ಕೆ.ಜಿ.ಗೆ 160 ರೂ. ತಲುಪಿದ ಟೊಮೆಟೊ: ಬೆಲೆ ದುಬಾರಿಗೆ ಮೋದಿ ನೀತಿಗಳೇ ಕಾರಣ; ಖರ್ಗೆ

Update: 2023-07-05 14:27 GMT

Kharge | Photo: PTI 

ಹೊಸದಿಲ್ಲಿ: ದೇಶವನ್ನು ಕಾಡುತ್ತಿರುವ ಹಣದುಬ್ಬರದ ಬಗ್ಗೆ ಟ್ವಿಟ್ಟರ್ ನಲ್ಲಿ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಆಂಧ್ರದ ವಿಶಾಖಪಟ್ಟಣಂನಲ್ಲಿ ಟೊಮೆಟೊ ಬೆಲೆ 160 ರೂ. ತಲುಪಲು ಬಿಜೆಪಿ ಸರಕಾರದ ನೀತಿಗಳೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರ ವಸ್ತುಗಳ ಬೆಲೆಯೇರಿಕೆ ಮಾಡುವ ಮೂಲಕ ಕೇಂದ್ರ ಸರಕಾರವು ನಾಗರಿಕರನ್ನು ಕೊಳ್ಳೆ ಹೊಡೆಯುತ್ತಿದೆ ಎಂದವರು ಟೀಕಿಸಿದ್ದಾರೆ. ‘‘ ಮೋದಿ ಸರಕಾರದ ಲೂಟಿಯಿಂದಾಗಿ ಹಣದುಬ್ಬರ ಹಾಗೂ ನಿರುದ್ಯೋಗ ಇವೆರಡೂ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ ಬಿಜೆಪಿಯು ಆಧಿಕಾರದ ಲಾಲಸೆಯಲ್ಲೇ ಮುಳುಗಿದೆ’’ ಎಂದವರು ಟ್ವೀಟ್ ಮಾಡಿದ್ದಾರೆ.

‘‘ಚುನಾವಣೆಗೆ ಮುನ್ನ ನೀವು ಅಚ್ಚೇ ದಿನ್, ಅಮೃತ ಕಾಲ್ನಂತಹ ಘೋಷಣೆಗಳಲ್ಲಿಯೇ ಮಗ್ನರಾಗಿದ್ದೀರಿ. ಹೀಗೆ ನೀವು ನಿಮ್ಮ ವೈಫಲ್ಯಗಳನ್ನು ಜಾಹೀರಾತುಗಳ ಮೂಲಕ ಮರೆ ಮಾಚುತ್ತಾ ಬಂದಿದ್ದೀರಿ. ಆದರೆ ಈ ಸಲ ಇದು ನಡೆಯುವುದಿಲ್ಲ. ಜನರಿಗೆ ಅರಿವಾಗತೊಡಗಿದೆ. ಬಿಜೆಪಿ ವಿರುದ್ಧ ಮತಚಲಾಯಿಸುವ ಮೂಲಕ ಅವರು ನಿಮ್ಮ ಪೊಳ್ಳು ಘೋಷಣೆಗಳಿಗೆ ಉತ್ತರ ನೀಡಲಿದ್ದಾರೆ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

ದೇಶದ ಹಲವಾರು ನಗರಗಳಲ್ಲಿ ಟೊಮೆಟೊ ಬೆಲೆಯು ಪ್ರತಿ ಕೆ.ಜಿ.ಗೆ 150 ರೂ.ದಾಟಿದೆ.ಟೊಮೆಟೊ ಬೆಲೆ ಏರಿಕೆಯು ತಾತ್ಕಾಲಿಕವಾಗಿದ್ದು, 15 ದಿನಗಳ ಬಳಿಕ ಇಳಿಕೆಯಾಗಲಿದೆ ಎಂದು ಸರಕಾರಿ ಅಧಿಕಾರಿಗಳು ನಾಗರಿಕರಿಗೆ ಭರವಸೆ ನೀಡಿದ್ದಾರೆ.

ಕೇಂದ್ರ ಸರಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳ ಪ್ರಕಾರ, ಅಖಿಲ ಭಾರತ ಮಟ್ಟದಲ್ಲಿ ಟೊಮೆಟೊದ ಸರಾಸರಿ ಬೆಲೆಯು ಪ್ರತಿ ಕೆ.ಜಿ.ಗೆ 83.29 ರೂ. ಆಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News