ವಂಚನೆ ಪ್ರಕರಣ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರಗೆ ದಿಲ್ಲಿ ನ್ಯಾಯಾಲಯದಿಂದ ಸಮನ್ಸ್
ಹೊಸದಿಲ್ಲಿ: ಗರಂ ಧರಂ ಧಾಬಾ ಫ್ರಾಂಚೈಸಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಹಾಗೂ ಇನ್ನಿಬ್ಬರಿಗೆ ದಿಲ್ಲಿ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ ಎಂದು ದೂರುದಾರರ ವಕೀಲರು ತಿಳಿಸಿದ್ದಾರೆ.
ನನಗೆ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿತ್ತು ಎಂದು ಆರೋಪಿಸಿ ದಿಲ್ಲಿ ಉದ್ಯಮಿ ಸುಶೀಲ್ ಕುಮಾರ್ ಎಂಬುವವರು ನೀಡಿದ್ದ ದೂರನ್ನು ಆಧರಿಸಿ, 89 ವರ್ಷದ ನಟ ಧರ್ಮೇಂದ್ರರಿಗೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಯಶ್ ದೀಪ್ ಚಾಹಲ್ ಸಮನ್ಸ್ ಜಾರಿಗೊಳಿಸಿದ್ದಾರೆ ಎಂದು ದೂರುದಾರರ ಪರ ವಕೀಲ ಡಿ.ಡಿ.ಪಾಂಡೆ ಹೇಳಿದ್ದಾರೆ.
ಆರೋಪಿಗಳು ಸಾಮಾನ್ಯ ಉದ್ದೇಶದಿಂದ ದೂರುದಾರರನ್ನು ತಮ್ಮ ವ್ಯವಹಾರದಲ್ಲಿ ಭಾಗಿಯಾಗಿಸಿಕೊಂಡು, ನಂತರ ವಂಚನೆಯೆಸಗಿರುವುದನ್ನು ಮೇಲ್ನೋಟದ ಸಾಕ್ಷ್ಯಾಧಾರಗಳು ಬಯಲುಗೊಳಿಸಿವೆ ಎಂದು ಡಿಸೆಂಬರ್ 5ರಂದು ಹೊರಡಿಸಿರುವ ಆದೇಶದಲ್ಲಿ ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
ಈ ಪ್ರಕರಣವು ಮೇಲ್ನೋಟಕ್ಕೆ ವಂಚನೆ ಮತ್ತು ಕ್ರಿಮಿನಲ್ ಪಿತೂರಿಯನ್ನು ಒಳಗೊಂಡಿದ್ದು, ಫೆಬ್ರವರಿ 20ರಂದು ಆರೋಪಿಗಳು ನ್ಯಾಯಾಲಯದೆದುರು ಹಾಜರಾಗಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಗರಂ ಧರಂ ಢಾಬಾಗೆ ಸಂಬಂಧಿಸಿದ ದಾಖಲೆಗಳು ಹಾಗೂ ಒಪ್ಪಿಗೆಯ ಪತ್ರವು ಸಂಬಂಧಿಸಿದ ರೆಸ್ಟೋರೆಂಟ್ ಲೋಗೋ ಹೊಂದಿವೆ ಎಂಬುದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಂಡರು.
ಉಭಯ ವಾದಿಗಳು ನಡುವಿನ ವ್ಯವಹಾರವು ಸಂಪೂರ್ಣವಾಗಿ ಗರಂ ಧರಂ ಡಾಭಾಗೆ ಸಂಬಂಧಿಸಿದ್ದು, ಧರಂ ಸಿಂಗ್ ಡಿಯೋಲ್ ಪರವಾಗಿ ಸಹ ಆರೋಪಿಯು ದೂರುದಾರರನ್ನು ಬಲವಂತ ಪಡಿಸಿರುವುದು ಎದ್ದು ಕಾಣುತ್ತಿದೆ ಎಂಬುದನ್ನೂ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು.
ದೂರುದಾರರ ಪ್ರಕಾರ, ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 24/9ರಲ್ಲಿರುವ ಗರಂ ಧರಂ ಢಾಬಾದ ಫ್ರಾಂಚೈಸಿಯನ್ನು ತೆರೆಯುವ ಆಹ್ವಾನದೊಂದಿಗೆ ಧರಂ ಸಿಂಗ್ ಡಿಯೋಲ್ (ಧರ್ಮೇಂದ್ರ) ಪರವಾಗಿ ಸಹ ಆರೋಪಿಯು ನನ್ನನ್ನು ಎಪ್ರಿಲ್ 2018ರಲ್ಲಿ ಸಂಪರ್ಕಿಸಿದ್ದರು ಎಂದು ಆರೋಪಿಸಿದ್ದಾರೆ.
ಈ ಸಂಬಂಧ, ಸೆಪ್ಟೆಂಬರ್ 2018ರಲ್ಲಿ ನಾನು 17.70 ಲಕ್ಷ ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದ್ದೆ. ಅದಾದ ನಂತರ, ಆರೋಪಿಯು ನನ್ನೊಂದಿಗೆ ವ್ಯವಹರಿಸುವುದನ್ನು ಸ್ಥಗಿತಗೊಳಿಸಿದ್ದರು ಎಂದೂ ದೂರುದಾರರು ಆರೋಪಿಸಿದ್ದಾರೆ.