ಕೇದಾರನಾಥ ದೇವಾಲಯದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಆರೋಪ

Update: 2024-07-16 07:17 GMT

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ (Photo: ANI)

ಮುಂಬೈ: ಉತ್ತರಾಖಂಡದ ಕೇದಾರನಾಥ ದೇವಾಲಯದಿಂದ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಜ್ಯೋತಿರ್ಮಠ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಆರೋಪಿಸಿದ್ದಾರೆ.

ಸೋಮವಾರ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮನವಿಯ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇದಾರನಾಥ ದೇವಾಲಯದಿಂದ 228 ಕೆಜಿ ಚಿನ್ನ ನಾಪತ್ತೆಯಾಗಿದೆ. ಆದರೆ, ಈ ಕುರಿತು ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ಮತ್ತೊಂದು ಕೇದಾರನಾಥ ದೇವಾಲಯದ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಅವರು, "12 ನಿರ್ದಿಷ್ಟ ಜ್ಯೋತಿರ್ಲಿಂಗಗಳಿವೆ. ಅವುಗಳ ಸ್ಥಳವನ್ನು ಪೂರ್ವನಿರ್ಧಾರ ಮಾಡಲಾಗಿದೆ. ಹೀಗಾಗಿ ಕೇದಾರನಾಥ ದೇವಾಲಯದ ತದ್ರೂಪು ನಿರ್ಮಿಸುವುದು ತಪ್ಪು. ಅಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಯಾರೂ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ" ಎಂದು ಆಕ್ಷೇಪಿಸಿದ್ದಾರೆ.

"ಕೇದಾರನಾಥದಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಈ ವಿಷಯ ಯಾಕೆ ಮುನ್ನೆಲೆಗೆ ಬರುತ್ತಿಲ್ಲ? ಅಲ್ಲಿ ಹಗರಣ ನಡೆಸಿದ ನಂತರ ಈಗ ದಿಲ್ಲಿಯಲ್ಲಿ ಕೇದಾರನಾಥ ದೇವಾಲಯದ ನಿರ್ಮಾಣ ಮಾಡುವುದೆ? ಆಗ ಅಲ್ಲಿ ಮತ್ತೊಂದು ಹಗರಣ ನಡೆಯಲಿದೆ. ಕೇದಾರನಾಥದಿಂದ 228 ಕೆಜಿ ಚಿನ್ನ ನಾಪತ್ತೆಯಾಗಿದೆ. ಇದುವರೆಗೂ ಯಾವುದೇ ತನಿಖೆ ಪ್ರಾರಂಭಗೊಂಡಿಲ್ಲ. ಇದಕ್ಕೆ ಯಾರು ಹೊಣೆ? ಅವರೀಗ ದಿಲ್ಲಿಯಲ್ಲಿ ಕೇದಾರನಾಥ ನಿರ್ಮಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಇದು ಸಾಧ್ಯವಿಲ್ಲ" ಎಂದು ಅವರು ಖಾರವಾಗಿ ಹೇಳಿದ್ದಾರೆ.

ಸರಕಾರದ ಆದ್ಯತೆಗಳ ಕುರಿತು ಪ್ರಶ್ನೆ ಎತ್ತಿದ ಅವರು, ದಿಲ್ಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣ ಮಾಡುವುದಕ್ಕೂ ಮುನ್ನ, ಅವರು ಆರೋಪಿತ ಹಗರಣದ ಕುರಿತು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News