ಯಾದಗಿರಿ | ನಾರಾಯಣಪುರ ಕಾಲುವೆಗಳಿಗೆ ನೀರು ಬಂದ್: ಪ್ರತಿಭಟನೆ ಕೈ ಬಿಡುವಂತೆ ರೈತರಲ್ಲಿ ಮನವಿ

ಯಾದಗಿರಿ : ಸರ್ಕಾರವು ನಾರಾಯಣಪುರ ಕಾಲುವೆಗಳಿಗೆ ಮಾ.25 ರಿಂದ ನೀರು ಬಂದ್ ಮಾಡಿದ ನಿರ್ಧಾರವನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ವತಿಯಿಂದ ಹತ್ತಿಗುಡೂರ್ ಬಳಿಯ ದೇವದುರ್ಗ ಕ್ರಾಸ್ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸುವುದನ್ನು ಕೈಬಿಡಲು ಅಪರ ಜಿಲ್ಲಾಧಿಕಾರಿಗಳಾದ ಶರಣಬಸಪ್ಪ ಕೋಟೆಪ್ಪಗೋಳ ಅವರು ರೈತ ಮುಖಂಡರಲ್ಲಿ ಇಂದು ಮನವಿ ಮಾಡಿದ್ದಾರೆ.
ಈ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಾಜ್ಯ ರೈತ ಸಂಘ, ರೈತ ಸೇನೆ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮನವಿ ಮಾಡಿದರು.
ರಾಜ್ಯ ಸರ್ಕಾರವು ನಾರಾಯಣಪುರ ಕಾಲುವೆಗಳಿಗೆ ಮಾ.25 ರಿಂದ ನೀರು ಬಿಡದಿರುವ ಕ್ರಮವನ್ನು ಕೈಗೊಂಡಿದ್ದು, ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿ, ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಸರ್ಕಾರ ಈ ನಿರ್ಣಯವನ್ನು ಕೈಗೊಂಡಿದೆ. ಸಾರ್ವಜನಿಕರ ಹಾಗೂ ಜಾನುವಾರುಗಳ ಹಿತ ದೃಷ್ಟಿಯಿಂದ ಕೈಗೊಳ್ಳಲಾದ ಈ ನಿರ್ಣಯದ ವಿರುದ್ಧವಾಗಿ ಪ್ರತಿಭಟನೆಯನ್ನು ನಡೆಸದಿರಲು ಹಾಗೂ ಪ್ರತಿಭಟನೆ ಕೈಬಿಡುವಂತೆ ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ರಾಜ್ಯ ರೈತ ಸಂಘ, ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದು, ಈ ಕುರಿತು ಚರ್ಚಿಸಲಾಗಿ, ರೈತ ಮುಖಂಡರು ನೀರು ಬಿಡುವ ವರೆಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದೆಂದು ಸಭೆಗೆ ತಿಳಿಸಿದರು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.