ಯಾದಗಿರಿ | ಕೃಷಿ ಇಲಾಖೆಯಿಂದ ರೈತರಿಗೆ ಕಳಪೆ ಮಟ್ಟದ ರಾಶಿ ಯಂತ್ರ ವಿತರಣೆ : ಆರೋಪ

ಕೆಂಭಾವಿ : ರೈತ ಸಂಪರ್ಕ ಕೇಂದ್ರದ ಮುಖಾಂತರ ಷಾ ಮಶೀನರಿ ಕಲಬುರಗಿ ಇವರಿಂದ ನಗನೂರು ಗ್ರಾಮದ ದೇವಪ್ಪವರಿಗೆ ರೈತವಂತಿಕೆ 90 ಸಾವಿರ ರೂ. ಕಟ್ಟಿಸಿಕೊಂಡು ಕಂಪನಿಯವರು ಅತ್ಯಂತ ಕಳಪೆ ಗುಣಮಟ್ಟದ ರಾಶಿ ಯಂತ್ರವನ್ನು ನೀಡಿದ್ದಾರೆ ಎಂದು ಕರವೇ ಮುಖಂಡ ಶ್ರೀಶೈಲ ಕಾಚಾಪುರ ಆರೋಪಿಸಿದ್ದಾರೆ.
ಈ ಕುರಿತು ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಈ ರಾಶಿ ಯಂತ್ರ ಈಗಾಗಲೇ ತುಕ್ಕು ಹಿಡಿದಿದ್ದು ಮತ್ತು ಕನಿಷ್ಠ ಗುಣಮಟ್ಟವು ಹೊಂದಿರುವುದಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಕೂಡ ಈ ಯಂತ್ರೋಪಕರಣದ ಗುಣಮಟ್ಟವನ್ನು ಪರೀಕ್ಷಿಸದೆ ರೈತರಿಗೆ ಜಿಪಿಎಸ್ ಫೋಟೋ ತೆಗೆದುಕೊಂಡು ಕಂಪನಿಗೆ ಬಿಲ್ ಮಾಡಲು ಹೋಗಿರುತ್ತದೆ. ಇದಕ್ಕೆ ಸಂಬಂಧಿಸಿದ ಕಂಪನಿಯವರಿಗೆ ಫೋನ್ ಮುಖಾಂತರ ವಿಚಾರಿಸಲಾಗಿ ಮಶಿನ್ ಸರಿಯಾಗಿಲ್ಲ ಎಂದು ಹೇಳಿದರೆ, ನಿಮ್ಮ ಹಣವನ್ನು ವಾಪಸ್ ಹಾಕುತ್ತೆವೆ ಅದರಲ್ಲಿ ಶೇ.12ರಷ್ಟು ಜಿಎಸ್‌ಟಿ ಯನ್ನು ಕಟ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಮಾತಾಡಿದರೆ ನಾವು ಬೇರೆ ಮಷೀನ್ ಅನ್ನು ತರಿಸಿಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.
ಒಂದೂವರೆ ಲಕ್ಷ ಸಾಲಕ್ಕೆ ಬಡ್ಡಿ ಹೇಗೆ ಕಟ್ಟುವುದು ಎಂದು ರೈತ ಪರದಾಡುತ್ತಿದ್ದಾನೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಂದು ರೈತ ಸಂಕಷ್ಟಕ್ಕೆ ಸಿಲುಕಿದಂತೆ ಆಗಿದೆ. ಕಳಪೆ ಗುಣಮಟ್ಟದ ರಾಶಿಯಂತ್ರ ನೀಡಿರುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.