ಹವಾಮಾನ ಬದಲಾವಣೆಯಿಂದ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ, ಕಲಿಕೆಯ ನಷ್ಟ ಹೆಚ್ಚಳ : ಯುನೆಸ್ಕೋ

Update: 2024-07-14 14:50 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ : ಶಾಖ, ಕಾಡ್ಗಿಚ್ಚು, ಪ್ರವಾಹಗಳು, ಬರಗಾಲಗಳು, ರೋಗಗಳು ಮತ್ತು ಹೆಚ್ಚುತ್ತಿರುವ ಸಮುದ್ರಮಟ್ಟದಂತಹ ಹವಾಮಾನ ಸಂಬಂಧಿತ ಒತ್ತಡ ಕಾರಣಗಳು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ ಮತ್ತು ಇತ್ತೀಚಿನ ದಶಕದಲ್ಲಿಯ ಶೈಕ್ಷಣಿಕ ಲಾಭಗಳನ್ನು ಕಳೆದುಕೊಳ್ಳುವ ಅಪಾಯವೊಡ್ಡುತ್ತದೆ ಎಂದು ಗ್ಲೋಬಲ್ ಎಜ್ಯುಕೇಷನ್ ಮಾನಿಟರಿಂಗ್ ರಿಪೋರ್ಟ್ (ಜಿಇಎಂ) ಹೇಳಿದೆ.

ಯುನೆಸ್ಕೋ, ಹವಾಮಾನ ಸಂವಹನ ಮತ್ತು ಶಿಕ್ಷಣ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಯೋಜನೆ(ಎಂಇಸಿಸಿಇ) ಮತ್ತು ಕೆನಡಾದ ಸಸ್ಕಾಚೆವನ್ ವಿವಿ ಸಂಕಲಿಸಿರುವ ಜಾಗತಿಕ ವರದಿಯು, ಕಡಿಮೆ ಮತ್ತು ಮಧ್ಯಮ ಆದಾಯದ ಹೆಚ್ಚಿನ ದೇಶಗಳಲ್ಲಿ ಪ್ರತಿವರ್ಷ ಹವಾಮಾನ ಸಂಬಂಧಿತ ಶಾಲಾ ಮುಚ್ಚುಗಡೆಗಳು ಸಂಭವಿಸುತ್ತಿವೆ ಮತ್ತು ಇದು ಕಲಿಕೆಯಲ್ಲಿ ನಷ್ಟವುಂಟಾಗುವ ಮತ್ತು ಶಾಲೆಗಳನ್ನು ತೊರೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಬೆಟ್ಟು ಮಾಡಿದೆ.

ಹವಾಮಾನ ಬದಲಾವಣೆ ಸಂಬಂಧಿತ ಪರಿಣಾಮಗಳು ಈಗಾಗಲೇ ಶಿಕ್ಷಣ ವ್ಯವಸ್ಥೆಗಳು ಮತ್ತು ಫಲಿತಾಂಶಗಳಿಗೆ ವ್ಯತ್ಯಯಗಳನ್ನುಂಟು ಮಾಡುತ್ತಿವೆ. ನೇರ ಪರಿಣಾಮಗಳು ಶಿಕ್ಷಣ ಮೂಲಸೌಕರ್ಯ ನಾಶ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಸಿಬ್ಬಂದಿಗಳ ಸಾವುನೋವುಗಳನ್ನು ಒಳಗೊಂಡಿವೆ. ಹವಾಮಾನ ಬದಲಾವಣೆಯು ಜನರ ಸ್ಥಳಾಂತರ ಮತ್ತು ಜನರ ಜೀವನೋಪಾಯಗಳು ಹಾಗೂ ಆರೋಗ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಮೂಲಕ ಶಿಕ್ಷಣದ ಮೇಲೆ ಪರೋಕ್ಷವಾಗಿ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ವರದಿಯು ಹೇಳಿದೆ.

ಕಳೆದ 20 ವರ್ಷಗಳಲ್ಲಿ ಪ್ರತಿಕೂಲ ಹವಾಮಾನ ಘಟನೆಗಳಲ್ಲಿ ಕನಿಷ್ಠ ಶೇ.75ರಷ್ಟು ಶಾಲೆಗಳು ಮುಚ್ಚಲ್ಪಟ್ಟಿದ್ದವು ಮತ್ತು ಇದು 50 ಲಕ್ಷ ಅಥವಾ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರಿತ್ತು. ಪ್ರವಾಹಗಳು ಮತ್ತು ಚಂಡಮಾರುತಗಳು ಸೇರಿದಂತೆ ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾವುಗಳಿಗೆ ಕಾರಣವಾಗಿವೆ ಹಾಗೂ ಶಾಲೆಗಳಿಗೆ ಹಾನಿಯನ್ನುಂಟು ಮಾಡಿವೆ,ಅವುಗಳನ್ನು ನಾಶಗೊಳಿಸಿವೆ ಎಂದು ವರದಿಯು ವಿವರಿಸಿದೆ.

ಶಾಖಕ್ಕೆ ಒಡ್ಡಿಕೊಳ್ಳುವುದು ಮಕ್ಕಳ ಶೈಕ್ಷಣಿಕ ಫಲಿತಾಂಶಗಳ ಮೇಲೆ ಗಣನೀಯ ಹಾನಿಕಾರಕ ಪರಿಣಾಮಗಳನ್ನುಂಟು ಮಾಡುತ್ತದೆ. 1969 ಮತ್ತು 2012ರ ನಡುವೆ 29 ದೇಶಗಳಲ್ಲಿ ಜನಗಣತಿ ಮತ್ತು ಹವಾಮಾನ ದತ್ತಾಂಶಗಳ ವಿಶ್ಲೇಷಣೆಯು ಪ್ರಸವಪೂರ್ವ ಮತ್ತು ಜೀವನದ ಆರಂಭಿಕ ವರ್ಷಗಳಲ್ಲಿ ಸರಾಸರಿಗಿಂತ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಿದ್ದು ವಿಶೇಷವಾಗಿ ಆಗ್ನೇಯ ಏಶ್ಯಾದಲ್ಲಿ ಕಡಿಮೆ ವರ್ಷಗಳ ಶಾಲಾ ಶಿಕ್ಷಣಕ್ಕೆ ಕಾರಣವಾಗಿದೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿರುವ ಜಿಇಎಂ ವರದಿಯು, ಸರಾಸರಿಗಿಂತ ಎರಡು ಡಿಗ್ರಿ ಹೆಚ್ಚಿನ ತಾಪಮಾನವನ್ನು ಅನುಭವಿಸುವ ಮಗುವು ಸಾಮಾನ್ಯ ತಾಪಮಾನವನ್ನು ಅನುಭವಿಸುವ ಮಕ್ಕಳಿಗೆ ಹೋಲಿಸಿದರೆ ಒಂದೂವರೆ ವರ್ಷಗಳಷ್ಟು ಕಡಿಮೆ ಶಾಲಾ ಶಿಕ್ಷಣವನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.

ಹೆಚ್ಚಿನ ತಾಪಮಾನವು ಚೀನಾದಲ್ಲಿ ಉನ್ನತ ಮಟ್ಟದ ಪರೀಕ್ಷೆಗಳ ಕಾರ್ಯಕ್ಷಮತೆಯನ್ನು ಕಡಿಮೆಗೊಳಿಸಿದೆ ಹಾಗೂ ಪ್ರೌಢಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶದರವನ್ನು ತಗ್ಗಿಸಿದೆ. ಅಮೆರಿಕದಲ್ಲಿ ಶೈಕ್ಷಣಿಕ ವರ್ಷದಲ್ಲಿ ತಾಪಮಾನವು ಒಂದು ಡಿಗ್ರಿ ಅಧಿಕವಿದ್ದಾಗ ಶಾಲೆಗಳಲ್ಲಿ ಹವಾ ನಿಯಂತ್ರಣ ಸೌಲಭ್ಯದ ಅನುಪಸ್ಥಿತಿಯಿಂದಾಗಿ ಪರೀಕ್ಷೆಯಲ್ಲಿ ಅಂಕಗಳು ಶೇ.1ರಷ್ಟು ಕುಸಿತವನ್ನು ಕಂಡಿವೆ ಎಂದು ವರದಿಯು ಹೇಳಿದೆ.

ಭಾರತದಲ್ಲಿ ಶಿಕ್ಷಣದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ವಿವರಿಸಿರುವ ವರದಿಯು, ಜೀವನದ ಮೊದಲ 15 ವರ್ಷಗಳಲ್ಲಿ ಮಳೆಯ ಆಘಾತಗಳ ಅಧ್ಯಯನವು, ಅವು ಮಕ್ಕಳ ಐದನೇ ವಯಸ್ಸಿನಲ್ಲಿ ಅವರ ಪದ ಜ್ಞಾನ ಮತ್ತು 15ನೇ ವಯಸ್ಸಿನಲ್ಲಿ ಗಣಿತ ಜ್ಞಾನ ಹಾಗೂ ಅರಿವಿಗೆ ಬಾರದ ಕೌಶಲ್ಯಗಳ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡಿರುವುದು ಕಂಡು ಬಂದಿದೆ. ಕಡಿಮೆ ಶಿಕ್ಷಣವನ್ನು ಹೊಂದಿದ ಪೋಷಕರ ಮಕ್ಕಳಲ್ಲಿ ಈ ಪರಿಣಾಮಗಳು ಹೆಚ್ಚು ತೀವ್ರವಾಗಿವೆ. ಏಳು ಏಶ್ಯನ್ ದೇಶಗಳಲ್ಲಿ 1.40 ಲಕ್ಷ ಕ್ಕೂ ಅಧಿಕ ಮಕ್ಕಳು ಜೀವನದ ಆರಂಭದ ವರ್ಷಗಳಲ್ಲಿ ಅನುಭವಿಸಿದ್ದ ನೈಸರ್ಗಿಕ ಪ್ರಕೋಪಗಳ ವಿಶ್ಲೇಷಣೆಯು ಹುಡುಗರಲ್ಲಿ ಶಾಲಾ ದಾಖಲಾತಿ ಮತ್ತು ಹುಡುಗಿಯರಲ್ಲಿ ಅವರು 13-14ರ ವಯಸ್ಸನ್ನು ತಲುಪುವ ವೇಳೆ ಅವರ ಗಣಿತ ಜ್ಞಾನದ ಮೇಲೆ ಋಣಾತ್ಮಕ ಪರಿಣಾಮವನ್ನು ಬಹಿರಂಗಗೊಳಿಸಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News