ಏರ್ ಇಂಡಿಯಾದಿಂದ 180 ಉದ್ಯೋಗಿಗಳ ವಜಾ

Update: 2024-03-16 15:56 GMT

ಏರ್ ಇಂಡಿಯಾ | Photo: PTI 

ಹೊಸದಿಲ್ಲಿ : ವಿಮಾನದಲ್ಲಿ ಕಾರ್ಯ ನಿರ್ವಹಿಸದ ವಿಭಾಗಗಳ 180ಕ್ಕೂ ಅಧಿಕ ಉದ್ಯೋಗಿಗಳನ್ನು ಟಾಟಾ ಮಾಲಕತ್ವದ ಏರ್ ಇಂಡಿಯಾ ವಜಾಗೊಳಿಸಿದೆ.

ಸ್ವಯಂ ನಿವೃತ್ತಿ ಯೋಜನೆ (VRS) ಹಾಗೂ ಪುನರ್ ಕೌಶಲ್ಯದ ಅವಕಾಶಗಳನ್ನು ಬಳಸಿಕೊಳ್ಳಲು ಆಗದೇ ಇರುವುದರಿಂದ ಈ ಉದ್ಯೋಗಿಗಳನ್ನು ಕಳೆದ ಕೆಲವು ವಾರಗಳಲ್ಲಿ ವಜಾಗೊಳಿಸಲಾಗಿದೆ.

ವಿಮಾನದಲ್ಲಿ ಕಾರ್ಯ ನಿರ್ವಹಿಸದ ವಿಭಾಗಗಳ ಉದ್ಯೋಗಿಗಳಿಗೆ ಸಾಂಸ್ಥಿಕ ಅಗತ್ಯತೆಗಳು ಹಾಗೂ ವೈಯುಕ್ತಿಕ ಅರ್ಹತೆಯ ಆಧಾರದ ಮೇಲೆ ಹುದ್ದೆಗೆ ನಿಯೋಜಿಸಲಾಗಿದೆ ಎಂದು ಏರ್ ಇಂಡಿಯಾದ ವಕ್ತಾರ ಹೇಳಿದ್ದಾರೆ.

ಎಲ್ಲಾ ನೌಕರರ ಸೂಕ್ತತೆಯನ್ನು ಅಂದಾಜಿಸಲು ಕಳೆದ 18 ತಿಂಗಳಿಂದ ಸಮಗ್ರ ಪ್ರಕ್ರಿಯೆ ಅನುಸರಿಸಲಾಗಿದೆ. ಈ ಹಂತದಲ್ಲಿ ಅನೇಕ ಸ್ವಯಂ ನಿವೃತ್ತಿ ಯೋಜನೆಗಳು ಹಾಗೂ ಮರು ಕೌಶಲ್ಯದ ಅವಕಾಶಗಳನ್ನು ಉದ್ಯೋಗಿಗಳಿಗೆ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಯಂ ನಿವೃತ್ತಿ ಯೋಜನೆ ಅಥವಾ ಪುನರ್ ಕೌಶಲ್ಯದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗದ ಶೇ. 1 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಗುತ್ತಿಗೆಯ ಎಲ್ಲಾ ಒಪ್ಪಂದಗಳನ್ನು ಗೌರವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಆದರೆ, ವಜಾಗೊಳಿಸಲಾದ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಅವರು ಉಲ್ಲೇಖಿಸಿಲ್ಲ. ಆದರೂ 180ಕ್ಕಿಂತ ಅಧಿಕ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News