ಛತ್ತೀಸ್ ಗಢ | ಎನ್ ಕೌಂಟರ್ ನಲ್ಲಿ 8 ನಕ್ಸಲೀಯರ ಹತ್ಯೆ, ಓರ್ವ ಯೋಧ ಹುತಾತ್ಮ
ನಾರಾಯಣಪುರ: ಎನ್ ಕೌಂಟರ್ ನಲ್ಲಿ ಎಂಟು ಮಂದಿ ನಕ್ಸಲೀಯರು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಛತ್ತೀಸ್ ಗಢ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ನಾರಾಯಣಪುರ, ಕಾಂಕರ್, ದಾಂತೇವಾಡ ಹಾಗೂ ಕೊಂಡಗಾಂವ್ ಜಿಲ್ಲೆಯ ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ಆಭುಜ್ಮಡ್ ನ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ತೆರಳಿದ್ದಾಗ ಈ ಎನ್ ಕೌಂಟರ್ ನಡೆದಿದೆ ಎಂದು ರಾಯ್ಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ ಎಂದೂ ಅವರು ಹೇಳಿದ್ದಾರೆ.
ಜೂನ್ 12ರಂದು ಪ್ರಾರಂಭಗೊಂಡ ಈ ಕಾರ್ಯಾಚರಣೆಯಲ್ಲಿ ನಾಲ್ಕು ಜಿಲ್ಲೆಗಳ ಜಿಲ್ಲಾ ಮೀಸಲು ರಕ್ಷಣಾ ಪಡೆಯ ಸಿಬ್ಬಂದಿಗಳು, ವಿಶೇಷ ಕಾರ್ಯಪಡೆ ಹಾಗೂ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ 53ನೇ ತುಕಡಿಯು ಪಾಲ್ಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.