"ಕೆ. ಸುಬ್ಬಣ್ಣಯ್ಯ" ಸ್ಮಾರಕ ಕೋಟೆಕಾರು ಸಹಕಾರ ಸೌಧ ಲೋಕಾರ್ಪಣೆ

Update: 2024-09-15 11:52 GMT

ಉಳ್ಳಾಲ : ವಿದ್ಯಾರ್ಥಿಗಳು, ಕೃಷಿಕರಿಗೆ ಪ್ರೋತ್ಸಾಹ ನೀಡಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸಿದ್ಧಿ ಗಳಿಸಿದೆ. ಪ್ರಸಕ್ತ ಏಳು ಶಾಖೆಗಳನ್ನು ಹೊಂದಿದ್ದು 173 ಕೋಟಿ ರೂ. ಸಾಲ ನೀಡಿ 2.45 ಕೋಟಿ ರೂಪಾಯಿಗಳ ಪಾಲು ಬಂಡವಾಳ ಹೊಂದಿ ಷೇರುದಾರರಿಗೆ 25ಶೇ. ಡಿವಿಡೆಂಟ್ ನೀಡುವ ಮೂಲಕ ಸಹಕಾರ ಸಂಘ ಯಶಸ್ಸು ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಕೋಟೆಕಾರು ಗ್ರಾಮದ ಬೀರಿ ಜಂಕ್ಷನ್ ನಲ್ಲಿ ನಿರ್ಮಾಣಗೋಂಡ ಕೆ. ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಪಡೆದಿರುವ ಜಿಲ್ಲೆ. ದೇಶದಲ್ಲೇ ಅತಿ ಹೆಚ್ಚು ವಾಣಿಜ್ಯ ಬ್ಯಾಂಕುಗಳು ನಮ್ಮ ಜಿಲ್ಲೆಯಲ್ಲಿ ಇದ್ದು ಉತ್ತಮ ಸೇವೆ ನೀಡುತ್ತಿರುವುದರಿಂದ ವಾಣಿಜ್ಯ ಬ್ಯಾಂಕುಗಳು ಸಂಕುಚಿತಗೊಳ್ಳುತ್ತಾ ಇದೆ. ಒಂದು ಬ್ಯಾಂಕ್ ಇನ್ನೊಂದರ ಜೊತೆ ವಿಲೀನ ಆದ ಹಿನ್ನೆಲೆಯಲ್ಲಿ ಬಹಳಷ್ಟು ಬ್ಯಾಂಕ್ ಈಗಿಲ್ಲ. ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಸಹಿತ ಹಲವು ಬ್ಯಾಂಕ್ ಗಳು ಇಲ್ಲ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ ಗಳ ಸಿಬ್ಬಂದಿಗೆ ಕನ್ನಡ ಭಾಷೆ ಗೊತ್ತಿಲ್ಲ. ಅವರು ಗ್ರಾಹಕರ ಜತೆ ‌ಸರಿಯಾಗಿ ಸ್ಪಂದಿಸದ ಕಾರಣ ಬಹಳಷ್ಟು ಮಂದಿ ಸಹಕಾರಿ ಸಂಘಗಳ ಕಡೆ ಮುಖ ಮಾಡಿದ್ದಾರೆ. ಬಡವರ, ರೈತರಿಗೆ ಮಗಳ ಮದುವೆಗೆ ಸಹಾಯ ಬೇಕಾದರೆ ಒಂದೇ ದಿನದಲ್ಲಿ ಒದಗಿಸಿ ಕೊಡುವುದು ಸಹಕಾರಿ ಸಂಘ ಆಗಿದೆ ಎಂದು ಹೇಳಿದರು.

ಸಂಸದ ಬೃಜೇಶ್ ಚೌಟ ಮಾತನಾಡಿ, ಉತ್ತಮ ಕೆಲಸ ಮಾಡುವ ಮೂಲಕ ದೇಶಕ್ಕೆ ಮಾದರಿ ಎಂದು ತೋರಿಸಿ ಕೊಟ್ಟಂತಹ ಸಂಘಗಳಲ್ಲಿ ಕೋಟೆಕಾರು ವ್ಯ.ಸೇ.ಸ. ಸಂಘ ಕೂಡಾ ಒಂದಾಗಿದೆ. ಗ್ರಾಹಕರಿಗೆ ವಿಶ್ವಾಸ ಭರಿತವಾದ ಸೇವೆಯನ್ನು ಯಾವುದೇ ಕುಂದು ಕೊರತೆಗಳು ಬಾರದ ರೀತಿಯಲ್ಲಿ ಈ ಸಂಘ ನೀಡುತ್ತಿದೆ. ಎಲ್ಲರಿಗೂ ಪ್ರೇರಣೆ ಆಗುವ ರೀತಿಯಲ್ಲಿ ಸಹಕಾರಿ ಸಂಘ ಸೇವೆಗೈದು ಅದ್ವಿತೀಯ ಸಾಧನೆ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಸ್ವಾಗತಿಸಿ ಮಾತನಾಡಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ 14 ಗ್ರಾಮಗಳಲ್ಲಿ ಏಳು ಶಾಖೆಗಳನ್ನು ಹೊಂದಿದೆ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಈ ಸಂಘ ಅಡಕೆ ಬೆಳೆಗಾರರಿಗೆ, ಭತ್ತದ ಕೃಷಿಗೆ ನೆರವು ನೀಡಿದೆ. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುವ ಕೆಲಸ ಮಾಡ ಲಾಗುತ್ತಿದೆ .ಈ ಸಂಘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಿಕ್ಕಿದೆ ಎಂದು ಅವರು ಸಂಘದ ಸೇವೆಯನ್ನು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್ ಅವರು ಬ್ಯಾಂಕ್ ನಡೆದು ಬಂದ ದಾರಿ ಹಾಗೂ ಸಾಧನೆ ಬಗ್ಗೆ ವಿವರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ನಾಮಫಲಕ ಅನಾವರಣ ಮಾಡಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ. ಎಸ್. ಗಟ್ಟಿ ದೀಪ ಪ್ರಜ್ವಲನೆ ಮಾಡಿದರು.

ಈ ಸಂದರ್ಭ ಡಾ.ಎಂ.ಎನ್. ರಾಜೇಂದ್ರ ‌ಕುಮಾರ್, ಇಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ, ಗುತ್ತಿಗೆದಾರ ಪುರುಷೋತ್ತಮ ಶೆಟ್ಟಿ, ಸಂಸದ ಬೃಜೇಶ್ ಚೌಟ, ಕೆ. ಸುಬ್ಬಣ್ಣಯ್ಯ ಅವರ ಕುಟುಂಬದ ಸದಸ್ಯ ಗಣೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್, ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹಾಗೂ ಉಪಾಧ್ಯಕ್ಷ ಅಬೂಸಾಲಿ ಕಿನ್ಯ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್. ರಮೇಶ್, ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಜೆ. ಬಾಲಕೃಷ್ಣ ಶೆಟ್ಟಿ, ಸುರೇಶ್ ಭಟ್ನಗರ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜಿ., ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ನಡಾರ್ ಗುತ್ತು, ಸದಸ್ಯ ಉದಯ ಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಅಬುಸಾಲಿ ಕೆ.ಬಿ., ನಿರ್ದೇಶಕರುಗಳಾದ ಗಂಗಾಧರ. ಯು, ಕೆ. ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು, ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಪದ್ಮಾವತಿ ಎಸ್. ಶೆಟ್ಟಿ, ಸುರೇಖ ಚಂದ್ರಹಾಸ, ಬಾಬು ನಾಯ್ಕ , ಕಿರಣ್ ಕುಮಾರ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್, ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ, ಸಂಘದ ಮಾಜಿ ಅಧ್ಯಕ್ಷ ಹರ್ಷರಾಜ್ ಮುದ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಮೋಕ್ಷಿತ್ ಉಚ್ಚಿಲ್ ನಿರ್ವಹಣೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು.

ಪತ್ರಕರ್ತ ಸತೀಶ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ನಿರ್ದೇಶಕ ಕೃಷ್ಣಪ್ಪ ಕೆ. ಸಾಲಿಯಾನ್ ವಂದಿಸಿದರು.













 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News