ಯಾದಗಿರಿ | ತ್ಯಾಜ್ಯ ವಿಲೇವಾರಿಗೆ ನಗರಸಭೆ ಅಧ್ಯಕ್ಷೆ ಸೂಚನೆ
ಯಾದಗಿರಿ : ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಯಾದಗಿರಿ ನಗರದಿಂದ ಶಹಾಪುರ ಕಡೆಗೆ ಹೋಗುವ ರಸ್ತೆಯ (ರೇಲ್ವೆ ಬ್ರಿಡ್ಜ್ ) ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆದಿರುವ ಜಾಗಕ್ಕೆ ನಗರಸಭೆ ಅಧ್ಯಕ್ಷರಾದ ಕುಮಾರಿ ಲಲಿತಾ ಅನಪೂರ ಭೇಟಿ ನೀಡಿ, ತಕ್ಷಣವೇ ವಿಲೇವಾರಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಸಂಜೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿd ಲಲಿತಾ ಅನಪೂರ ಅವರು, ಕೇವಲ ತ್ಯಾಜ್ಯವಲ್ಲದೇ ಕೆಲ ಮೆಡಿಸಿನ್ ಗಳು ಕೂಡಾ ಅಲ್ಲಲ್ಲಿ ಬಿದ್ದಿರುವುದನ್ನು ಗಮನಿಸಿ, ಕಿರಿಯ ಆರೋಗ್ಯ ನಿರೀಕ್ಷಿಕರಾದ ಶಿವಪುತ್ರ ಹಾಗೂ ಮಂಜುನಾಥ ಅವರಿಗೆ ಈಗ ಬಿದ್ದಿರುವ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿ ಮಾಡಿ ಇನ್ನು ಮುಂದೆ ಇಲ್ಲಿ ಯಾರೂ ಕಸ ಬಿಸಾಡದಂತೆ ಸ್ಥಳದಲ್ಲಿ ಸಿಬ್ಬಂದಿಯೊಬ್ಬರನ್ನು ನೇಮಿಸುವಂತೆ ತಿಳಿಸಿದರು.
ರೇಲ್ವೆ ನಿಲ್ದಾಣದ ಕಡೆಗೆ ಹೋಗುವ ದಾರಿಯುದ್ದಕ್ಕೂ ಬೆಳೆದಿದ್ದ ಜಾಲಿ ಗಿಡಿಗಂಟಿಗಳನ್ನು ಕತ್ತರಿಸಿ ಆ ಸ್ಥಳದಲ್ಲಿ ಸಸಿಗಳನ್ನು ನೆಡುವ ಬಗ್ಗೆ ತಕ್ಷಣ ಕ್ರಮವಹಿಸಿ ಎಂದು ತಿಳಿಸಿದರು.
ಮದನಪುರ ಗಲ್ಲಿಯ ಚರಂಡಿಗಳಲ್ಲಿ ಹೂಳು ತುಂಬಿರುವ ಬಗ್ಗೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ ವಿಲೇವಾರಿ ಆಗದಿರುವ ಬಗ್ಗೆ ಸಾರ್ವಜನಿಕರು ದೂರಿದ ನಂತರ ಸ್ಥಳಕ್ಕೆ ನಗರಸಭೆ ಕಮೀಷನರ್ ಉಮೇಶ ರಾಠೋಡ ಅವರನ್ನು ಕರೆಸಿಕೊಂಡು ವಿಲೇವಾರಿ ಆಗದ ಉಳಿದ ತ್ಯಾಜ್ಯವನ್ನು ಕೂಡಲೇ ತೆಗೆಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯರಾದ ಕರಿಂ, ಪೀರ ಅಹ್ಮದ್ ಸೇರಿದಂತೆ ಸಿಬ್ಬಂದಿಗಳು ಇದ್ದರು.