2021ರ ಚುನಾವಣೋತ್ತರ ಹಿಂಸಾಚಾರ ಪ್ರಕರಣ: ಟಿಎಂಸಿ ನಾಯಕರ ನಿವಾಸಗಳ ಮೇಲೆ ಸಿಬಿಐ ದಾಳಿ
ಕೋಲ್ಕತಾ: 2021ರ ವಿಧಾನಸಭಾ ಚುನಾವಣೋತ್ತರ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿ ಸಿಬಿಐ ಶುಕ್ರವಾರ ಪಶ್ಚಿಮ ಬಂಗಾಳದ ಪೂರ್ಬಾ ಮೇದಿನಿಪುರ ಜಿಲ್ಲೆಯ ಕಾದಿ ಎಂಬಲ್ಲಿ ಇಬ್ಬರು ತೃಣಮೂಲ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಿತು.
ಕಾದಿ ಬ್ಲಾಕ್ ಸಂಖ್ಯೆ 3ರ ಟಿಎಂಸಿ ನಾಯಕ ದೇಬಬ್ರತ ಪಂಡಾ ಹಾಗೂ ಇನ್ನೊಂದು ಬ್ಲಾಕ್ ಮಟ್ಟದ ಟಿಎಂಸಿ ಅಧ್ಯಕ್ಷ ನಂದಾದುಲಾಲ್ ಮೈಟಿ ಅವರ ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳ ತಂಡವು ನಸುಕಿನಲ್ಲಿ ದಾಳಿ ನಡೆಸಿದೆ.
‘‘ಬಿಜೆಪಿ ಕಾರ್ಯಕರ್ತ ಜನಮೇಜಯ್ ಡೊಲುಯಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಂಧಿಸಿ ಪಂಡಾ, ನಂದುಲಾಲ್ ಅವರ ಪುತ್ರ ಹಾಗೂ ಇತರ 52 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’’ ಎಂದು ಸಿಬಿಐ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲು 30 ಮಂದಿಗೆ ಸಮನ್ಸ್ ನೀಡಲಾಗಿದ್ದು, ಅವರಲ್ಲಿ ಯಾರೂ ಕೂಡಾ ಹಾಜರಾಗಿಲ್ಲವೆಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.
ಈ ವ್ಯಕ್ತಿಗಳು ನಂಟು ಹೊಂದಿರುವ ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದ್ದು, ಅವರನ್ನು ಪ್ರಶ್ನಿಸುವ ಅಗತ್ಯವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.