ಯಾದಗಿರಿ | ಲುಂಬಿನಿ ಉದ್ಯಾನವನದ ಕೆರೆಯಲ್ಲಿ ಬೋಟಿಂಗ್ ಗೆ ಚಾಲನೆ

ಯಾದಗಿರಿ : ನಗರದ ಹೃದಯ ಭಾಗದಲ್ಲಿರುವ ಲುಂಬಿನಿ ಉದ್ಯಾನವನದ ಸಣ್ಣ ಕೆರೆಯಲ್ಲಿ ಜಲ ಕ್ರೀಡೆಗಳನ್ನು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಸೋಮವಾರ ಉದ್ಘಾಟಿಸಿ, ಕೆರೆಯಲ್ಲಿ ಒಂದು ಸುತ್ತು ಬೋಟಿಂಗ್ ಮಾಡಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಮೇ.ವಿನ್ ಯೋಗ ವೆಂಚರ್ಸ್ ಪ್ರೈ.ಲಿ. ಬೆಂಗಳೂರು ಇವರ ಸಹಯೋಗದೊಂದಿಗೆ ಲುಂಬಿನಿ ಉದ್ಯಾನವನದ ಸಣ್ಣ ಕೆರೆಯಲ್ಲಿ ಜಲ ಕ್ರೀಡೆಗಳ ಉದ್ಘಾಟನೆಗೊಳಿಸಿ ಬಳಿಕ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ನಗರದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಲ್ಲಿ ಲುಂಬಿನಿ ಸಣ್ಣ ಕೆರೆ ಅಭಿವೃದ್ಧಿಪಡಿಸಲಾಗಿದ್ದು, ಇದೀಗ ಜಿ.ಪಂ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಜಲ ಕ್ರೀಡೆ ಆಯೋಜಿಸಿದ್ದು, ಸಂತಸದ ಸಂಗತಿ. ಇದರ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಂಡು, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಿರಿ ಎಂದರು.
ನಗರ ಸೌಂದರ್ಯಕ್ಕಾಗಿ ಶಾಸಕರ ನಿಧಿಯಿಂದ ಹಾಗೂ ಕೆಕೆಆರ್.ಡಿಬಿ ಅನುದಾನವನ್ನು ಕ್ರೋಢಿಕರಿಸಿ, ನಗರಸಭೆ ವತಿಯಿಂದ ಜೊತೆಯಾಗಿ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ಸಾರ್ವಜನಿಕರು ಜಲ ಕ್ರೀಡೆಗಳನ್ನು ಉಪಯೋಗ ಪಡೆಯಬೇಕು. ಸರ್ಕಾರಗಳ ಇಂತಹ ವೈವಿಧ್ಯಮಯ ಯೋಜನೆಗಳ ಬಗ್ಗೆ ಆಸಕ್ತಿ ತೋರಿ ಹೆಚ್ಚಿನ ಜನರು ಬರಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಪ್ಪ ಕೋಟೆ ಪ್ಪಗೊಳ್, ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ, ಪತ್ರಕರ್ತರಾದ ಎಸ್ ಎಸ್ ಮಠ ಹಾಗೂ ಇನ್ನಿತರರು ಇದ್ದರು.
ಲುಂಬಿನಿ ಉದ್ಯಾನವನ ಮಾದರಿಯಲ್ಲಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ಮಾವಿನ ಕೆರೆ, ಇಬ್ರಾಹಿಂಪುರ ಕೆರೆ, ನಾರಾಯಣಪುರ ಜಲಾಶಯ ಹಾಗೂ ಮಿನಾಸಪೂರ್ ಊರ ಕೆರೆ ಅಭಿವೃಧ್ಧಿ ಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲೆ ಟೆಂಡರ್ ಕರೆಯಲಾಗುವುದು.
-ರಾಮಚಂದ್ರ, ಸಹಾಯಕ ನಿರ್ದೇಶಕ ಪ್ರವಾಸೋಧ್ಯಮ ಇಲಾಖೆ ಯಾದಗಿರಿ