ಯಾದಗಿರಿ | ಸರ್ಕಾರದ ಯೋಜನೆಗಳ ಲಾಭವನ್ನು ಬೂತ್ ಮಟ್ಟದಲ್ಲಿ ಜನರಿಗೆ ತಲುಪಿಸಿ, ಜಾಗೃತಿ ಮೂಡಿಸಲಾಗುವುದು: ಡಾ.ಮೇಟಿ

ಯಾದಗಿರಿ : ರಾಜ್ಯದಲ್ಲಿ 2013 ರಲ್ಲಿ ಹಾಗೂ 2023 ರಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ. ಪಕ್ಷದ ಪ್ರಚಾರ ಸಮಿತಿಯಿಂದ ಸರ್ಕಾರದ ಯೋಜನೆಗಳ ಲಾಭ ಎಷ್ಟು ಜನರಿಗೆ ತಲುಪಿದೆ ಎಂಬುದನ್ನು ಸಂಗ್ರಹಿಸಿ ಜೊತೆಗೆ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದೆಂದು ರಾಜ್ಯ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, 2013 ರಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಿದರು, ಪಕ್ಷದ ವೇದಿಕೆ ಪ್ರಚಾರದ ಕೊರತೆಯಿಂದ ಹಾಗೂ ಹಲವಾರು ಕಾರಣಗಳಿಂದ 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು, 2023 ರಲ್ಲಿ ಕೈ ನಾಯಕ ರಾಹುಲ್ ಗಾಂಧಿಯವರು ದೇಶದಲ್ಲಿ ನಡೆಸಿದ ಭಾರತ ಜೋಡೊ ಯಾತ್ರೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಒಬ್ಬಟ್ಟಾಗಿ ನಡೆಸಿದ ಪ್ರಜಾ ಧ್ವನಿ ಯಾತ್ರೆ ಯಶಸ್ವಿಯಾಗಿ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಪಕ್ಷ ಅಧಿಕಾರಕ್ಕೆ ಬಂದಿದೆ, ನಾವು ಈಗ ಜಾಗೃತರಾಗಿದ್ದೇವೆ, ಎಚ್ಚರಿಕೆಯಿಂದ ಎಲ್ಲಾ ನಾಯಕರ ಸಹಕಾರದಿಂದ ಪಕ್ಷದ ಕಾರ್ಯಕರ್ತರೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.
ನನಗೆ ರಾಯಚೂರು, ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ ಬರುವ ದಿನಗಳಲ್ಲಿ ನಮ್ಮ ತಂಡದೊಂದಿಗೆ ಪ್ರವಾಸ ಕೈಗೊಂಡು, ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಹಾಗೂ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹಾರ ಮಾಡಿ ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿ ಪಾತ್ರವಹಿಸಿದ್ದು, ಸ್ವಾತಂತ್ರ ನಂತರ ನೆಹರು ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಸದೃಢ ಭಾರತ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಿ ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದರು, ನಂತರ ಇಂದಿರಾಗಾಂಧಿ ಯವರು ತಮ್ಮ ಆಡಳಿತದಲ್ಲಿ ದೇಶದ ಜನರಿಗೆ 20 ಅಂಶಗಳ ಜನಪರ ಯೋಜನೆಗಳನ್ನು ನೀಡಿದರು, ಅದರಂತೆ ರಾಜೀವಗಾಂಧಿಯವರ ಅಧಿಕಾರವಧಿಯಲ್ಲಿ ದೇಶದಲ್ಲಿ ಆಧುನಿಕ ತಂತ್ರಜ್ಞಾನ ಪ್ರಗತಿಯಾಯ್ತು ಅದರಂತೆ ಪಂಚಾಯತ್‌ರಾಜ್ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡಿ ಹಳ್ಳಿಗಳ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಪರಿಣಾಮ ಅಪಾರ ಬದಲಾವಣೆ ಕಾಣುತ್ತಿದ್ದೇವೆ.
ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು 10 ವರ್ಷಗಳ ಅಧಿಕಾರಾವಧಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದರು, ಆರ್.ಟಿ.ಇ. ಜಾರಿಗೆ ತರುವ ಮೂಲಕ ಖಾಸಗಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಪ್ರವೇಶ ಪಡೆಯಲು ಅನುಕೂಲ ಮಾಡಿಕೊಟ್ಟರು. ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಜಾರಿಗೆ ತಂದರು. ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಮೂಲಕ ದೇಶದ ಜನರಿಗೆ ಆಹಾರ ಕೊರತೆಯಾಗದಂತೆ ಕ್ರಮ ತೆಗೆದುಕೊಂಡರು ಎಂದು ಪಕ್ಷದ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಸಂವಿಧಾನದ 371 ನೇ ಜೆ ಕಲಂ ತಿದ್ದುಪಡಿ ತರಲು ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಮಹತ್ವದ್ದಾಗಿದೆ, ಪರಿಣಾಮ ಇಂದು ಬಡ ಮಕ್ಕಳು ಇಂಜಿನೀಯರಿಂಗ್, ಮೆಡಿಕಲ್ ಸೀಟ್‌ಗಳು ಸೇರಿದಂತೆ ಇತರ ಅವಕಾಶಗಳನ್ನು ಪಡೆದು ಅಭ್ಯಾಸ ಮಾಡುತ್ತಿದ್ದಾರೆ. ಉದ್ಯೋಗದಲ್ಲಿ ಕೂಡ ಸಾಕಷ್ಟು ಅವಕಾಶಗಳು 7 ಜಿಲ್ಲೆಗಳ ಜನರಿಗೆ ಸಿಕ್ಕಿವೆ, ರಾಜ್ಯ ಸರ್ಕಾರ ಕೂಡ ಪ್ರತಿವರ್ಷ ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.
ಸರ್ಕಾರದ ಜನಪರ ಯೋಜನೆಗಳನ್ನು ಅರಿತ ಕಲ್ಯಾಣ ಕರ್ನಾಟಕದ ಜನರು ಕಳೆದ ಲೋಕಸಭಾ ಚುನಾವಣೆಯಲ್ಲಿ 5 ಸಂಸದರನ್ನು ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಜನರಿಗೆ ಬರೀ ಸುಳ್ಳು ಸಂದೇಶಗಳನ್ನು ತಲುಪಿಸುತ್ತಿದ್ದಾರೆ. ಆದರೆ ಜನರು ಜಾಗೃತರಾಗಿದ್ದಾರೆ. ವಾಸ್ತವಿಕ ಸ್ಥಿತಿ ಅರಿತುಕೊಂಡಿದ್ದಾರೆ. ಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ನಾನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಾದಗಿರಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದೆ, ಆದರೆ ಅವಕಾಶ ತಪ್ಪಿತು. ಇನ್ನೂ ಮೂರು ವರ್ಷ ಪಕ್ಷವನ್ನು ಸಂಘಟಿಸಿ 2028ರ ವಿಧಾನಸಭಾ ಚುನಾವಣೆಗೆ ಯಾದಗಿರಿ ಕ್ಷೇತ್ರದಿಂದ ನಾನು ಕಣಕ್ಕಿಳಿಯುವ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ತಮ್ಮ ಮನದಾಳದ ಇಚ್ಛೆಯನ್ನು ವ್ಯಕ್ತಪಡಿಸಿದರು.
ಸುದ್ಧಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಣ ರಾಠೋಡ, ರಾಣಾ ಪ್ರತಾಪ್ ಸಿಂಗ್, ಅಬ್ದುಲ್ ರಹೀಮ್, ಬೆಂಜಮಿನ ಸೇರಿದಂತೆ ಹಲವರು ಉಪಸ್ಥಿತರಿದ್ದರು.