ಯಾದಗಿರಿ | ಅಮಿತ್ ಶಾ ಹೇಳಿಕೆ ಖಂಡಿಸಿ ನಡೆಸಿದ ಶಹಾಪುರ ಬಂದ್ ಯಶಸ್ವಿ

Update: 2024-12-31 12:53 GMT

ಯಾದಗಿರಿ : ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಮಂಗಳವಾರ ಸಾಮೂಹಿಕ ಸಂಘಟನೆಗಳು ನಡೆಸಿದ ಶಹಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಅಮಿತ್ ಶಾ ಹೇಳಿಕೆ ಖಂಡಿಸಿ ನಗರದ ಕನ್ಯಾಕೊಳೂರು ಅಗಸಿಯಿಂದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣದ ಮೂಲಕ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಬಸವೇಶ್ವರ ವೃತ್ತಕ್ಕೆ ಹಿಂತಿರುಗಿ ಅಮಿತ್ ಶಾ ಅವರ ಅಣುಕು ಶವಯಾತ್ರೆ ನಡೆಸಿ ಹತ್ತಾರು ಸಮುದಾಯದ ಸಾವಿರಾರು ಜನರು ಬೃಹತ್ ಸಂಖ್ಯೆಯಲ್ಲಿ ಶಾ ವಿರುದ್ಧ ಘೋಷಣೆ ಕೂಗುತ್ತಾ ಶಾ ಅವರ ಪ್ರತಿಕೃತಿ ದಹನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತಾನಾಡಿದ ಪ್ರಗತಿಪರ ಚಿಂತಕ ವಿಶ್ವರಾಧ್ಯ ಸತ್ಯಂಪೇಟ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಹಕ್ಕು, ಸ್ವಾತಂತ್ರ್ಯ, ಉನ್ನತ ಸ್ಥಾನಮಾನ ನೀಡಿ ಪ್ರತಿ ಪ್ರಜೆಯ ಏಳಿಗೆ ಬಯಸಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಅವರು ನೀಡಿದ ಸಂವಿಧಾನದ ಆಧಾರದ ಮೇಲೆಯೇ ಅಮಿತ್ ಶಾ ಅವರು ಸಂಸದರಾಗಿ ದೇಶದ ಗೃಹ ಸಚಿವರಾಗಿ ಅವರ ಬಗ್ಗೆಯೇ ಅಪಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಯ್ಯಣ್ಣ ಕನ್ಯಾಕೋಳೂರು ಮಾತನಾಡಿ, ನಮಗೆ ಸಂವಿಧಾನದ ಆಧಾರದ ಮೇಲೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ನಡೆಯುತ್ತವೆ. ಈ ಅಂಗಗಳ ಮೂಲಕವೇ ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ಅಭಿವೃದ್ಧಿಗೆ ಬುನಾದಿಯೇ ಸಂವಿಧಾನ. ಆದ್ದರಿಂದ ಸಂವಿಧಾನ ಶಿಲ್ಪಿಯ ಧ್ಯಾನ ದಿನಕ್ಕೆ ಸಾವಿರ ಸಾರಿ ಮಾಡಿದರೂ ತಪ್ಪಿಲ್ಲ. ಅಂಬೇಡ್ಕರ್ ಅವರ ಧ್ಯಾನ ಮಾಡಿದರೆ ಅಮಿತ್ ಶಾ ಅವರಿಗೆ ಏಕೆ ಆಗಲ್ಲ. ಇಂತಹ ಮನೋಭಾವ ಅಮಿತ್ ಶಾ ಅವರ ಮನಸ್ಸಿನಲ್ಲಿ ಇದೆ ಎಂದಾದರೆ ಕೆಳ, ಮಧ್ಯಮ ವರ್ಗದವರ ಏಳಿಗೆ ಹೇಗೆ ಸಾಧ್ಯ. ಶಾ ಅವರಿಂದ ದೇಶದ ಜನರು ಇಂತಹ ಅವಮಾನಗಳನ್ನು ನಿರೀಕ್ಷಿಸಬೇಕಾ ಎಂದು ಪ್ರಶ್ನಿಸಿದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಪಕ್ಷ, ಸಮಾಜ, ಸಂಘ ಸಂಸ್ಥೆಗಳು ಎಲ್ಲರೂ ಒಟ್ಟಿಗೆ ಸೇರಿ ಶಹಾಪುರ ಬಂದ್ ಸಂಪೂರ್ಣ ಬೆಂಬಲ ನೀಡಿ ಯಶಸ್ವಿಗೊಳಿಸಿದ್ದು, ಶಹಾಪುರ ಇತಿಹಾಸದಲ್ಲೇ ಐತಿಹಾಸಿಕ ಬಂದ್ ಕರೆಯಾಗಿದೆ. ಇದು ಎಲ್ಲ ಅಂಬೇಡ್ಕರ್ ಅಭಿಮಾನಿಗಳಿಗೆ ನೋವುಂಟಾಗಿದೆ. ಆದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರು, ಮಾದಿಗ ದಂಡೋರ ಸಮಿತಿ ಮುಖಂಡರು, ಬಂಜಾರ ಸಂಘಟನೆ ಮುಖಂಡರು, ಕುರುಬ ಸಮುದಾಯದ ಮುಖ್ಯಸ್ಥರು, ಮುಸ್ಲಿಂ ಸಮುದಾಯದ ನಾಯಕರು, ಕುರುಬ ಸಮುದಾಯದ ಮುಖಂಡರು ಸೇರಿದಂತೆ ಹತ್ತಾರು ಸಂಘಟನೆ ಮುಖಂಡರು, ಕಾರ್ಯಕರ್ತರು, ನಾಯಕರು, ಅಂಬೇಡ್ಕರ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News