ಯಾದಗಿರಿ | ಗ್ರಾಹಕರಿಗೆ ಸಾಲ ಸೌಲಭ್ಯ ನೀಡದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರತಿಭಟನೆ

ಯಾದಗಿರಿ : ಗ್ರಾಹಕರಿಗೆ ಸಾಲ ಸೌಲಭ್ಯ ನೀಡದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬರೆ ಮಾತನಾಡಿ, ಎಸ್‌ಬಿಐ ಕೆಂಭಾವಿ ಶಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇನ್ನಿತರ ಫಲಾನುಭವಿಗಳಿಗೆ ಸಾಲ ನೀಡಲು ವಿಳಂಬ ಮಾಡುತ್ತಿದ್ದು, ಬೇರೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಲು ಎನ್.ಓ.ಸಿ ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದರು.
ಅಲ್ಲದೆ ಎಸ್‌ಬಿಐ ರಂಗಂಪೇಟ, ಪಿಕೆಜಿಬಿ ರಂಗಂಪೇಟೆ,ಕೆನರಾ ಬ್ಯಾಂಕ್ ಕಕ್ಕೇರಾ ಹಾಗೂ ಎಸ್ ಬಿ ಐ ಕಕ್ಕೇರಾ ಶಾಖೆಗಳಲ್ಲಿ ಸರ್ಕಾರಿ ಯೋಜನೆಗಳಲ್ಲಿ ಸಾಲ ನೀಡಲು ವಿಳಂಬ ನೀತಿ ಅನುಸರಿಸುತ್ತಿದ್ದು, ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕೂಡಲೇ ಸಾಲ ನೀಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ತಹಶೀಲ್ದಾರ್ ಕಚೇರಿ ಶಿರಸ್ತೆದಾರರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಆಟೋ ಸಂಘದ ಗೌರವಾಧ್ಯಕ್ಷ ವೆಂಕಟೇಶ, ಒಕ್ಕೂಟದ ತಾಲೂಕ ಅಧ್ಯಕ್ಷ ನಾಗರಾಜ ದರ್ಬಾರಿ, ಮುಖಂಡರಾದ ಸುರೇಶ ಪ್ಯಾಪಲಿ ಹಣಮಂತರಾಯ, ಅಂಬರೀಶ ಹಸನಾಪುರ, ದೇವಪ್ಪ ರತ್ತಾಳ, ಶಿವು ಹಸನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.