ಚತ್ತೀಸ್ಗಢ | ಶರಣಾಗತರಾದ 30 ನಕ್ಸಲೀಯರು
ಬಿಜಾಪುರ : ಮೂವತ್ತಕ್ಕೂ ಅಧಿಕ ನಕ್ಸಲೀಯರು ಮಂಗಳವಾರ ಚತ್ತೀಸ್ಗಢದ ಬಿಜಾಪುರ ಜಿಲ್ಲೆಯ ಭದ್ರತಾಪಡೆ ಮುಂದೆ ಶರಣಾಗತರಾಗಿದ್ದಾರೆ. ಇವರಲ್ಲಿ 9 ಮಂದಿಯ ತಲೆಗೆ ಒಟ್ಟು 39 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಮಹಿಳಾ ನಕ್ಸಲೀಯರನ್ನು ಒಳಗೊಂಡ ಈ ನಕ್ಸಲೀಯರು ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಅಧಿಕಾರಿಗಳ ಮುಂದೆ ಶರಣಾಗತರಾಗಿದ್ದಾರೆ. ಬುಡಕಟ್ಟು ಜನರ ಮೇಲೆ ಮಾವೋವಾದಿಗಳ ದೌರ್ಜನ್ಯ ಹಾಗೂ ಪೊಳ್ಳು ಮಾವೋವಾದಿ ಸಿದ್ಧಾಂತದಿಂದ ನಿರಾಶರಾಗಿರುವುದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರ ಪತ್ರಿಕಾ ಹೇಳಿಕೆ ತಿಳಿಸಿದೆ.
ಶರಣಾಗತರಾದ ನಕ್ಸಲೀಯರಲ್ಲಿ ಮಾವೋವಾದಿಗಳ ಸೇನಾ ಕಂಪೆನಿ ಸಂಖ್ಯೆ 2ರ ಸದಸ್ಯೆಯಾದ ಮಿಟ್ಕಿ ಕಾಕೇಮ್ ಆಲಿಯಾಸ್ ಸರಿತಾ (35), ತುಕಡಿ ಸಂಖ್ಯೆ 32ರ ಸದಸ್ಯೆ ಮುರಿ ಮುಹ್ಹಂದಾ ಆಲಿಯಾಸ್ ಸುಖಮತಿ (32) ತಲೆಗೆ ತಲಾ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅದು ತಿಳಿಸಿದೆ.
ಮಾವೊವಾದಿ ಎಲ್ಲಾ ತುಕಡಿ ಸದಸ್ಯರಾದ ರಜಿತಾ ವೆಟ್ಟಿ (24), ದೇವೆ ಕೊವಾಸಿ (24), ಅಯ್ತಾ ಸೋಧಿ (22) ಹಾಗೂ ಬೆಟಾಲಿಯನ್ ಸಂಖ್ಯೆ 1ರ ಸದಸ್ಯೆ ಸಿನು ತಲೆಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಇತರರಾದ ಮುನ್ನಾ ಹೇಮ್ಲಾ (35), ಅಯ್ತು ಮಿದಿಯಮ್ (38), ಅಯ್ತು ಕರಂ (50) ಮಾವೋವಾದಿ ಜನತಾ ಸರ್ಕಾರ್ ಗುಂಪಿನ ಸಕ್ರಿಯ ಸದಸ್ಯರು. ಇವರ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಈ 9 ಮಂದಿ ಭದ್ರತಾ ಸಿಬ್ಬಂದಿ ಮೇಲಿನ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದಾರೆ.
ಶರಣಾಗತರಾದ ನಕ್ಸಲೀಯರಿಗೆ ತಲಾ 25 ಸಾವಿರ ರೂ. ನೀಡಲಾಗುವುದು ಹಾಗೂ ಸರಕಾರ ನೀತಿಗೆ ಅನುಗುಣವಾಗಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸರ ಪತ್ರಿಕಾ ಹೇಳಿಕೆ ತಿಳಿಸಿದೆ.