ಯಾದಗಿರಿ | ಪಿಐ ಹುದ್ದೆ ಸೃಜಿಸಲು ಗೃಹ ಸಚಿವರು ಅಂಕಿತ

ಯಾದಗಿರಿ: ನಗರ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಇನ್ನೊಂದು ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆ ಸೃಜಿಸುವುದಕ್ಕೆ ಗೃಹ ಸಚಿವರು ಕಡತಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ನಗರ ಠಾಣೆ ಮೇಲ್ದರ್ಜೆಗೇರಲಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ್ದು, ಕಳೆದ ಫೆ.4 ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿಯಾಗಿ ನಗರ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿ ಇನ್ನೊಂದು ಪಿಐ ಹುದ್ದೆ ಸೃಜಿಸುವುದಕ್ಕೆ ಮನವಿ ಮಾಡಿದ್ದೆ. ಸಚಿವರು ಆಶ್ವಾಸನೆ ಕೊಟ್ಟಿದ್ದರು. ನುಡಿದಂತೆ ಸಚಿವರು ಕಡತಕ್ಕೆ ಸಹಿ ಹಾಕಿದ್ದು ಶೀಘ್ರದಲ್ಲೇ ಹುದ್ದೆ ಸೃಜಿಸಿ, ಸಿಬ್ಬಂದಿಯನ್ನು ನೇಮಕ ಮಾಡುವುದಕ್ಕೆ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಯಾದಗಿರಿ ನಗರವು ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುತ್ತದೆ ನಗರ ಪೊಲೀಸ್ ಕಾಣೆಯಲ್ಲಿ ವರ್ಷ ವರ್ಷಕ್ಕೂ ಹೆಚ್ಚಿನ ಅಪರಾಧ ಪ್ರಕರಣಗಳು, ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ. ನಗರ ಪೊಲೀಸ್ ಠಾಣೆಯಲ್ಲಿ ಕಳೆದ 3 ವರ್ಷಗಳಲ್ಲಿ ಅಂದರೆ 2022ನೇ ಸಾಲಿನಲ್ಲಿ 142 ಪ್ರಕರಣಗಳು, 2023ನೇ ಸಾಲಿನಲ್ಲಿ 182 ಪ್ರಕರಣಗಳು, 2024ನೇ ಸಾಲಿನಲ್ಲಿ 200 ಪ್ರಕರಣಗಳು ವರದಿಯಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸೂಕ್ತ ಮೇಲುಸ್ತುವಾರಿಗಾಗಿ ಪ್ರತ್ಯೇಕ ಕಚೇರಿ ಜೊತೆಗೆ ಒಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಅವಶ್ಯವಾಗಿರುತ್ತದೆ ಎಂದು ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಒಪ್ಪಿಗೆ ನೀಡಿದ್ದರು. ಅದರಂತೆ ಶೀಘ್ರದಲ್ಲೇ ಪಿಐ ಹುದ್ದೆ ಜೊತೆಗೆ ಕಚೇರಿಯೂ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೆ ಇದು ಬಹು ವರ್ಷಗಳ ಬೇಡಿಕೆಯೂ ಆಗಿತ್ತು ಎಂದರು.
ನಗರದಲ್ಲಿ ಪ್ರತಿ ದಿನವೂ ಮುಷ್ಕರಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಈ ಹುದ್ದೆ ಅವಶ್ಯಕವಾಗಿದೆ. ಜಿಲ್ಲಾ ಕೇಂದ್ರ ದಿನಗಳೆದಂತೆ ನಾಲ್ಕೂ ದಿಕ್ಕಿನಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೆ. ಯಾದಗಿರಿ ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವರು. ನಗರ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಒಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆ ಸೃಜನೆಗೆ ಅಂಕಿತ ಹಾಕಿದ್ದಾರೆಂದು ತಿಳಿಸಿದ್ದಾರೆ.