ಗುಜರಾತ್: ಸದನದಲ್ಲಿ ಘೋಷಣೆ ಕೂಗಿದ 10 ಮಂದಿ ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್

Update: 2024-02-20 10:45 GMT

Photo: livelaw.in

ಗಾಂಧಿನಗರ: ಸದನದಲ್ಲಿ ಘೋಷಣೆ ಕೂಗಿದ 10 ಮಂದಿ ಶಾಸಕರನ್ನು ಒಂದು ದಿನದ ಮಟ್ಟಿಗೆ ಗುಜರಾತ್ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಗುಜರಾತ್ ವಿಧಾನಸಭೆಯಲ್ಲಿ ಒಟ್ಟು 15 ಮಂದಿ ಕಾಂಗ್ರೆಸ್ ಶಾಸಕರ ಬಲವಿದ್ದು, ಸದನದಲ್ಲಿ ಗದ್ದಲ ನಡೆದಾಗ ಐದು ಮಂದಿ ಕಾಂಗ್ರೆಸ್ ಶಾಸಕರು ಗೈರಾಗಿದ್ದರು.

ಬಜೆಟ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ತುಷಾರ್ ಚೌಧರಿ, ಛೋಟಾ ಉದೇಪುರ್ ಜಿಲ್ಲೆಯಲ್ಲಿ ನಕಲಿ ಸರಕಾರಿ ಕಚೇರಿ ತೆರೆದು, ಆದಿವಾಸಿ ಪ್ರದೇಶಗಳಲ್ಲಿನ ನೀರಾವರಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ನಿಧಿಯನ್ನು ಲಪಟಾಯಿಸಿರುವ ಪ್ರಕರಣದ ಕುರಿತು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಆದಿವಾಸಿ ಅಭಿವೃದ್ಧಿ ಸಚಿವ ಕುಬೇರ್ ದಿಂದೋರ್, ಛೋಟಾ ಉದೇಪುರ್ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಅಂತಹ ಯಾವುದೇ ನಕಲಿ ಕಚೇರಿ ಪತ್ತೆಯಾಗದಿರುವುದರಿಂದ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸದನಕ್ಕೆ ತಿಳಿಸಿದರು.

ಸಚಿವರ ಉತ್ತರದಿಂದ ಕುಪಿತರಾದ ಚೌಧರಿ, ಕಳೆದ ಒಂದು ವರ್ಷದಲ್ಲಿ ಆದಿವಾಸಿಗಳ ಪ್ರಾಬಲ್ಯ ಹೊಂದಿರುವ ಛೋಟಾ ಉದೇಪುರ್ ಜಿಲ್ಲೆಯಲ್ಲಿ ಅಂತಹ ಐದು ನಕಲಿ ಕಚೇರಿಗಳನ್ನು ಪತ್ತೆ ಹಚ್ಚಲಾಗಿದ್ದು, ಆರೋಪಿಗಳನ್ನೂ ಸೆರೆ ಹಿಡಿಯಲಾಗಿದೆ ಎಂದು ಹೇಳಿದರು.

ಛೋಟಾ ಉದೇಪುರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಕಾರ್ಯಪಾಲಕ ಎಂಜಿನಿಯರ್ ಕಚೇರಿಯನ್ನು ಸ್ಥಾಪಿಸಿ, ರೂ. 4.16 ಕೋಟಿ ಮೊತ್ತದ ಸರಕಾರಿ ಮಂಜೂರಾತಿಗಳನ್ನು ಪಡೆದ ಆರೋಪದಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ವ್ಯಕ್ತಿಗಳ ಕುರಿತು ಚೌಧರಿ ಪ್ರಸ್ತಾಪಿಸಿದರು.

ನಂತರ, ಆರೋಪಿಗಳಿಗೆ ನೆರವು ನೀಡಿ, 'ಆದಿವಾಸಿ ಪ್ರದೇಶ ಉಪ ಯೋಜನೆ' ಅಡಿಯಲ್ಲಿ ಹಗರಣ ನಡೆಸಿ, ರೂ. 18.59 ಕೋಟಿ ಸರಕಾರಿ ಮಂಜೂರಾತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದ ಆರೋಪದಲ್ಲಿ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದಿರುವ ಮಾಜಿ ಐಎಎಸ್ ಅಧಿಕಾರಿ ಬಿ.ಡಿ.ನಿನಮ ಅವರನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ದಾಹೋಡ್ ಜಿಲ್ಲೆಯ ಪೊಲೀಸರು ಬಂಧಿಸಿದ್ದರು.

ಆರೋಪಿಗಳಿಗೆ ಎಷ್ಟು ನಿಧಿಯನ್ನು ಒದಗಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಅಮೃತ್‌ಜಿ ಠಾಕೋರ್ ಪ್ರಶ್ನಿಸಿದಾಗ, ಆರೋಪಿಗಳು ನೈಜ ಅಧಿಕಾರಿಗಳಂತೆ ಸೋಗು ಹಾಕಿದ್ದರಿಂದ, ಅವರಿಗೆ ರೂ. 21 ಕೋಟಿ ವಿಲೇವಾರಿ ಮಾಡಲಾಗಿದೆ ಎಂದು ಸಚಿವ ದಿಂದೋರ್ ಉತ್ತರಿಸಿದರು.

"ಈ ಹಗರಣವನ್ನು ರಾಜ್ಯ ಸರಕಾರವೇ ಬಯಲಿಗೆಳೆದಿದ್ದು, ಈ ವಿಷಯ ಮಾಧ್ಯಮಗಳಲ್ಲೂ ಪ್ರಕಟವಾಗಿದೆ. ನಾವು ಈ ಸಂಬಂಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದೇವೆ. ನಾವು ಆರೋಪಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದು, ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಸಚಿವ ದಿಂದೋರ್ ಸದನಕ್ಕೆ ಮಾಹಿತಿ ನೀಡಿದರು.

ಆದರೆ, ಲಿಖಿತ ಉತ್ತರಕ್ಕೂ, ಸಚಿವರ ಹೇಳಿಕೆಗೂ ವ್ಯತ್ಯಾಸವಿದ್ದುದರಿಂದ ಕಾಂಗ್ರೆಸ್ ಶಾಸಕರು ಸದನದಲ್ಲಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಬಿಜೆಪಿ ಸರಕಾರವು ವಾಸ್ತವವನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಶಾಸಕರು ಆರೋಪಿಸಿದರು.

ಸದನದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಗದ್ದಲ ಸ್ಥಗಿತಗೊಳಿಸುವಂತೆ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಪದೇ ಪದೇ ಮನವಿ ಮಾಡಿದರೂ, ಕಾಂಗ್ರೆಸ್ ಶಾಸಕರು ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಸದನದಲ್ಲಿ ಹಾಜರಿದ್ದ ಎಲ್ಲ ಕಾಂಗ್ರೆಸ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಿದ್ದಾರೆ. ನಾಳೆ ಕೂಡಾ ಬಜೆಟ್ ಅಧಿವೇಶನ ಮುಂದುವರಿಯಲಿದ್ದು, ಈ ಅಮಾನತು ನಾಳೆಗೂ ಅನ್ವಯವಾಗುತ್ತದೆ ಎಂದು ಸ್ಪೀಕರ್ ಶಂಕರ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News