ಯಾದಗಿರಿ | ಆರೋಗ್ಯದ ಕಡೆ ಗಮನ ಹರಿಸಲು ಡಾ.ಮಹೇಶ್ ಬಿರದಾರ ಸಲಹೆ

ಯಾದಗಿರಿ : ಮಾಜಿ ದೇವದಾಸಿ ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಕೊಂಡು ಮಾಹಿತಿಯ ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು, ಸರ್ಕಾದಿಂದ ಸಿಗುವ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ್ ಬಿರದಾರ ಅವರು ಹೇಳಿದರು.
ನಗರದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ, ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಜಿ ʼದೇವದಾಸಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಹಾಗೂ ಅರಿವು ಶಿಬಿರʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ದೇವದಾಸಿ ಮಹಿಳೆಯರು ಸರ್ಕಾದಿಂದ ಸಿಗುವ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಪೌಷ್ಟಿಕ ಆಹಾರವನ್ನು ಸೇವಿಸಬೇಕು. ರಕ್ತ ಹೀನತೆ ಆಗದಂತೆ ನೊಡಿಕೊಳ್ಳಬೇಕು, ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು, ದೇವದಾಸಿ ಪದ್ಧತಿ ಸಮಾಜಕ್ಕೆ ಅಂಟಿದ ಕಳಂಕ ಇದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಹತ್ತು ಹಲವು ರೋಗಗಳು ತಗಲುವ ಸಾಧ್ಯತೆಗಳಿವೆ. ದೇವದಾಸಿಯರು ತಮ್ಮ ಆರೋಗ್ಯ ಕಡೆ ಗಮನ ಹರಿಸಬೇಕು ಎಂದರು.
ದೇವದಾಸಿ ಪುನರ್ವಸತಿ ಯೋಜನೆ, (ಪ್ರ) ಯೋಜನಾ ಅಧಿಕಾರಿಗಳಾದ ಶಿವಮಂಗಳ ಅವರು ಮಾತನಾಡಿ, ದೇವದಾಸಿ ಪದ್ಧತಿಯ ಅನಿಷ್ಟ ಪದ್ಧತಿಯಿಂದ ಹೊರಬರಲು ಮತ್ತು ಮಾಜಿ ದೇವದಾಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಆರೋಗ್ಯ ಶಿಬಿರಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ಹಾಗೂ ಈ ಪದ್ಧತಿಯನ್ನು ತೊಡೆದು ಹಾಕಲು ಜಿಲ್ಲೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಡಾ.ಸಂಜೀವ್ ಕುಮಾರ ರಾಯಚೂರಕರ್ ಅವರು ಮಾತನಾಡಿ, ಬೇಸಿಗೆ ಕಾಲ ಇರುವುದರಿಂದ ಫಿಲ್ಟರ್ ನೀರು ಅಥವಾ ಕಾಯಿಸಿ ಆರಿಸಿದ ನೀರನ್ನು ಸೇವನೆ ಮಾಡಬೇಕು, ಸಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತೆ ವಹಿಸಬೇಕೆಂದು ತಿಳಿಸಿದರು.
ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹನಮಂತ ರೆಡ್ಡಿ ಅವರು ಮಾತನಾಡಿ, ಬೇಸಿಗೆ ಕಾಲ ಆರಂಭವಾಗಿರುವುದರಿಂದ ದಿನನಿತ್ಯದ ಕೆಲಸ ಕಾರ್ಯಗಳನ್ನು ಬೆಳಿಗ್ಗೆ, ಸಂಜೆ ಮಾಡಿಕೊಳ್ಳಬೇಕು, ಬಿಸಿಲಿನಲ್ಲಿ ಮನೆ ಬಿಟ್ಟು ಹೊರಗೆ ಹೊಗಬಾರದು, ಒಂದು ವೇಳೆ ಹೊರಗೆ ಹೊಗುವ ಪ್ರಸಂಗ ಬಂದಲ್ಲಿ ಕೊಡೆ, ಟೊಪ್ಪಿಗೆ, ಟಾವೆಲ್ ಗಳ ಜೊತೆಗೆ ನೀರಿನ ಬಾಟಲನ್ನು ತೆಗೆದುಕೊಂಡು ಹೊಗಬೇಕು, ಮನೆಯಲ್ಲಿ ಕಾಯಿಸಿ ಆರಿಸಿದ ನೀರನ್ನು ಕುಡಿಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ.ವಿನುತಾ, ಡಾ.ಕ್ಷಿತೀಜ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಮಾಜಿ ದೇವದಾಸಿಯರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ ಚವ್ಹಾಣ ರವರು ಕಾರ್ಯಕ್ರಮವನ್ನು ನಿರೂಪಣೆ ನೆರವೇರಿಸಿದರು, ಮಾಳಪ್ಪ ಯಾದವ್ ಸ್ವಾಗತ ಕೋರಿದರು, ಶಾಂತಿಲಾಲ್ ವದನಾರ್ಪಣೆ ನೆರವೇರಿಸಿದರು.