ಸುರಕ್ಷತಾ ನಿಯಮಗಳ ಉಲ್ಲಂಘನೆ: ಏರ್ ಇಂಡಿಯಾಗೆ ರೂ. 1.10 ಕೋಟಿ ದಂಡ

Update: 2024-01-24 08:26 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಏರ್ ಇಂಡಿಯಾ ಸಂಸ್ಥೆಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ರೂ. 1.10 ಕೋಟಿಯಷ್ಟು ಭಾರಿ ದಂಡವನ್ನು ವಿಧಿಸಿದೆ. ಅಪಾಯಕಾರಿ ಗುಡ್ಡುಗಾಡು ಪ್ರದೇಶಗಳಲ್ಲಿನ ಸುದೀರ್ಘ ವ್ಯಾಪ್ತಿಯ ಮಾರ್ಗಗಳಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಹೇಳಿದೆ. ಇತ್ತೀಚೆಗೆ ಇಂಡಿಗೊ ವಿಮಾನದ ಪ್ರಯಾಣಿಕರು ವಿಮಾನದಿಂದ ಹೊರ ಬಂದು ಡಾಂಬರು ರಸ್ತೆಯ ಮೇಲೆ ಆಹಾರ ಸೇವನೆ ಮಾಡಿದ ಕಾರಣಕ್ಕೆ ಇಂಡಿಗೊ ವಿಮಾನ ಸಂಸ್ಥೆಗೆ ರೂ. 1.20 ಕೋಟಿ ದಂಡ ವಿಧಿಸಲಾಗಿತ್ತು. ಈ ಘಟನೆಯನ್ನು ಬಲವಾಗಿ ಖಂಡಿಸಿದ್ದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಇಂತಹ ಘಟನೆಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದರು ಎಂದು hindustantimes.com ವರದಿ ಮಾಡಿದೆ.

ಬೋಯಿಂಗ್ 777 ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾದ ಮಾಜಿ ಪೈಲಟ್ ಸುರಕ್ಷತಾ ನಿಯಮಗಳ ಉಲ್ಲಂಘನೆ ರೂಢಿಯ ಕುರಿತು ಕಳೆದ ವರ್ಷದ ಅಕ್ಟೋಬರ್ 29ರಂದು ನಾಗರಿಕ ವಿಮಾನ ಯಾನ ಸಚಿವಾಲಯ ಹಾಗೂ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ಸಮಗ್ರ ತನಿಖೆ ನಡೆಸಿದಾಗ ವಿಮಾನ ಯಾನ ಸಂಸ್ಥೆಯು ನಿಯಮಗಳನ್ನು ಪಾಲಿಸಿಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಹೇಳಿದೆ.

ಇದಕ್ಕೂ ಮುನ್ನ, ದಟ್ಟ ಮಂಜಿನ ಕಾರಣಕ್ಕೆ ಹಲವಾರು ವಿಮಾನಗಳು ಒಂದೋ ವಿಳಂಬಗೊಂಡಿದ್ದವು ಅಥವಾ ರದ್ದುಗೊಂಡಿದ್ದವು. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆ ಏರ್ಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News