ಅದಾನಿ- ಹಿಂಡನ್ಬರ್ಗ್ ವಿವಾದ: ಇನ್ನೂ ತನಿಖಾ ವರದಿ ಸಲ್ಲಿಸದ ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕೋರಿ ಸುಪ್ರೀಂಗೆ ಅರ್ಜಿ

Update: 2023-11-20 12:49 GMT

Photo: PTI

ಹೊಸದಿಲ್ಲಿ: ಅದಾನಿ ಸಮೂಹ ಸ್ಟಾಕ್ ತಿರುಚುವಿಕೆ ಮತ್ತು ಲೆಕ್ಕಪತ್ರಗಳಲ್ಲಿ ಅವ್ಯವಹಾರ ನಡೆಸಿದೆ ಎಂಬ ಆರೋಪಗಳ ಕುರಿತ ತನಿಖೆಯನ್ನು ಪೂರ್ಣಗೊಳಿಸಲು ವಿಫಲವಾಗಿದ್ದಕ್ಕೆ ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ವಕೀಲ ವಿಶಾಲ್ ತಿವಾರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಅಮೆರಿಕಾದ ಹಿಂಡೆನ್ಬರ್ಗ್ ಸಂಸ್ಥೆಯು ಅದಾನಿ ಸಂಸ್ಥೆಯ ವಿರುದ್ಧ ಅವ್ಯವಹಾರಗಳ ಆರೋಪ ಹೊರಿಸಿ ಹೊರತಂದ ವರದಿಯ ಬೆನ್ನಲ್ಲೇ ಕೋರ್ಟ್ ಉಸ್ತುವಾರಿಯ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದವರಲ್ಲಿ ವಿಶಾಲ್ ತಿವಾರಿ ಕೂಡ ಒಬ್ಬರಾಗಿದ್ದರು.

ಸುಪ್ರೀಂ ಕೋರ್ಟಿನ ಮೇ 17 ಆದೇಶಾನುಸಾರ ಸೆಬಿ ತನ್ನ ವರದಿಯನ್ನು ಆಗಸ್ಟ್ 14ರೊಳಗೆ ಸಲ್ಲಿಸಬೇಕಿದೆ ಆದರೆ ಅದು ಇನ್ನೂ ತನ್ನ ಅಂತಿಮ ವರದಿ ಸಲ್ಲಿಸಿಲ್ಲ.

ಸುಪ್ರೀಂ ಕೋರ್ಟ್ ಆದೇಶವನ್ನು ಸೆಬಿ ಏಕೆ ಪಾಲಿಸಿಲ್ಲ ಎಂದು ಅದರಿಂದ ವಿವರಣೆ ಕೇಳಬೇಕು ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. OCCRP ವರದಿಯಲ್ಲಿನ ಅಂಶಗಳನ್ನು ಸುಪ್ರೀಂ ಕೋರ್ಟ್ ನೇಮಿತ ಸಮಿತಿ ತನಿಖೆ ನಡೆಸಬೇಕೆಂದು ತಿವಾರಿ ಕೋರಿದ್ದರು.

ಅದಾನಿ ಕುರಿತ ಪ್ರಕರಣದ ವಿಚಾರಣೆ ಆಗಸ್ಟ್ 29ರಂದು ನಡೆಯಬೇಕಿದ್ದರೂ ಇನ್ನೂ ವಿಚಾರಣೆ ನಡೆದಿಲ್ಲ, ಈ ಕುರಿತು ಇತ್ತೀಚೆಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಿಜೆಐ ಗಮನ ಸೆಳೆದಾಗ ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News