ಯಾದಗಿರಿ | ಹೆಚ್ಐವಿ ಕುರಿತು ಯುವ ಜನಾಂಗ ಎಚ್ಚರವಾಗಿರಿ : ನ್ಯಾ.ಮರಿಯಪ್ಪ

Update: 2024-12-03 13:44 GMT

ಯಾದಗಿರಿ : ಏಡ್ಸ್‌ನಂತಹ ಮಾಹಾಮಾರಿಯಿಂದ ದೂರವಿರಲು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಹೇಳಿದ್ದಾರೆ.

ಗಾಂಧಿ ವೃತ್ತದಲ್ಲಿ ಏಡ್ಸ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(YIMS) ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ "ವಿಶ್ವ ಏಡ್ಸ್ ದಿನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಕರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಹಾವಳಿ ಯುವಕರಲ್ಲಿ ಅತಿಯಾಗಿದ್ದು, ಇದು ಅವರು ದಾರಿ ತಪ್ಪಲು ಕಾರಣವಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ್ ಬಿರಾದಾರ ಮಾತನಾಡಿ, 'ಏಡ್ಸ್ ಗೆ ಚಿಕಿತ್ಸೆ ಸಾಧ್ಯ. ಆದರೆ ಸಂಪೂರ್ಣ ಗುಣಮುಖರಾಗಲು ಅಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಏಡ್ಸ್ ಕುರಿತು ಅರಿವು ಹೊಂದಬೇಕು. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಸಂಜೀವಕುಮಾರ ಸಿಂಗ್ ರಾಯಚೂರಕರ್ ಮಾತನಾಡಿ, ಯುವಕರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಹಾನಿಕಾರಕ ಈ ರೋಗಕ್ಕೆ ಸಂಪೂರ್ಣ ಗುಣಮುಖ ಲಸಿಕೆ ಲಭ್ಯವಾಗಿಲ್ಲ. ಆದರೆ ಇದನ್ನು ತಡೆಗಟ್ಟಲು ವಿಧಾನ ಸುಲಭ. ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಈ ರೋಗ ಬರುತ್ತದೆ. ನಿರ್ಲಕ್ಷದ ಸೂಜಿಗಳಿಂದ ರೋಗ ಬರುತ್ತದೆ. ತಾಯಿಯಿಂದ ಮಗುವಿಗೆ ಬರುತ್ತದೆ. ಇದನ್ನು ತಡೆಗಟ್ಟಬಹುದು. ಅಸುರಕ್ಷಿತ ಲೈಂಗಿಕ ಸಂಬಂಧದಿಂದ ಗ್ರಾಮೀಣ ಭಾಗದಲ್ಲಿಯೂ ಏಡ್ಸ್ ಹೆಚ್ಚಾಗುತ್ತಿದೆ. ಲೈಂಗಿಕ ಕ್ರಿಯೆಗಳು ಮದುವೆ ಮುಂಚೆ ನಡೆಯುತ್ತಿರುವುದು ಕಳವಳ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಸಾಜೀದ್, ತಾಲೂಕು ಆರೋಗ್ಯಧಿಕಾರಿ ಡಾ.ಹನುಮಂತ ರೆಡ್ಡಿ, ಐಎಮ್ಎ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ ಪೂಜಾರಿ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲಾ ಸಿನ್ನೂರ್, ಡಾ.ಶರಣ ಬಸಪ್ಪ ಎಲ್ಹೇರಿ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ, ಅಮರೇಶ ಬೋತಿ ಇದ್ದರು. ಇದೆ ಸಂದರ್ಭದಲ್ಲಿ ಹೆಚ್ಐವಿ ಸಮುದಾಯಕ್ಕೆ ಸಹಾಯ, ಸಹಕಾರ ಮತ್ತು ಹೆಚ್ಐವಿ ಪರೀಕ್ಷೆ ಮಾಡುವಲ್ಲಿ ಗುರಿ ಸಾಧನೆ ಮಾಡಿದ್ದಕ್ಕಾಗಿ ಸಂಬಂಧಿಸಿದ ಸಿಬ್ಬಂದಿಗಳನ್ನು ಸನ್ಮಾನ ಮಾಡಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News