ಸುರತ್ಕಲ್‌ ಟೋಲ್‌ಗೇಟ್‌ ಮರುಸ್ಥಾಪನೆಗೆ ತಯಾರಿ ಆರೋಪ: ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ

Update: 2023-08-31 17:27 GMT

ಸುರತ್ಕಲ್‌, ಆ.31: ಮುಚ್ಚಲ್ಪಟ್ಟಿರುವ ಸುರತ್ಕಲ್‌ ಎನ್‌ಐಟಿಕೆ ಟೋಲ್ ಕೇಂದ್ರವನ್ನು ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿ ಗೊಳಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ, ಟೋಲ್ ಸಂಗ್ರಹ ಮತ್ತೆ ಶುರುವಾಗುವ ವದಂತಿ, ಆತಂಕ ವ್ಯಕ್ತವಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿರುವ ಮುಚ್ಚಲ್ಪಟ್ಟ ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸಬೇಕು ಎಂದು ಸುರತ್ಕಲ್‌ ಎನ್‌ಐಟಿಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರನ್ನು ಒತ್ತಾಯಿಸಿದೆ.

ಮುಚ್ಚಲ್ಪಟ್ಟಿರುವ ಸುರತ್ಕಲ್‌ ಎನ್‌ಐಟಿಕೆ ಟೋಲ್ ಕೇಂದ್ರವನ್ನು ಕಾಂಕ್ರಿಟೀಕರಣಗೊಳಿಸಿ ಅಭಿವೃದ್ದಿಗೊಳಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ, ಟೋಲ್ ಸಂಗ್ರಹ ಮತ್ತೆ ಆರಂಭವಾಗುವ ವದಂತಿ, ಆತಂಕದ ಕುರಿತು ಹೋರಾಟ ಸಮಿತಿಗೆ ಹಲವು ದೂರುಗಳು ಬಂದಿರು ಹಿನ್ನೆಲೆಯಲ್ಲಿ ಗುರುವಾರ ಟೋಲ್‌ಗೇಟ್‌ ಬಳಿ ತೆರಳಿದ ಹೋರಾಟ ಸಮಿತಿ ನಿಯೋಗವು ಈ ಆಗ್ರಹವನ್ನು ಮುಂದಿಟ್ಟಿದೆ.

ಶಿಥಿಲಾವಸ್ಥೆಗೆ ತಲುಪಿರುವ ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸುವಂತೆ ಹೋರಾಟ ಸಮಿತಿಯು ಹಲವು ಬಾರಿ ಒತ್ತಾಯ ಮಾಡಿತ್ತು. ಆದರೆ, ನಾಗರಿಕರ ದೂರು, ಆಗ್ರಹಗಳಿಗೆ ಮನ್ನಣೆ ನೀಡದೆ, ನಿರುಪಯೋಗಿ ಟೋಲ್ ಬೂತ್ ಉಳಿಸಿಕೊಂಡೇ ಟೋಲ್ ಕೇಂದ್ರದ ಸುತ್ತ ರಸ್ತೆ ಅಭಿವೃದ್ಧಿ ಕೆಲಸ ನಡೆಸುತ್ತಿರುವ ಹಿನ್ನೆಲೆಯಲ್ಲಿ 'ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್' ನ ಪ್ರಮುಖರ ನಿಯೋಗ ಇಂದು ಸುರತ್ಕಲ್ ಟೋಲ್ ಕೇಂದ್ರಕ್ಕೆ ಇಂದು ಭೇಟಿ ನೀಡಿ ಬೆಳವಣಿಗೆಗಳನ್ನು ಪರಿಶೀಲಿಸಿತು.

ಅನಗತ್ಯವಾಗಿ ನಿರುಪಯುಕ್ತ ಟೋಲ್ ಬೂತ್ ಉಳಿಸಿಕೊಂಡು ಟೋಲ್ ಕೇಂದ್ರದ ಪರಿಸರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸುತ್ತಿರುವುದು ಜನರ ತೆರಿಗೆಯ ಹಣದ ದುರುಪಯೋಗ. ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸದಿರುವುದರಿಂದ, ಮುನ್ಸೂಚನೆ ಇಲ್ಲದೆ ದಿಢೀರ್ ಎದುರಾಗುವ ವಾಹನ ಅವಘಡಗಳು ನಡೆದು, ಪ್ರಾಣಹಾನಿ ಗಳು ಈಗಾಗಲೆ ಸಂಭವಿಸಿದೆ, ಮತ್ತಷ್ಟು ದುರಂತಗಳು ಸಂಭವಿಸುವ ಮುನ್ನ ಟೋಲ್ ಬೂತ್ ತಕ್ಷಣವೇ ತೆರವುಗೊಳಿಸ ಬೇಕು ಎಂದು ಹೋರಾಟ ಸಮಿತಿಯ ನಿಯೋಗ ಆಗ್ರಹಪಡಿಸಿತು.

ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಕೇಂದ್ರದಲ್ಲಿ ಅಥವಾ ಮರಳಿ ಸುರತ್ಕಲ್ ಟೋಲ್ ಕೇಂದ್ರದಲ್ಲೋ ಸಂಗ್ರಹ ಮಾಡುವುದು ಅಸಾಧ್ಯ. ಹೋರಾಟ ಸಮಿತಿ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಂತೂರು, ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆ ಎಂದು ಘೋಷಿಸಬೇಕು, ಅಪಾಯಕಾರಿಯಾಗಿ ಶಿಥಿಲಾವಸ್ಥೆ ಯಲ್ಲಿರುವ ಸುರತ್ಕಲ್ ನಿರುಪಯೋಗಿ ಟೋಲ್ ಬೂತ್ ಅನ್ನು ತಕ್ಷಣವೇ ತೆರವುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಬೂತ್ ತೆರವಿಗಾಗಿ ಹೋರಾಟವನ್ನು ಆರಂಭಿಸಲಾಗುವುದು ಎಂದು ಮುಖಂಡರು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದರು.

ನಿಯೋಗದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕರಾದ ಪುರುಷೋತ್ತಮ ಚಿತ್ರಾಪುರ, ವೈ ರಾಘವೇಂದ್ರ ರಾವ್, ಟಿ ಎನ್ ರಮೇಶ್, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಡಿವೈಎಫ್ಐ ಸುರತ್ಕಲ್ ಘಟಕದ ಅಧ್ಯಕ್ಷ ಶ್ರೀನಾಥ್ ಕುಲಾಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶೇಖರ ಹೆಜಮಾಡಿ, ಕುಳಾಯಿ ನಾಗರಿಕ ಸಮಿತಿಯ ಗಂಗಾಧರ ಬಂಜನ್, ವಿವಿಧ ಸಂಘಟನೆಗಳ ಪ್ರಮುಖರಾದ ಹರೀಶ್ ಪೇಜಾವರ, ಆದ್ದು ಕೃಷ್ಣಾಪುರ, ಹೇಮಂತ್ ಪೂಜಾರಿ, ಶ್ರೀಕಾಂತ್ ಸಾಲ್ಯಾನ್, ಸಲೀಂ ಕಾಟಿಪಳ್ಳ, ಶೆರೀಫ್ ಸುರತ್ಕಲ್, ರಶೀದ್ ಮುಕ್ಕ, ಶಾಕಿರ್ ಕೃಷ್ಣಾಪುರ, ಹನೀಫ್ ಇಡ್ಯಾ, ಜಲೀಲ್ ಮತ್ತಿತರರು ಇದ್ದರು.

"ಏಳು ವರ್ಷಗಳ ಕಾಲ ಜನರ ಸತತ ಹೋರಾಟದ ಫಲವಾಗಿ ಅಧಿಕೃತವಾಗಿ ಮುಚ್ಚಲ್ಪಟ್ಟಿರುವ ಸುರತ್ಕಲ್ ಟೋಲ್ ಗೇಟ್ ನ ನಿರುಪಯೋಗಿ ಬೂತ್ ಗಳನ್ನು ಟೋಲ್‌ ಗೇಟ್‌ ಮುಚ್ಚಲ್ಪಟ್ಟು ಒಂಬತ್ತು ತಿಂಗಳು ಕಳೆದರೂ ತೆರವುಗೊಳಿಸದಿರುವುದು ಖಂಡನೀಯ. ಇಷ್ಟು ಸಣ್ಣ ಕೆಲಸವನ್ನೂ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಮಾಡದಿರುವುದು ಅವರ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ".

-ಮುನೀರ್ ಕಾಟಿಪಳ್ಳ, ಸಂಚಾಲಕರು

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

"ಕೆಲದಿನಗಳಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪತ್ರಿಕೆಗಳಲ್ಲಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುವಾಗ ಟೋಲ್ ಗೇಟ್‌ ಮತ್ತೆ ತೆರೆಯುವ ಹುನ್ನಾರ ನಡೆಯುವಂತಿದೆ. ಹಾಗಾಗಿ ಇಂದು ಸ್ಥಳ ಪರಿಶೀಲನೆ ನಡೆಸಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ. ಅವರ ಪ್ರತ್ಯುತ್ತರ ನೋಡಿಕೊಂಡು ನಮ್ಮ ಮುಂದಿನ ಹೆಜ್ಜೆಯನ್ನು ಇಡಲಿದ್ದೇವೆ. ಯಾವುದೇ ಕಾರಣಕ್ಕೂ ಮುಚ್ಚಲ್ಪಟ್ಟಿರುವ ಸುರತ್ಕಲ್‌ ಎನ್‌ಐಟಿಕೆ ಟೋಲ್‌ಗೇಟನ್ನು ಮತ್ತೆ ತೆರೆಯಲು ಹೋರಾಟ ಸಮಿತಿ ಬಿಡುವುದಿಲ್ಲ.

-ರಾಘವೇಂದ್ರ ರಾವ್‌, ಸಮಿತಿ ಸಹಸಂಚಾಲಕರು

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

"ದುರಸ್ತಿಕಾರ್ಯ ನಡೆಸುತ್ತಿರುವ ಕುರಿತು ಸಾರ್ವಜನಿಕರು ದೂರುಗಳನ್ನು ನೀಡಿದ್ದಾರೆ. ಹಾಗಾಗಿ ಸ್ಥಳಕ್ಕೆ ಬಂದು ಪರಿಸ್ಥಿತಿ ಯನ್ನು ಅವಲೋಕನ ಮಾಡಲಾಗಿದೆ. ಜನರು ಹೇಳುವಂತೆ ಇಲ್ಲಿ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಇಲ್ಲಿರುವ ಹಣ ಸಂಗ್ರಹದ ಬೂತ್‌ಗಳನ್ನು ತೆಗಿದಿಲ್ಲ. ಇಲ್ಲಿನ ಪರಿಸ್ಥಿತಿ ಗಮನಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಖಾರದ ಹುನ್ನಾರದಂತೆ ಕಾಣುತ್ತಿದೆ. ಈ ಮೂಲಕ ಹೋರಾಟ ಸಮಿತಿ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆಯನ್ನುನ ನೀಡುತ್ತಿದೆ, ಆದಷ್ಟು ಶೀಘ್ರ ಮುಚ್ಚಲ್ಪಟ್ಟ ಟೋಲ್ ಗೇಟ್‌ನ ಹಣಸಂಗ್ರಹದ ಬೂತ್ ಗಳು ಮತ್ತು ಟೋಲ್‌ ಗೇಟ್‌ನ ಅವಶೇಷಗಳನ್ನು ತೆರವು ಮಾಡಬೇಕು. ಯಾವುದೇ ಕಾರಣಕ್ಕೂ ಹೆಜಮಾಡಿಯಲ್ಲಿ ಇಲ್ಲಿನ ಸುಂಕವನ್ನು ವಸೂಲಿ ಮಾಡಬಾರದು. ಒಂದು ವೇಳೆ ಜನರ ಸಂಕಷ್ಟಗಳಿಗೆ ಮಿಡಿಯದೇ ಸ್ವಇಚ್ಚೆಯಿಂದ ಹೆದ್ದಾರಿ ಪ್ರಾಧಿಕಾರ ನಡೆದುಕೊಳ್ಳಲು ಮುಂದಾದರೆ ಹೋರಾಟ ಸಮಿತಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡುತ್ತಿದ್ದೇವೆ".

-ಪುರುಷೋತ್ತಮ ಚಿತ್ರಾಪುರ, ಸಹ ಸಂಚಾಲಕರು

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News