ಯಾದಗಿರಿ: ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ದಲಿತರಿಗೆ ಸವರ್ಣೀಯರಿಂದ ಬಹಿಷ್ಕಾರ

Update: 2024-09-14 06:17 GMT

ಯಾದಗಿರಿ: ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಗ್ರಾಮದ ಸವರ್ಣೀಯರು ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಗ್ರಾಮದಲ್ಲಿ ದಲಿತರಿಗೆ ಕಿರಾಣಿ ಹಾಗೂ ಮತ್ತಿತರ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ. ಇದರಿಂದ ಗ್ರಾಮದ ಅಂಗಡಿಗಳಲ್ಲಿ ನಮಗೆ ದಿನಸಿ ಸಾಮಗ್ರಿಗಳನ್ನು ಕೊಡುತ್ತಿಲ್ಲ ಎಂದು ಸಂತ್ರಸ್ತ ಬಾಲಕಿಯ ಕುಟುಂಬಸ್ಥರು ದೂರಿದ್ದಾರೆ.

ಸವರ್ಣೀಯ ಸಮುದಾಯಕ್ಕೆ ಸೇರಿದ ಯುವಕನೋರ್ವ ಪರಿಶಿಷ್ಟ ಜಾತಿಗೆ ಸೇರಿದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರಿಂದ ಆಕೆ 5 ತಿಂಗಳ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಬಾಲಕಿಯ ಪೋಷಕರು ಯುವಕನ ವಿರುದ್ಧ ಪೊಲೀಸ್ ದೂರು ನೀಡಿದ್ದರು.

‘ಮಾದಿಗ ಜಾತಿಯವಳಾಗಿದ್ದರಿಂದ ನಿನ್ನ ಜೊತೆ ಮದುವೆ ಮಾಡಿಕೊಳ್ಳುವುದಿಲ್ಲ. ಗರ್ಭಪಾತ ಮಾಡಿಸಿಕೊಂಡುಬಿಡು. ಈ ಬಗ್ಗೆ ಬೇರೆಯವರಿಗೆ ಹೇಳಿದರೆ ಜೀವ ತೆಗೆಯುತ್ತೇನೆ’ ಎಂದು ಯುವಕನು ಬೆದರಿಕೆ ಹಾಕಿದ್ದರಿಂದ ಬಾಲಕಿ ಯಾರಿಗೂ ಹೇಳಿರಲಿಲ್ಲ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನಂತೆ ಆಗಸ್ಟ್ 12ರಂದು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸವರ್ಣಿಯ ಯುವಕನ ವಿರುದ್ಧ ಪೊಲೀಸ್ ದೂರು ನೀಡಿರುವ ಕಾರಣಕ್ಕೆ ಗ್ರಾಮದಲ್ಲಿರುವ ಯಾವುದೇ ಅಂಗಡಿಗಳಲ್ಲೂ ದಲಿತರಿಗೆ ಕಿರಾಣಿ ಹಾಗೂ ಮತ್ತಿತರ ದೈನಂದಿನ ಬಳಕೆ ವಸ್ತುಗಳನ್ನು ಕೊಡುತ್ತಿಲ್ಲ’ ಎಂದು ಸಂತ್ರಸ್ತ ಬಾಲಕಿ ಕುಟುಂಬ ದೂರಿದೆ.

ಶಾಂತಿ ಸಭೆ: ಸವರ್ಣೀಯರಿಂದ ದಲಿತರಿಗೆ ಬಹಿಷ್ಕಾರ ಹಾಕಿರುವ ವಿಚಾರ ತಿಳಿದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರ ನಿರ್ದೇಶನ ಮೇರೆಗೆ ಅಧಿಕಾರಿಗಳು ಶುಕ್ರವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಹುಣಸಗಿ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದು, ಇಂತಹ ಜಾತಿ ಪದ್ಧತಿ ಹೋಗಲಾಡಿಸಿ ಸಹಬಾಳ್ವೆಯ ಜೀವನಕ್ಕೆ ಜನರು ಮುಂದಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ. ಗ್ರಾಮಸ್ಥರು ತಪ್ಪನ್ನು ತಿದ್ದಿಕೊಂಡು ಕೂಡಿ ಬಾಳುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News