀಕ್ಷಕರಾದ ಅಯ್ಯಾಳಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.

ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಮಾರ್ಗವಾಗಿ ಆಟೋ, ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಠಾತ್ ದಾಳಿಯನ್ನು ಕೈಗೊಂಡು ಕೂಲಿ ಕೆಲಸಕ್ಕಾಗಿ 8 ಆಟೋ, ಟಂಟಂಗಳಲ್ಲಿ ತೆರಳುತ್ತಿದ್ದ ಸುಮಾರು 14 ಮಕ್ಕಳನ್ನು ರಕ್ಷಿಸಿ, ಮಕ್ಕಳನ್ನು ಮತ್ತೊಮ್ಮೆ ಕೆಲಸಕ್ಕೆ ಕಳುಹಿಸದಂತೆ ಪಾಲಕ, ಪೋಷಕರು ಹಾಗೂ ಆಟೋ, ಟಂಟಂಗಳ ಚಾಲಕರಿಗೆ ಜಾಗೃತಿ ಮೂಡಿಸಿ ಪುನಃ ಗ್ರಾಮಕ್ಕೆ ಕಳುಹಿಸಲಾಯಿತು.

ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಾಬೇರಾ ಬೇಗಂ ಅವರು ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲಕರ ವಿರುದ್ಧ 20,000 ರೂ.ಗಳಿಂದ 50,000 ರೂ.ಗಳವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಮಾತನಾಡಿ, ಆಟೋ, ಟಂಟಂಗಳಲ್ಲಿ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಹೋಗಬಾರದೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ-ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕಗಳನ್ನು ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲಕರ ವಿರುದ್ಧ ಮತ್ತು ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ಆಟೋ, ಟಂಟಂಗಳ ಚಾಲಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಮೋಟಾರ್ ವಾಹನ ನಿರೀಕ್ಷಕರಾದ ಚಂದ್ರಕಾಂತ, ಆರ್.ಟಿ.ಓ ವಾಹನ ಚಾಲಕರಾದ ಮಾಳಪ್ಪ, ಸಾಗರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಪರ್ವತರೆಡ್ಡಿ, ಮಕ್ಕಳ ಸಹಾಯವಾಣಿ 1098ನ ಶೃತಿ, ಸನ್ ರೈಜ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ ಖಾಸಿಂ ಅಲಿ, ಸಮಾಜ ಸೇವಕರಾದ ಜಿಂದಾವಲಿ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News