ಲಂಡನ್ ಹೋಟೆಲ್‌ನಲ್ಲಿ ಏರ್ ಇಂಡಿಯಾದ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ
ಹೊಸದಿಲ್ಲಿ: ಲಂಡನ್ ನ ಹೋಟೆಲ್‌ವೊಂದರಲ್ಲಿ ಆಗಂತುಕನೋರ್ವ ಏರ್ ಇಂಡಿಯಾದ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ತಾನು ಸ್ಥಳೀಯ ಪೋಲಿಸರ ಸಂಪರ್ಕದಲ್ಲಿರುವುದಾಗಿ ವಿಮಾನಯಾನ ಸಂಸ್ಥೆಯು ತಿಳಿಸಿದೆ.
ಹೀಥ್ರೋ ವಿಮಾನ ನಿಲ್ದಾಣ ಸಮೀಪದ ತಾರಾ ಹೋಟೆಲ್ ನಲ್ಲಿ ಈ ವಾರದ ಆರಂಭದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿ ತಂಗಿದ್ದ ಕೋಣೆಗೆ ನುಗ್ಗಿದ ವಸತಿರಹಿತ ವ್ಯಕ್ತಿಯೋರ್ವ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಆಕೆ ಕೂಗಿಕೊಂಡಾಗ ಸಮೀಪದಲ್ಲಿದ್ದ ಇತರರು ಧಾವಿಸಿ ಆಕೆಯನ್ನು ರಕ್ಷಿಸಿದ್ದರು ಮತ್ತು ಆರೋಪಿಯನ್ನು ಹಿಡಿದು ಪೋಲಿಸರಿಗೊಪ್ಪಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಮೂಲಗಳ ಪೈಕಿ ಒಂದು ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದರೆ, ಅದು ದೈಹಿಕ ಹಲ್ಲೆಯಾಗಿತ್ತು ಎಂದು ಇತರ ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ಮಹಿಳಾ ಸಿಬ್ಬಂದಿ ಭಾರತಕ್ಕೆ ಮರಳಿದ್ದು, ಆಪ್ತ ಸಮಾಲೋಚನೆಗೆ ಒಳಗಾಗಿದ್ದಾರೆ.
ಘಟನೆಯ ಬಗ್ಗೆ ದುಃಖವನ್ನು ವ್ಯಕ್ತಪಡಿಸಿರುವ ಏರ್ ಇಂಡಿಯಾ, ‘ಈ ವಿಷಯವನ್ನು ಲಂಡನ್ ಪೋಲಿಸರೊಂದಿಗೆ ಕೈಗೆತ್ತಿಕೊಳ್ಳಲಾಗಿದ್ದು,ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೊಡಿಕೊಳ್ಳುವಂತೆ ಹೋಟೆಲ್ ಆಡಳಿತಕ್ಕೆ ತಿಳಿಸಲಾಗಿದೆ. ನೊಂದವರ ಖಾಸಗಿತನವನ್ನು ಗೌರವಿಸುವಂತೆ ನಾವು ಕೋರಿಕೊಳ್ಳುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.