ಪೊಲೀಸ್ ಗೋಲಿಬಾರಿಗೆ 5 ಬಲಿ |ಕಂಡಲ್ಲಿ ಗುಂಡಿಕ್ಕಲು ಆದೇಶ
ಡೆಹ್ರಾಡೂನ್ (ಉತ್ತರಾಖಂಡ) : ಉತ್ತರಾಖಂಡದಲ್ಲಿ, ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಗುರುವಾರ ಮದರಸವೊಂದನ್ನು ಧ್ವಂಸಗೊಳಿಸಿದ ಬಳಿಕ, ರಾಜ್ಯದ ಹಲ್ದ್ವಾನಿ ಪಟ್ಟಣದ ಸಮೀಪದ ಬಂಭೂಲ್ಪುರ ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಪೊಲೀಸ್ ಗೋಲಿಬಾರಿಗೆ ಐವರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 250 ಮಂದಿ ಗಾಯಗೊಂಡಿದ್ದಾರೆ.
ಹಿಂಸಾಚಾರದಲ್ಲಿ ಐವರು ಮೃತಪಟ್ಟಿರುವುದನ್ನು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ವ್ಯವಸ್ಥೆ) ಎ.ಪಿ. ಅಂಶುಮಾನ್ ಖಚಿತಪಡಿಸಿದ್ದಾರೆ ಎಂದು ‘ದ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.
ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ‘ಕಂಡಲ್ಲಿ ಗುಂಡಿಕ್ಕಲು’ ಜಿಲ್ಲಾ ಅಧಿಕಾರಿಗಳು ಆದೇಶ ನೀಡಿದ್ದಾರೆ. ಈ ಪ್ರದೇಶದಲ್ಲಿ ಕರ್ಫ್ಯೂ ಕೂಡ ವಿಧಿಸಲಾಗಿದೆ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಒಂದು ಮದರಸ ಮತ್ತು ಅದಕ್ಕೆ ಹೊಂದಿಕೊಂಡ ಮಸೀದಿಯನ್ನು ಸ್ಥಳೀಯ ಮುನಿಸಿಪಾಲಿಟಿ ಅಧಿಕಾರಿಗಳು ಗುರುವಾರ ಧ್ವಂಸಗೊಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಈ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಪ್ರತಿಭಟಿಸಿದರು.
ಆಗ ಪ್ರತಿಭಟನಕಾರರು ಪೊಲೀಸರತ್ತ ಕಲ್ಲೆಸೆದರು ಮತ್ತು ವಾಹನಗಳಿಗೆ ಬೆಂಕಿ ಕೊಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಹಿಂಸೆಯನ್ನು ಹತ್ತಿಕ್ಕುವುದಕ್ಕಾಗಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಮತ್ತು ಪ್ರತಿಭಟನಕಾರರ ಮೇಲೆ ಲಾಠಿಪ್ರಹಾರಗೈದರು ಎಂದು ಅವರು ತಿಳಿಸಿದರು.
ನ್ಯಾಯಾಲಯವೊಂದರ ಆದೇಶದಂತೆ, ಗುರುವಾರ ಸಂಜೆ 4 ಗಂಟೆಗೆ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಪೊಲೀಸ್ ಮಹಾ ನಿರ್ದೇಶಕ ಅಭಿನವ ಕುಮಾರ್ ತಿಳಿಸಿದರು. ‘‘ಮದರಸ ಮತ್ತು ಮಸೀದಿ ಧ್ವಂಸವನ್ನು ವಿರೋಧಿಸಿದ ಕೆಲವು ಕಿಡಿಗೇಡಿಗಳು ಅಧಿಕಾರಿಗಳತ್ತ ಕಲ್ಲೆಸೆದರು ಮತ್ತು ವಾಹನಗಳಿಗೆ ಬೆಂಕಿ ಕೊಟ್ಟರು’’ ಎಂದು ಅವರು ನುಡಿದರು. ‘‘ಪ್ರತಿಭಟನಕಾರರು ಅಕ್ರಮ ಪಿಸ್ತೂಲ್ಗಳಿಂದ ಪೊಲೀಸರತ್ತ ಗುಂಡು ಹಾರಿಸಿದ್ದಾರೆ ಎನ್ನುವ ವರದಿಗಳೂ ಇವೆ’’ ಎಂದರು.
‘‘ಪ್ರತಿಭಟನಕಾರರ ಒಂದು ಗುಂಪು ಬಂಭೂಲ್ಪುರ ಪೊಲೀಸ್ ಠಾಣೆಯತ್ತ ಪೆಟ್ರೋಲ್ ಬಾಂಬ್ ಗಳನ್ನು ಎಸೆದರು ಮತ್ತು ಠಾಣೆಯ ಹೊರಗೆ ನಿಲ್ಲಿಸಲಾಗಿದ್ದ ಕೆಲವು ವಾಹನಗಳಿಗೆ ಬೆಂಕಿ ಕೊಟ್ಟರು’’ ಎಂದು ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್ ಹೇಳಿದರು.
‘‘ಹೈಕೋರ್ಟ್ ಆದೇಶದಂತೆ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇದೊಂದು ಪ್ರತ್ಯೇಕ ಘಟನೆಯಲ್ಲ ಮತ್ತು ಯಾವುದೇ ನಿರ್ದಿಷ್ಟ ಕಟ್ಟಡವನ್ನು ಗುರಿ ಮಾಡಲಾಗಿಲ್ಲ’’ ಎಂದು ಜಿಲ್ಲಾಧಿಕಾರಿ ಹೇಳಿದರು.
‘‘ಪ್ರತಿಯೊಬ್ಬರಿಗೂ ವಿಚಾರಣೆಗೆ ನೋಟಿಸ್ ಮತ್ತು ಸಮಯಾವಕಾಶ ಕೊಡಲಾಗಿದೆ. ಕೆಲವು ಹೈಕೋರ್ಟಿಗೆ ಹೋದರು. ಕೆಲವರಿಗೆ ಸಮಯಾವಕಾಶ ಕೊಡಲಾಗಿದೆ ಮತ್ತು ಕೆಲವರಿಗೆ ಸಮಯಾವಕಾಶ ಕೊಡಲಾಗಿಲ್ಲ’’ ಎಂದರು.
ಮದರಸ ಮತ್ತು ಮಸೀದಿಗಳನ್ನು ಧ್ವಂಸಗೊಳಿಸುವುದಾಗಿ ಸ್ಥಳೀಯಾಡಳಿತವು ಜನವರಿ 30ರಂದು ನೋಟಿಸದ್ ಗಳನ್ನು ಕೊಟ್ಟಿತ್ತು. ಅಂದಿನಿಂದ ಆ ಪ್ರದೇಶದ ಉದ್ವಿಗ್ನವಾಗಿತ್ತು.
ಅಂತಿಮ ನಿರ್ಧಾರ ಹೈಕೋರ್ಟ್ ಪ್ರಕಟಿಸಿಲ್ಲ: ಕೌನ್ಸಿಲರ್
ಅತಿಕ್ರಮಣ ತೆರವುಗೊಳಿಸುವ ಬಗ್ಗೆ ಹೈಕೋರ್ಟ್ ಅಂತಿಮ ನಿರ್ಧಾರ ಪ್ರಕಟಿಸಿಲ್ಲ ಎಂದು ಸ್ಥಳೀಯ ಕೌನ್ಸಿಲರ್ ಶಕೀಲ್ ಅಹ್ಮದ್ ಹೇಳಿದ್ದಾರೆ.
‘‘ವಿಚಾರಣೆಯ ಮುಂದಿನ ದಿನಾಂಕವನ್ನು ಫೆಬ್ರವರಿ 14ಕ್ಕೆ ನಿಗದಿಪಡಿಸಲಾಗಿತ್ತು. ಮದರಸ ಮತ್ತು ಮಸೀದಿ ಧ್ವಂಸಕ್ಕೆ ಅಧಿಕಾರಿಗಳು ಬಂದಾಗ, ಹೈಕೋರ್ಟ್ ನಿರ್ಧಾರದವರೆಗೆ ಕಾಯಿರಿ ಎಂದು ನಾವು ಮನವಿ ಮಾಡಿದೆವು. ನ್ಯಾಯಾಲಯದ ನಿರ್ಧಾರವು ನಮಗೆ ವಿರುದ್ಧವಾಗಿ ಬಂದರೆ ನಾವು ನಿಮ್ಮನ್ನು ತಡೆಯುವುದಿಲ್ಲ ಎಂದು ಹೇಳಿದೆವು. ಆದರೆ, ಅವರು ನಮ್ಮ ಮಾತು ಕೇಳಲಿಲ್ಲ’’ ಎಂದು ಕೌನ್ಸಿಲರ್ ನುಡಿದರು.
ಮಾತುಕತೆಯ ಬಳಿಕ ಏಕಾಏಕಿ ಬುಲ್ಡೋಝರ್ ಗಳು ಪ್ರತ್ಯಕ್ಷ
ಮಸೀದಿ ಮತ್ತು ಮದರಸಗಳನ್ನು ಧ್ವಂಸಗೊಳಿಸುವ ಬಗ್ಗೆ ಜನವರಿ 30ರಂದು ಸ್ಥಳೀಯಾಡಳಿತವು ನೋಟಿಸ್ ನೀಡಿದ ಬಳಿಕ, ಧ್ವಂಸ ಕಾರ್ಯಾಚರಣೆಯನ್ನು ಕೈಬಿಡುವಂತೆ ಕೋರಿ ಸ್ಥಳೀಯ ಧಾರ್ಮಿಕ ಮತ್ತು ರಾಜಕೀಯ ನಾಯಕರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಫೆಬ್ರವರಿ 4ರಂದು ಮುಂಜಾನೆ 1:30ರ ಸುಮಾರಿಗೆ ಮುನಿಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ಮಸೀದಿ ಮತ್ತು ಮದರಸಕ್ಕೆ ಬೀಗಮುದ್ರೆ ಹಾಕಿದರು. ಆದರೆ, ಧ್ವಂಸಗೊಳಿಸಲಿಲ್ಲ.
ಆದರೆ, ಗುರುವಾರ ಸಂಜೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಕಾಣಿಸಿಕೊಂಡ ಬಲ್ಡೋಝರ್ಗಳು ಮಸೀದಿ ಮತ್ತು ಮದಸರಸಗಳನ್ನು ಧ್ವಂಸಗೊಳಿಸಿದವು ಎಂದು ಸ್ಥಳೀಯರು ತಿಳಿಸಿದ್ದಾರೆ.